ಬೆಂಗಳೂರು; ರಾಜ್ಯದ ವಿವಿಧೆಡೆಗಳಲ್ಲಿ ನಿರ್ಮಾಣವಾಗಿರುವ ಖಾಸಗಿ ಎಸ್‌ಟಿಪಿಗಳನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ನಿಯಮಗಳು ಪಾಲನೆಯಾಗುತ್ತಿಲ್ಲ. ಅಲ್ಲದೇ ಖಾಸಗಿ ಕಂಪನಿಗಳು ಈ ನಿಯಮಗಳನ್ನು ನೇರಾ ನೇರ ಉಲ್ಲಂಘಿಸುತ್ತಿವೆ.
ಹಾಗೆಯೇ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮ್ಯಾನ್‌ಹೋಲ್, ಸೆಪ್ಟಿಂಕ್ ಟ್ಯಾಂಕ್, ಒಳಚರಂಡಿಗಳನ್ನು ಸ್ವಚ್ಛತೆ ಮಾಡುವ ಕಾರ್ಮಿಕರಿಗೆ ಯಾವುದೇ ತರಬೇತಿಯೂ ಇಲ್ಲ. ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನೂ ಬಳಕೆ ಮಾಡುತ್ತಿಲ್ಲ. ಹೀಗಾಗಿ ವಿಷಪೂರಿತ ಗಾಳಿ ಸೇವಿಸಿ ಸಾವುಗಳು ಸಂಭವಿಸುತ್ತಿವೆ.
ಅದೇ ರೀತಿ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಯಾವುದೇ ಎಸ್‌ಟಿಪಿಗಳು ಬಿಡಬ್ಲ್ಯೂಎಸ್‌ಎಸ್‌ಬಿ ವ್ಯಾಪ್ತಿಗೇ ಒಳಪಟ್ಟಿಲ್ಲ. ಹೀಗಾಗಿ ಎಸ್‌ಟಿಪಿಗಳ ಸಮೀಕ್ಷೆಯೂ ನಡೆದಿಲ್ಲ.
ಈ ಲೋಪಗಳನ್ನು ಸರಿಪಡಿಸದ ಕಾರಣ ಮ್ಯಾನ್ ಹೋಲ್ ಮತ್ತು ಸೆಪ್ಟಿಂಕ್ ಟ್ಯಾಂಕ್ ಸ್ವಚ್ಛ ಮಾಡುವಾಗ ಮೃತಪಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕೈ ಕಟ್ಟಿ ಕುಳಿತಿದೆ. ಅಧ್ಯಕ್ಷ ಶಾಂತ್ ತಮ್ಮಯ್ಯ ಅವರು ಇಂತಹ ಪ್ರಕರಣಗಳ ಕುರಿತು ಕಠಿಣ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ವಿಚಾರವು ಬೆಳಕಿಗೆ ಬಂದಿದೆ.
ಮ್ಯಾನ್ಯುಯಲ್ ಸ್ಕಾವೆಂಜಿಂಗ್ ಪದ್ಧತಿಯನ್ನು ನಿಷೇಧಗೊಳಿಸುವುದು, ಬಿಡಬ್ಲ್ಯೂಎಸ್‌ಎಸ್‌ಬಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳ ಬಗ್ಗೆ 2024ರ ಫೆ.3ರಂದು ನಡೆದಿದ್ದ ಸಭೆಯಲ್ಲಿ ಖಾಸಗಿ ಎಸ್‌ಟಿಪಿಗಳ ನಿರ್ವಹಣೆ ಕುರಿತು ದೀರ್ಘವಾಗಿ ಚರ್ಚೆಯಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
‘ರಾಜ್ಯದಲ್ಲಿ ಪ್ರಸ್ತುತ ನಿರ್ಮಾಣವಾಗಿರುವ ಖಾಸಗಿ ಎಸ್‌ಟಿಪಿಗಳನ್ನು ನಿರ್ವಹಣೆ ಮಾಡುವಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ನಿಯಮಗಳನ್ನು ಖಾಸಗಿ ಕಂಪನಿಗಳು ಉಲ್ಲಂಘಿಸುತ್ತಿವೆ. ಇದರ ಬಗ್ಗೆ ಮಂಡಳಿಯು ಯಾವುದೇ ಕ್ರಮ ಕೈಗೊಂಡಿಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಲಾಗಿದೆ.
ಬೆಂಗಳೂರು ನಗರದಲ್ಲಿ ಒಟ್ಟು ಎಷ್ಟು ಖಾಸಗಿ ಎಸ್‌ಟಿಪಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂಬುದಕ್ಕೆ ಯಾವುದೇ ಅಂಕಿ ಅಂಶಗಳೂ ಸಹ ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿಯೂ ಮಾಹಿತಿ ಇಲ್ಲ. ಹಾಗೆಯೇ ಈ ಎಸ್‌ಟಿಪಿಗಳನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯೂ ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಇಲ್ಲ ಎಂಬುದು ನಡವಳಿಯಿಂದ ತಿಳಿದು ಬಂದಿದೆ.
ಅದೇ ರೀತಿ ಬಿಡಬ್ಲ್ಯೂಎಸ್‌ಎಸ್‌ಬಿ ಸಂಸ್ಥೆಯವರು ಅಥವಾ ಹೊರಗುತ್ತಿಗೆ ನೌಕರರಲ್ಲದ 4ರಿಂದ 5 ಕಾರ್ಮಿಕರನ್ನು ಮ್ಯಾನ್‌ಹೋಲ್, ಸೆಪ್ಟಿಂಕ್ ಟ್ಯಾಂಕ್, ಇತರೆ ಕಟ್ಟಿಕೊಂಡ ಸ್ಥಳಗಳಿಗೆ ನಿಯೋಜನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕಾರ್ಮಿಕರಿಗೆ ಮ್ಯಾನ್ ಹೋಲ್, ಸೆಪ್ಟಿಂಕ್ ಟ್ಯಾಂಕ್ ಸ್ವಚ್ಛ ಮಾಡುವ ತರಬೇತಿಯೂ ಇಲ್ಲ. ಅಲ್ಲದೇ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಬಳಕೆ ಮಾಡದ ಕಾರಣ ಕಾರ್ಮಿಕರು ಮೃತರಾಗುತ್ತಿದ್ದಾರೆ ಎದು ವಕೀಲ ಬಾಲನ್ ಅವರು ಸಭೆಯಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ಬೆಂಗಳೂರು ನಗರದಲ್ಲಿ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಯಾವುದೇ ಎಸ್‌ಟಿಪಿಗಳು ಬೆಂಗಳೂರು ಜಲಮಂಡಳಿ ವ್ಯಾಪ್ತಿಗೆ ಒಳಪಟ್ಟಿಲ್ಲ. ಹೀಗಾಗಿ ಈ ಎಸ್‌ಟಿಪಿಗಳನ್ನು ಸಮೀಕ್ಷೆಯನ್ನೂ ನಡೆಸಿಲ್ಲ ಎಂದು ಖುದ್ದು ಮಂಡಳಿ ಅಧ್ಯಕ್ಷರೇ ಸಭೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.