ಬೆಂಗಳೂರು; ಸರ್ಕಾರದ ಸಾಧನೆ, ಯೋಜನೆ, ಕಾರ್ಯಕ್ರಮಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು ‘ದ ಪಾಲಿಸಿ ಫ್ರಂಟ್’ ಗೆ ನೀಡಿರುವ ಹೊರಗುತ್ತಿಗೆ ಕುರಿತು ‘ದಿ ಫೈಲ್’ ದಾಖಲೆ ಸಹಿತ ಹೊರಗೆಡವಿದ್ದ ವರದಿಗಳು ವಿಧಾನಸಭೆ ಅಧಿವೇಶನದಲ್ಲಿ ಇಂದು ಪ್ರತಿಧ್ವನಿಸಿದವು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಹೆಚ್ ಡಿ ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳ ಕುರಿತು ಸುದೀರ್ಘವಾಗಿ ಪ್ರಸ್ತಾಪಿಸಿದರು. ಈ ವೇಳೆ ‘ದ ಪಾಲಿಸಿ ಫ್ರಂಟ್’ ಹೆಸರನ್ನೂ ಉಲ್ಲೇಖಿಸಿದರು.
‘ಪಾಲಿಸಿ ಫ್ರಂಟ್ ಎಂಬ ಸಂಸ್ಥೆಗೆ 7.20 ಕೋಟಿ ರೂ. ಮೊತ್ತವನ್ನು ತೆರಿಗೆ ವಿನಾಯಿತಿ ನೀಡಿದೆ. ಶರವೇಗದಲ್ಲಿ, ರಾಕೆಟ್ ಸ್ಪೀಡ್‌ನಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಆ ಸಂಸ್ಥೆಗೆ ಅಪ್ಪ, ಅಮ್ಮ ಇಲ್ಲ. ಅದರ ಮೂಲ ಪತ್ತೆಯಾಗಿಲ್ಲ. ಇದಕ್ಕೆ ಅಪ್ಪನೂ ಇಲ್ಲ…ಅಮ್ಮನೂ ಇಲ್ಲ. 7.20 ಕೋಟಿ ಗುತ್ತಿಗೆ. ಸಮಗ್ರ ಕಡತ ಕೊಡಿ ಅಂತ ಕೇಳಿದ್ರೆ ಒದಗಿಸಿಲ್ಲ. ಸರ್ಕಾರದಿಂದ ತೆರಿಗೆ ವಿನಾಯಿತಿ ಬೇರೆ. ಕಡತಗಳು ವಿಲೇವಾರಿ ಆಗಿಲ್ಲ. ಆದರೆ ಪಾಲಿಸಿ ಫ್ರಂಟ್‌ಗೆ ಶರವೇಗದಲ್ಲಿ ಕ್ಲಿಯರ್ ಮಾಡ್ತಾರೆ,’ ಎಂದು ಹೇಳಿದರು.
ಅದೇ ರೀತಿ ‘ ಇದು ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಗೊತ್ತಿಲ್ಲ. ಅದು ಪಟ್ಟೊ, ಮಟ್ಟೊ, ರಟ್ಟೊ ಗೊತ್ತಿಲ್ಲ.. ಇದು ಯಾವ್ ಮಟ್ಟು…ಪಟ್ಟೋ…ಇದರ ಗುಟ್ಟೇನು…ಸದನದಲ್ಲಿ ರಟ್ಟಾಗಬೇಕು. ಮಟ್ಟು..ಯಾರು ಅಂತ ನೋಡ್ಬೇಕು,’ ಎಂದೂ ಹೇಳಿದರು.
ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಂಬಂಧ ವಾಟ್ಸಾಪ್ ಸಂಭಾಷಣೆಗೆ 1.45 ಕೋಟಿ ರು. ಸೇರಿದಂತೆ ಒಟ್ಟಾರೆ 1.71 ಕೋಟಿ ರು. ವೆಚ್ಚವಾಗಲಿದೆ ಎಂದು ‘ದ ಪಾಲಿಸಿ ಫ್ರಂಟ್’ ಸಲ್ಲಿಸಿದ್ದ ವಾಣಿಜ್ಯ ಪ್ರಸ್ತಾವನೆಯ ಆಧರಿಸಿ ದಿ ಫೈಲ್ ವರದಿ ಪ್ರಕಟಿಸಿತ್ತು.
‘ದ ಪಾಲಿಸಿ ಫ್ರಂಟ್’ನ ವಾಣಿಜ್ಯ ಪ್ರಸ್ತಾವನೆ ಬಹಿರಂಗ; ವಾಟ್ಸಾಪ್ ಸಂಭಾಷಣೆ ಸೇರಿ 1.45 ಕೋಟಿ ವೆಚ್ಚ
ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮತ್ತು ಯುವ ನಿಧಿ ಯೋಜನೆಯೂ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಚಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದ ದಿನದಂದೇ ದ ಪಾಲಿಸಿ ಫ್ರಂಟ್ ಹೆಸರಿನ ನಿಗೂಢ ಕಂಪನಿಯು ವಾರ್ತಾ ಇಲಾಖೆಗೆ ಮನವಿ ಸಲ್ಲಿಸಿತ್ತು. ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ ದಿನದಂದೇ ದ ಪಾಲಿಸಿ ಫ್ರಂಟ್ ಸಲ್ಲಿಸಿದ್ದ ಮನವಿಯನ್ನಾಧರಿಸಿ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಅದೇ ದಿನದಂದೇ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೂ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.
ದ ಪಾಲಿಸಿ ಫ್ರಂಟ್ ಕಡತಕ್ಕೆ ಚಿರತೆ ವೇಗ; ಸಿಎಂ ಸಭೆ ನಡೆಸಿದ ದಿನದಂದೇ ಮನವಿ, ಅಂದೇ ಇಲಾಖೆಯಿಂದಲೂ ಪ್ರಸ್ತಾವನೆ
ಪರಿಶಿಷ್ಟ ಜಾತಿ ಉಪ ಯೋಜನೆಯ ಶೀರ್ಷಿಕೆಯಲ್ಲಿದ್ದ ಅನುದಾನವನ್ನು ದ ಪಾಲಿಸಿ ಫ್ರಂಟ್ ಗೆ ಹಂಚಿಕೆ ಮಾಡಲಾಗಿತ್ತು.
‘ದ ಪಾಲಿಸಿ ಫ್ರಂಟ್’ ಗೆ ಪರಿಶಿಷ್ಟ ಉಪ ಯೋಜನೆಯ ಅನುದಾನ ಹಂಚಿಕೆ; ದಾಖಲೆ ಬಹಿರಂಗ
ಸುಳ್ಳು ಸುದ್ದಿಗಳ ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್ ಎ ಮೂಲಕ ಕಾರ್ಯಾದೇಶ ಪಡೆದುಕೊಂಡಿರುವ ‘ದ ಪಾಲಿಸಿ ಫ್ರಂಟ್’ ಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿತ್ತು.
7.20 ಕೋಟಿ ರು ಗುತ್ತಿಗೆ; ಕಾರ್ಯಾದೇಶದಲ್ಲಿರುವ ವಿಳಾಸದಲ್ಲಿ ‘ದ ಪಾಲಿಸಿ ಫ್ರಂಟ್’ ಕಚೇರಿಯೇ ಇಲ್ಲ
ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿ ‘ದ ಪಾಲಿಸಿ ಫ್ರಂಟ್’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಪಾರದರ್ಶಕತೆ ಇಲ್ಲದೆಯೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದ್ದರು.
ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ; ಪಾರದರ್ಶಕತೆಯಿಲ್ಲದೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ?
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ 4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು.
‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ
ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು. ಆದರೆ ಕೆಎಸ್‌ಎಂಸಿ ಅಂಡ್ ಎ ಕಂಪನಿಯು ತನ್ನ ಹಂತದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು. ಅದಷ್ಟೇ ಅಲ್ಲ, ಕಡತವನ್ನು ಒದಗಿಸಲು ನಿರಾಕರಿಸುವ ಮೂಲಕ ‘ದ ಪಾಲಿಸಿ ಫ್ರಂಟ್’ ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ಕೊಟ್ಟ ಸರ್ಕಾರ
ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು. ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಿರುವುದನ್ನು ಸ್ಮರಿಸಬಹುದು.