ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ರಾಹುಲ್‌ಗಾಂಧಿ, ಸಿಎಂಗೆ 2 ತಿಂಗಳ ಹಿಂದೆಯೇ ಸಲ್ಲಿಕೆಯಾಗಿತ್ತು ದೂರು

ಬೆಂಗಳೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ರಸ್ಟಿಯಾಗಿರುವ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ  5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಹಂಚಿಕೆಗೆ ಅನುಮೋದನೆ ನೀಡಿರುವ ಪ್ರಕರಣ ಸೇರಿದಂತೆ ಇನ್ನಿತರೆ ಕಂಪನಿ, ಸಂಘ ಸಂಸ್ಥೆಗಳಿಗೆ ಹಂಚಿಕೆಯಲ್ಲಿಯೂ  ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎರಡು ತಿಂಗಳ ಮೊದಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದರು.

 

ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ  ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಹಂಚಿಕೆ ಮಾಡಿರುವ ಪ್ರಕರಣವು ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಮುಜುಗರ ಒಡ್ಡಿದೆ.  ಇದರ ಬೆನ್ನಲ್ಲೇ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ದೂರು,  ಎರಡು ತಿಂಗಳ ಮೊದಲೇ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿತ್ತು ಎಂಬ ಅಂಶವು ಇಡೀ  ಪ್ರಕರಣವನ್ನು ಮತ್ತೊಂದು ಮಗ್ಗುಲು ಬದಲಿಸಿದಂತಾಗಿದೆ.

 

ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದರು. ಇದನ್ನು ಸ್ವತಃ ದಿನೇಶ್‌ ಕಲ್ಲಹಳ್ಳಿ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ಅದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ನಾಗರಿಕ ಸೌಲಭ್ಯಕ್ಕೆ ಮೀಸಲಿರಿಸಿದ್ದ ನಿವೇಶನಗಳನ್ನು ಮಂಜೂರು ಮಾಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಮತ್ತು ಈ ತೀರ್ಮಾನದಿಂದ ಮಂಡಳಿಗೆ ನೂರಾರು ಕೋಟಿ ರು ಮೊತ್ತದಲ್ಲಿ ನಷ್ಟವುಂಟಾಗಿದೆ ಎಂದು ರಾಹುಲ್‌ಗಾಂಧಿ ಅವರ ಕಚೇರಿಗೆ ದೂರು ಸಲ್ಲಿಸಿದ್ದರು. ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಅವರ ಹೆಸರನ್ನೂ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರಲ್ಲದೇ ಇದಕ್ಕೆ ಸಂಬಂಧಿಸಿದ ಸಮಗ್ರ ದಾಖಲಾತಿಗಳನ್ನೂ ಲಗತ್ತಿಸಿರುವುದು ಕಂಡು ಬಂದಿದೆ.

 

 

ಇದೇ ದೂರನ್ನು ಪ್ರತ್ಯೇಕವಾಗಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೂ ಇ-ಮೇಲ್‌ ಮೂಲಕ ಸಲ್ಲಿಸಿದ್ದಾರೆ.  ರಾಹುಲ್‌ಗಾಂಧಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿನ ಅಂಶಗಳನ್ನೇ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ  ಮಲ್ಲಿಕಾರ್ಜುನ ಖರ್ಗೆ, ಕಲ್ಬುರ್ಗಿ  ಸಂಸದ ಹಾಗೂ ಅಳಿಯ  ರಾಧಾಕೃಷ್ಣ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ರಸ್ಟಿಯಾಗಿರುವ  ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಪರಿಶಿಷ್ಟ ಜಾತಿ ಕೋಟಾದಡಿಯಲ್ಲಿ  5 ಎಕರೆ ಜಮೀನು ಮಂಜೂರಾಗಿದೆ.  ಈ  ಪ್ರಕರಣದಲ್ಲಿಅವರ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಕುಟುಂಬ ಸದಸ್ಯರ  ವಿರುದ್ಧ  ಹಿತಾಸಕ್ತಿ ಸಂಘರ್ಷ,  ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಆರೋಪವೂ ಕೇಳಿ ಬಂದಿದೆ.

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಹೈಟೆಕ್  ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಹಂಚಿಕೆ ಮಾಡಿದ್ದ 45.94 ಎಕರೆ ವಿಸ್ತೀರ್ಣದ ಪೈಕಿ 5 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರೇ ಟ್ರಸ್ಟಿಗಳಾಗಿರುವ ಕಾರಣ ಈ ಪ್ರಕರಣವು ರಾಜಕೀಯ ವಲಯದಲ್ಲಿ  ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

 

ಕೈಗಾರಿಕೆಯನ್ನು ನಡೆಸದೇ ಇರುವ ಸಂಘ ಸಂಸ್ಥೆಗಳಿಗೆ ಕೈಗಾರಿಕೆ ಪ್ರದೇಶದಲ್ಲಿನ ನಾಗರಿಕ ಸೌಲಭ್ಯ ನಿವೇಶನ ನೀಡಲಾಗಿದೆ. ಇದರ ಹಿಂದೆ ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಡೆದಿದೆ  ಎಂದು ದಿನೇಶ್‌ ಕಲ್ಲಹಳ್ಳಿ ಎಂಬುವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಇದೀಗ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ಜಮೀನು ಮಂಜೂರು ಮಾಡಿರುವ ಪ್ರಕರಣದಲ್ಲಿಯೂ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷವಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಹಂಚಿಕೆಯಾಗಿರುವ 45.94 ಎಕರೆ ವಿಸ್ತೀರ್ಣದ ಪೈಕಿ ರಾಹುಲ್‌ ಎಂ ಖರ್ಗೆ ಅವರು ಟ್ರಸ್ಟಿಯಾಗಿರುವ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ ಪರಿಶಿಷ್ಟ ಜಾತಿ ಕೋಟಾದಡಿಯಲ್ಲಿ  5 ಎಕರೆ ವಿಸ್ತಿರ್ಣ ಜಾಗವನ್ನು ಮಂಜೂರು ಮಾಡಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ರಾಹುಲ್‌ ಎಂ ಖರ್ಗೆ ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ಗೆ ಪ.ಜಾತಿ ಕೋಟಾದಲ್ಲಿ 5 ಎಕರೆ ಮಂಜೂರು

 

ಈ ವರದಿ ಪ್ರಕಟವಾದ ಬೆನ್ನಲ್ಲೇ  ಸಿದ್ದಾರ್ಥ ವಿಹಾರ ಟ್ರಸ್ಟ್‌ ನ ಡೀಡ್‌ ಕೂಡ ಮುನ್ನೆಲೆಗೆ ಬಂದಿತ್ತು.

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು; ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇವರ ಪತ್ನಿ ರಾಧಾಭಾಯಿ ಖರ್ಗೆ, ಕಲ್ಬುರ್ಗಿ ಸಂಸದ ಹಾಗೂ ಅವರ ಅಳಿಯ ರಾಧಾಕೃಷ್ಣ,

 

 

 

 

ಸಚಿವ ಪ್ರಿಯಾಂಕ್‌ ಖರ್ಗೆ ಅವರೂ ಸಹ ಇರುವುದು ಟ್ರಸ್ಟ್‌ ಡೀಡ್‌ನಿಂದ ಗೊತ್ತಾಗಿದೆ.

 

 

ಕೈಗಾರಿಕೆ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ (ಸಿ.ಎ) ಮೀಸಲಿಟ್ಟ ನಿವೇಶನಗಳ ಹಂಚಿಕೆಯಲ್ಲಿ ಒಳಸಂಚು ಮತ್ತು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.  ಇದರ ಬೆನ್ನಲ್ಲೇ ಬಹಿರಂಗವಾಗಿರುವ  ಮಲ್ಲಿಕಾರ್ಜುನ ಖರ್ಗೆ ಅವರೂ ಸೇರಿದಂತೆ ಅವರ ಕುಟುಂಬದ ಸದಸ್ಯರು  ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ ಡೀಡ್‌ ದಾಖಲೆಗಳು ಪ್ರತಿಪಕ್ಷಗಳ ಕೈಗೆ ಮತ್ತೊಂದು ಬಲವಾದ ಅಸ್ತ್ರವೊಂದನ್ನು ನೀಡಿದಂತಾಗಿತ್ತು.

 

ಹೈಟೆಕ್‌ ಡಿಫೆನ್ಸ್‌ ಏರೋ ಸ್ಪೇಸ್‌ ಪಾರ್ಕ್‌ನಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌  ಸಂಶೋಧನೆ ಮತ್ತು ಅಭಿವೃದ್ಧಿ, ತರಬೇತಿ ಸಂಸ್ಥೆಗಳ ಸ್ಥಾಪನೆಗಾಗಿ ಜಾಗ ಮಂಜೂರಾತಿಗೆ ಕೋರಿತ್ತು. ಅದರಂತೆ ಸಚಿವ ಎಂ ಬಿ ಪಾಟೀಲ್‌ ಅಧ್ಯಕ್ಷತೆಯ ಸಭೆಯು ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ಗೆ 5 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಸಭೆ ನಡವಳಿಯಲ್ಲಿ ರಾಹುಲ್‌ ಖರ್ಗೆ ಅವರ ಹೆಸರನ್ನಷ್ಟೇ ಉಲ್ಲೇಖಿಸಿತ್ತು.

 

ತರಬೇತಿ ಮತ್ತು ಸಂಶೋಧನೆ ಸಂಸ್ಥೆಗಳ ಸ್ಥಾಪನೆಗಾಗಿ ಈ ಜಾಗದಲ್ಲಿ ಒಟ್ಟು 25 ಕೋಟಿ ರು ಗಳನ್ನು ಹೂಡಿಕೆ ಮಾಡಲಿದ್ದಾರೆ ಎಂಬುದು ನಡವಳಿಯಲ್ಲಿ ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

 

 

ಒಟ್ಟಾರೆ 45.94 ಎಕರೆ ವಿಸ್ತೀರ್ಣದ ಜಾಗದಲ್ಲಿ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ ಸೇರಿದಂತೆ ಒಟ್ಟಾರೆ  11 ಕಂಪನಿಗಳು 1,204.85 ಕೋಟಿ ರು. ಹೂಡಿಕೆಯಾಗಲಿದೆ. ಅದೇ ರೀತಿ ಎಸ್‌ಸಿ ಮತ್ತು ಎಸ್‌ ಟಿ ಕೋಟಾದಡಿಯಲ್ಲಿ ಎಂಎಂಆರ್‍‌ ಸ್ಕೈಯರ್‍‌ ಗೆ 2.41 ಎಕರೆ ಮಂಜೂರಾಗಿದೆ. ಈ ಜಾಗದಲ್ಲಿ ಹೋಟೆಲ್‌, ರೆಸಾರ್ಟ್‌ ಮತ್ತು ಕಾಟೇಜ್‌ ನಿರ್ಮಾಣಕ್ಕೆ 17.50 ಕೋಟಿ ರು. ಹೂಡಿಕೆಯಾಗಲಿದೆ.

 

ಅದೇ ರೀತಿ ಎಸ್‌ಸಿ ಕೋಟಾದಡಿಯಲ್ಲಿ ಅದ್ವಿಕ್‌ ಗೇಟ್‌ವೇ ನ ಮಂಜುನಾಥ್‌ ಅವರಿಗೆ 2.17 ಎಕರೆ ಮಂಜೂರಾಗಿದೆ.  ಈ ಪ್ರದೇಶದಲ್ಲಿ ರೆಸಿಡೆನ್ಷಿಯಲ್‌ ಅಪಾರ್ಟ್‌ಮೆಂಟ್‌ ಉದ್ದೇಶಕ್ಕೆ 47.92 ಕೋಟಿ ರು. ಹೂಡಿಕೆ ಮಾಡಲಿದೆ ಎಂದು ನಡವಳಿಯಿಂದ ತಿಳಿದು ಬಂದಿದೆ.

 

 

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯು ರಚಿಸಿರುವ ಕೈಗಾರಿಕೆ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಅವ್ಯವಹಾರ, ಅಕ್ರಮ, ಕ್ರಿಮಿನಲ್‌ ಒಳಸಂಚು ನಡೆಸಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ. ಇದರಿಂದ ಕೆಐಎಡಿಬಿಗೆ ಕೋಟ್ಯಂತರ ರುಪಾಯಿ ನಷ್ಟವುಂಟಾಗಿದೆ. ಇದರಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ ಸಚಿವ ಎಂ ಬಿ ಪಾಟೀಲ್‌ ಅವರು ಭಾಗಿಯಾಗಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

 

 

ಹಂಚಿಕೆಯಾಗಿರುವ ಇತರೆ  ಕಂಪನಿಗಳ ಪಟ್ಟಿ

 

ಅಲ್ಲದೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್‌ 218 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್‌ 17 ಎ ಮತ್ತು 19ರ ಅಡಿಯಲ್ಲಿ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದನ್ನು ಸ್ಮರಿಸಬಹುದು.

ಸಿಎ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ; ಸಿದ್ದರಾಮಯ್ಯ ಬೆನ್ನಲ್ಲೇ ಎಂ ಬಿ ಪಾಟೀಲ್‌ಗೂ ಸಂಕಷ್ಟ

ಇಂತಹ ನಿವೇಶನವನ್ನು ಹರಾಜು ಮೂಲಕ ಹಂಚಿಕೆ ದರದ ದುಪ್ಪಟ್ಟು ದರದಲ್ಲಿ ಅಥವಾ ಹಂಚಿಕೆ ದರದ ಶೇಕಡಾ 1 ½ ಹಂಚಿಕೆಯ ದರದಲ್ಲಿ ಹಂಚಿಕೆ ಮಾಡಬೇಕಾಗಿತ್ತು. ಆದರೆ ಕೆಐಡಿಬಿಯು ನಿಯಮಗಳನ್ನು ಪಾಲಿಸದೇ ಹಂಚಿಕೆ ದರದಲ್ಲಿಯೇ ಸಿಎ ನಿವೇಶನವನ್ನು ಹಂಚಿಕೆ ದರದಲ್ಲಿ ಹಂಚಿಕೆ ಮಾಡುತ್ತಿದ್ದು, ಇದರಿಂದ ಕೆಐಡಿಬಿಗೆ ಕೋಟ್ಯಾಂತರ ರುಪಾಯಿಗಳು ನಷ್ಟವುಂಟಾಗಿದೆ ಎಂದು ದಿನೇಶ್‌ ಆರೋಪಿಸಿದ್ದಾರೆ.

the fil favicon

SUPPORT THE FILE

Latest News

Related Posts