ಬೇನಾಮಿ ವ್ಯಕ್ತಿಗಳಿಗೂ ಸೌಲಭ್ಯ, ದುರುಪಯೋಗ, ನಿಗಮಕ್ಕೆ ಕೋಟ್ಯಂತರ ನಷ್ಟ; ಜಾಗೃತ ಕೋಶದ ವರದಿ ಬಯಲು

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ  ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಲ್ಲಿ ಜಾರಿಗೊಂಡಿದ್ದ ಗಂಗಾಕಲ್ಯಾಣ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಯಲ್ಲಿಯೂ ಭಾರೀ ಅಕ್ರಮಗಳು ನಡೆದಿದ್ದವು. ಅಧಿಕಾರ ಮತ್ತು ಹಣ ದುರುಪಯೋಗಪಡಿಸಿಕೊಂಡಿದ್ದ ಅಧಿಕಾರಶಾಹಿಯು ಬೇನಾಮಿ ಫಲಾನುಭವಿಗಳಿಗೂ ಸೌಲಭ್ಯ ಕಲ್ಪಿಸಿತ್ತು. ಇದರಿಂದ  ನಿಗಮಕ್ಕೆ ಆರ್ಥಿಕ ನಷ್ಟವುಂಟಾಗಿತ್ತು.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ದಿ ನಿಗಮವೂ ಸೇರಿದಂತೆ ಇನ್ನಿತರೆ ಸಮುದಾಯ ಅಭಿವೃದ್ದಿ ನಿಗಮಗಳಲ್ಲಿನ ಕೋಟ್ಯಂತರ ರುಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣಗಳನ್ನು ಮುಂದಿರಿಸಿ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

 

ಇದರಿಂದ ಪಾರಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿಯೂ ಕೋಟ್ಯಂತರ ರುಪಾಯಿ ವರ್ಗಾವಣೆ ಆಗಿದೆ. ಈ ಅವಧಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದರು ಎಂದು ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದರು. ವಿಶೇಷವೆಂದರೇ 2022ರಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿಯೇ ಈ ಪ್ರಕರಣ ನಡೆದಿತ್ತು. ಆದರೂ ಇದರ ಬಗ್ಗೆ ಸದನದಲ್ಲಿ ದನಿ ಎತ್ತಿರಲಿಲ್ಲ.

 

ಈ ಆರೋಪವನ್ನು ವಾಪಸ್‌ ಪಡೆಯದಿದ್ದರೇ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ಕೂರುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿನ ವಿವಿಧ ಯೋಜನೆಗಳ ಆಯ್ಕೆ ಪ್ರಕ್ರಿಯೆ, ಬೇನಾಮಿ ಫಲಾನುಭವಿಗಳ ಪಟ್ಟಿಯೂ ಮುನ್ನೆಲೆಗೆ ಬಂದಿದೆ.

 

ನಿಗಮವು ಜಾರಿಗೊಳಿಸಿರುವ ಹಲವು ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮತ್ತು ಸಹಾಯ ಧನ ಬಿಡುಗಡೆಯಲ್ಲಿನ ಅಕ್ರಮಗಳನ್ನು ಪತ್ತೆ ಹಚ್ಚಿರುವ ಜಾಗೃತ ಕೋಶವು 2022ರ ಮೇ 18ರಲ್ಲೇ  ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರ ಸೇರಿದಂತೆ ಮೈಸೂರು ತಾಲೂಕಿನ ಹಲವು ಹೋಬಳಿ, ಗ್ರಾಮಗಳಲ್ಲಿಯೂ ಅಕ್ರಮಗಳು ನಡೆದಿವೆ ಎಂದು ಜಾಗೃತ ಕೋಶವು ತಪಾಸಣೆ ವೇಳೆಯಲ್ಲಿ ಪತ್ತೆ ಹಚ್ಚಿದೆ.

 

ಪ್ರಕರಣ 1

 

ಮೈಸೂರು ತಾಲೂಕು ಜಯಪುರ ಹೋಬಳಿಯ ಚನ್ನಮ್ಮ ಎಂಬುವರು ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಗೆ ಆಯ್ಕೆಯಾಗಿದ್ದರು. ಸರ್ವೆ ನಂಬರ್‍‌ 100ರಲ್ಲಿ 01 ಎಕರೆ ಜಮೀನಿದೆ. ಆದರೆ ಈ ಜಮೀನಿಗೆ 05 ಜನ ಜಂಟಿ ಸ್ವಾಧೀನದಾರರಾಗಿದ್ದರು. ಉಳಿದ 0.20 ಗುಂಟೆಗೆ ಪರ್ವತಯ್ಯ ಅವರ ಹೆಸರಿನಲ್ಲಿ ಒಪ್ಪಿಗೆ ಪಡೆದು ಕೊಳವೆ ಬಾವಿ ಕೊರೆಸಲಾಗಿದೆ.

 

ನಿಗಮದ ನಿಯಮಾನುಸಾರ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಹೆಸರಿನಲ್ಲಿ ಕನಿಷ್ಟ 1.20 ಗುಂಟೆ ಜಮೀನು ಇರಬೇಕು. ಆದರೆ ಚನ್ನಮ್ಮ ಎಂಬುವರ ಹೆಸರಿನಲ್ಲಿರುವ ಸರ್ವೆ ನಂಬರ್ 100ರಲ್ಲಿ 06 ಜನ ಜಂಟಿ ಇರುವ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ಸರ್ಕಾರದ ಆದೇಶ ಉಲ್ಲಂಘಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

 

ಪ್ರಕರಣ 2

 

ಅದೇ ರೀತಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಆಯ್ಕೆ ಪಟ್ಟಿಯ ಕ್ರಮ ಸಂಖ್ಯೆ 10ರಲ್ಲಿ ಲಕ್ಷ್ಮಮ್ಮ ಎಂಬುವರು ಗಂಗಾ ಕಲ್ಯಾಣ ಯೋಜನೆಯಡಿ ಬದಲಿ ಫಲಾನುಭವಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇವರು ಸರ್ವೆ ನಂಬರ್‍‌ 10 *1ರಲ್ಲಿ 1.11 ಎಕರೆ ಹೊಂದಿದ್ದಾರೆ. ಇದರಲ್ಲಿಯೂ 05 ಜನ ಜಂಟಿ ಸ್ವಾಧೀನದಾರರಿದ್ದಾರೆ. ಉಳಿದ ಮತ್ತೊಂದು ಪಹಣಿಯ ಸರ್ವೆ ನಂಬರ್‍‌ 15*2ಬಿ ನಲ್ಲಿ 0.23 ಎಕರೆ ಜಮೀನಿಗೂ 05 ಜನ ಜಂಟಿ ಸ್ವಾಧೀನದಲ್ಲಿದ್ದಾರೆ.

 

 

ನಿಗಮದ ನಿಯಮಾನುಸಾರ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಹೆರಿನಲ್ಲಿ ಕನಿಷ್ಟ 1.20 ಎಕೆರೆ ಜಮೀನು ಇರಬೇಕು. ಆದರೂ ಲಕ್ಷ್ಮಮ್ಮ ಎಂಬುವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿ ಸರ್ಕಾರದ ಆದೇಶ ಉಲ್ಲಂಘನೆ ಆಗಿದೆ ಎಂದು ವರದಿಯು ವಿವರಿಸಿದೆ.

 

ಪ್ರಕರಣ 3

 

ಮೂಗೂರು ಹೋಬಳಿಯ ನೀಲಸೋಗೆ ಗ್ರಾಮದ ಮರೆಮ್ಮ ಎಂಬುವರ ಹೆಸರಿನಲ್ಲಿರುವ ಸರ್ವೆ ನಂಬರ್‍‌ 223*4ರಲ್ಲಿ 1.00 ಎಕರೆ ಜಮೀನು ಇದೆ. ನಿಗಮದ ನಿಯಮಾನುಸಾರ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಆರ್ಹರಾಗಿರುವುದಿಲ್ಲ. ಶಾಸಕರ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಬೇನಾಮಿ ಫಲಾನುಭವಿಗೆ ಸೌಲಭ್ಯ ಕಲ್ಪಿಸಿ ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಗಂಭೀರ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಪ್ರಕರಣ 4

 

ಮಿರ್ಲೆ ಹೋಬಳಿಯ ತಂದ್ರೆ ಗ್ರಾಮದ ಕಾಳಯ್ಯ ಎಂಬುವರು ಶಾಸಕರ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರಲಿಲ್ಲ. ಶಾಸಕರ ಕೋರಿಕೆ ಪತ್ರದ ಅನ್ವಯ ಕೊಳವೆ ಬಾವಿಯನ್ನು ನಿಯಮ ಮೀರಿ ಕೊರೆಯಿಸಿರುವುದು ನಿಯಮಬಾಹಿರವಾಗಿದ್ದು ಅಧಿಕಾರ ದುರುಪಯೋಗವಾಗಿದೆ ಎಂದು ವರದಿ ವಿವರಿಸಿದೆ.

 

ಪ್ರಕರಣ 5

 

ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಜಯಪುರ ಹೋಬಳಿ ಗುಜ್ಜೇಗೌಡನಪುರದ ಮಹದೇವಯ್ಯ ಎಂಬುವರು ವೈಯಕ್ತಿಕ ಗಂಗಾಕಲ್ಯಾಣ ಯೋಜನೆಯಡಿ ಆಯ್ಕೆಯಾಗಿದ್ದರು. ಇವರ ಸರ್ವೆ ನಂಬರ್‍‌ 148*2ರಲ್ಲಿ 1.08 ಎಕರೆ ಜಮೀನಿದೆ.

 

ಒಪ್ಪಿಗೆ ಕರಾರು ಪತ್ರದಲ್ಲಿ ಉಲ್ಲೆಖಿಸಿದಂತೆ ಸರ್ವೆ ನಂಬರ್‍‌ 148ರ ಪಹಣಿ ಕಡತದಲ್ಲಿ ಲಭ್ಯವಿರುವುದಿಲ್ಲ. ಹಾಗೂ ಮೊದಲನೇ ಪಾರ್ಟಿ ಯಾರು ಎಂಬುದರ ಬಗ್ಗೆ ಸ್ಪಷ್ಟವಾಗಿ ನಮೂದಿಸಿರುವುದಿಲ್ಲ. ಹೀಗಿದ್ದರೂ ಸಹ ನಿಯಮ ಮೀರಿ ಕೊಳವೆ ಬಾವಿ ಕೊರೆದು ಅಕ್ರಮವಾಗಿ ಅನುಷ್ಠಾನ ಮಾಡಿ ನಿಗಮಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts