ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಶಿಷ್ಯವೇತನ; ಆಳ್ವಾಸ್‌ ಎಜುಕೇಷನ್‌ ಫೌಂಡೇಷನ್‌ಗೆ ನೇರ ಜಮಾ

ಬೆಂಗಳೂರು; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸರ್ಕಾರವು ನೀಡುತ್ತಿದ್ದ ಶಿಷ್ಯ ವೇತನವನ್ನು ಆಳ್ವಾಸ್‌ ಪದವಿಪೂರ್ವ ಕಾಲೇಜು, ಆಳ್ವಾಸ್‌ ಎಜುಕೇಷನ್‌ ಫೌಂಡೇ‍ಷನ್‌ನ ಖಾತೆಗೆ ಜಮಾ ಮಾಡುತ್ತಿತ್ತು ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ರಾಜ್ಯ ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಕ್ಯಾಪಿಟೇಷನ್‌ ಶುಲ್ಕ ಮತ್ತು ಸ್ಟಡಿ ಮೆಟಿರಿಯಲ್ಸ್‌ಗಳಿಗಾಗಿ ಶುಲ್ಕ ಪಡೆದಿರುವುದನ್ನು ದೃಢಪಡಿಸಿ ತನಿಖಾ ತಂಡವು ನೀಡಿರುವ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.

 

ತನಿಖಾ ತಂಡವು ನೀಡಿದ್ದ ವರದಿ ಮತ್ತು ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನೂ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು  ವಿದ್ಯಾರ್ಥಿ ವೇತನ ನೀಡುತ್ತದೆ. ಈ  ಸೌಲಭ್ಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕಲ್ಲದೇ ಅರ್ಜಿ ಆಹ್ವಾನಿಸಿದಾಗ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಸಂಬಂಧಪಟ್ಟ ಇಲಾಖೆಯಿಂದ ವಿದ್ಯಾರ್ಥಿ ವೇತನ ಮಂಜೂರಾದಾಗ ಮಂಜೂರಾದ ಪಟ್ಟಿಯನ್ನು ನಾಮಫಲಕದಲ್ಲಿ ಪ್ರಕಟಿಸಬೇಕು.

 

ವಿದ್ಯಾರ್ಥಿ ವೇತನವನ್ನು ಸಂಬಂಧಪಟ್ಟ ವಿದ್ಯಾರ್ಥಿಯ ಖಾತೆಗೆ ಚೆಕ್‌/ಆರ್‌ಟಿಜಿಎಸ್‌ ಮುಖಾಂತರ ಪಾವತಿಸಲು ಕ್ರಮ ವಹಿಸಬೇಕು. ವಿದ್ಯಾರ್ಥಿ ವೇತನ ಪಾವತಿಸಿದ ಬಗ್ಗೆ ರಿಜಿಸ್ಟರ್‌ ನಿರ್ವಹಿಸಬೇಕು. ಕಾಲೇಜಿನಿಂದ ವಿದ್ಯಾಭ್ಯಾಸ ಮುಗಿಸಿ ತೆರಳಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ ವಿದ್ಯಾರ್ಥಿ ವೇತನ ವಿತರಣೆ ಮಾಡಲು ಕ್ರಮ ವಹಿಸಬೇಕು.

 

ಆಳ್ವಾಸ್‌ ಆಡಳಿತ ಮಂಡಳಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು  ಸರ್ಕಾರದಿಂದ  ಪಡೆಯುತ್ತಿತ್ತು.  ಆದರೆ ಈ ಹಣವನ್ನು ಆಡಳಿತ ಮಂಡಳಿಯು  ಮೊದಲು ಆಳ್ವಾಸ್‌ ಎಜುಕೇಷನ್‌ ಫೌಂಡೇಷನ್‌ ಖಾತೆಗೆ ಜಮಾ ಮಾಡಿತ್ತು ಎಂಬ ಅಂಶವನ್ನು ತನಿಖಾ ತಂಡದ ತಪಾಸಣೆಯಿಂದ ತಿಳಿದು ಬಂದಿದೆ.

 

‘ಆಳ್ವಾಸ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯು ಎಸ್‌ಸಿ/ ಎಸ್‌ಟಿ/ಬಿಸಿಎಂ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಆಳ್ವಾಸ್‌ ಎಜುಕೇಷನ್‌ ಫೌಂಡೇಷನ್‌ಗೆ ಖಾತೆಗೆ ಜಮಾ ಮಾಡುತ್ತಿತ್ತು. ಈ ಖಾತೆಯಿಂದ ವಿದ್ಯಾರ್ಥಿಗಳ ಖಾತೆಗೆ ಪಾವತಿಸಿರುತ್ತಾರೆ,’ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿದೆ.

 

 

ಈ ಪೈಕಿ ಕೆಲವರು ಕಾಲೇಜಿನ ವಿದ್ಯಾಭ್ಯಾಸ ಪೂರ್ಣಗೊಳಿಸಿ ತೆರಳಿರುವ ಕಾರಣ ಅವರ ಹೆಸರಿನಲ್ಲಿ ಮಂಜೂರಾಗಿರುವ ಶಿಷ್ಯ ವೇತನವನ್ನು ಅಡಳಿತ ಮಂಡಳಿಯು ಪಾವತಿಸಿಲ್ಲ. ಅವರ ಮಾಹಿತಿಗಳು ಇಲ್ಲದೇ ಇರುವ ಕಾರಣ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಪಾವತಿಸಿರುವುದಿಲ್ಲ.

 

ಇಂತಹ ಉಳಿಕೆ ಶಿಷ್ಯ ವೇತನವನ್ನು ಸಂಬಂಧಪಟ್ಟ ಇಲಾಖೆಯವರಿಗೆ ಈ ಸಂಸ್ಥೆಯು ಹಿಂದಿರುಗಿಸಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಸರ್ಕಾರವು 2022ರ ಮೇ 17ರಂದು ಆಡಳಿತ ಮಂಡಳಿಗೆ ನೋಟೀಸ್‌ ನೀಡಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಪ್ರಥಮ ಮತ್ತು ದ್ವಿತೀಯ ಪದವಿಪೂರ್ವ ಪ್ರವೇಶಕ್ಕೆ ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಶುಲ್ಕ ಪಡೆದಿದೆ ಎಂದು ರಮೇಶ್‌ ಬೆಟ್ಟಯ್ಯ ಎಂಬುವರು 2020ರ ಫೆ.7ರಂದು ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ತನಿಖೆ ನಡೆಸಲು ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಉಪ ನಿರ್ದೇಶಕರಾದ ಕುಸುಮಾಕುಮಾರಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿತ್ತು.

 

ಆಳ್ವಾಸ್‌ ಪದವಿ ಪೂರ್ವ ಕಾಲೇಜು 2016-17ನೇ ಸಾಲಿನ ದಾಖಲಾತಿ ಮಾರ್ಗಸೂಚಿ ಮತ್ತು ಶುಲ್ಕಗಳ ಪಟ್ಟಿಯನ್ನು ತನಿಖಾ ತಂಡವು ಪರಿಶೀಲಿಸಿದೆ. ಇದರ ಪ್ರಕಾರ ಪ್ರಥಮ ಪಿಯುಸಿ ಪ್ರವೇಶ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಇನ್ನಿತರೆ ಶುಲ್ಕಗಳೆಂದು 1,252 ರು. ಎಂದು ಸರ್ಕಾರವು ನಿಗದಿಪಡಿಸಿತ್ತು. ಆದರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆ 19,900 ರು.ಗಳನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಿರುವುದನ್ನು ತನಿಖಾ ತಂಡವು ಹೊರಗೆಡವಿತ್ತು. ವರದಿಯಿಂದ ತಿಳಿದು ಬಂದಿದೆ.

ಆಳ್ವಾಸ್‌ ಶಿಕ್ಷಣ ಸಂಸ್ಥೆಯಿಂದ ಕ್ಯಾಪಿಟೇ‍ಷನ್‌ ಶುಲ್ಕ ವಸೂಲಿ ಸಾಬೀತು; ತನಿಖಾ ವರದಿ ಬಹಿರಂಗ

ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 18,64 ರು . ವಸೂಲು ಮಾಡಿತ್ತು. ಅಲ್ಲದೇ ಇಲಾಖೆ ನಿಗದಿಪಡಿಸಿರುವ ಶುಲ್ಕಗಳ ಜತೆಯಲ್ಲಿಯೇ ಪ್ರಥಮ ಪಿಯುಸಿ ತಲಾ ವಿದ್ಯಾರ್ಥಿಯಿಂದ 4,000 ರು. ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ತನಿಖಾ ವರದಿಯು ಬಹಿರಂಗಗೊಳಿಸಿತ್ತು.

 

ದ್ವಿತೀಯ ಪಿಯುಸಿ ತರಗತಿಗಳ ವಿದ್ಯಾರ್ಥಿಗಳಿಗೆ ಸರ್ಕಾರವು 1,252 ರು. ನಿಗದಿಪಡಿಸಿತ್ತು. ಆದರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆ 49,000 ರು ವಸೂಲಿ ಮಾಡಿತ್ತು. ಪ್ರಥಮ ಪಿಯುಸಿಯಲ್ಲಿ ಕ್ಯಾಪಿಟಲ್‌ ಫೀ ಎಂದು 14,494 ರು.ವಸೂಲು ಮಾಡಿದ್ದರೆ ದ್ವಿತೀಯ ಪಿಯುಸಿಗೆ 15,400 ರು. ವಸೂಲಿ ಮಾಡಿತ್ತು.

 

ಪ್ರಥಮ ಪಿಯುಸಿಯಲ್ಲಿ ಪಠ್ಯಪುಸ್ತಕಗಳಿಗೆ ಶುಲ್ಕ ವಸೂಲು ಮಾಡದ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ದ್ವಿತೀಯ ಪಿಯುಸಿಗೆ 4,250 ರು. ವಸೂಲು ಮಾಡಿತ್ತು. ಇಲಾಖೆ ಮಾರ್ಗಸೂಚಿಗಳ ಪ್ರಕಾರ ದ್ವಿತೀಯ ಪಿಯುಸಿಗೆ 1,252 ರು. ಒಟ್ಟಾರೆ ಶುಲ್ಕ ನಿಗದಿಪಡಿಸಿತ್ತು. ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆಯಾಗಿ 49,000 ರು. ವಸೂಲಿ ಮಾಡಿದೆ. ಇಲಾಖೆಯು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ತಲಾ ವಿದ್ಯಾರ್ಥಿಯಿಂದ 47,748 ರು. ವಸೂಲು ಮಾಡಿರುವುದು ತನಿಖಾ ತಂಡದ ತಪಾಸಣೆಯಿಂದ ಗೊತ್ತಾಗಿತ್ತು.

the fil favicon

SUPPORT THE FILE

Latest News

Related Posts