ಬೆಂಗಳೂರು; ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ, ನಿಯೋಜನೆಗೊಳಿಸುವುದನ್ನು ಸರ್ಕಾರವೇ ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದ್ದರೂ ಸಹ ರಾಜ್ಯ ಅಡ್ವೋಕೇಟ್ ಜನರಲ್ ಕಚೇರಿಯು ಇದನ್ನು ನೇರಾ ನೇರ ಉಲ್ಲಂಘಿಸಿದೆ. ಇದರಿಂದಾಗಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ ತಪ್ಪಿ ಹೋಗಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.
ಸರ್ಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ (2023ರ ಸೆ.12) ಸುತ್ತೋಲೆಯನ್ನುಹೊರಡಿಸಿದ್ದರು. ಒಂದೇ ತಿಂಗಳ ಅಂತರದಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸರ್ಕಾರದ ಸುತ್ತೋಲೆಯನ್ನೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಲ್ಲಂಘಿಸಿದ್ದರು. ಇದೀಗ ರಾಜ್ಯ ಅಡ್ವೋಕೇಟ್ ಜನರಲ್ ಕಚೇರಿಯೂ ಸಹ ಸುತ್ತೋಲೆಯನ್ನು ಉಲ್ಲಂಘಿಸಿರುವುದು ಮುನ್ನೆಲೆಗೆ ಬಂದಿದೆ.
ಈ ಕುರಿತು ಬಾಧಿತ ಮಹಿಳಾ ಅಧಿಕಾರಿಯಾದ ಎ ಸತ್ಯಭಾಮ ಅವರು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಮುಖ್ಯ ಕಾರ್ಯದರ್ಶಿ, ಕಾನೂನು ಇಲಾಖೆ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ನವೆಂಬರ್ 24ರಂದು ದೂರು ಸಲ್ಲಿಸಿದ್ದಾರೆ. ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅಡ್ವೋಕೇಟ್ ಜನರಲ್ ಕಚೇರಿಯ ವೃಂದ ಮತ್ತು ನೇಮಕಾತಿ ಪ್ರಕಾರ ಆಡಳಿತಾಧಿಕಾರಿ ಹುದ್ದೆಯು ಸಹಾಯಕ ಆಡಳಿತಾಧಿಕಾರಿ ಹುದ್ದೆಯಿಂದಲೇ ಪದನ್ನೋತಿ ಹೊಂದುವ ಹುದ್ದೆಯಾಗಿದೆ. ಒಂದೊಮ್ಮೆ ಆಡಳಿತಾಧಿಕಾರಿ ಹುದ್ದೆ ಹೊಂದಲು ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಮಾತ್ರ ಸಮಾನಾಂತರ ಹುದ್ದೆ ಹೊಂದಿ, ಕಾನೂನು ಪದವಿ ಹೊಂದಿರುವ ರಾಜ್ಯ ನಾಗರಿಕ ಸೇವೆಯಲ್ಲಿನ ಅಧಿಕಾರಿಯನ್ನು ನಿಯೋಜನೆ ಮೂಲಕ ಆಡಳಿತಾಧಿಕಾರಿ ಹುದ್ದೆಗೆ ನೇಮಿಸಲು ಅವಕಾಶವಿದೆ.
ಇದರ ಪ್ರಕಾರ ಸಹಾಯಕ ಆಡಳಿತಾಧಿಕಾರಿ ಹುದ್ದೆಯಲ್ಲಿ ಕಳೆದ 3 ವರ್ಷಗಳಿಂದಲೂ ದಲಿತ ಸಮುದಾಯಕ್ಕೆ ಸೇರಿದ ಸತ್ಯಭಾಮ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ನಿಯಮಗಳ ಪ್ರಕಾರ ಆಡಳಿತಾಧಿಕಾರಿ ಹುದ್ದೆಗೆ ಸತ್ಯಭಾಮ ಅವರಿಗೇ ಪದನ್ನೋತಿ ನೀಡಬೇಕಿತ್ತು. ಆದರೆ ರಾಜ್ಯ ಅಡ್ವೋಕೇಟ್ ಜನರಲ್ ಕಚೇರಿಯು ಈ ನಿಯಮವನ್ನೂ ಉಲ್ಲಂಘಿಸಿ, ಕೆಎಎಸ್ ಅಧಿಕಾರಿ ಅಭಿಜಿನ್ ಎಂಬುವರನ್ನು ಆಡಳಿತಾಧಿಕಾರಿ ಹುದ್ದೆಗೆ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ತಮ್ಮನ್ನು ಆಡಳಿತಾಧಿಕಾರಿ ಹುದ್ದೆಗೆ ನೇಮಿಸಬೇಕು ಎಂದು ಸತ್ಯಭಾಮ ಅವರು ಸಲ್ಲಿಸಿದ್ದ ಮನವಿ ಆಧರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಅಡ್ವೋಕೇಟ್ ಜನರಲ್ ಅವರಿಗೆ 2023ರ ಜುಲೈ 7ರಂದು ಪತ್ರವನ್ನೂ ಬರೆದಿದ್ದರು. ಆದರೆ ಈ ಪತ್ರಕ್ಕೆ ಅಡ್ವೋಕೇಟ್ ಜನರಲ್ ಕಚೇರಿಯು ಯಾವುದೇ ಕಿಮ್ಮತ್ತು ನೀಡಿಲ್ಲ.
‘ನಾನು ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಯಾಗಿದ್ದು, ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಒಟ್ಟು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಹಾಗೂ ಸಹಾಯಕ ಆಡಳಿತಾಧಿಕಾರಿಯಾಗಿ ಮೂರೂವರೆ ವರ್ಷಗಳಿಗೂ ಹೆಚ್ಚಿನ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಕಾನೂನು ಪದವಿ ಹೊಂದಿದ್ದೇನೆ. ಈ ಕಚೇರಿಯ ಆಡಳಿತಾಧಿಕಾರಿ ಹುದ್ದೆಗೆ ಎಲ್ಲಾ ರೀತಿಯಿಂದಲೂ ಅರ್ಹಳಾಗಿರುತ್ತೇನೆ. ನನ್ನ ಅರ್ಹತೆಗೆ ಅನುಗುಣವಾಗಿ ಕಚೇರಿಇಯ ಆಡಳಿತಾಧಿಕಾರಿ ಹುದ್ದೆಗೆ ಪದನ್ನೋತಿ ನೀಡಬೇಕು ಎಂದು 2023ರ ಆಗಸ್ಟ್ 8ರಂದು ಮನವಿಯನ್ನೂ ಸಲ್ಲಿಸಿರುತ್ತೇನೆ. ನನ್ನ ಪದನ್ನೋತಿಗೆ ಸಂಬಂಧಪಟ್ಟಂತೆ ಪ್ರಸ್ತಾವನೆಯನ್ನು ಅಡ್ವೋಕೇಟ್ ಜನರಲ್ ಕಚೇರಿಯು ಕಾನೂನು ಇಲಾಖೆಗೆ ಕಳಿಸಿಲ್ಲ,’ ಎಂದು ಸತ್ಯಭಾಮ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಆಡಳಿತಾಧಿಕಾರಿ ಹುದ್ದೆ ಹೊಂದಲು ಅರ್ಹ ಅಭ್ಯರ್ಥಿಗಳು ಲಭ್ಯವಿರಲಿಲ್ಲ. ಹೀಗಾಗಿ ಕೆಎಎಸ್ ಅಧಿಕಾರಿ ಅಭಿಜಿನ್ ಬಿ ಎಂಬುವರನ್ನು ನಿಯೋಜನೆ ಮೂಲಕ 2022ರ ಡಿಸೆಂಬರ್ 15ರಂದು ನೇಮಕ ಮಾಡಲಾಗಿತ್ತು.
ಅಲ್ಲದೇ ‘ಅಭಿಜಿನ್ ಅವರು ಆಡಳಿತಾಧಿಕಾರಿಯಾಗಿ ನೇಮಕವಾದಾಗ ಕಿರಿಯ ಶ್ರೇಣಿ ಅಧಿಕಾರಿಯಾಗಿದ್ದರು. ಇವರು 2023ರ ಜೂನ್ 20ರಲ್ಲಿ ಹಿರಿಯ ಶ್ರೇಣಿಗೆ ಬಡ್ತಿ ಹೊಂದಿದ್ದಾರೆ. ಇವರ ಪ್ರಸ್ತುತ ವೇತನವು 74,000-1,09,600 ರು. ಇದ.ಎ ಹೀಗಾಗಿ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ನಿರ್ವಹಿಸುತ್ತಿರುವ ಹುದ್ದೆಯ ಆಡಳಿತಾಧಿಕಾರಿ ಹುದ್ದೆಗೆ ಸಮಾನಾಂತರ ಹುದ್ದೆಯಾಗಿರುವುದಿಲ್ಲ.
ಅಡ್ವೋಕೇಟ್ ಜನರಲ್ ಕಚೇರಿಯ ಆಡಳಿತಾಧಿಕಾರಿ ಹುದ್ದಯು ಪ್ರಸ್ತುತ ವೇತನ ಶ್ರೇಣಿ 82,000-1,17,000 ರು. ಆಗಿದೆ. ಈಗಲೂ ಅಭಿಜಿನ್ ಅವರು ಆಡಳಿತಾಧಿಕಾರಿಯಾಗಿ ಮುಂದುವರೆದಿದ್ದಾರೆ. ಕಚೇರಿಯ ವೃಂದ ಮತ್ತು ನೇಮಕಾತಿಯಲ್ಲಿ ಸೂಚಿಸಿರುವ ಪ್ರಕಾರ ನಿಯೋಜನೆ ಮುಖಾಂತರವಾಗಿ ಆಡಳಿತಾಧಿಕಾರಿ ಹುದ್ದೆಗೆ ನೇಮಿಸುವ ಸಂದರ್ಭದಲ್ಲಿ ಸಮಾನಾಂತರ ಹುದ್ದೆಯ ಅಧಿಕಾರಿಯನ್ನು ನೇಮಕ ಮಾಡಬೇಕು,’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಯೋಜನೆಗೆ ಅವಕಾಶವಿರುವ ಹುದ್ದೆಗಳಿಗೆ ಮಾತ್ರ ಆ ಹುದ್ದೆಗೆ ಸಮಾನ ದರ್ಜೆ/ಹುದ್ದೆ ಹೊಂದಿರುವ ಅಧಿಕಾರಿ, ನೌಕರರನ್ನು ಅನಿವಾರ್ಯ ಪ್ರಸಂಗಗಳಲ್ಲಿ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಮಾನುಸಾರ ನಿಯೋಜನೆಗೊಳಿಸಬೇಕು ಎಂದು ಸರ್ಕಾರವೇ ಸೂಚಿಸಿತ್ತು. ಆದರೆ ಕೆಎಎಸ್ ಅಧಿಕಾರಿ ಅಭಿಜಿನ್ ಕಾರ್ಯನಿರ್ವಹಿಸುತ್ತಿರುವ ಹಾಲಿ ಹುದ್ದೆಯ ಅಡ್ವೋಕೇಟ್ ಜನರಲ್ ಕಚೇರಿಯಿ ಆಡಳಿತಾಧಿಕಾರಿ ಹುದ್ದೆಗೆ ಸಮಾನ ದರ್ಜೆ ಹುದ್ದೆಯಾಗಿಲ್ಲ ಎಂದು ಗೊತ್ತಾಗಿದೆ.
ಹಾಗೆಯೇ ಯಾವುದೇ ಇಲಾಖೆಯಲ್ಲಿಯಾದರೂ ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆಯ ಹುದ್ದೆ ಸ್ವಂತ ವೇತನ ಶ್ರೇಣಿ ಆಧಾರದ ಮೇಲೆ ನೇಮಕ ಮಾಡುವುದು ಮತ್ತು ನಿಯೋಜನೆಗೊಳಿಸುವುದನ್ನು ನಿರ್ಬಂಧಿಸಿ ಸರ್ಕಾರವು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯನ್ನೂ ಉಲ್ಲಂಘಿಸಿರುವ ರಾಜ್ಯ ಅಡ್ವೋಕೇಟ್ ಜನರಲ್ ಕಚೇರಿಯು ನಿಯಮಗಳಿಗೆ ವಿರುದ್ಧವಾಗಿ ಅಭಿಜಿನ್ ಅವರು ಕಾರ್ಯನಿರ್ವಹಿಸುತ್ತಿರುವುದು ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಹುದ್ದೆಗೆ ಮೂವರು ಅಧಿಕಾರಿಗಳನ್ನು ವರ್ಗಾಯಿಸಿತ್ತು.
ಸುತ್ತೋಲೆಯಲ್ಲೇನಿತ್ತು?
ಯಾವುದೇ ಇಲಾಖೆಯಲ್ಲಿಯಾದರೂ ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ ಮಾಡುವುದನ್ನು ನಿಯೋಜನೆಗೊಳಿಸುವುದನ್ನು ನಿರ್ಬಂಧಿಸಿದೆ. ಈ ಮೇಲಿನ ಸೂಚನೆಯನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು 2023ರ ಸೆ.12ರಂದೇ ಹೊರಡಿಸಿದ್ದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದರು.
ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೂವರು ಉಪ ನಿರ್ದೇಶಕರನ್ನು ಸ್ವಂತ ವೇತನ ಶ್ರೇಣಿ ಮೇಲೆ ವರ್ಗಾಯಿಸಿ 2023ರ ಅಕ್ಟೋಬರ್ 11ರಂದು ಅಧಿಸೂಚನೆ ಹೊರಡಿಸಿದೆ.
ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಬಸವರಾಜ ಜಿಗಳೂರು ಅವರನ್ನು ವಿಜಯಪುರ ಜಿಲ್ಲೆಯಲ್ಲಿ ಖಾಲಿ ಇದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ (ಸ್ವಂತ ವೇತನ ಶ್ರೇಣಿ) ವರ್ಗಾಯಿಸಲಾಗಿದೆ.
ಅದೇ ರೀತಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಯಾದ ಶಿವಮೂರ್ತಿ ಕುಂಬಾರ ಅವರನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.
ಹಾಗೆಯೇ ತರೀಕೆರೆ ಯೋಜನೆಯ ಜ್ಯೋತಿ ಲಕ್ಷ್ಮಿ ಅವರನ್ನು ಹೊಳೆ ನರಸೀಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ( ಸ್ವಂತ ವೇತನ ಶ್ರೇಣಿ) ಹುದ್ದೆಗೆ ವರ್ಗಾಯಿಸಿರುವುದು ಅಧಿಸೂಚನೆಯಿಂದ ಗೊತ್ತಾಗಿದೆ.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವರ್ಗಾವಣೆ; ಸುತ್ತೋಲೆ ಉಲ್ಲಂಘಿಸಿದ ಸಿಎಂ, ಸಚಿವೆ ಹೆಬ್ಬಾಳ್ಕರ್
ಈ ಅಧಿಸೂಚನೆ ಹೊರಡಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅನುಮೋದನೆ ನೀಡಿದ್ದರು.