ಪ್ಯಾನಿಕ್‌ ಬಟನ್‌ ಟೆಂಡರ್‌ ಅಕ್ರಮ; ತನಿಖೆಗೆ ಆಂತರಿಕ ಸಮಿತಿ ರಚನೆ, ವರದಿ ನೀಡಲು ನಿರ್ದೇಶನ

ಬೆಂಗಳೂರು; ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ ಅಳವಡಿಕೆ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ  1,200 ಕೋಟಿ ರು. ಮೊತ್ತದ ಹಗರಣವನ್ನು ‘ದಿ ಫೈಲ್‌’ ಹೊರೆಗಡುವುತ್ತಿದ್ದಂತೆ ಇದೀಗ ಸರ್ಕಾರವು ಈ ಕುರಿತು ತನಿಖೆ ನಡೆಸಲು ಮುಂದಾಗಿದೆ.

 

ಹಗರಣದ ಕುರಿತು  ಪ್ರಾಥಮಿಕ ತನಿಖೆ  ನಡೆಸದೆಯೇ  ಹೊಸದಾಗಿ  ಅಲ್ಪಾವಧಿ ಟೆಂಡರ್‍‌  ಕರೆಯಲು ಮುಂದಾಗಿದ್ದ ಸಾರಿಗೆ ಇಲಾಖೆಯು ‘ದಿ ಫೈಲ್‌’ ವರದಿ  ಬೆನ್ನಲ್ಲೇ ಸಾರಿಗೆ ಆಯುಕ್ತರ ನೇತೃತ್ವದಲ್ಲಿ ಆಂತರಿಕ ವಿಚಾರಣೆ ನಡೆಸಲು ನಿರ್ಧರಿಸಿದೆ. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಲೋಪಗಳಿಗೆ ಕಾರಣರಾಗಿರುವ ಅಧಿಕಾರಿ, ಸಿಬ್ಬಂದಿಯನ್ನು ಗುರುತಿಸಿ ವರದಿ ನೀಡಬೇಕು ಎಂದು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್‌ ವಿ ಪ್ರಸಾದ್‌ ಅವರು ಆಯುಕ್ತರಿಗೆ ಸೂಚಿಸಿದ್ದಾರೆ.

 

ಈ ಸಂಬಂಧ 2024ರ ಜನವರಿ 19ರಂದು ಪತ್ರವನ್ನು ಬರೆಯಲಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಅತೀ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆಟೋರಿಕ್ಷಾ ಚಾಲಕರ ಯೂನಿಯನ್‌ ಸಂಘಟನೆಯೊಂದು ಪ್ರಾಥಮಿಕ ಸಾಕ್ಷ್ಯದ ಮೂಲಕ ದೂರು ನೀಡಿತ್ತು. ಈ ಕುರಿತು ಪ್ರಾಥಮಿಕ ವಿಚಾರಣೆಯನ್ನು ನಡೆಸಿರಲಿಲ್ಲ. ಟೆಂಡರ್‍‌ನಲ್ಲಿ  ನಡೆದಿದೆ ಎನ್ನಲಾಗಿರುವ   ಲೋಪ ಮತ್ತು  ಅಕ್ರಮಗಳಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ  ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರವು  ಅನುಮೋದನೆ ನೀಡಿರಲಿಲ್ಲ.

 

ಈ ಕುರಿತು ‘ದಿ ಫೈಲ್‌’ ದಾಖಲೆ ಸಹಿತ ವರದಿ ಪ್ರಕಟಿಸಿದ ನಂತರ ಗಂಭೀರವಾಗಿ ಪರಿಗಣಿಸಿದ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸರ್ಕಾರದ ಕಾರ್ಯದರ್ಶಿ ಎನ್‌ ವಿ ಪ್ರಸಾದ್‌ ಅವರು ಆಂತರಿಕವಾಗಿ ತನಿಖೆ ನಡೆಸಲು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಹಾಗೆಯೇ ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪವೆಸಗಿದೆ ಎಂದು ಹೇಳಲಾಗಿರುವ ಡಿಐಎಂಟಿಎಸ್‌ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲು ಚಿಂತಿಸಿದೆ ಎಂದು ತಿಳಿದು ಬಂದಿದೆ.

 

‘ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪವೆಸಗಿದೆ ಎಂದು ವಿವರಿಸಲಾದ ಡಿಐಎಂಟಿಎಸ್‌ ಸಂಸ್ಥೆಯನ್ನು ಏಕೆ ಕಪ್ಪು ಪಟ್ಟಿಯಲ್ಲಿ ಸೇರಿಸಬಾರದು ಎಂಬ ಬಗ್ಗೆ ಸದರಿ ಸಂಸ್ಥೆಯಿಂದ ವಿವರಣೆ ಪಡೆದು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಈ ಕುರಿತು ಸಾರಿಗೆ ಆಯುಕ್ತರು ಅಂತರಿಕವಾಗಿ ವಿಚಾರಣೆಯನ್ನು ನಡೆಸಿ ಲೋಪಕ್ಕೆ ಕಾರಣವಾದ ಅಧಿಕಾರಿ, ಸಿಬ್ಬಂದಿಯನ್ನು ಗುರುತಿಸಿ ವರದಿ ನೀಡಬೇಕು,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್‌ ವಿ ಪ್ರಸಾದ್‌ ಅವರು ನಿರ್ದೇಶನ ನೀಡಿರುವುದು ಗೊತ್ತಾಗಿದೆ.

 

ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಸಾಧನ ಅಳವಡಿಕೆ ಸಂಬಂಧ ನಡೆದಿದ್ದ ಟೆಂಡರ್‌ ಪ್ರಕ್ರಿಯೆ ಮತ್ತು ಟೆಂಡರ್‌ ಪರಿಶೀಲನಾ ಸಮಿತಿಯ ನಡವಳಿಯನ್ನೂ ಸಚಿವ ರಾಮಲಿಂಗಾರೆಡ್ಡಿ ಮತ್ತು ಕಾರ್ಯದರ್ಶಿ ಎನ್‌ ವಿ ಪ್ರಸಾದ್‌ ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಹಲವು ಅಂಶಗಳು ಪತ್ತೆಯಾಗಿರುವುದು ಪತ್ರದಿಂದ ತಿಳಿದು ಬಂದಿದೆ.

 

ಪತ್ತೆಯಾದ ಅಂಶಗಳಿವು

 

2023ರ ಫೆ.9ರಂದು ಕರೆದಿದ್ದ ಟೆಂಡರ್‌ಗೆ ಡಿಐಎಂಟಿಎಸ್‌ ಸಂಸ್ಥೆಯು 3 ಬಾರಿ ಸೇರ್ಪಡೆಗಳನ್ನು ಹೊರಡಿಸಿರುವುದಾಗಿ ನಮೂದಿಸಿತ್ತು. ಈ ಸೇರ್ಪಡೆಗಳ ದಿನಾಂಕ ಹಾಗೂ ಕಾರಣಗಳನ್ನು ನೀಡಿರುವುದಿಲ್ಲ.

 

ಡಿಐಎಂಟಿಎಸ್‌ ಸಂಸ್ಥೆಯು ಭೌತಿಕ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ನಮೂದಿಸಿರುವ 27 ಬಿಡ್ಡರ್‌ಗಳ ವಿವರಗಳನ್ನು ನೀಡಿರುವುದಿಲ್ಲ.

 

ಅಂತಿಮಗೊಳಿಸಲಾದ 22 ಬಿಡ್ಡರ್‌ಗಳ ಇ-ಪ್ರೊಕ್ಯೂರ್‌ಮೆಂಟ್‌ ಮುದ್ರಿತ ಪ್ರತಿಗಳನ್ನು ನೀಡಿರುವುದಿಲ್ಲ.

 

27 ಬಿಡ್ಡರ್‌ಗಳ ಭೌತಿಕ ದಾಖಲೆಗಳನ್ನು ಸಂಗ್ರಹಿಸಿರುವ ಸಿಬ್ಬಂದಿಯನ್ನು ಹೆಸರಿಸಿರುವುದಿಲ್ಲ.

 

ಸೇರ್ಪಡೆಗಳಲ್ಲಿನ ಬದಲಾವಣೆಗಳನ್ನು ಅನುಮೋದಿಸಿದವರು ಯಾರು ಎಂಬ ಬಗ್ಗೆ ವಿವರಣೆಗಳನ್ನು ನೀಡಿರುವುದಿಲ್ಲ.

 

ಸಾರಿಗೆ ಇಲಾಖೆಯಲ್ಲಿ ಡಿಐಎಂಟಿಎಸ್‌ ಸಂಸ್ಥೆಯ ಸೇವೆಯನ್ನು ಪೂರ್ಣಾವಧಿಗೆ ಅಥವಾ ಅಲ್ಪಾವಧಿಗೆ ಪಡೆಯಲಾಗಿದೆಯೇ ಎಂಬ ಮಾಹಿತಿ ನೀಡಿರುವುದಿಲ್ಲ.

 

ಈ ಯೋಜನೆಗೆ ಇಷ್ಟೇ ಸಂಖ್ಯೆಯ ಡಿವೈಸ್‌ಗಳು ಅಗತ್ಯವಿದೆ ಎಂಬುದನ್ನು ಖಚಿತಪಡಿಸಿದವರು ಯಾರು ಮತ್ತು ಇದು ವಾಹನ್‌ ಪೋರ್ಟಲ್‌ಗೆ ಅನುಸಾರವಾಗಿ ಇದೆಯೇ ಎಂಬ ಮಾಹಿತಿ ನೀಡಿರುವುದಿಲ್ಲ.

 

ಕೆಟಿಪಿಪಿ ಕಾಯ್ದೆ ಅನುಸಾರ ಬಿಡ್ಡರ್‌ಗಳ ವಹಿವಾಟಿನ ವಿವರಗಳನ್ನು ಪಡೆದಿರುವುದಿಲ್ಲ.

 

ಬೇರೆ ರಾಜ್ಯಗಳ ಸದರಿ ಉಪಕರಣಗಳ ಬೆಲೆ ಎಷ್ಟಿದೆ ಎಂಬ ಮಾಹಿತಿ ನೀಡಿರುವುದಿಲ್ಲ.

 

 

ಈ ಅಂಶಗಳನ್ನಷ್ಟೇ ಅಲ್ಲದೇ ಮತ್ತಷ್ಟು ಸ್ಪಷ್ಟೀಕರಣವನ್ನು ಸರ್ಕಾರವು ಸಾರಿಗೆ ಆಯುಕ್ತರಿಂದ ಬಯಸಿದೆ. ‘ಇ- ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ನಲ್ಲಿ ಪರಿಶೀಲಿಸದೇ 13 ಕಂಪನಿಗಳಿಗೆ ಸ್ಪರ್ಧಾತ್ಮಕ ದರ ನಿಗದಿಪಡಿಸಲು 2023ರ ಅಕ್ಟೋಬರ್‌ 3 ಮತ್ತು ನವೆಂಬರ್‌ 7ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಇದರ ಜತೆಗೆ ಪರಿಶೀಲನೆ ವೇಳೆ ಕಂಡುಬಂದಿರುವ ಅಂಶಗಳು, ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು,’ ಎಂದು ಪತ್ರದಲ್ಲಿ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

 

ಟೆಂಡರ್‌ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಮೊದಲು ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅನುಮೋದಿಸಿರಲಿಲ್ಲ. ಬದಲಿಗೆ ಹೊಸದಾಗಿ ಅಲ್ಪಾವಧಿ ಟೆಂಡರ್‌ ಕರೆಯಲು ಸೂಚಿಸಿದ್ದರು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಪ್ಯಾನಿಕ್‌ ಬಟನ್‌ ಟೆಂಡರ್‍‌ ಅಕ್ರಮ; ಪ್ರಾಥಮಿಕ ತನಿಖೆ, ಶಿಸ್ತು ಕ್ರಮವಿಲ್ಲದೆಯೇ ಹೊಸ ಟೆಂಡರ್‍‌ಗೆ ಅನುಮೋದನೆ

 

 

ಪ್ರಕರಣದ ಹಿನ್ನಲೆ

 

ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್‌ ಸಾಧನಕ್ಕೆ ಜಿಎಸ್‌ಟಿ ಹೊರತುಪಡಿಸಿ 8,000 ರು ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ  ಸಗಟು ಮೂಲಕ ಖರೀದಿಸಿದರೆ ತಲಾ ಉಪಕರಣವು   4,000 ರು ದರದಲ್ಲಿ  ಸಿಗಲಿದೆ. ಆದರೂ  8,000 ರು   ದರ ನಿಗದಿಯಾಗಿದೆ. ಈ ದರವನ್ನು ಸರ್ಕಾರವು ನಿರ್ಧರಿಸಿಲ್ಲ. ಬದಲಿಗೆ ದೇಶದ ವಿವಿಧ ರಾಜ್ಯಗಳಲ್ಲಿರುವ ಕಂಪನಿಗಳು ನಿಗದಿಪಡಿಸಿ ನೀಡಿದ್ದ ದರವನ್ನೇ ಸರ್ಕಾರವು ಅನುಮೋದಿಸಿತ್ತು.  ಎಲ್ಲಿಯೂ ಕಂಪನಿಗಳೊಂದಿಗೆ ದರ ಸಂಧಾನ ನಡೆಸಿರಲಿಲ್ಲ ಎಂಬುದು ಗೊತ್ತಾಗಿದೆ.

ವಿಎಲ್‌ಟಿ, ಪ್ಯಾನಿಕ್‌ ಬಟನ್‌ ಅಳವಡಿಕೆ ಹಿಂದಿದೆ 1,200 ಕೋಟಿ ಹಗರಣ!; ರಾಜ್ಯದಲ್ಲೂ ದೆಹಲಿ ಮಾದರಿ ಅಕ್ರಮ?

 

ಆದರೆ 13 ಕಂಪನಿಗಳು ನಿಗದಿಪಡಿಸಿದ್ದ ದರವನ್ನೇ ಸರ್ಕಾರವು ಅನುಮೋದಿಸಿರುವುದರಿಂದ ರಾಜ್ಯದಲ್ಲಿರುವ ಅಂದಾಜು 30 ಲಕ್ಷ ವಾಹನಗಳ ಮಾಲೀಕರು ಹೆಚ್ಚುವರಿಯಾಗಿ 4,000 ರು. ತೆತ್ತಂತಾಗುತ್ತದೆ. ಇದರಿಂದ ಈ 13 ಕಂಪನಿಗಳಿಗೆ ಹೆಚ್ಚುವರಿಯಾಗಿ ಒಟ್ಟಾರೆಯಾಗಿ 1,200 ಕೋಟಿ ರು. ಆರ್ಥಿಕ ಲಾಭವಾಗಲಿದೆ ಎಂಬ ಆರೋಪವೂ ಕೇಳಿ ಬಂದಿದೆ.

 

ಚೆನ್ನೈನ ಎಪಿಎಂ ಕಿಂಗ್ಸ್‌ಟ್ರಾಕ್‌ ಟೆಕ್ನಾಲಜೀಸ್‌, ಹೊಸದೆಹಲಿಯ ಅಟ್ಲಾಂಟ ಸಿಸ್ಟಂ ಪ್ರೈವೈಟ್‌ ಲಿಮಿಟೆಡ್‌, ಉತ್ತರ ಪ್ರದೇಶದ ನಿಪ್ಪಾನ್‌ ಆಡಿಯೋಟ್ರಾನಿಕ್ಸ್‌ ಪ್ರೈವೈಟ್‌ ಲಿಮಿಟೆಡ್‌, ಹರ್ಯಾಣದ ಆರ್‌ಡಿಎಂ ಎಂಟರ್‌ಪ್ರೈಸೆಸ್‌ ಪ್ರೈವೈಟ್‌ ಲಿಮಿಟೆಡ್‌, ಚಂಢೀಗಡ್‌ನ ಬ್ಲಾಕ್‌ ಬಾಕ್ಸ್‌ ಜಿಪಿಎಸ್‌ ಟೆಕ್ನಾಲಜಿ ಒಪಿಸಿ ಪ್ರೈವೈಟ್‌ ಲಿಮಿಟೆಡ್‌, ಹರ್ಯಾಣದ ಇಕೋಗ್ಯಾಸ್‌ ಇಂಪೆಕ್ಸ್‌ ಪ್ರೈವೈಟ್‌ ಲಿಮಿಟೆಡ್‌, ಕೇರಳದ ಮರ್ಸಿಡ್ಯಾಜ್‌ ಇಂಟರ್‌ನ್ಯಾ‍ಷನಲ್‌ ಪ್ರೈವೈಟ್‌ ಲಿಮಿಟೆಡ್‌, ಹೊಸ ದೆಹಲಿಯ ರೋಡ್‌ ಪಾಯಿಂಟ್‌ ಲಿಮಿಟೆಡ್‌ ಮತ್ತು ರೋಸ್‌ಮೆರ್ಟಾ ಆಟೋ ಟೆಕ್‌ ಪ್ರೈವೈಟ್‌ ಲಿಮಿಟೆಡ್‌, ಟ್ರಾನ್‌ಸೈಟ್‌ ಸಿಸ್ಟಂ ಪ್ರೈವೈಟ್‌ ಲಿಮಿಟೆಡ್‌, ವಾಲ್ಟಿ ಸೊಲ್ಯುಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ ನ್ನು ಅರ್ಹ ಸಂಸ್ಥೆಗಳೆಂದು ಸರ್ಕಾರವು ಅಂಗೀಕರಿಸಿತ್ತು.

 

Your generous support will help us remain independent and work without fear.

Latest News

Related Posts