ದೇಗುಲಗಳಿಗೆ ಅನುದಾನ; 203.34 ಕೋಟಿ ರು ಮೊತ್ತಕ್ಕೆ ಹಣ ಬಳಕೆ ಪ್ರಮಾಣ ಪತ್ರಗಳೇ ಇಲ್ಲ

ಬೆಂಗಳೂರು; ಶನಿ ಮಹಾತ್ಮ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರುಪಾಯಿ ಅನುದಾನ ಮಂಜೂರು ಮಾಡಲಾಗಿತ್ತು. ಕಳೆದ 5 ವರ್ಷಗಳಲ್ಲಿ 203.34 ಕೋಟಿ ರು. ಮೊತ್ತದಷ್ಟು ಸಾಮಾನ್ಯ ಅನುದಾನಗಳಿಗೆ ದೇವಸ್ಥಾನಗಳ ಆಡಳಿತ ಮಂಡಳಿಗಳು ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ. ಮತ್ತು ಬಹುತೇಕ ದೇವಸ್ಥಾನಗಳಿಗೆ ಶಾಸನಬದ್ಧವಾಗಿದ್ದ ನೀತಿಗಳನ್ನೂ ಉಲ್ಲಂಘಿಸಿ ಅನುದಾನ ಬಿಡುಗಡೆ ಮಾಡಿರುವುದನ್ನೂ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

 

ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಮಹಾಲೇಖಪಾಲರು ಮಂಡಿಸಿರುವ ವರದಿಯಲ್ಲಿ ಹಲವು ದೇವಸ್ಥಾನಗಳ ಆಡಳಿತ ಮತ್ತು ಹಣಕಾಸಿನ ಅಶಿಸ್ತು ಬಯಲಾಗಿದೆ.  2024 ಜುಲೈ ಅಧಿವೇಶನದಲ್ಲೇ ಸಿಎಜಿ ವರದಿ ಸಲ್ಲಿಕೆಯಾಗಿತ್ತು. ಆದರೆ ಈ ವರದಿ ಆಧರಿಸಿ ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಇದುವರೆಗೂ ಕ್ರಮವನ್ನೇ ವಹಿಸಿಲ್ಲ ಎಂದು ಗೊತ್ತಾಗಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಒಂದೇ ಸಂಸ್ಥೆಗೆ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನ ಮಂಜೂರು ಮಾಡಲಾಗಿತ್ತು. ಇಂತಹ ಪ್ರಕರಣಗಳ ಕುರಿತು ಸಿಎಜಿಯು 11 ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿತ್ತು. ಈ ಪೈಕಿ 8ರಲ್ಲಿ ಒಟ್ಟಾರೆ 5.13 ಕೋಟಿ ರು ಮೊತ್ತದ 79 ಪ್ರಕರಣಗಳನ್ನು ಪತ್ತೆ ಹಚ್ಚಿತ್ತು.

 

ಇವುಗಳಲ್ಲಿ ಒಂದೇ ಸಂಸ್ಥೆಗಳಿಗೆ ವಿಧಾನಸಭಾ ಸದಸ್ಯರ ನಿಧಿ, ಪರಿಶಿಷ್ಟ ಜಾತಿ ಉಪ ಯೋಜನೆ, ಬುಡಕಟ್ಟು ಉಪಯೋಜನೆ, ಆರಾಧನ, ರುದ್ರಭೂಮಿ ಇತ್ಯಾದಿಗಳಿಂದ ಒಂದಕ್ಕಿಂತ ಹೆಚ್ಚಿನ ಸಂಖ್ಯೆಗಳ ಅನುದಾನಗಳನ್ನು ಬಿಡುಗಡೆ ಮಾಡಲಾಗಿತ್ತು. ಈ 79 ಪ್ರಕರಣಗಳ ಪೈಕಿ ಒಂದೇ ಸಂಸ್ಥೆಗಳಿಗೆ ಎರಡಕ್ಕಿಂತ ಹೆಚ್ಚಿನ ಯೋಜನೆಗಳ ಅಡಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಿದ್ದ 17 ಪ್ರಕರಣಗಳನ್ನು ಸಿಎಜಿಯು ಹೊರಗೆಡವಿರುವುದು ಗೊತ್ತಾಗಿದೆ.

 

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶನಿ ಮಹಾತ್ಮ ದೇವಸ್ಥಾನಕ್ಕೆ 1.20 ಕೋಟಿ ರು ಮೊತ್ತದಷ್ಟು ಅನುದಾನಗಳನ್ನು ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾಗಿತ್ತು. ಆ ಯೋಜನೆಗಳು ಪರಿಶಿಷ್ಟ ಉಪ ಯೋಜನೆಯನ್ನೂ (5 ಲಕ್ಷ ರು) ಒಳಗೊಂಡಿತ್ತು. ಈ ಸಂಸ್ಥೆಯು ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ ಅನುದಾನ ಸ್ವೀಕರಿಸುವ ಅರ್ಹತೆ ಇದೆಯೇ ಎಂಬುದನ್ನು ಲೆಕ್ಕ ಪರಿಶೋಧನೆಯು ದಾಖಲೆಗಳಿಂದ ಖಚಿತಪಡಿಸಿಕೊಳ್ಳಲಾಗಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

 

 

ಈ ಮಂಜೂರಾತಿಯು 2021-22ರಲ್ಲಿ ಇತರೆ ದೇವಸ್ಥಾನಕ್ಕೆ ಮಂಜೂರಾಗಿದ್ದಂತಹ ಹಣಸಕಾಸಿನ ಮಾರ್ಗಾಂತರಣದ ಮೂಲಕ ಹೊಂದಾಣಿಕೆ ಮಾಡಲಾಗಿದ್ದಂತಹ ಹಣಕಾಸನ್ನೂ ಒಳಗೊಂಡಿತ್ತು. ಮತ್ತೊಂದು ಪ್ರಕರಣದ ಉಡುಪಿ ಜಿಲ್ಲೆಯ ಉಚಿಲಾ ಮಹಾಲಕ್ಷ್ಮಿ ದೇವಸ್ಥಾನಕ್ಕೆ 2019-20ರಿಂದ 2021-22ರ ಮಧ್ಯೆ 12.75 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿತ್ತು.

 

‘ಈ ರೀತಿಯಾಗಿ ಒಂದೇ ಸಂಸ್ಥೆಗೆ ವಿವಿಧ ಯೋಜನೆಗಳಿಂದ ಅನುದಾನಗಳನ್ನು ಮಂಜೂರು ಮಾಡಿ ಬಿಡುಗಡೆಗೊಳಿಸಿದ್ದಲ್ಲಿ ಈ ಪ್ರಕ್ರಿಯೆಯು ಅಗತ್ಯತೆ ಇರುವ ಇತರೆ ಅನೇಕ ಸಂಖ್ಯೆಗಳ ಸಂಸ್ಥೆಗಳಿಗೆ ತಾರತಮ್ಯತೆ ಮಾಡಿದಂತೆ. ಹಾಗೂ ಅಂತಹ ಸಂಸ್ಥೆಗಳಿಗೆ ಸರ್ಕಾರಿ ಅನುದಾನಗಳ ಅನುವುಗಳ ಮೂಲ ಉದ್ದೇಶವನ್ನೇ ಸೋಲಿಸಲಿದೆ,’ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ.

 

2017-18ರಿಂದ 2021-22ರ ಐದು ವರ್ಷಗಳ ಅವಧಿಯಲ್ಲಿ ಧಾರ್ಮಿಕ ಸಂಸ್ಥೆಗಳಿಗೆ 476.12 ಕೋಟಿ ರು ಬಿಡುಗಡೆ ಆಗಿತ್ತು. ಸಾಮಾನ್ಯ ಅನುದಾನಗಳ ಪೈಕಿ 2216 ಕೋಟಿ ರು. ಮೊತ್ತವನ್ನು ಕಡೆಯ ತ್ರೈಮಾಸಿಕದಲ್ಲಿ ಹಾಗೂ 148.42 ಕೋಟಿ ರು.ಗಳನ್ನು ಮಾರ್ಚ್‌ ತಿಂಗಳಿನಲ್ಲಷ್ಟೇ ಶಾಸನಬದ್ಧ ಅನುವುಗಳನ್ನು ಉಲ್ಲಂಘಿಸಿ ಬಿಡುಗಡೆ ಮಾಡಲಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

 

 

‘ವರ್ಷಾಂತ್ಯದಲ್ಲಿ ಅನುದಾನಗಳನ್ನು ಬಿಡುಗಡೆಗೊಳಿಸುವ ಪರಿಪಾಠವು ಇಲಾಖೆಯ ನಿಕೃಷ್ಟಮಟ್ಟದಿಂದ ಕೂಡಿದ ಹಣಕಾಸಿನ ನಿರ್ವಹಣೆಯನ್ನು ಪ್ರತಿಬಿಂಬಿಸಿತ್ತು. ಹೀಗಾಗಿ ಧಾರ್ಮಿಕ ಸಂಸ್ಥೆಗಳು ಈ ಅನುದಾನಗಳನ್ನು ಯಾವ ಉದ್ದೇಶಗಳಿಗಾಗಿ ಬಿಡುಗಡೆ ಮಾಡಲಾಗಿತ್ತೋ ಅಂತಹ ಉದ್ದೇಶಗಳಿಗಾಗಿ ಒಂದು ನಿರ್ದಿಷ್ಟ ಕಾಲಾವಧಿಯ ಒಳಗೆ ಭರಿಸಲು, ಖರ್ಚು ಮಾಡಲು ಸಾಧ್ಯವಾಗುವುದಿಲ್ಲ,’ ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾವಿಸಲಾಗಿದೆ.

 

ಕಳೆದ 5 ವರ್ಷಗಳಲ್ಲಿ ಒಟ್ಟಾರೆ 226.53 ಕೋಟಿ ರು ಅನುದಾನ ಪೈಕಿ 203.34 ಕೋಟಿ ರು. ಮೊತ್ತದಷ್ಟು ಸಾಮಾನ್ಯ ಅನುದಾನಗಳಿಗೆ ಹಣ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ. ಇಲಾಖೆಯು ಬಿಡುಗಡೆ ಮಾಡಿದ್ದ 226.53 ಕೋಟಿ ಮೊತ್ತದಷ್ಟು ಸಾಮಾನ್ಯ ಅನುದಾನಗಳ ಪೈಕಿ 39.45 ಕೊಟಿ ರು ಮೊತ್ತವನ್ನು ಅಂದರೇ ಶೆ.17ರಷ್ಟನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಿರಲಿಲ್ಲ. ಹಾಗೂ ಜಿಲ್ಲಾ ಮಟ್ಟದಲ್ಲಿ ಬ್ಯಾಂಕ್‌ಗಳ್ಲಲಿ ಜಿಲ್ಲಾಧಿಕಾರಿಗಳ ಉಳಿತಾಯ ಖಾತೆಯಲ್ಲಿ ಕೂಡಿಟ್ಟಿತ್ತು ಎಂದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ಪರಿಶಿಷ್ಟ ಉಪ ಯೋಜನೆ, ಬುಡಕಟ್ಟು ಉಪ ಯೋಜನೆ ಹಾಗೂ ಆರಾಧನಾ ಯೋಜನೆಗಳ ಅಡಿಯಲ್ಲಿ ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳು, ಕಲ್ಯಾಣ ಮಂಟಪಗಳ ನವೀಕರಣ, ರಿಪೇರಿ, ಹೊಸ ನಿರ್ಮಾಣಗಳಿಗಾಗಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳು ನೆಲೆಸಿರುವಂತಹ ಸ್ಥಳಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.

 

ಇಲಾಖೆಯು 2017-18ರಿಂದ 2021-22ರ ಅವಧಿಯಲ್ಲಿ ಈ ಯೋಜನೆಗಳ ಅಡಿಯಲ್ಲಿ 11 ಜಿಲ್ಲೆಗಳಿಗೆ 47.51 ಕೋಟಿ ರು. ಬಿಡುಗಡೆ ಮಾಡಿತ್ತು. ಬಿಡುಗಡೆ ಮಾಡಿದ್ದ ಮೊತ್ತದ ಪೈಕಿ ಇಲಾಖೆಯು 20.33 ಕೋಟಿ ರು. ಮೊತ್ತದ 1,627 ಕಾಮಗಾರಿಗಳಿಗೆ ಅನುಮೋದನೆ ನೀಡಲು ಸಾಧ್ಯವಾಗಿತ್ತು.

 

ಅನುಮೋದನೆಗೊಂಡ ಕಾಮಗಾರಿಗಳ ಪೈಕಿ ಇಲಾಖೆಯು ಕೇವಲ 493 ಕಾಮಗಾರಿಗಳನ್ನು (7.92 ಕೋಟಿ) ಕೈಗೆತ್ತಿಕೊಳ್ಳಲು ಸಾಧ್ಯವಾಗಿತ್ತು. ಉಳಿದ 1,134 ಕಾಮಗಾರಿಗಳು (12.41 ಕೋಟಿ) ಕೈಗೆತ್ತಿಕೊಳ್ಳಲಾಗಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

 

 

ಬಿಡುಗಡೆಯಾಗಿದ್ದ 7.92 ಕೋಟಿ ಅನುದಾನಗಳ ಪೈಕಿ ಕೇವಲ 2.51 ಕೋಟಿ ರು. ಮೊತ್ತಕ್ಕೆ ಮಾತ್ರ ಫಲಾನುಭವಿಗಳು ಹಣ ಬಳಕೆ ಪ್ರಮಾಣ ಪತ್ರಗಳನನು ಸಲ್ಲಿಸಿದ್ದರು. ಉಳಿದ 5.41 ಕೋಟಿ ರು. ಮೊತ್ತಕ್ಕೆ ಹಣ ಬಳಕೆ ಪ್ರಮಾಣ ಪತ್ರಗಳನ್ನೇ ಸಲ್ಲಿಸಿರಲಿಲ್ಲ.

 

‘ವರ್ಷಾಂತ್ಯದಲ್ಲಿ ಅನುದಾನ ಬಿಡುಗಡೆ- ಅನುದಾನಗಳನ್ನು ನಿಯಮಬಾಹಿರವಾಗಿ, ಅಧಿಕ ಪ್ರಮಾಣದಲ್ಲಿ ನೀಡಿರುವುದಕ್ಕಾಗಿ ಹೊಣೆಗಾರಿಕೆ ನಿಗದಿಪಡಿಸುವಲ್ಲಿ ಸರ್ಕಾರವು ಕ್ರಮ ಕೈಗೊಳ್ಳಬೇಕು. ಇಲಾಖೆಯು ಫಲಾನುಭವಿಗಳನ್ನು ಗುರುತಿಸಿರಲಿಲ್ಲ ಅಥವಾ ಗುರುತಿಸಲ್ಪಟ್ಟ ಕಾಮಗಾರಿಗಳ ಮೇಲೆ ವೆಚ್ಚ ಮಾಡಲಾಗಲಿಲ್ಲ. ಇದು ಪ್ರಾಯೋಗಿಕವಾಗಿ ಪ್ರಪ್ರಥಮವಾಗಿ ಕೈಗೆತ್ತಿಕೊಳ್ಳಲಾಗಿದ್ದ ಯೋಜನೆಗಳ ನಿಕೃಷ್ಣಮಟ್ಟದ ಕಾರ್ಯನಿರ್ವಹಣೆಯಲ್ಲಿ ಪರಿಣಿಮಿಸಿತ್ತು,’ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಿಸಲಾಗಿದೆ.

Your generous support will help us remain independent and work without fear.

Latest News

Related Posts