ಬೆಂಗಳೂರು; ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಡಿವೈಸ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಸರಬರಾಜು ಮಾಡುವ ಕಂಪನಿಗಳ ಪಟ್ಟಿಯನ್ನು ಶಿಫಾರಸ್ಸು ಮಾಡುವ ಮುನ್ನ ಟೆಂಡರ್ ಪರಿಶೀಲನಾ ಸಮಿತಿಯು ಕೆಟಿಪಿಪಿ ಕಾಯ್ದೆ ಮತ್ತು ನಿಯಮಾನುಸಾರ ತಾಂತ್ರಿಕ ಮೌಲ್ಯಮಾಪನ ಮಾಡಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ಪ್ಯಾನಿಕ್ ಬಟನ್ ಸರಬರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಕರೆದಿದ್ದ ಟೆಂಡರ್‍ನ್ನು ರದ್ದುಗೊಳಿಸಿರುವ ಬೆನ್ನಲ್ಲೇ ಟೆಂಡರ್ ಪರಿಶೀಲನಾ ಸಮಿತಿಯು ತಾಂತ್ರಿಕವಾಗಿ ಮೌಲ್ಯಮಾಪನ ಮಾಡಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ಈ ಕುರಿತು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ 6,000ಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಪಡೆದುಕೊಂಡಿದೆ.
ಸಾರ್ವಜನಿಕ ಸೇವಾ ವಾಹನಗಳಿಗೆ ಎಐಎಸ್ 140 ಗುಣಮಟ್ಟ ಹೊಂದಿರುವ ವಿಎಲ್‌ಟಿ ಡಿವೈಸ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ಗಳನ್ನು ಆಯ್ಕೆ ಮಾಡಿದ ಸರಬರಾಜುದಾರರ ಮುಖಾಂತರ ಅಳವಡಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು.
ಇದರ ಅನ್ವಯ ಅಪರ ಸಾರಿಗೆ ಆಯುಕ್ತರ ಅಧ್ಯಕ್ಷತೆಯಲ್ಲಿ 2023ರ ಜುಲೈ 26ರಂದು ನಡೆದಿದ್ದ ಟೆಂಡರ್ ಪರಿಶೀಲನಾ ಸಮಿತಿಯು ಟೆಂಡರ್ ಮುಖಾಂತರ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ ಒಟ್ಟು 27 ಕಂಪನಿಗಳ ಮೌಲ್ಯಮಾಪನ ಮಾಡಿದ್ದ ಸಮಿತಿಯು 13 ಕಂಪನಿಗಳು ತಾಂತ್ರಿಕವಾಗಿ ಅರ್ಹತೆ ಹೊಂದಿವೆ ಎಂದು ಮಾನ್ಯತೆ ಮಾಡಿ ಶಿಫಾರಸ್ಸು ಮಾಡಿತ್ತು.
ಶಿಫಾರಸ್ಸಾಗಿದ್ದ ಪಟ್ಟಿ
ಚೆನ್ನೈನ ಎಪಿಎಂ ಕಿಂಗ್ಸ್ ಟ್ರಾಕ್ ಟೆಕ್ನಾಲಜಿ, ದೆಹಲಿಯ ಅಟ್ಲಾಂಟ ಸಿಸ್ಟಂ, ಉತ್ತರ ಪ್ರದೇಶದ ನಿಪ್ಪಾನ್ ಆಡಿಯೋ ಟ್ರಾನಿಕ್ಸ್ , ಹರ್ಯಾಣದ ಆರ್‍ಡಿಎಂ ಎಂಟರ್‍ಪ್ರೈಸೆಸ್, ಚಂಡೀಗರ್‍ನ ಬ್ಲಾಕ್ ಬಾಕ್ಸ್ ಜಿಪಿಎಸ್ ಟೆಕ್ನಾಲಜಿ, ನವದೆಹಲಿಯ ಇಕೋಗ್ಯಾಸ್ ಇಂಪೆಕ್ಸ್, ಹರ್ಯಾಣದ ಜಿಆರ್‍ಎಲ್ ಇಂಜಿನಿಯರ್ಸ್, ಬೆಂಗಳೂರಿನ ಐ-ಟ್ರಯಾಂಗಲ್ ಇನ್ಫೋಟೆಕ್ ಪ್ರೈವೈಟ್ ಲಿಮಿಟೆಡ್, ಕೇರಳದ ಮರ್ಸಿಡಜ್, ನವದೆಹಲಿಯ ರೋಡ್ ಪಾಯಿಂಟ್ ಲಿಮಿಟೆಡ್, ರೋಸ್‌ಮೆರ್ಟಾ ಆಟೋಟೆಕ್, ಕೇರಳದ ವೋಲ್ಟೋಲಾಟ್ ಕಂಪನಿಗಳು ಮಾನ್ಯತೆ ಪಡೆದಿವೆ ಎಂದು ಸಮಿತಿ ಶಿಫಾರಸ್ಸು ಮಾಡಿತ್ತು.
ಶಿಫಾರಸ್ಸುಗೊಂಡಿದ್ದ 13 ಕಂಪನಿಗಳ ಪೈಕಿ ಬೆಂಗಳೂರಿನ ಐ-ಟ್ರಯಾಂಗಲ್ ಇನ್ಫೋಟೆಕ್ ಪ್ರೈವೈಟ್ ಲಿಮಿಟೆಡ್, ಇ-ಪ್ರೊಕ್ಯೂರ್‍ಮೆಂಟ್ ಜಾಲತಾಣದಲ್ಲಿ ಇರಲಿಲ್ಲ ಎಂಬುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.
‘ಆದರೆ 12 ಕಂಪನಿಗಳು ಮಾತ್ರ ಅರ್ಹತೆ ಪಡೆದ ಕಂಪನಿಗಳಿದ್ದವು. ಐ-ಟ್ರಯಾಂಗಲ್ ಇನ್ಫೋಟೆಕ್ ಪ್ರೈವೈಟ್ ಲಿಮಿಟೆಡ್ ಕಂಪನಿಯು ಇ-ಪ್ರೊಕ್ಯೂರ್‍ಮೆಂಟ್‌ನಲ್ಲಿ ಇರಲಿಲ್ಲ. ಆದರೂ ಈ ಕಂಪನಿಯನ್ನು ಅರ್ಹ ಸಂಸ್ಥೆ ಎಂದು ಪರಿಗಣಿಸಿ ಒಟ್ಟು 13 ಸಂಸ್ಥೆಗಳನ್ನು ಯಶಸ್ವಿ ಸಂಸ್ಥೆಗಳು ಎಂದು ಪರಿಗಣಿಸಿತ್ತು. ಇದು ಟೆಂಡರ್ ಪರಿಶೀಲನಾ ಸಮಿತಿಯು ಕೆಟಿಪಿಪಿ ಕಾಯ್ದೆ ಮತ್ತು ನಿಯಮಾನುಸಾರ ತಾಂತ್ರಿಕ ಮೌಲ್ಯಮಾಪನ ಮಾಡದೇ ಇರುವುದು ದೃಢಪಟ್ಟಿತ್ತು,’ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಕೆಟಿಪಿಪಿ ಕಾಯ್ದೆ 2000 ನಿಯಮ 20 ರಲ್ಲೇನಿದೆ?
ಟೆಂಡರ್ ಪರಿಶೀಲನಾ ಸಮಿತಿಯು ಪೂರ್ವಭಾವಿ ಪರೀಕ್ಷೆ ಮತ್ತು ಸ್ವೀಕರಿಸಿದ ಟೆಂಡರ್‌ಗಳ ವಿವರವಾದ ಮೌಲ್ಯಮಾಪನವನ್ನು ನಡೆಸಬೇಕು. ಮತ್ತು ಟೆಂಡರ್ ಸ್ವೀಕರಿಸುವ ಅಧಿಕಾರವನ್ನು ಪರಿಗಣಿಸಲು ಮೌಲ್ಯಮಾಪನ ವರದಿಯನ್ನು ಸಿದ್ಧಪಡಿಸಿ ಮೌಲ್ಯಮಾಪನ ಮಾಡಬೇಕು.
ಟೆಂಡರ್ ಸ್ವೀಕರಿಸುವ ಅಧಿಕಾರವು ಕೆಟಿಪಿಪಿ ನಿಯಮ 2000 ನಿಯಮ 21 ರ ನಿಬಂಧನೆಗಳ ಪ್ರಕಾರ ಟೆಂಡರ್ ಪರಿಶೀಲನಾ ಸಮಿತಿಗೆ ಈ ಎಲ್ಲಾ ಅಧಿಕಾರವಿದೆ. ಈ ಮೂಲಕ ಟೆಂಡರ್ ಪರಿಶೀಲನಾ ಸಮಿತಿಯು ನ್ಯಾಯಯುತವಾಗಿ ತನ್ನ ಅಧಿಕಾರವನ್ನು ಚಲಾಯಿಸಬೇಕು ಎಂದು ಹೇಳಲಾಗಿದೆ.
ಆದರೇ ಟೆಂಡರ್ ಆಹ್ವಾನಿಸುವ ಪ್ರಾಧಿಕಾರ ಮತ್ತು ಟೆಂಡರ್ ಪರಿಶೀಲನಾ ಸಮಿತಿಯು ಇ-ಪ್ರೊಕ್ಯೂರ್‍ಮೆಂಟ್ ಜಾಲತಾಣದಲ್ಲಿ ಪರಿಶೀಲಿಸದೇ 143 ಕಂಪನಿಗಳನ್ನೂ ತಾಂತ್ರಿಕವಾಗಿ ಅರ್ಹವೆಂದು ಟೆಂಡರ್ ಅಂಗೀಕರಿಸುವ ಪ್ರಾಧಿಕಾರದ ಮುಂದೆ ಮಂಡಿಸಿತ್ತು.
ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಡೆಲ್ಲಿ ಇಂಟಿಗ್ರೇಟೇಡ್ ಮಲ್ಟಿ ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಸಂಸ್ಥೆಯನ್ನು ಅರ್ಹ ಸಂಸ್ಥೆಯನ್ನಾಗಿ 2022ರ ಜನವರಿ 13ರಂದು ನೇಮಕ ಮಾಡಿತ್ತು. 2022ರ ನವೆಂಬರ್ 5ರಂದು ಈ ಸಂಬಂಧ ಆದೇಶ ಹೊರಡಿಸಿತ್ತು.
ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳಡಿಸಲು ಟೆಂಡರ್ ಆಹ್ವಾನಿಸುವ ಪರಿಶೀಲನಾ ಸಮಿತಿ ಮತ್ತು ಟೆಂಡರ್ ಅಂಗೀಕಾರ ಸಮಿತಿಯನ್ನು ರಚಿಸಿ 2022ರ ನವೆಂಬರ್ 25ರಂದು ಆದೇಶಿಸಿತ್ತು. ಟೆಂಡರ್ ಪರಿಶೀಲನಾ ಸಮಿತಿ ರಚಿಸಿ 2023ರ ಫೆ.9ರಂದು ಸಾರಿಗೆ ಆಯುಕ್ತರು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು.
ಸಾರ್ವಜನಿಕ ಸೇವಾ ವಾಹನಗಳಿಗೆ ಲೊಕೇಷನ್ ಟ್ಯ್ರಾಕಿಂಗ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವ ಸಂಬಂಧ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಸಮಾಲೋಚಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದ್ದ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ- ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಕಂಪನಿಗೂ ದೆಹಲಿಯಲ್ಲಿ ಆಪ್ ಸರ್ಕಾರ ಬಸ್ ಖರೀದಿ ಅಕ್ರಮಕ್ಕೂ ಸಂಬಂಧ ಇದೆ ಎಂಬ ಆರೋಪ ಕೇಳಿ ಬಂದಿತ್ತು.
ಡಿಐಎಂಟಿಎಸ್ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸಾರಿಗೆ ಇಲಾಖೆಯು ಈಗಾಗಲೇ ಸೂಚಿಸಿರುವ ಬೆನ್ನಲ್ಲೇ ದೆಹಲಿಯಲ್ಲಿ ಬಸ್ ಖರೀದಿ ಅಕ್ರಮದಲ್ಲೂ ಇದೇ ಕಂಪನಿಯ ಹೆಸರೂ ಕೂಡ ಕೇಳಿ ಬಂದಿದೆ. ಹೀಗಾಗಿ ರಾಜ್ಯದಲ್ಲಿ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಖರೀದಿ ಟೆಂಡರ್ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿತ್ತು.
ದೇಶದ ರಾಜಧಾನಿ ದೆಹಲಿಯಲ್ಲಿ ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಎಎಪಿ ಸರ್ಕಾರವು ಟೆಂಡರ್‌ನ ವ್ಯವಸ್ಥಾಪನಾ ಸಲಹೆಗೆ ನೇಮಕ ಮಾಡಿಕೊಂಡಿದ್ದ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ- ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಸೇವೆಯನ್ನೇ ರಾಜ್ಯ ಸರ್ಕಾರವು ಪಡೆದಿದ್ದು ಸಾರಿಗೆ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಪ್ಯಾನಿಕ್ ಬಟನ್ ಖರೀದಿ; ದೆಹಲಿ ಬಸ್ ಖರೀದಿ ಅಕ್ರಮದಲ್ಲಿ ತಳಕು ಹಾಕಿಕೊಂಡಿದ್ದ ಕಂಪನಿಯಿಂದಲೇ ಸೇವೆ
27 ಬಿಡ್ಡರ್‍ಗಳ ವಿವರಗಳನ್ನೇ ನೀಡದ ಡಿಐಎಂಟಿಎಸ್
ಹಿಂದಿನ ಸರ್ಕಾರದ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿದ್ದವು. ಇದರಲ್ಲಿ ಸಾಕಷ್ಟು ಲೋಪಗಳು ನಡೆದಿವೆ ಎಂದು ಆಟೋ ರಿಕ್ಷಾ ಚಾಲಕರ ಯೂನಿಯನ್ ದೂರು ಸಲ್ಲಿಸಿತ್ತು. ಇದನ್ನಾಧರಿಸಿ ಟೆಂಡರ್ ಪರಿಶೀಲನಾ ಸಮಿತಿಯು 2024ರ ಜನವರಿ 11ರಂದು ಸಭೆ ನಡೆಸಿತ್ತು. ಈ ಸಭೆ ವೇಳೆಯಲ್ಲಿ ಡಿಐಎಂಟಿಎಸ್ ಎಸಗಿದೆ ಎನ್ನಲಾಗಿರುವ ಹಲವು ಲೋಪಗಳು ಬಹಿರಂಗಗೊಂಡಿದ್ದವು.
2023ರ ಫೆ.9ರಂದು ಕರೆದಿದ್ದ ಟೆಂಡರ್‍ನಲ್ಲಿ ಡಿಐಎಂಟಿಎಸ್ ಸಂಸ್ಥೆಯು 03 ಬಾರಿ ಸೇರ್ಪಡೆಗಳನ್ನು ಹೊರಡಿಸಿತ್ತು. ಆದರೆ ಈ ಸೇರ್ಪಡೆಗಳ ದಿನಾಂಕ ಮತ್ತು ಕಾರಣಗಳನ್ನು ನೀಡಿರಲಿಲ್ಲ.
ವಿಎಲ್‌ಟಿ, ಪ್ಯಾನಿಕ್ ಬಟನ್ ಅಳವಡಿಕೆ ಹಿಂದಿದೆ 1,200 ಕೋಟಿ ಹಗರಣ!; ರಾಜ್ಯದಲ್ಲೂ ದೆಹಲಿ ಮಾದರಿ ಅಕ್ರಮ?
ಖರೀದಿಯಲ್ಲಿ ಅಕ್ರಮಗಳನ್ನು ಎಸಗುವ ಸಲುವಾಗಿಯೇ ದಿಲ್ಲಿ ಇಂಟಿಗ್ರೇಟೆಡ್ ಮಲ್ಟಿ- ಮಾಡಲ್ ಟ್ರಾನ್ಸಿಸ್ಟ್ ಸಿಸ್ಟಂ (ಡಿಐಎಂಟಿಎಸ್) ಅನ್ನು ಟೆಂಡರ್‌ನ ವ್ಯವಸ್ಥಾಪನಾ ಸಲಹೆಗೆ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಸಹ ಆರೋಪಿಸಲಾಗಿದೆ. ಈ ದೂರನ್ನು ರಾಷ್ಟ್ರೀಯ ರಾಜಧಾನಿ ದಿಲ್ಲಿ ಕೇಂದ್ರಾಡಳಿತ ಪ್ರದೇಶ ಸರ್ಕಾರದ (ಜಿಎನ್‌ಸಿಟಿಡಿ) ಸಂಬಂಧಿತ ಇಲಾಖೆಗಳಿಂದ ಮುಖ್ಯ ಕಾರ್ಯದರ್ಶಿಗೆ ವರ್ಗಾಯಿಸಲಾಗಿತ್ತು.
ಪ್ಯಾನಿಕ್ ಬಟನ್ ಟೆಂಡರ್ ಅಕ್ರಮ; ಪ್ರಾಥಮಿಕ ತನಿಖೆ, ಶಿಸ್ತು ಕ್ರಮವಿಲ್ಲದೆಯೇ ಹೊಸ ಟೆಂಡರ್‍ಗೆ ಅನುಮೋದನೆ
ಮುಖ್ಯ ಕಾರ್ಯದರ್ಶಿಯಿಂದ ಆಗಸ್ಟ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ವರದಿ ಸ್ವೀಕರಿಸಿದ್ದರು. ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಹಾರ ನಡೆದಿರುವುದನ್ನು ವರದಿ ತೋರಿಸಿತ್ತು. ಇದು ಕೇಂದ್ರ ವಿಚಕ್ಷಣಾ ಆಯೋಗದ ಮಾರ್ಗಸೂಚಿಗಳು ಮತ್ತು ಸಾಮಾನ್ಯ ಹಣಕಾಸು ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂದು ವರದಿ ತಿಳಿಸಿತ್ತು. ದೂರಿನ ಬಳಿಕ ಬಸ್‌ಗಳ ಖರೀದಿಯ ಟೆಂಡರ್ ಅನ್ನು ರದ್ದುಗೊಳಿಸಲಾಗಿತ್ತು.
ಪ್ಯಾನಿಕ್ ಬಟನ್ ಟೆಂಡರ್‌ನ ಇನ್ನೊಂದು ಮುಖ; ಏಕಕಾಲಕ್ಕೆ ಎರಡೂ ಸಮಿತಿಯಲ್ಲೂ ಸದಸ್ಯರ ಕಾರ್ಯನಿರ್ವಹಣೆ
ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ (ಡಿಐಎಂಟಿಎಸ್) ಅನ್ನು ಟೆಂಡರ್‌ಗೆ ನಿರ್ವಹಣಾ ಸಲಹೆಗಾರರನ್ನಾಗಿ ನೇಮಿಸುವುದು ಖರೀದಿಯಲ್ಲಿನ ಅಕ್ರಮಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಅದು ಹೇಳಿದೆ. ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಬಸ್ ಖರೀದಿಯ ಟೆಂಡರ್ ರದ್ದುಗೊಳಿಸಲಾಗಿತ್ತು.