ಲೋಕಾಯುಕ್ತರ ಪತ್ನಿ ವಿರುದ್ಧ ಪ್ರಕರಣ; ದೂರರ್ಜಿ ಮೇಲೆ ಕೈಗೊಂಡ ಕ್ರಮಗಳ ಮಾಹಿತಿ ಒದಗಿಸದ ಐಜಿ ಕಚೇರಿ

ಬೆಂಗಳೂರು; ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ  ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌ ಅವರ ಪತ್ನಿ ಶೋಭಾ ಪಾಟೀಲ್‌ ಮತ್ತು ಇತರರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌   ಸಲ್ಲಿಸಿದ್ದ ದೂರನ್ನಾಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು ಲೋಕಾಯುಕ್ತ ಪೊಲೀಸ್‌ ವಿಭಾಗದ ಐಜಿ ಕಚೇರಿಯು ಲೋಕಾಯುಕ್ತ ಎಸ್ಪಿ ಕಚೇರಿಗೆ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ರಾಜ್ಯದ ಪ್ರತಿಷ್ಠಿತ ಖೋಡೆ ಕುಟುಂಬದ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಎನ್ನಲಾದ ಆಡಿಯೋದಲ್ಲಿದ್ದ ಧ್ವನಿಯು ಶೋಭಾ ಪಾಟೀಲ್‌ ಅವರದ್ದೇ ಎಂದು ಫೋರೆನ್ಸಿಕ್‌ ವರದಿಯು  ಸಾಬೀತುಪಡಿಸಿತ್ತು. ಈ ವರದಿಯೊಂದಿಗೇ   ಜನಾಧಿಕಾರ ಸಂಘ‍ರ್ಷ ಪರಿಷತ್‌ ಲೋಕಾಯುಕ್ತ ಎಡಿಜಿಪಿ ಮತ್ತು ಐ ಜಿ ಕಚೇರಿಗೆ ದೂರು ಸಲ್ಲಿಸಿತ್ತು.

 

ಈ ದೂರಿನ ಕುರಿತಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಹಕ್ಕಿನ ಅಡಿಯಲ್ಲಿ ಕೋರಿದ್ದ ಅರ್ಜಿಗೆ ಉತ್ತರಿಸಿರುವ ಲೋಕಾಯುಕ್ತ ಎಸ್ಪಿ ಕಚೇರಿಯು, ಐ ಜಿ ಕಚೇರಿಯು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಉತ್ತರಿಸಿದೆ.

 

ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರ ಪತ್ನಿ ಮತ್ತು ಇತರರ ವಿರುದ್ಧ ದಾಖಲಾಗಿದ್ದ ದೂರನ್ನಾಧರಿಸಿ ಪೊಲೀಸ್‌ ವಿಭಾಗವು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಎಸ್ಪಿ ಕಚೇರಿಯ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

 

ಈ ದೂರಿನ ಮೇಲೆ ಕೈಗೊಂಡಿರುವ ಕ್ರಮಗಳು ಮತ್ತು ದೂರಿನ ಕಡತದಲ್ಲಿರುವ ನೋಟ್‌ ಶೀಟ್‌ ಸಹಿತ ಎಲ್ಲಾ ದಾಖಲೆಗಳ ಮಾಹಿತಿಯನ್ನು ಒದಗಿಸಲು ಸಾಮಾಜಿಕ ಹೋರಾಟಗಾರ ಹೆಚ್‌ ಎಂ ವೆಂಕಟೇಶ್‌ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.

 

ಈ ಅರ್ಜಿಗೆ ಸಂಬಂಧಿಸಿದಂತೆ ಲೋಕಾಯುಕ್ತಕ ಪೊಲೀಸ್‌ ಎಸ್ಪಿ ಕಚೇರಿಯ (ಆಡಳಿತ) ಸಾರ್ವಜನಿಕ ಮಾಹಿತಿ ಅಧಿಕಾರಿ 2023ರ ನವೆಂಬರ್‌ 8ರಂದು ಉತ್ತರ ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ತಾವು ಕೋರಿದ ಮಾಹಿತಿಗೆ ಸಂಬಂಧಿಸಿದಂತೆ ಸದರಿ ದೂರು ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಸಂಬಂಧಿಸಿದ ಶಾಖೆಗೆ ಕೋರಲಾಗಿ ಯಾವುದೇ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ ಎಂಬ ಮಾಹಿತಿಯನ್ನು ಈ ಮೂಲಕ ನೀಡಲಾಗಿದೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಅವರು ಉತ್ತರ ಒದಗಿಸಿದ್ದಾರೆ.

 

 

ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರತಿಷ್ಠಿತ ಖೋಡೆ ಕುಟುಂಬದ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಎನ್ನಲಾದ  ಆಡಿಯೋದಲ್ಲಿದ್ದ ಧ್ವನಿಯು,  ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌ ಅವರ ಪತ್ನಿ ಶೋಭಾ ಪಾಟೀಲ್‌ ಅವರದ್ದೇ  ಎಂಬುದನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವಿಶ್ಲೇಷಣಾ  ವರದಿಯು ಸಾಬೀತುಪಡಿಸಿತ್ತು.

 

‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಆಡಿಯೋ ದಲ್ಲಿರುವ ಧ್ವನಿ ನನ್ನ ಪತ್ನಿ ಶೋಭಾ ಪಾಟೀಲ ಮತ್ತು ನನ್ನ ಮಗ ಸೂರಜ್ ಪಾಟೀಲ್ ರದ್ದು ಅಲ್ಲವೇ ಅಲ್ಲಾ,  ಇದು ಉದ್ದೇಶಪೂರ್ವಕವಾಗಿ ನಮ್ಮ ಕುಟುಂಬವನ್ನು ತೇಜೋವಧೆ ಮಾಡಲು ಸೃಷ್ಟಿಸಿದ ಆಡಿಯೋ,’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌ ಅವರು ಹೇಳಿದ್ದರು. ಆದರೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿಯೂ ಆಡಿಯೋದಲ್ಲಿದ್ದ ಧ್ವನಿಯು ಶೋಭಾ ಪಾಟೀಲ್‌ ಅವರದ್ದೇ  ಎಂದು ಸಾಬೀತಾಗಿರುವುದು ಪ್ರಕರಣವನ್ನು ಮತ್ತಷ್ಟು ವಿಸ್ತರಿಸಿದಂತಾಗಿತ್ತು.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಧಿಕಾರ ಸಂಘರ್ಷ ಪರಿಷತ್‌ ಈಗಾಗಲೇ ಫೋರೆನ್ಸಿಕ್‌ ಲ್ಯಾಬ್‌ ವರದಿಯೊಂದಿಗೆ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ  ದೂರು ದಾಖಲಿಸಿತ್ತು. ಈ ದೂರು ಸಲ್ಲಿಕೆಯಾಗಿ 5 ತಿಂಗಳಾದರೂ ಲೋಕಾಯುಕ್ತ ಪೊಲೀಸ್‌ ವಿಭಾಗದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.

 

 

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಆಡಿಯೋದಲ್ಲಿದ್ದ ಧ್ವನಿಯು ಶೋಭಾ ಪಾಟೀಲರದ್ದೇ ಅಥವಾ ಅಲ್ಲವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಜನಾಧಿಕಾರ ಸಂಘರ್ಷ ಪರಿಷತ್‌ ಕ್ಲೂ 4 ಎವಿಡೆನ್ಸ್‌ ಫೋರೆನ್ಸಿಕ್‌ ಲ್ಯಾಬ್‌ ಸಂಸ್ಥೆಯ ಮೊರೆ ಹೊಕ್ಕಿತ್ತು. ಧ್ವನಿ ವಿಶ್ಲೇಷಣೆಗೆ ಧ್ವನಿ ಮುದ್ರಿಕೆ ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ 2022ರ ಮೇ 2ರಂದು ಶೋಭಾ ಪಾಟೀಲ್‌ ಅವರು ಭಾಗವಹಿಸಿದ್ದ ವನಿತಾ ವಿಹಾರ ಕಾರ್ಯಕ್ರಮದ ಭಾಗವೊಂದನ್ನು ಯೂ ಟ್ಯೂಬ್‌ನಿಂದ ಪಡೆದು ವಿಶ್ಲೇಷಣೆಗೆ ಒಳಪಡಿಸಲು ನೀಡಿತ್ತು.

 

 

ಫೋರೆನ್ಸಿಕ್‌ ಲ್ಯಾಬ್‌ ವರದಿಯಲ್ಲೇನಿದೆ?

 

ಆಡಿಯೋ 1

 

ಸ್ಪೆಕ್ಟ್ರಮ್‌ ಮತ್ತು ವೇವ್‌ ಫಾರ್ಮ್‌ ಪರಿಶೀಲನೆಯಲ್ಲಿ ಹಲವಾರು ಕಡೆ ಎಲೆಕ್ಟ್ರಾನಿಕ್‌ ಸಿಗ್ನಲ್‌ಗಳಲ್ಲಿ ಥಟ್ಟನೆ ಬದಲಾವಣೆಗಳಿರುವುದು ಟೈಮ್‌ ಡೊಮೈನ್‌ ವೇವ್‌ ಫಾರ್ಮ್‌ನಲ್ಲಿ ಕಂಡು ಬಂದಿರುತ್ತದೆ. ಈ ಬದಲಾವಣೆಗಳು ಸ್ಪೆಟ್ರೋಗ್ರಾಮ್‌ ವಿಶ್ಲೇಷಣೆಯಲ್ಲಿಯೂ ಕೂಡ ಎಲೆಕ್ಟ್ರಾನಿಕ್‌ ಸಿಗ್ನಲ್‌ಗಳು ಕಂಡು ಬಂದಿದೆ. ಈ ಧ್ವನಿಮುದ್ರಿಕೆಯು ಸೃಷ್ಟಿಸಿರುವುದು ಮತ್ತು ತಿದ್ದಲಾಗಿದೆ ಎಂದು ಮೊದಲ  ವರದಿಯಲ್ಲಿ (C4E/REP/22-2368, 10Th MARCH 2023) ಹೇಳಿದೆ.

 

 

ಶೋಭಾ ಪಾಟೀಲ್‌ ಧ್ವನಿ ಪರೀಕ್ಷೆ

 

2022ರ ಮೇ 2ರಂದು ಶೋಭಾ ಪಾಟೀಲ್‌ ಅವರು ಬೆಂಗಳೂರು ಆಕಾಶವಾಣಿ ಕೇಂದ್ರವು ಆಯೋಜಿಸಿದ್ದ ವನಿತಾ ವಿಹಾರದಲ್ಲಿ ಭಾಗವಹಿಸಿದ್ದರು. ಈ ಧ್ವನಿ ಮುದ್ರಿಕೆಯು ಕನ್ನಡ ಮತ್ತು ಇಂಗ್ಲೀಷ್‌ನಿಂದ ಕೂಡಿದೆ.  ಇದನ್ನು ಪರಿಶೀಲಿಸಿರುವ ಫೋರೆನ್ಸಿಕ್‌ ಲ್ಯಾಬ್‌ ತಂಡವು ಎರಡೂ ಧ್ವನಿ ಮುದ್ರಿಕೆಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ ವಿಶ್ಲೇಷಿಸಿದೆ.

 

 

ಕಡೆಯಲ್ಲಿ ಈ ಎರಡೂ ಧ್ವನಿಗಳೂ ಒಂದೇ ಎಂಬ ಅಭಿಪ್ರಾಯವನ್ನು ನೀಡಿರುವುದು (On the Cumulative effect of all the above observations taken together, the characteristics of the speaker in the sample referred as Q were observerd to be similar in the samples referrd as K. Hence it is highly probable that the voice of the female speaker in Q and the Voice OF THE female speaker in K belong to the same person ವರದಿಯಿಂದ ಗೊತ್ತಾಗಿತ್ತು.

 

 

ಜನಾಧಿಕಾರ ಸಂಘರ್ಷ ಪರಿಷತ್‌ 2023ರ ಮೇ 8ರಂದು ರಾಜ್ಯ ಡಿಜಿಐಜಿಪಿಗೂ ನೀಡಿದ್ದ ದೂರಿನಲ್ಲಿಯೂ ಸುಮಾರು 6 ನಿಮಿಷ 54 ಸೆಕೆಂಡು ಅವಧಿಯ ಧ್ವನಿಮುದ್ರಿಕೆಯ ಬಗ್ಗೆ ಪ್ರಸ್ತಾಪಿಸಿತ್ತು. ಈ ಧ್ವನಿಮುದ್ರಿಕೆಯನ್ನು ಕ್ಲೂ4 ಎವಿಡೆನ್ಸ್‌ ಫೋರೆನ್ಸಿಕ್‌ ಇನ್‌ವೆಸ್ಟಿಗೇಷನ್ಸ್‌ ಪ್ರೈ ಲಿಮಿಟೆಡ್‌ನಿಂದ ಪರೀಕ್ಷಿಸಲಾಗಿದೆ. ಅದರ ಆಧಾರದ ಮೇಲೆ ದೂರು ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಿತ್ತು ಎಂಬುದು ತಿಳಿದು ಬಂದಿದೆ.

ಆಸ್ತಿ ವ್ಯಾಜ್ಯ ಪ್ರಕರಣ; ಆಡಿಯೋದಲ್ಲಿದ್ದ ಧ್ವನಿ, ಲೋಕಾಯುಕ್ತರ ಪತ್ನಿಯದ್ದು ಎಂದ ಫೋರೆನ್ಸಿಕ್

 

ಪ್ರಕರಣದ ವಿವರ

 

ಕರ್ನಾಟಕದ ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರ ಕುಟುಂಬ ಸದಸ್ಯರು ಲೋಕಾಯುಕ್ತ ಕಚೇರಿಯ ಮೂಲಕ  ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆ ಮತ್ತು ಅಕ್ರಮ ಹಣ ಗಳಿಕೆಯಲ್ಲಿ ತೊಡಗಿದ್ದಾರೆ ಎಂದು ಗುರುತರ ಆರೋಪ ಮಾಡಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಖೋಡೆ ಕುಟುಂಬದ ಕೆಲವು ಸದಸ್ಯರು ಪತ್ರದ ಮೂಲಕ ದೂರು ಸಲ್ಲಿಸಿದ್ದರು.

 

ಖೋಡೆ ಕುಟಂಬ ಸದಸ್ಯರಾದ ಲಕ್ಷ್ಮಿದೇವಿ ಅವರ ಪುತ್ರಿಯರಾದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ ಮತ್ತು ಸಹೋದರ ಎಂ ಎಂ ಅನಂತಮೂರ್ತಿ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ 2022ರ ಡಿಸೆಂಬರ್‌ 12ರಂದು ಪತ್ರ ಬರೆದಿದ್ದು, ಲೋಕಾಯುಕ್ತರಾದ ಬಿ ಎಸ್‌ ಪಾಟೀಲ್‌ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಗಂಭೀರವಾಗಿ ಆರೋಪಿಸಿದ್ದರು.

 

ಇದಲ್ಲದೆ ವೃತ್ತಿ ದುರ್ನಡತೆಯ ಕುರಿತಾಗಿ ಪಾಟೀಲ್‌ ಅವರ ಪತ್ನಿ, ವಕೀಲೆ ಶೋಭಾ ಮತ್ತು ಪುತ್ರ, ವಕೀಲ ಸೂರಜ್‌ ಪಾಟೀಲ್‌ ಅವರ ವಿರುದ್ಧ ಪ್ರತ್ಯೇಕವಾಗಿ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ಶಿಸ್ತು ಸಮಿತಿಗೂ ದೂರು ಸಲ್ಲಿಸಿದ್ದರು.

 

ಖೋಡೆ ಕುಟುಂಬಕ್ಕೆ ಸೇರಿದ ಸಾವಿರಾರು ಕೋಟಿ ಚರ ಮತ್ತು ಸ್ಥಿರ ಆಸ್ತಿ ಇದ್ದು, ಬಿಲ್ಡರ್‌ ಮತ್ತು ಡೆವಲಪರ್‌ಗಳ ಅಕ್ರಮ ಕೂಟು ರಚಿಸಿಕೊಂಡು ಖೋಡೆ ಕುಟುಂಬದ ಪುರುಷರು ಕಾನೂನುನಾತ್ಮಕವಾಗಿ ತಮಗೆ ದಕ್ಕಬೇಕಾದ ಆಸ್ತಿಯ ವಿವಾದವನ್ನು ನ್ಯಾಯಾಲಯದಲ್ಲಿ ವಿಳಂಬಗೊಳಿಸುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

 

ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲದಲ್ಲಿನ ಅಸಲು ದಾವೆಯಲ್ಲಿ 16ನೇ ಪ್ರತಿವಾದಿಯಾಗಿರುವ ಸೋದರ ಮಾವ ಕೆ ಎಲ್‌ ಸ್ವಾಮಿ ಅವರ ಹತ್ತಿರದ ಸಂಬಂಧಿ ಮಹಿಮಾ ಪಟೇಲ್‌ ಅವರ ಜೊತೆ ನಿಕಟ ಸಂಪರ್ಕ ಹೊಂದಿರುವುದನ್ನು ಹಾಗೂ ಪ್ರೆಸ್ಟೀಜ್‌ ಎಸ್ಟೇಟ್‌ ಪ್ರೈವೇಟ್‌ ಲಿಮಿಟೆಡ್‌ನೊಂದಿಗೆ ಹೊಂದಿರುವ ಸಂಬಂಧವನ್ನು ದಾವೆ ಮುನ್ನಡೆಸುವುದಕ್ಕೂ ಮುನ್ನ ಶೋಭಾ ಅವರು ತಮಗೆ ಬಹಿರಂಗಪಡಿಸಿರಲಿಲ್ಲ. ಆಸ್ತಿಯಲ್ಲಿ ನಮ್ಮ ಪಾಲು ಪಡೆದುಕೊಡುವುದಕ್ಕೆ ಬದಲಾಗಿ, ಈ ದಾವೆಯಿಂದ ಅಕ್ರಮ ಸಂಪಾದನೆ ಮಾಡಿಕೊಳ್ಳುವ ಕ್ರೂರ ಉದ್ದೇಶವನ್ನು ಬಿ ಎಸ್‌ ಪಾಟೀಲ್‌ ಕುಟುಂಬ ಸದಸ್ಯರು ಹೊಂದಿದ್ದರು. ಸಾಂದರ್ಭಿಕ ಘಟನೆಗಳು ಮೇಲೆ ಉಲ್ಲೇಖಿಸಿದ ವ್ಯಕ್ತಿ ಮತ್ತು ಸಂಸ್ಥೆಯ ಜೊತೆಗಿನ ನಂಟನ್ನು ಬಹಿರಂಗಪಡಿಸಿದೆ ಎಂದು ಪತ್ರದಲ್ಲಿ ಆರೋಪಿಸಿದ್ದರು.

 

ಲಕ್ಷ್ಮಿದೇವಿ ಅವರ ಪುತ್ರಿಯರಾದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ ಅವರು ಕುಟುಂಬದ ಆಸ್ತಿಯಲ್ಲಿ ಪಾಲು ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದು, ಕುಟುಂಬದ ಇತರ ಸದಸ್ಯರ ಕಿರುಕುಳದಿಂದ ಬೇಸತ್ತಿದ್ದೇವೆ. ನ್ಯಾಯ ಪಡೆಯುವ ಭಾಗವಾಗಿ ಬಿ ಎಸ್‌ ಪಾಟೀಲ್‌ ಅವರ ಪತ್ನಿ ಶೋಭಾ ಪಾಟೀಲ್‌ ಅವರನ್ನು ಸಂಪರ್ಕಿಸಲಾಗಿತ್ತು. ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಬಾಕಿಯಿರುವ ದಾವೆಯ ದಾಖಲೆಯಲ್ಲಿನ ವಕೀಲರಾದ ಶೋಭಾ ಮತ್ತು ಸೂರಜ್‌ ಪಾಟೀಲ್‌ ಅವರು ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ಸೋದರ ಸಂಸ್ಥೆಗಳ ಜೊತೆ ಕೈಜೋಡಿಸಿದರು ಎಂದು ದೂರಲಾಗಿತ್ತು.

SUPPORT THE FILE

Latest News

Related Posts