ಬೆಂಗಳೂರು; ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ಅನುದಾನವನ್ನೂ ಒಳಗೊಂಡಿರುವ ಲೆಕ್ಕ ಶೀರ್ಷಿಕೆಯಲ್ಲಿನ 50 ಕೋಟಿ ರು.ನಲ್ಲಿ 14.86 ಕೋಟಿ ರು.ಗಳನ್ನು ದ ಪಾಲಿಸಿ ಫ್ರಂಟ್ ಎಂಬ ನಿಗೂಢ ಕಂಪನಿಗೆ ಕೊಡಲು ಸಿದ್ದರಾಮಯ್ಯ ಅವರು ಸಚಿವರಾಗಿರುವ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು ಎಂಬುದನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಸರ್ಕಾರದ ಯೋಜನೆಗಳ ಮಾಹಿತಿ, ಸುಳ್ಳು ಸುದ್ದಿ ತಡೆಗಟ್ಟುವಿಕೆ, ಜಾಹೀರಾತು, ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಲು ತಿಂಗಳಿಗೆ 60.00 ಲಕ್ಷ ರು.ನಂತೆ ವರ್ಷಕ್ಕೆ 7.20 ಕೋಟಿ ರು.ಗಳನ್ನು ಕಚೇರಿಯೇ ಇಲ್ಲದ ದ ಪಾಲಿಸಿ ಫ್ರಂಟ್ ಕಂಪನಿಗೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ 14.86 ಕೋಟಿ ರು. ಹೆಚ್ಚುವರಿ ಅನುದಾನವನ್ನೂ ಇದೇ ಕಂಪನಿಗೆ ಒದಗಿಸಲು ಸಲ್ಲಿಕೆಯಾಗಿದ್ದ ಪ್ರಸ್ತಾವವೂ ಮುನ್ನೆಲೆಗೆ ಬಂದಿದೆ.
ದ ಪಾಲಿಸಿ ಫ್ರಂಟ್ ಎಂಬ ಕಂಪನಿಗೆ ನೀಡಿದ್ದ ಕಾರ್ಯಾದೇಶ ಕುರಿತಾಗಿ ತೆರೆದಿರುವ ಸಮಗ್ರ ಕಡತವನ್ನು ಕೆಎಸ್‌ಎಂಸಿ ಅಂಡ್ ಎ ಎಂಬ ಸರ್ಕಾರಿ ಕಂಪನಿಯು ನಿರಾಕರಿಸಿತ್ತು. ಆದರೆ ಆರ್ಥಿಕ ಇಲಾಖೆಯು (ವೆಚ್ಚ-7) ಇದೇ ಕಂಪನಿಗೆ ಸಂಬಂಧಿಸಿದ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಒದಗಿಸಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಹೆಸರಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2023-24ನೇ ಸಾಲಿನ ಆಗಸ್ಟ್‌ನಿಂದ 2026ರ ಮಾರ್ಚ್‌ವರೆಗೆ ಪಡೆಯಲು ದ ಪಾಲಿಸಿ ಫ್ರಂಟ್ ಹೆಸರಿನ ಕಂಪನಿಯ ಸೇವೆ ಪಡೆಯಲು ಪ್ರಸ್ತಾವ ಸಲ್ಲಿಸಿತ್ತು. ಇದಕ್ಕಾಗಿ ಕೆಟಿಪಿಪಿ ಕಾಯ್ದೆ ಕಲಂ 4(ಜಿ) ವಿನಾಯಿತಿ ನೀಡಲು ಕೋರಿತ್ತು.
ಈ ಸೇವೆ ಪಡೆಯುವ ನಿಟ್ಟಿನಲ್ಲಿ 2023ರ ಆಗಸ್ಟ್‌ನಿಂದ 2024ರ ಮಾರ್ಚ್‌ವರೆಗೆ ತಂತ್ರಾಂಶಗಳನ್ನು ಅಭಿವೃದ್ಧಿ, ತಾಂತ್ರಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಿಂಗಳಿಗೆ 1.18 ಕೋಟಿ ರು., ಇನ್ನುಳಿದಂತೆ ಪ್ರತಿ ತಿಂಗಳು 1.71 ಕೋಟಿ ರು. ವೆಚ್ಚವಾಗುತ್ತದೆ ಎಂದು ದ ಪಾಲಿಸಿ ಫ್ರಂಟ್ ಕಂಪನಿಯು ಪ್ರಸ್ತಾವನೆ ಸಲ್ಲಿಸಿತ್ತು. ಇದೆಲ್ಲವನ್ನೂ ಒಟ್ಟುಗೂಡಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಎಲ್ಲಾ ಸೇವೆಗಳಿಗೆ ಒಟ್ಟಾರೆ ತಿಂಗಳಿಗೆ 14.86 ಕೋಟಿ ರು.ಗಳು ವೆಚ್ಚವಾಗುತ್ತದೆ ಎಂದು ಅಂದಾಜು ಪಟ್ಟಿ ಸಲ್ಲಿಸಿತ್ತು.
ವಾರ್ತಾ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು 2023-24ನೇ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ 2220-60-106-0-05 ರಡಿ ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮತ್ತು ಮಾಹಿತಿ ಹಾಗೂ ಸಂವಹನ ಅಡಿ ಒಟ್ಟು 50.00 ಕೋಟಿ ರು.ಗಳಲ್ಲಿರುವ ಲಭ್ಯ ಇರುವ ಅನುದಾನವನ್ನೇ ಬಳಸಿಕೊಳ್ಳಲು ತಿಳಿಸಿತ್ತು.
ವಿಶೇಷವೆಂದರೇ ಇದೇ ಲೆಕ್ಕ ಶೀರ್ಷಿಕೆಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿ 8.57 ಕೋಟಿ ರು., ಗಿರಿಜನ ಉಪಯೋಜನೆಯಡಿ 3.48 ಕೋಟಿ ರು ಅನುದಾನ ಒದಗಿಸಲಾಗಿತ್ತು. ಅಲ್ಲದೇ ಇತರೆ ವೆಚ್ಚಗಳಡಿಯಲ್ಲಿ 37.95 ಕೋಟಿ ರು. ಕೂಡ ಸೇರಿ ಒಟ್ಟಾರೆ 50.00 ಕೋಟಿ ರು. ಅನುದಾನವಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ 50.00 ಕೋಟಿ ರು. ಪೈಕಿ 2023ರ ಆಗಸ್ಟ್ ಅಂತ್ಯಕ್ಕೆ 47.50 ಕೋಟಿ ರು. ಮಾತ್ರ ಲಭ್ಯವಿತ್ತು. ಹೀಗಾಗಿ ಈ ಲೆಕ್ಕ ಶೀರ್ಷಿಕೆಯಡಿ ಲಭ್ಯ ಇದ್ದ ಅನುದಾನದಿಂದಲೇ ಪ್ರಸ್ತಾಪಿತ ವೆಚ್ಚ ಭರಿಸಬೇಕು. ವರ್ಷಾಂತ್ಯದಲ್ಲಿ ಈ ಲೆಕ್ಕ ಶೀರ್ಷಿಕೆಯಡಿಯ ಪೂರ್ಣ ಅನುದಾನ ವೆಚ್ಚವಾದ ನಂತರ ಹೆಚ್ಚುವರಿ ಅನುದಾನ ಒದಗಿಸುವ ಬಗ್ಗೆ ಪರಿಶೀಲಿಸಬಹುದು ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಸುಳ್ಳು ಸುದ್ದಿಗಳ ತಡೆಗಟ್ಟುವಿಕೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್ ಎ ಮೂಲಕ ಕಾರ್ಯಾದೇಶ ಪಡೆದುಕೊಂಡಿರುವ ‘ದ ಪಾಲಿಸಿ ಫ್ರಂಟ್’ ಗೆ ಕಚೇರಿಯೇ ಇಲ್ಲ ಎಂಬ ಸಂಗತಿಯು ಚರ್ಚೆಗೆ ಗ್ರಾಸವಾಗಿತ್ತು.
7.20 ಕೋಟಿ ರು ಗುತ್ತಿಗೆ; ಕಾರ್ಯಾದೇಶದಲ್ಲಿರುವ ವಿಳಾಸದಲ್ಲಿ ‘ದ ಪಾಲಿಸಿ ಫ್ರಂಟ್’ ಕಚೇರಿಯೇ ಇಲ್ಲ
ಆಡಳಿತ ಕಾರ್ಯತಂತ್ರ ಮತ್ತು ಆರ್ಥಿಕ ಹಿತಾಸಕ್ತಿ ವಿಷಯ, ಮಾಹಿತಿಗಳು ಒಳಗೊಂಡಿದೆ ಎಂದು ಕುಂಟು ನೆಪವೊಡ್ಡಿ ‘ದ ಪಾಲಿಸಿ ಫ್ರಂಟ್’ ಗೆ ನೀಡಿರುವ ಗುತ್ತಿಗೆ ಸಂಬಂಧಿತ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಸರ್ಕಾರವು ನಿರಾಕರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಪಾರದರ್ಶಕತೆ ಇಲ್ಲದೆಯೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದ್ದರು.
ದ ಪಾಲಿಸಿ ಫ್ರಂಟ್‌ಗೆ ಗುತ್ತಿಗೆ; ಪಾರದರ್ಶಕತೆಯಿಲ್ಲದೇ ಖಜಾನೆ ನಿಧಿ ಹಂಚಿಕೆ ಮಾಡುವುದೇ ಸರ್ಕಾರದ ನೀತಿಯೇ?
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿದ್ದ 4(ಜಿ) ವಿನಾಯಿತಿಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಕಡತವನ್ನು ಒದಗಿಸಲು ನಿರಾಕರಿಸಿರುವುದು ‘ದ ಪಾಲಿಸಿ ಫ್ರಂಟ್’ನ ಸುತ್ತ ಎದ್ದಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು.
‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ರು. ಮೊತ್ತದ ಗುತ್ತಿಗೆ; ಸಮಗ್ರ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ
ವಿಶೇಷವೆಂದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನೂ ಒದಗಿಸಿತ್ತು. ಆದರೆ ಕೆಎಸ್‌ಎಂಸಿ ಅಂಡ್ ಎ ಕಂಪನಿಯು ತನ್ನ ಹಂತದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವನ್ನು ಒದಗಿಸಲು ನಿರಾಕರಿಸಿರುವುದು ಮತ್ತಷ್ಟು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿತ್ತು. ಅದಷ್ಟೇ ಅಲ್ಲ, ಕಡತವನ್ನು ಒದಗಿಸಲು ನಿರಾಕರಿಸುವ ಮೂಲಕ ‘ದ ಪಾಲಿಸಿ ಫ್ರಂಟ್’ ಮತ್ತು ಅದರ ಹಿಂದಿರುವವರನ್ನು ರಹಸ್ಯವಾಗಿರಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಮುಕ್ತ ಟೆಂಡರ್ ಆಹ್ವಾನಿಸದೆಯೇ ನಿರ್ದಿಷ್ಟವಾಗಿ ‘ದ ಪಾಲಿಸಿ ಫ್ರಂಟ್’ ನಿಂದಲೇ ಸೇವೆ ಪಡೆಯಲು ಎಂಸಿಅಂಡ್‌ಎಯು ಸಲ್ಲಿಸಿದ್ದ ಪ್ರಸ್ತಾವನೆಗೆ 4(ಜಿ) ವಿನಾಯಿತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ಕೊಟ್ಟ ಸರ್ಕಾರ
ಸರ್ಕಾರದ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 2026ರವರೆಗೆ ಪ್ರಚಾರ ಮಾಡಲು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು 2023ರ ಆಗಸ್ಟ್ 28ರಂದು ಪ್ರಸ್ತಾವವನ್ನು ಸಲ್ಲಿಸಿದ್ದರು. ಅಲ್ಲದೇ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶವನ್ನೂ ಇದೇ ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.