ಒಂದೇ ದಿನದಲ್ಲಿ 10 ನಿವೇಶನ ಬಿಡುಗಡೆ; ದೃಢೀಕೃತ ಪ್ರಮಾಣಪತ್ರವಿಲ್ಲ, ಅನುಮೋದನೆಯೂ ಇಲ್ಲ

ಬೆಂಗಳೂರು; ಬಡಾವಣೆಯ ವಿನ್ಯಾಸ ಪ್ರದೇಶದಲ್ಲಿನ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಸಕ್ಷಮ ಪ್ರಾಧಿಕಾರಗಳಿಂದ ದೃಢೀಕೃತ ಪ್ರಮಾಣ ಪತ್ರ ಪಡೆಯದೇ 10.4.5 ಎಕರೆ ಪ್ರದೇಶದಲ್ಲಿ ಸೈಯದ್‌ ನಿಜಾಮ್‌ ಅಲಿ ಎಂಬುವರಿಗೆ 10 ನಿವೇಶನ ಬಿಡುಗಡೆ ಮಾಡಿರುವುದನ್ನು ತಾಂತ್ರಿಕ ಸಮಿತಿಯು ಬಯಲು ಮಾಡಿದೆ.

 

ಈ ಪ್ರಕರಣ ನಡೆದಿದ್ದ ಅವಧಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ನಟೇಶ್‌ ಅವರು ನಿಯಮಬಾಹಿರವಾಗಿ ಕ್ರಮಕೈಗೊಂಡಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಿದೆ.

 

2020ರ ಮೇ 4ರಿಂದ 2022ರ ಜನವರಿ 10ವರೆಗೆ ಮತ್ತು 2022ರ ಜನವರಿ 31ರಿಂದ 2022ರ ಮೇ 4 ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ನಟೇಶ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಂತ್ರಿಕ ಸಮಿತಿಯು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೂ ಈ ವರದಿ ಆಧರಿಸಿ ಸಚಿವ ಬೈರತಿ ಸುರೇಶ್‌ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

 

ತಾಂತ್ರಿಕ ಸಮಿತಿಯು ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ವಿವರ

 

ಮೈಸೂರು ತಾಲೂಕು ಕಸಬಾ ಹೋಬಳಿ ಲಿಂಗಾಬುದಿ ಗ್ರಾಮ ಸರ್ವೆ ನಂಬರ್‍‌ 62/1, 2 ಮತ್ತು 63/1, 2ರಲ್ಲಿ ಒಟ್ಟು 10 ಎಕರೆ 4.5 ಗುಂಟೆ ಪ್ರದೇಶದಲ್ಲಿ ಸೈಯದ್‌ ನಿಜಾಮ್‌ ಆಲಿ ಎಂಬುವರು ಬಡಾವಣೆ ರಚಿಸಿದ್ದರು. ಈ ಬಡಾವಣೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಮತ್ತು ಈ ಸಂಬಂಧ ಸಕ್ಷಮ ಪ್ರಾಧಿಕಾರದ ದೃಢೀಕೃತ ಪತ್ರ ಪಡೆಯದೇ ಮೂಡಾ ಆಯಕ್ತರಾಗಿದ್ದ 10 ನಿವೇಶನಗಳನ್ನು ಬಿಡುಗಡೆ ಮಾಡಿದ್ದರು ಎಂದು ವಿನೋದ್‌ ಜೈನ್‌ ಎಂಬುವರು ದೂರು ಸಲ್ಲಿಸಿದ್ದರು.

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ಈ ಪ್ರಕರಣದಲ್ಲಿ ನಟೇಶ್‌ ಅವರು ಕಾನೂನನ್ನು ಗಾಳಿಗೆ ತೂರಿ ಅವ್ಯವಹಾರ ಮಾಡಿದ್ದಾರೆ ಎಂಬ ದೂರನ್ನು ವಿನೋದ್‌ ಜೈನ್ ಎಂಬುವರು ಆಪಾದಿಸಿರುವುದು ಗೊತ್ತಾಗಿದೆ.

 

ನಿಯಮ ಉಲ್ಲಂಘನೆ

 

ಈ ನಿವೇಶನಗಳನ್ನು ಬಿಡುಗಡೆಗೊಳಿಸಬೇಕಾದಲ್ಲಿ ಪ್ರಾಧಿಕಾರದ ಸಭೆಗೆ ತರಬೇಕು ಎಂಬ ನಿಯಮವಿದೆ. ಆದರೆ ಈ ಕಡತದಲ್ಲಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ನಟೇಶ್‌ ಅವರು ಪ್ರಾಧಿಕಾರದ ಸಭೆಯ ಗಮನಕ್ಕೂ ತಂದಿಲ್ಲ. ಆಯಕ್ತರಾಗಿದ್ದ ನಟೇಶ್‌ ಅವರು ತರಾತುರಿಯಲ್ಲಿ ಒಂದೇ ದಿನದಲ್ಲಿ ನಿವೇಶನಗಳನ್ನು ಬಿಡುಗಡೆ ಮಾಡಲು ಸೂಚಿಸಿದ್ದರು. ಕೆಳ ಹಂತದ ಅಧಿಕಾರಿಗಳ ಮೂಲಕ 2021ರ ಜುಲೈ 6ರಂದು ಆದೇಶ ಹೊರಡಿಸಿದ್ದರು ಎಂದು ದೂರಿದ್ದರು.

 

ಈ ದೂರಿನ ಕುರಿತು ತಾಂತ್ರಿಕ ಸಮಿತಿಯು ವಿವರವಾಗಿ ಪರಿಶೀಲಿಸಿದೆ.

 

ಲಿಂಗಾಂಬುದಿ ಗ್ರಾಮದ ಸರ್ವೆ ನಂಬರ್ 63, 64ರ ಜಮೀನಿನಲ್ಲಿ ಬರುವ ಹಳ್ಳದ ಖರಾಬನ್ನು ಗುರುತಿಸಿ ಅಳತೆ ಮಾಡಿ 2021ರ ಮಾರ್ಚ್‌ 22ರಂದು ಸಲ್ಲಿಸಲಾಗಿತ್ತು. ಮುಂದಿನ ಕ್ರಮಕ್ಕಾಗಿ ಕಡತವನ್ನು ಸಲ್ಲಿಸಿದ್ದರು. ಮುಂದಿನ ಆದೇಶಕ್ಕಾಗಿ ಪ್ರಾದಿಕಾರಕ್ಕಾಗಿ ಈ ಕಡತವನ್ನು ತಾಂತ್ರಿಕ ಶಾಖೆಯ ಅಧಿಕಾರಿಗಳು ಮಂಡಿಸಿದ್ದರು.

ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ

ಆದರೆ ಕಡತದ ಟಿಪ್ಪಣಿಯ ಕಂಡಿಕೆ (158)ರಲ್ಲಿ ಪ್ರಾಧಿಕಾರದ ಆಯುಕ್ತರು 2014ರ ಮೇ 24ರ ಸುತ್ತೋಲೆಯಂತೆ ಪ್ರಾಧಿಕಾರದ ಸಭೆಗೆ ಮಂಡಿಸಿರಲಿಲ್ಲ.

 

‘ಕಂಡಿಕೆ 154 ರಿಂದ 157ರವರೆಗಿನ ಅಂಶಗಳನ್ನು ಪರಿಶೀಲಿಸಿದೆ. ಉಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ರಿಟ್‌ ಅರ್ಜಿ 54606-54611ನ್ನು ಪರಿಶೀಲಿಸಿದೆ. ಈ ರಿಟ್‌ ಅರ್ಜಿಯಲ್ಲಿ ಸರ್ವೆ ನಂಬರ್‍‌ 59/1 ಎ ಬಿ ಸಿ ಮತ್ತು 59/2 ಮತ್ತು 64 ಲಿಂಗಾಂಬುದಿ ಗ್ರಾಮದ ಸರ್ವೆ ನಂಬರ್‍‌ಗಳಿವೆ. ನಿವೇಶನ ಬಿಡುಗಡೆಗೆ ಕೋರಿರುವ ಕಡತದಲ್ಲಿರುವ ಸರ್ವೆ ನಂಬರ್‍‌ಗೆ ಸಂಬಂಧಿಸಿದ್ದಲ್ಲದೇಯಿರುವುದರಿಂದ ಕೋರಿಕೆಯಂತೆ ನಿವೇಶನ ಬಿಡುಗಡೆಗೆ ಕ್ರಮ ವಹಿಸಲು ಸೂಚಿಸಿದೆ,’ ಎಂದು ದಾಖಲಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಕಂಡಿಕೆ 158ರಲ್ಲಿನ ಆದೇಶವನ್ನು ಉಲ್ಲೇಖಿಸಿ ತಾಂತ್ರಿಕ ಶಾಖೆ ಅಧೀಕ್ಷಕ ಅಭಿಯಂತರರು (ಸಂಖ್ಯೆ;ಮೈನಪ್ರಾ/ಪಿಬಿ/ಖಖಾಬ/1007/2021-22 ದಿನಾಂಕ 08/07/2021) ಪತ್ರ ಬರೆದಿದ್ದರು.

 

‘ಶೇ.70ರಷ್ಟು ನಿವೇಶನಗಳನ್ನು ಈಗಾಗಲೇ ಬಿಡುಗಡೆಯಾಗಿದ್ದು ಅರ್ಜಿದಾರರ ಮನವಿಯಂತೆ ಹಾಗೂ ಕಡತದ ಟಿಪ್ಪಣಿಯ ಕಂಡಿಕೆ 158ರಲ್ಲಿ ಆಯುಕ್ತರು (06/07/2021) ಅನುಮೋದನೆ ನೀಡಿರುವಂತೆ ವಿನ್ಯಾಸದಲ್ಲಿನ ನಿವೇಶನಗಳನ್ನು ಸರ್ಕಾರದ ಅಧಿಸೂಚನೆ (ನಇ 60 ಮೈಅಪ 2018, 22-11-2018)ಯಂತೆ ಅಂತಿಮ ಹಂತದ ನಿವೇಶನ ಬಿಡುಗಡೆ ಸಂದರ್ಭದಲ್ಲಿ 10 ನಿವೇಶನಗಳಿಗೆ ದಂಡ ವಿಧಿಸುವ ಷರತ್ತಿಗೊಳಪಟ್ಟಿದೆ. ಅಂತಿಮ ಹಂತದ ಭಾಗಶಃ ನಿವೇಶನಗಳನ್ನು ಬಿಡುಗಡೆ ಮಾಡಲು ಕ್ರಮವಹಿಸಿದ್ದಾರೆ. ಅಂದರೆ ಒಟ್ಟಾರೆಯಾಗಿ ಶೇ.79.17ರಷ್ಟು (85) ನಿವೇಶನಗಳನ್ನು ಬಿಡುಗಡೆಗೊಳಿಸಿದಂತಾಗಿರುತ್ತದೆ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಈ ಅಂಶವನ್ನೂ ತಾಂತ್ರಿಕ ಸಮಿತಿಯು ಕೂಲಂಕುಷವಾಗಿ ಪರಿಶೀಲಿಸಿದೆ.

 

ವಿವಿಧ ಹಂತದ ನಿವೇಶನಗಳ ಬಿಡುಗಡೆ ಕುರಿತು ಮಾರ್ಗಸೂಚಿ ಹಾಗೂ ನಿಗದಿತ ನಮೂನೆ ನಿಗದಿಪಡಿಸಿದೆ. ಎರಡನೇ ಹಂತದ (ಶೇ.30) ನಿವೇಶನಗಳನ್ನು ಬಿಡುಗಡೆಗೊಳಿಸಿದ ನಂತರ ಎಲ್ಲಾ ಆಭಿವೃದ್ಧಿ ಕಾಮಗಾರಿಗಳು ತೃಪ್ತಿಕರವಾಗಿ ಪೂರ್ಣಗೊಳಿಸಿರುವ ಕುರಿತು ಸಕ್ಷಮ ಪ್ರಾಧಿಕಾರಗಳಿಂದ ದೃಢೀಕೃತ ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರ ಪಡೆದು ಅರ್ಜಿದಾರರು ಸಲ್ಲಿಸಬೇಕು. ನಂತರವಷ್ಟೇ ಅಂತಿಮ ಹಂತದ ಉಳಿಕೆ ಶೇ.30ರಷ್ಟು ನಿವೇಶನಗಳನ್ನು ಬಿಡುಡೆ ಮಾಡಬೇಕಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

848 ನಿವೇಶನ ಬಿಡುಗಡೆ; ಮೂಡಾದಿಂದ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಅತಿಕ್ರಮಣ

ಆದರೆ ಕಡತದ ಟಿಪ್ಪಣಿಯ 158ರಲ್ಲಿ ನೀಡಿದ್ದ ಸೂಚನೆಯಂತೆ ಪ್ರಾಧಿಕಾರದ ಆಯುಕ್ತರ ಸೂಚನೆಯಂತೆ ತಾಂತ್ರಿಕ ಶಾಖೆಯ ಅಧಿಕಾರಿಗಳು ಸುತ್ತೋಲೆಯಲ್ಲಿನ ಸೂಚನೆಗಳಿಗೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸಿದ್ದಾರೆ.

 

‘ವಿನ್ಯಾಸ ಪ್ರದೇಶದಲ್ಲಿನ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯಗೊಳ್ಳುವ ಪೂರ್ವದಲ್ಲಿಯೇ ಹಾಗೂ ಅಭಿವೃದ್ಧಿ ಕಾಮಗಾರಿಗಳು ತೃಪ್ತಿಕರವಾಗಿ ಪೂರ್ಣಗೊಳಿಸಿರುವ ಕುರಿತು ಯಾವುದೇ ಸಕ್ಷಮ ಪ್ರಾಧಿಕಾರಗಳಿಂದ ದೃಢೀಕೃತ ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರ ಪಡೆಯದೇ ಮತ್ತು ವಿಷಯವನ್ನು ಪ್ರಾಧಿಕಾರದ ಸಭೆಯ ಮುಂದೆ ಮಂಡಿಸಿ ಅನುಮೋದನೆ ಸಹ ಪಡೆಯದೇ ಸುತ್ತೋಲೆ ಅಂಶಗಳಿಗೆ ವ್ಯತಿರಿಕ್ತವಾಗಿ ನಿಯಮಬಾಹಿರವಾಗಿ ಶೇ.9.17ರಷ್ಟು (10 ಸಂಖ್ಯೆ) ನಿವೇಶನಗಳನ್ನು ಬಿಡುಗಡೆಗೊಳಿಸಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಅಲ್ಲದೇ ಅಂತಿಮ ಹಂತದ ಭಾಗಶಃ ನಿವೇಶನಗಳನ್ನು ಸರ್ಕಾರದ ನಿರ್ದೇಶನಗಳಂತೆ ದಂಡಶುಲ್ಕ ಪಾವತಿಸಿಕೊಳ್ಳದೇ 2021ರ ಜುಲೈ 8ರಂದು ಬಿಡುಗಡೆಗೊಳಿಸಲಾಗಿದೆ. ದಂಡ ಶುಲ್ಕದ ಪ್ರಕಾರ 1,96, 1,410 ರು. ಪಾವತಿಸಿಕೊಳ್ಳಬೇಕಿತ್ತು. ನಿವೇಶನಗಳನ್ನು ಬಿಡುಗಡೆ ಮಾಡುವ ಪೂರ್ವದಲ್ಲಿಯೇ ಪಾವತಿಸಿಕೊಳ್ಳಬೇಕಿತ್ತು. ಆದರೂ ಈ ಮೊತ್ತವನ್ನು ಪಾವತಿಸಿಕೊಳ್ಳದೆಯೇ ನಿವೇಶನಗಳನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

SUPPORT THE FILE

Latest News

Related Posts