ಶ್ಯಾಮ್‌ ಭಟ್‌ ನೇಮಕ; ಸಿಎಂ, ಸಚಿವರು, ಸ್ಪೀಕರ್‌, ಸಭಾಪತಿಗಳ ಒಮ್ಮತದ ತೀರ್ಮಾನ

ಬೆಂಗಳೂರು; ಮಾನವ ಹಕ್ಕುಗಳ ಅಯೋಗದ ಸದಸ್ಯ  ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ  25  ಆಕಾಂಕ್ಷಿಗಳ ಪೈಕಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ ಶ್ಯಾಮ್‌ ಭಟ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ, ಕಾನೂನು, ವಿಧಾನಮಂಡಲದ ಉಭಯ ಸದನಗಳ ಸ್ಪೀಕರ್‌ ಅವರ ಒಮ್ಮತದಿಂದ ಅಯ್ಕೆ ಮಾಡಲಾಗಿತ್ತು ಎಂಬುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಮಾನವ ಹಕ್ಕುಗಳ ಆಯೋಗದ ಸದಸ್ಯ ಸ್ಥಾನಕ್ಕೆ ಟಿ ಶ್ಯಾಮ್‌ ಭಟ್‌ ಅವರನ್ನು ನೇಮಕಗೊಳಿಸಿದ್ದ ಸರ್ಕಾರವು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದರ ಬೆನ್ನಲ್ಲೇ ಇದೀಗ ಇವರ ನೇಮಕಕ್ಕೆ ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌, ಗೃಹ ಸಚಿವ ಡಾ ಜಿ ಪರಮೇಶ್ವರ್‌, ಸ್ಪೀಕರ್‌ ಯು ಟಿ ಖಾದರ್‌, ಸಭಾಪತಿ ಬಸವರಾಜ ಹೊರಟ್ಟಿ ಅವರು ಒಮ್ಮತದಿಂದ ಆಯ್ಕೆ ಮಾಡಿದ್ದರು ಎಂಬುದು ಮುನ್ನೆಲೆಗೆ ಬಂದಿದೆ.

 

ಇವರ ನೇಮಕಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡಿದೆ.

 

ಆಯೋಗದಲ್ಲಿ ಖಾಲಿ ಇದ್ದ ಸದಸ್ಯ ಸ್ಥಾನಕ್ಕೆ ಐಎಎಸ್‌, ಐಪಿಎಸ್‌, ಜಿಲ್ಲಾ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರು, ವಕೀಲರು,  ಸಾಮಾಜಿಕ ಕಾರ್ಯಕರ್ತರು ಸೇರಿ ಒಟ್ಟಾರೆ 25 ಮಂದಿ  ಸ್ವಯಂ  ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪರಿಶೀಲಿಸಿದ್ದ ಆಯ್ಕೆ ಮಂಡಳಿಯು ಟಿ ಶ್ಯಾಮ್‌ ಭಟ್‌ ಅವರನ್ನು ಸದಸ್ಯ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆ ಮಾಡಿರುವುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಅಲ್ಲದೆ ಟಿ ಶ್ಯಾಮ್‌ ಭಟ್‌ ಅವರನ್ನು ಸದಸ್ಯ ಸ್ಥಾನಕ್ಕೆ ನೇಮಿಸಬಾರದು ಎಂದು ಮಾನವ ಹಕ್ಕುಗಳ ಸಂಘಟನೆಯು ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧೆಡೆ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಹೀಗಾಗಿ ಅವರನ್ನು ಆಯೋಗದ ಸದಸ್ಯ ಸ್ಥಾನಕ್ಕೆ ನೇಮಕ ಮಾಡಬಾರದು ಎಂದು ದೂರಿನಲ್ಲಿ ವಿವರಿಸಲಾಗಿತ್ತು ಎಂಬುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

ಆದರೂ ಆಯ್ಕೆ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ ಪರಮೇಶ್ವರ್‌, ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌, ವಿಧಾನಸಭೆ ಸ್ಪೀಕರ್‌ ಯು ಟಿ ಖಾದರ್‌, ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಶ್ಯಾಮ್‌ ಭಟ್‌ ನೇಮಕಕ್ಕೆ ಒಮ್ಮತದಿಂದ ಶಿಫಾರಸ್ಸು ಮಾಡಿದ್ದರು ಎಂಬುದು ತಿಳಿದು ಬಂದಿದೆ.

 

ವಿಶೇಷವೆಂದರೇ ಆಯ್ಕೆ ಸಮಿತಿ ಸಮಿತಿ ಸಭೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರು ಉಪಸ್ಥಿತರಿರಲಿಲ್ಲ.

 

 

ಬೆಂಗಳೂರು ನಗರ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಆರ್‌ ಶಂಕರ್‌, ಎಸ್‌ ಪಾಲಯ್ಯ, ಲೋಕಾಯುಕ್ತ ಸಂಸ್ಥೆಯಲ್ಲಿ ಹೆಚ್ಚುವರಿ ನಿಬಂಧಕರಾಗಿ ಸೇವೆ ಸಲ್ಲಿಸಿದ್ದ ವಿ ಜಿ ಬೋಪಯ್ಯ, ಐಪಿಎಸ್‌ ಅಧಿಕಾರಿ ಅಮರ್‌ಕುಮಾರ್‌ ಪಾಂಡೆ, ಎಂ ಎನ್‌ ನಾಗಾರಾಜ್‌, ಆಶಿತ್‌ ಮೋಹನ್‌ ಪ್ರಸಾದ್‌,  ಪಿಸಿಸಿಎಫ್‌ ಆಗಿ ಕಾರ್ಯ ನಿರ್ವಹಿಸಿದ್ದ ರಾಜ್‌ಕಿಶೋರ್‌ ಸಿಂಗ್‌ ಕೂಡ ಅರ್ಜಿ ಸಲ್ಲಿಸಿದ್ದರು ಎಂಬುದು ತಿಳಿದು ಬಂದಿದೆ.

 

ಅಲ್ಲದೇ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘವು ಎಂ ವೆಂಕಟೇಶ್‌ ಗೌಡ ಎಂಬುವರನ್ನು ಆಯೋಗದ ಸದಸ್ಯ ಸ್ಥಾನಕ್ಕೆ ನೇಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು. ಹಾಗೆಯೇ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‌,

 

 

ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ,

 

 

ಜವಳಿ ಸಚಿವ ಶಿವಾನಂದ ಎಸ್ ಪಾಟೀಲ್‌  ಕೂಡ ವೆಂಕಟೇಶ್‌ಗೌಡ ಅವರನ್ನೇ ಆಯೋಗದ ಸದಸ್ಯ ಸ್ಥಾನಕ್ಕೆ ನೇಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪಣಿ ಹಾಕಿದ್ದರು.

 

 

ಹಾಗೆಯೇ ನಿವೃತ್ತ ಐಪಿಎಸ್‌ ಅಧಿಕಾರಿ ಎಂಎನ್‌ ನಾಗರಾಜ್‌ ಅವರನ್ನು ಆಯೋಗದ ಸದಸ್ಯ ಸ್ಥಾನಕ್ಕೆ ನೇಮಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪಣಿ ಹಾಕಿದ್ದರು.

 

 

 

ಈ ಪೈಕಿ ವಿ ಶಂಕರ್‌ ಅವರ ವಿರುದ್ಧ ಹಲವು ಆರೋಪಗಳನ್ನು ಹೊರಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್‌ ಕಲ್ಲಹಳ್ಳಿ ಎಂಬುವರು ದೂರು ಸಲ್ಲಿಸಿದ್ದರು. ಇವರನ್ನು ಆಯೋಗದ ಸದಸ್ಯರನ್ನಾಗಿ ನೇಮಿಸಬಾರದು ಎಂದು ಮನವಿಯಲ್ಲಿ ಕೋರಿದ್ದರು ಎಂಬುದು ಗೊತ್ತಾಗಿದೆ.

 

ನಿವೇಶನದ ಮೂಲ ಹಂಚಿಕೆದಾರರ ಒಪ್ಪಿಗೆ ಪಡೆಯದೇ ಬಡಾವಣೆ ನಕ್ಷೆಯನ್ನೇ ತಿದ್ದುಪಡಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಪ್ರಕರಣಕ್ಕೆ ತನಿಖೆ ಎದುರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಟಿ ಶ್ಯಾಮ್‌ ಭಟ್‌ ಅವರನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ವಿವಾದವನ್ನು ಮೈ ಮೇಲೆ ಎಳೆದುಕೊಂಡಿತ್ತು.

 

ಸಿದ್ದರಾಮಯ್ಯ ಅವರು ಮೊದಲ ಬಾರಿ  ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನಾಗಿ  ನೇಮಿಸಿದೆ. ಸರ್ಕಾರದ ಈ ನೇಮಕಾತಿಯು ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿತ್ತು.

 

ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಶ್ಯಾಮ್‌ಭಟ್‌ ನೇಮಕ; ಕಾಂಗ್ರೆಸ್‌ ಸರ್ಕಾರದಿಂದ ವಿವಾದಾತ್ಮಕ ನೇಮಕಾತಿ

 

 

 

ಮೂಲ ಹಂಚಿಕೆದಾರರಿಗೆ ತೊಂದರೆಯನ್ನುಂಟು ಮಾಡಿ ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪ ಪ್ರಕರಣದಲ್ಲಿ ತನಿಖೆ ವಿಚಾರಣೆ ಕೈಗೊಳ್ಳಲು ಹಿಂದಿನ ಬಿಜೆಪಿ ಸರ್ಕಾರವು ಪೂರ್ವಾನುಮತಿ ನೀಡಿರಲಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 100 ದಿನದೊಳಗೇ ಟಿ ಶ್ಯಾಮ್‌ ಭಟ್‌, ಐಎಎಸ್‌ ಅಧಿಕಾರಿ ರೂಪ ಅವರ ವಿರುದ್ಧ ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ನೀಡಿ   ಆದೇಶ ಹೊರಡಿಸಿತ್ತು.

 

 

 

2021ರ ಡಿಸೆಂಬರ್‌ 3ರಂದು ಭ್ರಷ್ಟಾಚಾರ ನಿಗ್ರ ದಳದ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಬಿಡಿಎನ ಅಂದಿನ ಆಯುಕ್ತ ಟಿ ಶ್ಯಾಮ್‌ ಭಟ್‌, ಅಂದಿನ ಉಪ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ರೂಪಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮಗಳನ್ನೆಸಗಿ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ತನಿಖೆ ನಡೆಸಲು ಪೂರ್ವಾನುಮತಿ ನೀಡಿದೆ.

 

 

ಬಡಾವಣೆ ನಕ್ಷೆ ತಿದ್ದುಪಡಿ, ಅಕ್ರಮ ಲಾಭ ಆರೋಪ; ಶ್ಯಾಮ್‌ಭಟ್‌ ಮತ್ತಿತರರ ವಿರುದ್ಧ ತನಿಖೆಗೆ ಅನುಮತಿ

 

ಈ ಪ್ರಕರಣದಲ್ಲಿ ಬಿಡಿಎ ಅಂದಿನ ಅಯುಕ್ತ ಟಿ ಶ್ಯಾಮ್‌ ಭಟ್‌, ಅಂದಿನ ಉಪ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ರೂಪಾ ಮತ್ತು ಇತರೆ ಅಧಿಕಾರಿಗಳ ವಿರುದ್ಧ ವಿಚಾರಣೆ ಹಾಗೂ ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂಕ 17(ಎ) ಅನ್ವಯ ಪೂರ್ವಾನುಮತಿ ನೀಡಬೇಕು ಎಂದು ಎಸಿಬಿಯು 2021ರ ಡಿಸೆಂಬರ್‌ 3ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಹಿಂದಿನ ಬಿಜೆಪಿ ಸರ್ಕಾರವು ಪೂರ್ವಾನುಮತಿ ನೀಡಿರಲಿಲ್ಲ ಎಂಬುದು ಆದೇಶದಿಂದ ಗೊತ್ತಾಗಿದೆ.

 

2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಟಿ ಶ್ಯಾಮ್‌ ಭಟ್‌ ಅವರನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts