ಬೆಂಗಳೂರು; ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಹುಮ್ಮಸ್ಸಿನಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಪನ್ಮೂಲ ಕ್ರೋಢೀಕರಣ ಮತ್ತು ಹಣಕಾಸು ಹೊಂದಿಸಲು ತೆರಿಗೆಯೇತರ ಆದಾಯ ಪರಿಷ್ಕರಿಸಲು ಹೊರಟಿದೆ. ಆದರೆ ಇಂಧನ ಇಲಾಖೆಯು ಕೆಪಿಸಿಎಲ್‌ನಿಂದ 300 ಕೋಟಿ ರುಪಾಯಿಗಳ ರಾಯಧನ ಸಂಗ್ರಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದೆ.
ಬಳಕೆದಾರರ ಶುಲ್ಕ, ಸೇವಾ ಶುಲ್ಕ, ಪರವಾನಗಿ, ತಪಾಸಣೆ, ರಾಯಧನ ಸೇರಿದಂತೆ ಮತ್ತಿತರೆ ಸ್ವರೂಪದ ತೆರಿಗೆಯೇತರ ಆದಾಯ ಪರಿಷ್ಕರಿಸಲು ಹೊರಟಿರುವ ಹೊತ್ತಿನಲ್ಲೇ ಇಂಧನ ಇಲಾಖೆಯು ರಾಯಧನ ಸಂಗ್ರಹಣೆ ಕುರಿತಾಗಿ ವ್ಯಕ್ತಪಡಿಸಿರುವ ಅಸಹಾಯಕತೆಯು ತೆರಿಗೆಯೇತರ ಆದಾಯ ಪರಿಷ್ಕರಣೆ ಹಾಗೂ ಸಂಗ್ರಹಕ್ಕೆ ಆರಂಭದಲ್ಲೇ ವಿಘ್ನ ಎದುರಾದಂತಿದೆ.
ಬಳಕೆದಾರರ ಶುಲ್ಕವೂ ಸೇರಿದಂತೆ ತೆರಿಗೆಯೇತರ ರಸೀದಿಗಳ ಪರಿಶೀಲನೆ ಸಂಬಂಧ 2023ರ ಡಿಸೆಂಬರ್ 29ರಂದು ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಸಭೆಯಲ್ಲಿ ಇಂಧನ ಇಲಾಖೆಯು ಅಸಹಾಯಕತೆ ವ್ಯಕ್ತಪಡಿಸಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಲಾಭಕರವಲ್ಲದ ಹಾಗೂ ದುಬಾರಿ ಸಹಾಯಧನಗಳಿಂದಾಗಿ ಜಿಎಸ್‌ಡಿಪಿಗೆ ಹೋಲಿಸಿದಲ್ಲಿ ತೆರಿಗೆಯೇತರ ರಾಜಸ್ವದ ಪ್ರಮಾಣವು ನಗಣ್ಯವಾಗಿದೆ. ಹೀಗಾಗಿ ಹೊಸ ತೆರಿಗೆ ಪ್ರಸ್ತಾಪಿಸುವುದು ಮತ್ತು ತೆರಿಗೆ ಸ್ವರೂಪಗಳ ಪರಿಷ್ಕರಣೆ ಮೂಲಕ ರಾಜ್ಯ ಸರ್ಕಾರವು ಹೆಚ್ಚುವರಿ ಸಂಪನ್ಮೂಲ ಸಂಗ್ರಹಣೆಗಿಳಿದಿತ್ತು. ಈ ಕುರಿತು ಹಣಕಾಸು ಇಲಾಖೆಯ ನೇತೃತ್ವದಲ್ಲಿ ನಿರಂತರವಾಗಿ ಸಭೆಗಳು ನಡೆಯುತ್ತಿದ್ದರೂ ವಿವಿಧ ಇಲಾಖೆಗಳು ಅಸಹಾಯಕತೆ ವ್ಯಕ್ತಪಡಿಸಿವೆ ಎಂದು ಗೊತ್ತಾಗಿದೆ.
‘ಮುಂಚೂಣಿಯಲ್ಲಿರುವ ಕೆಪಿಸಿಎಲ್‌ನಿಂದ ಸುಮಾರು 300 ಕೋಟಿ ರು.ಗಳ ರಾಯಧನ ಸಂಗ್ರಹಿಸುವುದಕ್ಕೆ ಇನ್ನು ಮುಂದೆ ಸಾಧ್ಯವಿಲ್ಲ,’ ಎಂದು ಇಂಧನ ಇಲಾಖೆಯ ಅಧಿಕಾರಿ ಅಪರ್ಣಾ ಅವರು ಸಭೆಯಲ್ಲಿ ವಿವರಿಸಿದ್ದಾರೆ ಎಂದು ಗೊತ್ತಾಗಿದೆ.
ವಿದ್ಯುತ್ ತಪಾಸಣೆ, ಕಾಂಪೌಂಡಿಂಗ್ ಶುಲ್ಕಗಳಿಂದ ಹಾಲಿ ಇರುವ 80 ಕೋಟಿ ರು.ಗಳಿಂದ ಸುಮಾರು 160 ಕೋಟಿ ರು.ವರೆಗೆ ರಾಜಸ್ವವನ್ನು ದ್ವಿಗುಣಗೊಳಿಸಬೇಕು ಎಂದು ಆರ್ಥಿಕ ಇಲಾಖೆಯ ಆಯವ್ಯಯ ಶಾಖೆ ಅಧಿಕಾರಿಗಳು ಇಂಧನ ಇಲಾಖೆಗೆ ಒತ್ತಿ ಹೇಳಿದ್ದಾರೆ. ತೆರಿಗೆಯೇತರ ಸ್ವೀಕೃತಿ, ಸಂಭಾವ್ಯ ರಾಜಸ್ವ ಹೆಚ್ಚಳ, ಯೋಜಿತ ರಾಜಸ್ವದ ಪರಿಷ್ಕರಣೆಯ ಮೇಲೆ ಇಂಧನ ಇಲಾಖೆಯು ಕಾರ್ಯನಿರ್ವಹಿಸುತ್ತದೆ. ಮುಂದಿನ 5 ದಿನದೊಳಗೆ ಆರ್ಥಿಕ ಇಲಾಖೆಗೆ ಈ ಸಂಬಂಧ ಸಮಗ್ರ ವಿವರಣೆ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದು ನಡವಳಿಯಿಂದ ತಿಳಿದು ಬಂದಿದೆ.
ಈ ಕುರಿತು ಇಂಧನ ಸಚಿವ ಕೆ ಜೆ ಜಾರ್ಜ್ ಅವರೊಂದಿಗೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಮಾಹಿತಿ ಪಡೆದುಕೊಂಡಿರುವ ಸಚಿವ ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಗೊತ್ತಾಗಿದೆ.
ನೀರಿನ ಸುಂಕ ಹೆಚ್ಚಳ
21 ವರ್ಷಗಳ ನಂತರ ನೀರಿನ ಸುಂಕ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟವು ಅನುಮೋದಿಸಿದೆ. 2024ರ ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದ ನಂತರ ಈ ಸಂಬಂಧ ಸರ್ಕಾರದ ಆದೇಶದ ಮೂಲಕ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ. ಹೊಸ ನೀರಿನ ಸುಂಕವನ್ನು ಆಧರಿಸಿ ಕೈಗಾರಿಕೆಗಳಿಂದ ನೀರಿನ ರಾಜಸ್ವವನ್ನು ಹಾಲಿ ಇರುವ 6.3 ಕೋಟಿ ರು.ನಿಂದ 59 ಕೋಟಿ ರು.ಗಳಿಗೆ ಹೆಚ್ಚಳ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಗೊತ್ತಾಗಿದೆ.
‘ಯಾವ ಕೈಗಾರಿಕೆಗಳಿಗೆ ನೀರು ಪೂರೈಕೆಯಾಗುತ್ತದೆಯೋ ಆ 133 ಕೈಗಾರಿಕೆಗಳಿಗೆ ಇಂಧನ ಇಲಾಖೆಯಿಂದ ಸ್ಮಾರ್ಟ್ ಮೀಟರ್‍ಗಳ ಕಡ್ಡಾಯ ಅಳವಡಿಕೆ ಆದೇಶವನ್ನು ಮುಂದಿನ 15 ದಿನಗಳೊಳಗೆ ಹೊರಡಿಸಬೇಕು,’ ಎಂದ ತಾಕೀತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರೈತರಿಂದ ಬೇಡಿಕೆ ಪ್ರಮಾಣದ ಸಂಗ್ರಹಣೆಯು ಕೇವಲ ಶೇ.1ಕ್ಕಿಂತಲೂ ಕಡಿಮೆಯಾಗಿದೆ. ಅಂದರೆ 105 ಕೋಟಿ ರು.ಗಳ ಬೇಡಿಕೆಗೆ ರೈತರಿಂದ ಕೇವಲ 1 ಕೋಟಿ ಮಾತ್ರವಷ್ಟೇ ಸಂಗ್ರಹಣೆ ಮಾಡಲಾಗುತ್ತಿದೆ ಎಂಬ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿದೆ. ‘ಆದ್ದರಿಂದ ಕಂದಾಯ ಇಲಾಖೆಗೆ ನೀರಿನ ಬಿಲ್ ಸಂಗ್ರಹಣೆ ಜವಾಬ್ದಾರಿಯನ್ನು ಹಿಂದಕ್ಕೆ ನೀಡಬೇಕು. ಇದಕ್ಕಾಗಿ ನೀರಾವರಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ಸಭೆಯಲ್ಲಿ ಪ್ರಸ್ತಾವಿಸಿದೆ.
ಪ್ರದೇಶ, ಬೆಳೆ ಇತ್ಯಾದಿಗಳ ಮೇಲಿನ ದೂರ ಸಂವೇದಿ ಸಾಮರ್ಥ್ಯವನ್ನು ಹೊಂದಿದ ಸಾಫ್ಟ್‌ವೇರ್ ಅಪ್ಲಿಕೇಷನ್‌ನ್ನು ಪರಿಚಯಿಸುವ ಪ್ರಸ್ತಾವನೆ ಕುರಿತು ಚರ್ಚಿಸಲಾಗಿದೆ. ಹಾಗೆಯೇ ಡಿಮ್ಯಾಂಡ್ ನೋಟೀಸ್‌ನ್ನು ಸ್ವಯಂ ಚಾಲಿತವಾಗಿ ಸೃಜಿಸುವ ಕುರಿತೂ ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ.
ಐದು ಗ್ಯಾರಂಟಿಗಳ ಅನುಷ್ಠಾನದಿಂದಾಗಿ ಎದುರಾಗಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಿರುವ ಸರ್ಕಾರವು ಇದಕ್ಕಾಗಿ ತೆರಿಗೆಯೇತರ, ಬಳಕೆದಾರರ ಶುಲ್ಕ, ಬಾಕಿ ಇರುವ ಸಾಲವನ್ನು ವಸೂಲು ಮಾಡಬೇಕು ಎಂದು ಇಲಾಖೆ ಮುಖ್ಯಸ್ಥರಿಗೆ ಈ ಹಿಂದೆಯೇ ಸೂಚಿಸಲಾಗಿತ್ತು.
2024-25ನೇ ಸಾಲಿನ ಆಯವ್ಯಯ ರಾಜಸ್ವ-ಜಮೆ ತಯಾರಿಕೆ ಸಂಬಂಧ ಆರ್ಥಿಕ ಇಲಾಖೆಯು ಇಲಾಖೆ ಮುಖ್ಯಸ್ಥರಿಗೆ ನೀಡಿರುವ ಸೂಚನೆಗಳಲ್ಲಿ ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯು ಸುತ್ತೋಲೆ (ಆಇ 27 ಬಿಪಿಎ 2023) ಹೊರಡಿಸಿತ್ತು.
‘ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಿಂದಿನ ಹಲವಾರು ವರ್ಷಗಳಿಂದಲೂ ಇಳಿಮುಖವಾಗಿದೆ. ಪ್ರಮುಖವಾಗಿ ವೆಚ್ಚ ವಸೂಲಾತಿ ದರದಲ್ಲಿ ಇಳಿಕೆಯಾಗಿದೆಯಲ್ಲದೇ ಕ್ಷೀಣಗೊಂಡಿದೆ. ಸಾರ್ವಜನಿಕ ಉದ್ದಿಮೆಗಳ ಕಳಪೆ ನಿರ್ವಹಣೆ ಹಾಗೂ ಲಾಭಕರವಲ್ಲದ, ದುಬಾರಿ ಸಹಾಯಧನಗಳಿಂದಾಗಿ ಜಿಎಸ್‌ಡಿಪಿಗೆ ಹೋಲಿಸಿದಲ್ಲಿ ತೆರಿಗೆಯೇತರ ರಾಜಸ್ವದ ಪ್ರಮಾಣವು ನಗಣ್ಯವಾಗಿದೆ,’ ಸುತ್ತೋಲೆಯಲ್ಲಿ ವಿವರಿಸಿತ್ತು.
ರಾಜಸ್ವ ಸಂಗ್ರಹಿಸಲು ನಿಯಮಿತವಾಗಿ ಬಳಕೆದಾರರ ಶುಲ್ಕಗಳನ್ನು ಪರಿಷ್ಕರಣೆ ಮಾಡಬಹುದು ಎಂದು ಮಹಾಲೇಖಪಾಲರು ಈ ಹಿಂದೆಯೇ ನೀಡಿದ್ದ ಸೂಚನೆಯನ್ನು ಪಾಲಿಸಲು ನಿರ್ದೇಶಿಸಿರುವ ಆರ್ಥಿಕ ಇಲಾಖೆಯು ಎಲ್ಲಾಇಲಾಖೆಗಳು ತಮ್ಮ ಇಲಾಖೆಗಳ ತೆರಿಗೆಯೇತರ ರಾಜಸ್ವಗಳನ್ನು ಪರಿಶೀಲಿಸಬೇಕು. ಕಳೆದ 3 ವರ್ಷಗಳಿಂದ ಪರಿಷ್ಕರಣೆಯಾಗದೇ ಇದ್ದಲ್ಲಿ ಕೂಡಲೇ ತೆರಿಗೆಯೇತರ ರಾಜಸ್ವ ದರಗಳನ್ನು ಈಗಿರುವ ಹಣದುಬ್ಬರದ ದರಕ್ಕೆ ಅನುಗುಣವಾಗಿ ಪರಿಶೀಲಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ ಸಿ ಜಾಫರ್ ಅವರು ಇಲಾಖೆ ಮುಖ್ಯಸ್ಥರಿಗೆ ನಿರ್ದೇಶಿಸಿದ್ದರು.
‘ಎಲ್ಲಾ ಇಲಾಖೆ ಮುಖ್ಯಸ್ಥರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ತೆರಿಗೆಯೇತರ ಆದಾಯದ ದರಗಳನ್ನು ಕಳೆದ ಮೂರು ವರ್ಷಗಳಲ್ಲಿ ಪರಿಷ್ಕರಿಸದಿದ್ದಲ್ಲಿ ಪರಿಷ್ಕರಿಸಬೇಕು. ಎಲ್ಲಾ ಇಲಾಖೆಗಳು ತೆರಿಗೆಯೇತರ ರಾಜಸ್ವ ಅಂದಾಜುಗಳನ್ನು ಸಲ್ಲಿಸುವ ಮುನ್ನ ಎಲ್ಲಾ ತೆರಿಗೆಯೇತರ ರಾಜಸ್ವ ಮೂಲಗಳನ್ನು ಪರಿಶೀಲಿಸಿ ದರಗಳನ್ನು/ ಬಳಕೆದಾರರ ಶುಲ್ಕಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು,’ ಎಂದು ಸುತ್ತೊಲೆಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.
ದುಬಾರಿ ಸಹಾಯಧನದಿಂದ ತೆರಿಗೆಯೇತರ ರಾಜಸ್ವ ಪ್ರಮಾಣ ನಗಣ್ಯ; ತೆರಿಗೆ ಭಾರ ಹೊರಿಸಲಿದೆಯೇ?
ಅಲ್ಲದೆ ಸಾಲ ಮರುಪಾವತಿಯ ಷರತ್ತು , ನಿಬಂಧನೆಗಳು, ಬಂಡವಾಳ ಹೂಡಿಕೆ ಮತ್ತು ಮರು ಪಾವತಿ ಅವಧಿ ಮುಂತಾದ ಅಂಶಗಳನ್ನು ಪರಿಶೀಲಿಸಲು ಸೂಚಿಸಿದೆ. ವಿವಿಧ ಸಾರ್ವಜನಿಕ ಉದ್ದಿಮೆಗಳು, ಸಹಕಾರಿ ಸಂಘಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಬಡ್ಡಿ ಸ್ವೀಕೃತಿಗಳು, ಲಾಭಾಂಶಗಳು, ಬಂಡವಾಳ ಸಾಲ ವಸೂಲು ಮಾಡಬೇಕು. ಇತರೆ ಇಲಾಖೆ ಸಾಲಗಳನ್ನು ವಸೂಲು ಮಾಡಲು ಕ್ರಮವಹಿಸಬೇಕು ಎಂದೂ ಸೂಚಿಸಿರುವುದು ಗೊತ್ತಾಗಿದೆ.