ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಜೀವ ರಕ್ಷಕ ಔಷಧಗಳ ಕೊರತೆ ಕಂಡು ಬಂದಿರುವ ನಡುವೆಯೇ ಔಷಧಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಖಾಸಗಿ ಸಂಸ್ಥೆಯೊಂದು ಮುಖ್ಯಮಂತ್ರಿ ಸೇರಿ ಹಲವರಿಗೆ ದೂರು ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ಔಷಧಗಳ ಖರೀದಿ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಅವರು ನಿರಂತರವಾಗಿ ಇಲಾಖೆಯ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಅಧಿಕಾರಶಾಹಿ ಮತ್ತು ಸಚಿವರ ಮಧ್ಯೆ ಉಂಟಾಗಿರುವ ತಪ್ಪು ತಿಳಿವಳಿಕೆಯಿಂದಾಗಿಯೇ ಸಕಾಲದಲ್ಲಿ ಔಷಧಗಳು ಖರೀದಿಯಾಗುತ್ತಿಲ್ಲ ಎಂದು ದೂರರ್ಜಿಯಲ್ಲಿ ಆರೋಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಾರ್ವಜನಿಕ ಆಸ್ಪತ್ರೆಗಳಿಗೆ ಸರಬರಾಜು ಅಗುತ್ತಿರುವ ಔಷಧಗಳ ಗುಣಮಟ್ಟದ ಬಗ್ಗೆ ಯಾವುದೇ ಖಾತ್ರಿಯೂ ಇಲ್ಲದಂತಾಗಿದೆ. ಔಷಧಗಳ ಖರೀದಿ ಮತ್ತು ಈ ಸಂಬಂಧ ಕರೆಯಲಾಗುತ್ತಿರುವ ಟೆಂಡರ್ ಪ್ರಕ್ರಿಯೆ, ಕಂಪನಿಗಳೊಂದಿಗೆ ನಡೆಯುವ ದರ ಸಂಧಾನದಲ್ಲೂ ಇಲಾಖೆಯ ಹಿರಿಯ ಅಧಿಕಾರಿಗಳು ಕಮಿಷನ್‌ಗೆ ಬೇಡಿಕೆ ಇರಿಸುತ್ತಿದ್ದಾರೆ ಎಂದು ಸಲ್ಲಿಸಿರುವ ದೂರು ಮುನ್ನೆಲೆಗೆ ಬಂದಿದೆ.
ಆಕ್ಟಿವ್ ಸಿಟಿಜನ್ಸ್ ನೆಟ್‌ವರ್ಕ್ ಸಂಸ್ಥೆಯು 2023ರ ಅಕ್ಟೋಬರ್ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರರ್ಜಿ ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಜೀವರಕ್ಷಕ ಔಷಧ ಖರೀದಿಯಲ್ಲಿ ಭ್ರಷ್ಟಾಚಾರ, ಕಮಿಷನ್‌ಗೆ ಬೇಡಿಕೆ ಇರಿಸುತ್ತಿದೆ ಎಂದು ದೂರರ್ಜಿಗಳು ಸಲ್ಲಿಕೆಯಾಗುತ್ತಿದ್ದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತ ವಿಭಾಗ ಮತ್ತು ಮುಖ್ಯ ಜಾಗೃತಾಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಔಷಧಗಳ ಖರೀದಿಯಲ್ಲಿ ಇಲಾಖೆಯ ಹಲವು ಉನ್ನತಾಧಿಕಾರಿಗಳೇ ಸರಬರಾಜುದಾರರಿಗೆ ಮತ್ತು ಕಂಪನಿಗಳಿಗೆ ಕಮಿಷನ್‌ಗೆ ಬೇಡಿಕೆ ಇರಿಸುತ್ತಿದ್ಧಾರೆ. ಕಮಿಷನ್, ಲಂಚ ನೀಡದ ಸರಬರಾಜುದಾರರು ಮತ್ತು ಕಂಪನಿಗಳನ್ನು ಟೆಂಡರ್ ಪ್ರಕ್ರಿಯೆಯಿಂದಲೇ ಹೊರದೂಡಲಾಗುತ್ತಿದೆ. ಅಲ್ಲದೇ ಯಾವುದೇ ಸೂಕ್ತ ಕಾರಣಗಳಿಲ್ಲದೆಯೇ ಕಂಪನಿಗಳು ಸಲ್ಲಿಸಿರುವ ಬಿಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆ ನಡೆಸುತ್ತಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಟೆಂಡರ್ ಪ್ರಕ್ರಿಯೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತಿಲ್ಲ. ‘ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ವಧಗಳನ್ನ ಖರೀದಿಸುತ್ತಿದೆ. ನಿಗಮವು ಕರೆಯುತ್ತಿರುವ ಟೆಂಡರ್‌ನಲ್ಲಿಯೇ ಬಹಳಷ್ಟು ಮಟ್ಟಿಗೆ ಲೋಪಗಳಾಗುತ್ತಿವೆ. ಬಹುತೇಕ ಖರೀದಿ ಪ್ರಕ್ರಿಯೆಗಳಿಗೆ ಚಾಲನೆಯೇ ಸಿಗದೇ ಬಾಕಿ ಇರಿಸಲಾಗುತ್ತಿದೆ. ಯಾವುದೇ ಕ್ರಮಕೈಗೊಳ್ಳುತ್ತಿಲ್ಲ,’ ಎಂದು ದೂರರ್ಜಿಯಲ್ಲಿ ವಿವರಿಸಲಾಗಿದೆ.
ಅದೇ ರೀತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳೇ ಉದ್ದೇಶಪೂರ್ವಕವಾಗಿಯೇ ಟೆಂಡರ್ ಪ್ರಕ್ರಿಯೆಗಳಿಗೆ ತ್ವರಿತಗತಿಯಲ್ಲಿ ಚಾಲನೆ ನೀಡುತ್ತಿಲ್ಲ. ಬಿಡ್ಡರ್‌ಗಳಿಗೆ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂದು ದೂರಿರುವ ಸಂಸ್ಥೆಯು ಸ್ಯಾನಿಟರಿ ನ್ಯಾಪ್‌ಕಿನ್ ಖರೀದಿ ಪ್ರಕರಣವನ್ನು ಉಲ್ಲೇಖಿಸಿದೆ.
ನ್ಯಾಪ್ಕಿನ್ ಖರೀದಿಗೆ ಸಂಬಂಧಿಸಿದಂತೆ ಅರ್ಜಿಯಲ್ಲಿ ವಿವರಣೆ ನೀಡಿರುವ ಟ್ರಸ್ಟ್, ಹಿಂದೂಸ್ತಾನ್ ಲೆಟೆಕ್ಸ್ ಲಿಮಿಟೆಡ್ ಸಾರ್ವಜನಿಕ ಉದ್ಯಮವನ್ನು ತಿರಸ್ಕರಿಸಲಾಗಿದೆ. ಟೆಂಡರ್‌ನಲ್ಲಿ ನಮೂದಿಸಿದ್ದ ಮೊತ್ತವನ್ನು ಆ ನಂತರ ಯಾವುದೇ ಕಾರಣಗಳಿಲ್ಲದೆಯೇ ಪರಿಷ್ಕರಿಸಲಾಗಿದೆ. ಏಕೆಂದರೆ ಸಾರ್ವಜನಿಕ ಉದ್ಯಮವಾಗಿರುವ ಹಿಂದೂಸ್ತಾನ್ ಲೆಟೆಕ್ಸ್ ಲಿಮಿಟೆಡ್, ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲೂ ಕಮಿಷನ್ ನೀಡುವುದಿಲ್ಲ. ಹೀಗಾಗಿ ಈ ಕಂಪನಿಯ ಅರ್ಜಿಯನ್ನು ತಿರಸ್ಕರಿಸಿ, ಖಾಸಗಿ ಕಂಪನಿಗಳಿಗೆ ಮಣೆ ಹಾಕಿದೆ,’ ಎಂದು ದೂರಿರುವುದು ಗೊತ್ತಾಗಿದೆ.
ಯಾರು ಲಂಚ ಮತ್ತು ಕಮಿಷನ್ ನೀಡುವುದಿಲ್ಲವೋ ಅಂತಹ ಕಂಪನಿಗಳನ್ನು ತಿರಸ್ಕರಿಸಲಾಗುತ್ತಿದೆ. ಅಂದಾಜು ಮೊತ್ತಕ್ಕಿಂತಲೂ ಹೆಚ್ಚಿನ ದರ ನಿಗದಿಪಡಿಸುವುದು, ಅಗತ್ಯವಿಲ್ಲದ ಔಷಧಗಳ ಖರೀದಿಗೆ ಮುಂದಾಗಿರುವುದು, ಔಷಧ ನಿರ್ದಿಷ್ಟತೆಯು ಹೊಂದಾಣಿಕೆ ಆಗದಿದ್ದರೂ ಖರೀದಿಸಲಾಗುತ್ತಿದೆ ಎಂದ ದೂರಲಾಗಿದೆ.
ಆರ್ಥಿಕ ಮತ್ತು ತಾಂತ್ರಿಕ ಬಿಡ್ ತೆರೆಯುವ ಹಂತದಲ್ಲಿಯೇ ಭ್ರಷ್ಟಾಚಾರ ಆರಂಂಭವಾಗುತ್ತದೆ. ಒಮ್ಮೆ ಬಿಡ್ ತೆರೆದ ನಂತರ ಕಂಪನಿಯೊಂದಿಗೆ ದರ ಸಂಧಾನ ನಡೆಯುತ್ತದೆ. ಆಯುಕ್ತರ ವಿವೇಚನೆಯು ಈ ಪ್ರಕ್ರಿಯೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಅಂದಾಜು ಮೊತ್ತವನ್ನು ಆರೋಗ್ಯ ಇಲಾಖೆಯು ಕಳೆದ ಹಲವು ವರ್ಷಗಳಿಂದ ಪರಿಷ್ಕರಿಸಿಲ್ಲ. ಅಧಿಕಾರಿಗಳು ಮತ್ತು ಸರಬರಾಜುದಾರರ ಮಧ್ಯೆ ಅಲಿಖಿತ ಒಪ್ಪಂದ ಆಗಿರುವುದೇ ಇದಕ್ಕೆ ಕಾರಣ ಎಂಬ ಅಂಶವನ್ನು ದೂರಿನಲ್ಲಿ ವಿವರಿಸಲಾಗಿದೆ.
ಅಂದಿತಾ ಹೆಲ್ತ್ ಕೇರ್ ನಿಂದ ಗ್ಲೌಸ್‌ಗಳನ್ನು ಉಳಿದ ರಾಜ್ಯಗಳಿಗಿಂತಲೂ ಹೆಚ್ಚಿನ ದರದಲ್ಲಿ ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಲೋಕಾಯುಕ್ತದಲ್ಲಿ ದೂರು ಕೂಡ ದಾಖಲಾಗಿರುವುದು ದೂರರ್ಜಿಯಿಂದ ತಿಳಿದು ಬಂದಿದೆ.
ಆರೋಗ್ಯ ಇಲಾಖೆ ಆಯುಕ್ತರು ಮತ್ತು ಕೆಎಸ್‌ಎಂಎಸ್‌ಸಿಎಲ್ ಮಧ್ಯೆ ಸಮನ್ವಯತೆಯೇ ಇಲ್ಲ. ಬೇರೆ ರಾಜ್ಯಗಳಲ್ಲಿ ಔಷಧ ದರಕ್ಕೆ ನೀಡಿರುವ ಅನುಮೋದನೆ ಮತ್ತು ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಪಟ್ಟಿಯನ್ನು ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತದೆ. ಆದರೆ ಕರ್ನಾಟಕದದಲ್ಲಿ ಇಂತಹ ಪ್ರಯೋಗವಾಗಿಲ್ಲ. ಅಲ್ಲದೇ ವಾರ್ಷಿಕವಾಗಿ ನವೀಕೃತವಾಗುವುದಿಲ್ಲ ಎಂದು ದೂರಿನಲ್ಲಿ ಹೇಳಿದೆ.
ಔಷಧ ಕಂಪೆನಿಗಳಿಗೆ ಸರಿಯಾಗಿ ಪಾವತಿ ಮಾಡದಿರುವುದು, ಹಣ ಪಾವತಿಯಲ್ಲಿ ವಿಳಂಬಕ್ಕೆ ಸರ್ಕಾರದ ಇಲಾಖೆಯೊಳಗಿನ ಸಮನ್ವಯ ಕೊರತೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂಜರಿಕೆಯೇ ಮುಖ್ಯ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್ ವಟಾರೆ ಹೇಳಿದ್ದರು.
ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (SAAK) ಇತ್ತೀಚೆಗೆ ಬಿಡುಗಡೆ ಮಾಡಿದ ಸಮೀಕ್ಷೆಯ ವರದಿಯಲ್ಲಿ ಅನೇಕ ಸರ್ಕಾರಿ ಆರೋಗ್ಯ ಸೌಲಭ್ಯಗಳು ಉಚಿತ ಔಷಧಿಗಳ ಕೊರತೆಯನ್ನು ಎದುರಿಸುತ್ತಿವೆ.
ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ಅನಿವಾರ್ಯವಾಗಿ ತಮ್ಮ ಖರ್ಚಿನಿಂದ ಔಷಧಿಗಳನ್ನು ಖರೀದಿಸಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಜುಲೈನಲ್ಲಿ ಕರ್ನಾಟಕದ 11 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 598 ಜನರನ್ನು ಸಂದರ್ಶಿಸಲಾಗಿತ್ತು. ಅವರು ಹಣ ಕೊಟ್ಟು ಔಷಧಿ ಖರೀದಿಸಿದ್ದಾರೆ. ಒಟ್ಟು 2.58 ಲಕ್ಷ ರೂಪಾಯಿಗಳಲ್ಲಿ ಪ್ರತಿ ವ್ಯಕ್ತಿ ಸರಾಸರಿ 433 ರೂಪಾಯಿ ಖರ್ಚು ಮಾಡಿರುವುದನ್ನು ಸ್ಮರಿಸಬಹುದು.