ಬೇನಾಮಿಗಳಿಂದ ಸಾವಿರಾರು ಕೋಟಿ ಮೌಲ್ಯದ ಕಬ್ಬಿಣದ ಅದಿರು ಖರೀದಿ; ಮಾಹಿತಿ ಇದ್ದರೂ ಕೈಕಟ್ಟಿ ಕುಳಿತ ಸರ್ಕಾರ

ಬೆಂಗಳೂರು; ನೋಂದಾಯಿತರಲ್ಲದ ವರ್ತಕರಿಂದ ಸಾವಿರಾರು ಕೋಟಿ ರು ಮೌಲ್ಯದ ಕಬ್ಬಿಣದ ಅದಿರನ್ನು ಬೇನಾಮಿಗಳು ಖರೀದಿಸುತ್ತಿರುವ ದಂಧೆಯು ದೊಡ್ಡ ಪ್ರಮಾಣದಲ್ಲಿದೆ. ಈ ಎಲ್ಲಾ ಮಾಹಿತಿಯೂ ಸ್ಥಳೀಯ ಪೊಲೀಸರಿಗೆ ವಿಳಾಸ ಸಮೇತವೂ ಗೊತ್ತಿದೆ ಎಂದು ಖುದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಬಹಿರಂಗಪಡಿಸಿದೆ.

 

ಕರ್ನಾಟಕದಲ್ಲಿ ಊರ್ಜಿತಗೊಳ್ಳಬಲ್ಲ ಗಣಿಗಾರಿಕೆಗಾಗಿ ನಿಯಂತ್ರಣ ಮತ್ತು ವ್ಯವಸ್ಥೆಗಳ ಮೇಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸುದೀರ್ಘ ವಿವರಣೆಯನ್ನು ನೀಡಿದೆ.

 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಲ್ಲಿಸಿರುವ ಸಮಗ್ರ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಈ ದಂಧೆಯನ್ನು ತನಿಖೆ ಮಾಡಲು ಹಾಗೂ ತಾರ್ಕಿಕ ತೀರ್ಮಾನ ತೆಗೆದುಕೊಳ್ಳಲು ಈ ಎಲ್ಲಾ ಪ್ರಕರಣಗಳನ್ನು ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೆಕು ಎಂದು ಸರ್ಕಾರದ ಉನ್ನತಾಧಿಕಾರಕ್ಕೆ ಇಲಾಖೆಯು ಕೋರಿರುವುದು ತಿಳಿದು ಬಂದಿದೆ. ಆದರೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಈ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ಗೊತ್ತಾಗಿದೆ.

 

ಫಾರ್ಮ್ ವ್ಯಾಟ್‌ 100ರಲ್ಲಿ ಸಲ್ಲಿಸಿದ ರಿಟರ್ನ್ಸ್‌ನಲ್ಲಿ ನೋಂದಾಯಿಸದ ಡೀಲರ್‍‌ಗಳಿಂದ ಕಬ್ಬಿಣದ ಅದಿರನ್ನು ಖರೀದಿಸಿದ್ದಾರೆ ಎಂಬ ಮಾಹಿತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು  ಖಚಿತಪಡಿಸಿಕೊಂಡಿತ್ತು.  ಈ ಸಂಬಂಧ ನೀಡಿದ್ದ  ನೋಟಿಸ್‌ಗಳಿಗೆ 23 ಡೀಲರ್‍‌ಗಳು ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂಬುದನ್ನೂ ಇಲಾಖೆಯು  ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

‘ಈ ಕುರಿತು ಹೊಸಪೇಟೆಯಲ್ಲಿ ಪರಿಶೀಲನೆ ನಡೆಸಿದಾಗ ಬೇನಾಮಿ ಹೆಸರಿನಲ್ಲಿ ಹಲವು ದಂಧೆ ನಡೆಯುತ್ತಿರುವುದು ಖಚಿತವಾಗಿದೆ. ಸ್ಥಳೀಯ ಪೊಲೀಸರಿಗೆ ವಿವರ, ವಿಳಾಸ ಹಾಗೂ ಎಲ್ಲಿದ್ದಾರೆ ಎಂಬುದು ಖಚಿತವಾಗಿದೆ. ಇಡೀ ಸಮಸ್ಯೆಯು ದೊಡ್ಡ ಪ್ರಮಾಣದಲ್ಲಿದೆ. ಮತ್ತು ಕೆಲವು ಸಾವಿರ ಕೋಟಿಗಳನ್ನು ಒಳಗೊಂಡಿದೆ,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ದಂಧೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಸ್ಥಳೀಯ ಪೊಲೀಸರಿಗೆ ಗೊತ್ತಿದ್ದರೂ ಸಹ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಹೀಗಾಗಿ ಸಂಪೂರ್ಣ ಸಮಸ್ಯೆಯನ್ನು ಸಮರ್ಥ ಮತ್ತು ಸೂಕ್ತ ತನಿಖಾ ಸಂಸ್ಥೆಗೆ ವಹಿಸಿಕೊಡಬೇಕು ಎಂದು ಇಲಾಖೆಯು ಸರ್ಕಾರವನ್ನು ಕೋರಿದೆ.

 

ರಾಜ್ಯದಲ್ಲಿ 2000-03ರಲ್ಲಿ 23.20 ಮೆಟ್ರಿಕ್ ಟನ್‌ ಇದ್ದ ಕಬ್ಬಿಣದ ಅದಿರಿನ ಉತ್ಪಾದನೆಯು 2005-06ರಲ್ಲಿ 41.40 ಮೆಟ್ರಿಕ್‌ ಟನ್‌ ತಲುಪಿತ್ತು. ಇದು ಜಾಗತಿಕ ಬೇಡಿಕೆ ಹಾಗೂ ನಿರ್ದಿಷ್ಟವಾಗಿ ಚೀನಾದ ಬೇಡಿಕೆಗೆ ಅನುಗುಣವಾಗಿತ್ತು. ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಬಳ್ಳಾರಿ ಜಿಲ್ಲೆಯು ಪ್ರಮುಖ ಪಾಲು ಹೊಂದಿತ್ತು. ಇದು 2002-03ರಲ್ಲಿ ಶೇ. 69 ಮತ್ತು 2005-06ರಲ್ಲಿ ಶೇ.87ಕ್ಕೇರಿತ್ತು. ಇದಲ್ಲದೇ ದಂಡದ ರಫ್ತು ಅನುಪಾತವು ಮೊದಲು 2.1 ಅಗಿತ್ತು. ಆದರೆ ಈ ಪ್ರಮಾಣವು 2005-06ರ ಸಮಯದಲ್ಲಿ 5;1ಕ್ಕೆ ಬದಲಾಗಿತ್ತು.

 

ಈ ಎಲ್ಲಾ ಅಂಶಗಳು ಹಲವಾರು ಮತ್ತು ಜಂಟಿಯಾಗಿ ಕಬ್ಬಿಣದ ಅದಿರು ಉತ್ಪಾದನೆಗೆ ಪ್ರಚೋದಿಸಿತ್ತು. ಅಕ್ರಮ ಗಣಿಗಳಿಂದ ಮತ್ತು ಪಟ್ಟಾ ಭೂಮಿಯಿಂದ ಕಬ್ಬಿಣದ ಅದಿರಿನ ಉತ್ಪನ್ನಗಳನ್ನು ನೋಂದಾಯಿಸದ ಡೀಲರ್‍‌ಗಳಿಗೆ (ಯುಆರ್‍‌ಡಿ) ಮಾರಾಟ ಮಾಡಲಾಗಿತ್ತು.

 

ಇದಕ್ಕೆ ಪ್ರತಿಯಾಗಿ ನೋಂದಾಯಿತ ವ್ಯಾಪಾರಿಗಳು ಅಕ್ರಮ ಅದಿರನ್ನು ಖರೀದಿಸಿ ವಹಿವಾಟು ನಡೆಸಿದ್ದರು. ನೋಂದಣಿಯಾಗದ ಡೀಲರ್‍‌ಗಳು ವಹಿವಾಟು ನಡೆಸಿದ ಕಬ್ಬಿಣದ ಅದಿರಿನ ಪ್ರಮಾಣವನ್ನು ಅಂದಾಜು ಮಾಡಲು ನೋಂದಣಿಯಾಗದ ಡೀಲರ್‍‌ಗಳು ನೋಂದಾಯಿಸದ ವಿತರಕರು ಮಾಡಿದ ಖರೀದಿಗಳ ವಿವರಣೆಯನ್ನೂ ವಾಣಿಜ್ಯ ತೆರಿಗೆ ಇಲಾಖೆಯಿಂದ ಗಣಿ ಇಲಾಖೆಯು ಪಡೆದಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಹೊಸಪೊಏಟೆಯ 132, ಬಳ್ಳಾರಿಯಲ್ಲಿ 22, ಚಿತ್ರದುರ್ಗದ 10 ಮತ್ತು ಕೊಪ್ಪಳದ ಒಬ್ಬ ವಿತರಕರ ವಿಳಾಸಗಳಿಗೆ ನೋಟೀಸ್‌ ನೀಡಲಾಗಿತ್ತು. ಆದರೆ ಎಲ್ಲಾ ಡೀಲರ್‍‌ಗಳಿಗೂ ನೋಟೀಸ್‌ಗಳನ್ನು ನೀಡಿಲ್ಲ. ಕೇವಲ 29 ನೋಟೀಸ್‌ಗಳನ್ನು ನೀಡಲಾಗಿತ್ತು. ಇವುಗಳಲ್ಲಿ ಕೇವಲ ಇಬ್ಬರು ವಿತರಕರು ಮಾತ್ರ ಖರೀದಿಯ ವಿವರಗಳನ್ನು ಒದಗಿಸಿದ್ದಾರೆ. ನಾಲ್ಕು ವಿತರಕರು ಒದಗಿಸಲು ಸಮಯ ಕೋರಿದ್ದಾರೆ. ವಿಶೇಷವೆಂದರೆ ನೋಟೀಸ್‌ಗಳನ್ನು ಸ್ವೀಕರಿಸಿದ 23 ಡೀಲರ್‍‌ಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

 

ಸಿಎಜಿ ಆಕ್ಷೇಪಣೆಯಲ್ಲೇನಿತ್ತು?

 

2006-07ರಿಂದ 2009-10ರ ಅವಧಿಯಲ್ಲಿ 97 ವರ್ತಕರು 508.27 ಕೋಟಿ ರು.ಮೌಲ್ಯದ ಕಬ್ಬಿಣದ ಅದಿರನ್ನು ನೋಂದಾಯಿತರಲ್ಲದ ವರ್ತಕರಿಂದ ಖರೀದಿಸಿದ್ದರು. ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗದಲ್ಲೂ ಇಂತಹ ಪ್ರಕರಣಗಳಿದ್ದವು.

 

ಇದು ಕಬ್ಬಿಣ ಅದಿರಿನ ಒಂದು ದೊಡ್ಡ ಪ್ರಮಾಣವನ್ನು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಯಾವುದೇ ನೋಂದಣಿಯನ್ನು ಹೊಂದಿರದ ವ್ಯಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದನ್ನು ಸ್ಪಷ್ಪಪಡಿಸಿದಾಗ ಈ ಬಗ್ಗೆ ನಿರ್ದೇಶಕರ ಕಚೇರಿಯಿಂದ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೊಸಪೇಟೆಯ ಉಪ ನಿರ್ದೇಶಕರು ತಿಳಿಸಿದ್ದರು.

 

ಆದರೂ ಸಂಬಂಧಿತ ವರ್ತಕರು ಇರಲಿಲ್ಲ. ಹಾಗೂ ಉಪ ನಿರ್ದೇಶಕರ ಕಚೇರಿಯು ಅವರನ್ನು ಕಂಡು ಹಿಡಿಯಲಿಲ್ಲ. ಈ ಕುರಿತು ಇಲಾಖೆಯು ಹೆಚ್ಚಿನ ಪ್ರಗತಿಯನ್ನು ಸಾಧಿಸಲಿಲ್ಲ. ಗಣಿ ಭೂ ವಿಜ್ಞಾನ ಇಲಾಖೆಯ ಜಾರಿ ವಿಭಾಗವು ದುರ್ಬಲವಾಗಿತ್ತು. ಕಬ್ಬಿಣದ ಅದಿರಿನ ಮಾರಾಟಗಳಲ್ಲಿ ನಿರತವಾಗಿರುವ ನೋಂದಾಯಿತರಲ್ಲದ ವರ್ತಕರನ್ನು ಕಂಡು ಹಿಡಿಯಲಿಲ್ಲ. ಹಾಗೂ ಖನಿಜವನ್ನು ಇಲಾಖೆಯ ಅರಿವಿಗೆ ಬಾರದಂತೆ ರವಾನಿಸಲಾಗುತ್ತಿತ್ತು.

 

ಕಬ್ಬಿಣ ಅದಿರಿನ ವ್ಯವಹಾರದಲ್ಲಿ ನಿರತರಾಗಿರುವ ಎಲ್ಲಾ ವರ್ತಕರನ್ನೂ ನೋಂದಾಯಿಸಲು ಒಂದು ವ್ಯವಸ್ಥೆಯ ಅನುಪಸ್ಥಿತಿ ಹಾಗೂ ವಾಣಿಜ್ಯ ತೆರಿಗೆಗಳ ಇಲಾಖೆಯ ಜೊತೆ ಸಮನ್ವಯತೆಯಲ್ಲಿನ ಸಮಯೋಚಿತ ಕ್ರಮಗಳ ಕೊರತೆಯು 7.09 ಕೋಟಿ (ಮೆಟ್ರಿಕ್‌ ಟನ್ ಒಂದಕ್ಕೆ 11 ರು.ನಂತೆ) ಮೊತ್ತದಷ್ಟು ರಾಜಧನವು ನಷ್ಟ ಉಂಟಾಗುವಲ್ಲಿ ಪರಿಣಿಮಿಸಿತು. ಅಲ್ಲದೇ ಈ ರೀತಿಯಾಗಿ ಅಕ್ರಮವಾಗಿ ಹೊರ ತೆಗೆಯಲಾದ ಕಬ್ಬಿಣ ಅದಿರಿನ ಮೌಲ್ಯವು 508.27 ಕೋಟಿ ರು. ಆಗುತ್ತದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

the fil favicon

SUPPORT THE FILE

Latest News

Related Posts