ನವದೆಹಲಿ; ವಿದ್ಯುತ್ ಉತ್ಪಾದಕರ ಲಾಬಿಗೆ ದಟ್ಟ ಅರಣ್ಯವನ್ನು ಕಲ್ಲಿದ್ದಲು ಗಣಿಗಾರಿಕೆಗೆ ನೀಡಿದ್ದನ್ನು ಬಹಿರಂಗಗೊಳಿಸಿದ್ದ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ತನಿಖಾ ತಂಡ ಇದೀಗ ಕಲ್ಲಿದ್ದಲು ಗಣಿಗಳನ್ನು ತನ್ನ ವಿವೇಚನೆಯಂತೆ ಏಕಮೇವ ಬಿಡ್‍ದಾರರಿಗೆ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನೂ ಮುನ್ನೆಲೆಗೆ ತಂದಿದೆ.
‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ನ ತನಿಖಾ ತಂಡದ ವರದಿಯನ್ನು ‘ದಿ ಫೈಲ್’ ಕೂಡ ಪ್ರಕಟಿಸುತ್ತಿದೆ.
2022, ಆಗಸ್ಟ್ 17ರಂದು ಒಕ್ಕೂಟ ಸರ್ಕಾರವು 250 ದಶಲಕ್ಷ ಟನ್ (25 ಕೋಟಿ ಟನ್) ಸಂಗ್ರಹವಿರುವ ಮಧ್ಯಪ್ರದೇಶದ ಸಿಂಗ್ರೌಲಿ ಕಲ್ಲಿದ್ದಲು ಗಣಿಯನ್ನು ಅದಾನಿ ಸಮೂಹ ಯಶಸ್ವಿಯಾಗಿ ಬಿಡ್ ಮೂಲಕ ಪಡೆದುಕೊಂಡಿದೆ ಎಂದು ಘೋಷಿಸಿತ್ತು. ಪೂರ್ವ ಗೋಂಡಬಹೇರ ಉಜೇನಿ ಗಣಿ ಪ್ರದೇಶದ ಹರಾಜು ಪ್ರಕ್ರಿಯೆಯು ವೈಚಿತ್ರದಿಂದ ಕೂಡಿತ್ತು, ಇಲ್ಲಿ ಅದಾನಿ ಸಮೂಹವು ಏಕೈಕ ಬಿಡ್‍ದಾರನಾಗಿತ್ತು.
ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಂಗ್ರಹಿಸಿ ಅಭ್ಯಸಿಸಿರುವ ದಾಖಲೆಗಳ ಪ್ರಕಾರ ಹರಾಜು ಪ್ರಕ್ರಿಯೆ ವಿಫಲವಾದಂತಹ ಸಂದರ್ಭದಲ್ಲಿಯೂ ಕೂಡ ಗಣಿ ಪ್ರದೇಶವನ್ನು ಅದಾನಿ ಸಮೂಹ ತನ್ನದಾಗಿಸಿಕೊಂಡಿರುವುದು ಕಂಡು ಬರುತ್ತದೆ. ಸರ್ಕಾರವು ನಿಶ್ಯಬ್ಧವಾಗಿ ಹರಾಜು ಪ್ರಕ್ರಿಯೆ ನಿಯಮಾವಳಿಗಳಿಗೆ ಬದಲಾವಣೆ ತಂದು, ಸ್ಪರ್ಧೆ ಇಲ್ಲದಿರುವ ಸಂದರ್ಭದಲ್ಲಿಯೂ ಸಹ ಕಂಪನಿಗಳು ಕಲ್ಲಿದ್ದಲು ಗಣಿಗಳನ್ನು ದೋಚಲು ಅನುವು ಮಾಡಿಕೊಟ್ಟಿದೆ.
ಏಕ ಬಿಡ್ ಸಲ್ಲಿಕೆಯಿಂದಾಗಿ ಹರಾಜು ಪ್ರಕ್ರಿಯೆ ವಿಫಲವಾದಂತಹ ಸಂದರ್ಭದಲ್ಲಿ, ಏಕಮೇವ ಬಿಡ್‍ದಾರರಿಗೆ ಗಣಿಗಳನ್ನು ಹಂಚಿಕೆ ಮಾಡುವ ವಿವೇಚನಾಧಿಕಾರವನ್ನು ಸರ್ಕಾರವು ತನಗೆ ನೀಡಿಕೊಂಡಿದೆ ಎನ್ನುವ ಅಂಶ ದಾಖಲೆಗಳಿಂದ ತಿಳಿದುಬರುತ್ತದೆ. ಅದು, ಹರಾಜು ಪ್ರಕ್ರಿಯೆಯು ಸಾಕಷ್ಟು ಸ್ಪರ್ಧಾತ್ಮಕ ಬಿಡ್ ಆಕರ್ಷಿಸಲು ವಿಫಲವಾದಂತಹ ಸಂದರ್ಭದಲ್ಲೂ ಕೂಡ.
ಈ ನಿಯಮಾವಳಿಗಳು, ನರೇಂದ್ರ ಮೋದಿಯವರ ಸರ್ಕಾರವು ಬಹಳ ಹೆಮ್ಮೆಯಿಂದ ಹಾಗೂ ಹೆಗ್ಗಳಿಕೆಯಿಂದ ಹೇಳಿಕೊಳ್ಳುವ ತನ್ನ ಪಾರದರ್ಶಕತೆಗೆ ಹಾಗೂ ಕಲ್ಲಿದ್ದಲು ಗಣಿ ಹರಾಜು ಹಾಕಲು ಹೊಸ ನಿಯಮಾವಳಿಗಳನ್ನು ಹಾಗೂ ಕಾಯ್ದೆಗಳನ್ನು ಜಾರಿಗೆ ತಂದ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ.
ಮನಸೋ ಇಚ್ಛೆ ನಡೆಯುವ ವಿವೇಚನಾ ಹಂಚಿಕೆಯನ್ನು ತೊಲಗಿಸಿ, ಅದನ್ನು ಮುಕ್ತ ಸ್ಪರ್ಧೆಯ ಮೂಲಕ ಹರಾಜು ಹಾಕುವ ಪ್ರಕ್ರಿಯೆ ಮಾಡಲಾಗುವುದು ಎಂದು ಹೇಳಿದ ಏಳು ವರ್ಷಗಳ ಅಂತರದಲ್ಲಿ, ಹರಾಜು ಪ್ರಕ್ರಿಯೆ ವಿಫಲವಾದಾಗ ಅದು ತಲೆಕೆಳಗಾಗಿದೆ.
ಈ ನಿಯಮಗಳು, ಕೋಲ್ಗೇಟ್ ಹಗರಣವೆಂದು ಕುಖ್ಯಾತಿ ಪಡೆದಿದ್ದ, ಹಿಂದಿನ ಯುಪಿಎ ಸರ್ಕಾರ ಹಂಚಿಕೆ ಮಾಡಿದ್ದ 204 ಗಣಿ ಹಂಚಿಕೆಗಳನ್ನು ರದ್ದುಪಡಿಸಿ 2014ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಐತಿಹಾಸಿಕ ತೀರ್ಪಿಗೆ ಧಕ್ಕೆಯಾಗುವ ರೀತಿಯಲ್ಲಿದೆ.
ಒಕ್ಕೂಟ ಸರ್ಕಾರವು ತನಗೆ ನೀಡಿಕೊಂಡಿರುವ ವಿವೇಚನಾಧಿಕಾರದಿಂದ ಲಾಭ ಪಡೆದುಕೊಂಡಿರುವುದು ಕೇವಲ ಅದಾನಿ ಸಮೂಹ ಮಾತ್ರವಲ್ಲ ಎಂದು ದಾಖಲೆಗಳು ಬಹಿರಂಗಪಡಿಸುತ್ತವೆ. ಸ್ಪರ್ಧೆಯನ್ನು ಆಕರ್ಷಿಸಲು ವಿಫಲವಾದ ಸಂದರ್ಭದಲ್ಲಿ ಕನಿಷ್ಠ ಹತ್ತು ಪ್ರಕರಣಗಳಲ್ಲಿ ಸರ್ಕಾರವು ಈ ವಿವೇಚನಾಧಿಕಾರದ ಆಶ್ರಯ ಬಳಸಿ ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡಿದೆ. ಈ ವಿವೇಚನಾಧಿಕಾರದ ಲಾಭ ಪಡೆದುಕೊಂಡಿರುವ ಇತರರೆಂದರೆ ವೇದಾಂತ ಸಮೂಹದ ಕಂಪನಿಗಳು, ಜೆ ಎಸ್ ಡಬ್ಲ್ಯೂ ಸ್ಟೀಲ್ಸ್, ಬಿರ್ಲಾ ಕಾರ್ಪೊರೇಷನ್ ಮತ್ತು ಇತರೆ ಕೆಲವು ಹೆಸರು ಮಾಡಿಲ್ಲದ ಕಂಪನಿಗಳು.
ಈ ಸರಣಿಯ ಮೊದಲ ಭಾಗದಲ್ಲಿ ದಿ ರಿಪೋರ್ಟರ್ಸ್ ಕಲೆಕ್ಟಿವ್, ವಿದ್ಯುತ್ ಉತ್ಪಾದಕರ ಲಾಬಿಯ ಕಾರಣ ಹೇಗೆ ಮಧ್ಯಪ್ರದೇಶದ ಸೂಕ್ಷ್ಮ ಅರಣ್ಯ ಪ್ರದೇಶವನ್ನು ಸರ್ಕಾರವು ಕಲ್ಲಿದ್ದಲು ಗಣಿಗಾರಿಕೆಗೆ ತೆರೆಯಿತು ಎನ್ನುವುದನ್ನು ಬಹಿರಂಗಪಡಿಸಿತ್ತು. ಈ ಲಾಬಿಯು ನಿರ್ಧಿಷ್ಟವಾಗಿ ಎರಡು ಕಲ್ಲಿದ್ದಲು ಗಣಿಗಳ ಮೇಲೆ ಕಣ್ಣಿಟ್ಟಿತ್ತು. ಈ ಲಾಬಿ ಗುಂಪಿನ ಭಾಗವಾಗಿದ್ದ ಅದಾನಿ ಸಮೂಹವು, ಸರ್ಕಾರವು ಪರಿಸರ ಸಚಿವಾಲಯದ ಹಲವು ವರ್ಷಗಳ ನಿರಂತರ ಸಲಹೆ ಮತ್ತು ವಿರೋಧದ ಮಧ್ಯೆ ಹರಾಜಿಗೆ ಮುಕ್ತವಾಗಿಟ್ಟ ಎರಡು ಗಣಿಗಳಲ್ಲಿ ಒಂದು ಗಣಿಗೆ ಏಕೈಕ ಬಿಡ್‍ದಾರನಾಗಿತ್ತು.
ಲೇಖನ ಸರಣಿಯ ಎರಡನೇ ಭಾಗವು, ಒಂದೇ ಬಿಡ್ ಸಲ್ಲಿಕೆಯಾದ ಸಂದರ್ಭದಲ್ಲಿ ವಿವೇಚನಾಧಿಕಾರವನ್ನು ಬಳಸಿಕೊಂಡು ಸರ್ಕಾರವು ಹೇಗೆ ಖಾಸಗಿ ಕಂಪನಿಗಳಿಗೆ ಗಣಿಗಳನ್ನು ಚಿನ್ನದ ಹರಿವಾಣದಲ್ಲಿಟ್ಟು ನೀಡಲಾಗುತ್ತಿದೆ ಎನ್ನುವುದನ್ನು ಹೊರಗೆಡವುತ್ತದೆ.
ಮೊದಲಿಗೆ, ಪ್ರಸ್ತುತವಾಗಿ ದೇಶದಲ್ಲಿ ಕಲ್ಲಿದ್ದಲಿಗೆ ಯಾವುದೇ ರೀತಿಯ ಬೇಡಿಕೆ ಇಲ್ಲದಂತಹ ಸಂದರ್ಭದಲ್ಲಿ ಇಂತಹ ಮಾರಾಟ ಮಾಡಿರುವುದನ್ನು ಮತ್ತು ಮುಂದಿನ ಒಂದು ದಶಕಕ್ಕೆ ದೇಶದ ವಿದ್ಯುತ್ ಉತ್ಪಾದನೆಗೆ ಅವಶ್ಯಕವಿರುವ ಕಲ್ಲಿದ್ದಲು ಸಂಗ್ರಹವನ್ನು ಈಗಾಗಲೇ ಹಂಚಿಕೆ ಮಾಡಿರುವಂತಹ ಸಂದರ್ಭದಲ್ಲಿ ಈ ವಿವೇಚನಾಧಿಕಾರ ಬಳಸಲಾಗಿರುವುದನ್ನು ಈ ಲೇಖನವು ತೆರೆದಿಡುತ್ತದೆ.
“ಕಲ್ಲಿದ್ದಲು ಸಚಿವಾಲಯ ನಡೆಸುವ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನಲ್ಲಿ ಭಾರತದಲ್ಲಿ ನೋಂದಾಯಿತ ಪ್ರತಿಯೊಂದು ಕಂಪನಿಯೂ ಕೂಡ ಭಾಗವಹಿಸಲು ಮುಕ್ತ ಅವಕಾಶ ಇರುವಂತಹ ಸಂಪೂರ್ಣ ಪಾರದರ್ಶಕ ಹರಾಜು ವ್ಯವಸ್ಥೆಯಾಗಿದೆ” ಎಂದು ಅದಾನಿ ಸಮೂಹದ ವಕ್ತಾರರು ಇ ಮೇಲ್ ಮೂಲಕ ದಿ ರಿಪೋರ್ಟರ್ಸ್ ಕಲೆಕ್ಟಿವ್‌ಗೆ ತಿಳಿಸಿದ್ದಾರೆ. “ಸ್ಪರ್ಧೆಯನ್ನು ತಡೆಯುವಂತಹ ಹಣಕಾಸು ಅಥವಾ ತಾಂತ್ರಿಕ ಅರ್ಹತೆಯ ಮಾನದಂಡಗಳ ಅಡೆತಡೆಗಳೇ ಇಲ್ಲ” ಎಂದು ಹೇಳುತ್ತಾರೆ.
“ನಾವು ಸಂಪೂರ್ಣವಾಗಿ, ಸರ್ಕಾರದ ಹರಾಜು ವ್ಯವಸ್ಥೆ ಮತ್ತು ಚಾಲ್ತಿಯಲ್ಲಿರುವ ನೀತಿ ಮತ್ತು ನಿಯಮಾವಳಿಗಳ ಅಡಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತೇವೆ. ಸ್ಪರ್ಧೆಯಲ್ಲಿ ತಾಂತ್ರಿಕವಾಗಿ ಮತ್ತು ವಾಣಿಜ್ಯಿಕವಾಗಿ ಅರ್ಹನಾದ ಬಿಡ್‍ದಾರನಿಗೆ ಮಾತ್ರ ಗಣಿ ಪ್ರದೇಶಗಳನ್ನು ನೀಡಲಾಗುತ್ತದೆ” ಎಂದು ವೇದಾಂತ ಅಲ್ಯೂಮಿನಿಯಂನ ವಕ್ತಾರರು ತಿಳಿಸಿದರು.
ವಿವರವಾದ ಪ್ರಶ್ನೆಗಳನ್ನು ಒಳಗೊಂಡ ಇ ಮೇಲ್‍ಗೆ ಕಲ್ಲಿದ್ದಲು ಸಚಿವಾಲಯದಿಂದ, ಅನೇಕ ಬಾರಿ ನೆನಪಿಸಿದ ಹೊರತಾಗಿಯೂ, ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.
ಹಳೆಯ ರಾಗ
2020 ರ ಜೂನ್‍ನಲ್ಲಿ, ಮೋದಿ ಸರ್ಕಾರವು ಆರಂಭಿಸಿದ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ವ್ಯವಸ್ಥೆಯಲ್ಲಿ ತನ್ನ ವಿವೇಚನಾಧಿಕಾರ ಬಳಸಿ ಕಲ್ಲಿದ್ದಲು ಗಣಿಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು, ನಾಲ್ಕು ಸರ್ಕಾರಿ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ನಿರ್ಧಿಷ್ಟ ಸಮಿತಿಗೆ ನೀಡಲಾಗಿದೆ. ನಾಲ್ಕು ಇಲಾಖಾ ಕಾರ್ಯದರ್ಶಿಗಳನ್ನು ಒಳಗೊಂಡ “ಉನ್ನತಾಧಿಕಾರ ಸಮಿತಿ” ಎಂದು ಕರೆಯಲಾಗುವ ಈ ಸಮಿತಿಗೆ, ಏಕ ಬಿಡ್ ಸಲ್ಲಿಕೆಯಾದ ಸಂದರ್ಭದಲ್ಲಿ, ಗಣಿಯನ್ನು ಆ ಕಂಪನಿಗೆ ಹಂಚಿಕೆ ಮಾಡಬೇಕೆ ಅಥವಾ ಮಾಡಬಾರದೇ ಎಂದು ನಿರ್ಧರಿಸುವ ಅಧಿಕಾರವಿದೆ. ಈ ಸಮಿತಿಯು ತನ್ನ ನಿರ್ಧಾರವನ್ನು ಯಾವ ಅಧಾರದ ಮೇಲೆ ಮಾಡುತ್ತದೆ ಎನ್ನುವ ಬಗ್ಗೆ ಯಾವುದೇ ನಿಯಮಾವಳಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.
ಅದಾನಿ ಸಮೂಹ ಪಡೆದುಕೊಂಡಿರುವ ಸಿಂಗ್ರೌಲಿಯ ಕಲ್ಲಿದ್ದಲು ಗಣಿಯನ್ನು ಎರಡು ಬಾರಿ ಹರಾಜಿಗೆ ಇಡಲಾಗಿತ್ತು. ಮೊದಲು 2021ರ ಮಾರ್ಚ್‍ನಲ್ಲಿ, ತದನಂತರ 2021ರ ಸೆಪ್ಟೆಂಬರ್‌ನಲ್ಲಿ. ಮೊದಲ ಸುತ್ತಿನಲ್ಲಿ ಈ ಗಣಿಯು ಒಂದೇ ಬಿಡ್‍ದಾರರರನ್ನು ಮಾತ್ರ ಆಕರ್ಷಿಸಿತ್ತು, ಆದರೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳು ಆ ಬಿಡ್ ಸಲ್ಲಿಸಿದ ಕಂಪನಿ ಯಾವುದೆಂದು ತಿಳಿಸುವುದಿಲ್ಲ. ಈ ಹರಾಜನ್ನು ರದ್ದುಪಡಿಸಲಾಯಿತು.
ಎರಡನೇ ಸುತ್ತಿನ ಹರಾಜಿನಲ್ಲಿ ಅದಾನಿ ಸಮೂಹವು ಏಕೈಕ ಬಿಡ್‍ದಾರನಾಗಿತ್ತು. ತದನಂತರ ಸರ್ಕಾರವು ಈ ಗಣಿ ಹಂಚಿಕೆಯನ್ನು ಉನ್ನತಾಧಿಕಾರ ಸಮಿತಿಗೆ ವಹಿಸಿತು. ಅದು ಈ ಗಣಿಯನ್ನು ಹರಾಜು ಪ್ರಕ್ರಿಯೆಯಲ್ಲಿ ಸಲ್ಲಿಸಿದ್ದ ಬಿಡ್ ದರಕ್ಕೆ ಅದಾನಿ ಸಮೂಹಕ್ಕೆ ನೀಡಲು ನಿರ್ಧರಿಸಿತು.
ಇದರಿಂದ ಸಾರ್ವಜನಿಕ ಆಸ್ತಿಯನ್ನು ಉತ್ತಮ ದರಕ್ಕೆ ಹರಾಜು ಹಾಕಬೇಕು ಎನ್ನುವ ತತ್ವಕ್ಕೆ ಹಿನ್ನಡೆ ಉಂಟಾಯಿತು; ಆರೋಗ್ಯಕರ ಸ್ಪರ್ಧೆಯ ಮೂಲಕ ಹೆಚ್ಚಿನ ಸಂಭಾವ್ಯ ಖರೀದಿದಾರರನ್ನು ಆಕರ್ಷಿಸಿ ಒಳಸಂಚನ್ನು ತಡೆಯಬೇಕು (ಹರಾಜಿನಲ್ಲಿ ಏಕ ಬಿಡ್ ಸಲ್ಲಿಕೆಯ ಸಂಚಿನ ಸಾಧ್ಯತೆಯ ಬಗ್ಗೆ ಅಥವಾ ಆ ಆಸ್ತಿಗೆ ಇರುವ ಬೇಡಿಕೆಯ ಬಗ್ಗೆ ಸಂದೇಹಗಳನ್ನು ಉಂಟು ಮಾಡುತ್ತದೆ) ಮತ್ತು ಒಟ್ಟಾರೆ, ಸಾರ್ವಜನಿಕ ಆಸ್ತಿಗೆ ಉತ್ತಮ ದರ ಪಡೆಯುವಂತಹ ತತ್ವಕ್ಕೆ ಹಿನ್ನಡೆಯಾಗಿದೆ.
ವಿವೇಚನಾಧಿಕಾರ ವ್ಯವಸ್ಥೆಯು ಸರ್ವೋಚ್ಚ ನ್ಯಾಯಾಲಯವು “ಅನಿಯಂತ್ರಿತ” ಎಂದು ಕರೆದಿದ್ದ 2014ಕ್ಕಿಂತ ಹಿಂದಿನ ವ್ಯವಸ್ಥೆಯ ಹೊಸ ರೂಪವಾಗಿದೆ. ಸಿಎಜಿ (ಭಾರತದ ಮಹಾ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು) ಹಾಗೂ ಸರ್ವೋಚ್ಚ ನ್ಯಾಯಾಲಯವು ಕಲ್ಲಿದ್ದಲು ಗಣಿಗಳನ್ನು ಹರಾಜು ಹಾಕದೆ, ಸರ್ಕಾರಿ ಸಮಿತಿಯ ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆಯಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂದು ಎಚ್ಚರಿಸಿದ್ದರು. ಆ ಸಂದರ್ಭದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯು ಇದನ್ನು “ಕಲ್ಲಿದ್ದಲು ಹಗರಣ” ಎಂದು ಕರೆದಿತ್ತು.
“90ರ ದಶಕದಲ್ಲಿ ವಿವೇಚನಾಧಿಕಾರ ಬಳಸಿ ಹಂಚಿಕೆ ಮಾಡುವಂತಹ ಸಂದರ್ಭದಲ್ಲಿ, ದೇಶದಲ್ಲಿ ವಿದ್ಯುತ್ ಉತ್ಪಾದನೆಯ ವಿಸ್ತರಣೆಯಾಗಬೇಕಿತ್ತು. ದೇಶಕ್ಕೆ ಹೆಚ್ಚಿನ ಕಲ್ಲಿದ್ದಲ್ಲಿನ ಅವಶ್ಯಕತೆಯಿತ್ತು ಮತ್ತು ಕಲ್ಲಿದ್ದಲಿನ ಮೂಲಕ ಹಣ ಮಾಡುವ ಗುರಿ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ಸಂಪೂರ್ಣವಾಗಿ ತದ್ವಿರುದ್ದವಾಗಿದೆ. ಈಗ ಯಥೇಚ್ಛ ಕಲ್ಲಿದ್ದಲಿನ ಲಭ್ಯತೆಯ ಸಂದರ್ಭದಲ್ಲಿದ್ದೇವೆ. ಕೇವಲ ಯಾವುದೋ ಒಂದು ಗಣಿ ಪ್ರದೇಶವು ಸೂಕ್ತ ಬಿಡ್‍ದಾರನನ್ನು ಆಕರ್ಷಿಸಲು ವಿಫಲವಾಗಿದೆ ಎಂದು ಅದನ್ನು ಖಾಸಗಿ ಕಂಪನಿಗಳಿಗೆ ಸುಖಾಸುಮ್ಮನೆ ನೀಡುವ ಅವಶ್ಯಕತೆ ಇಲ್ಲ” ಎಂದು ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ನ ಸಹಾಯಕ ಪ್ರಾಧ್ಯಾಪಕರಾದ ಪ್ರಿಯಾಂಶು ಗುಪ್ತಾ ದಿ ರಿಪೋರ್ಟರ್ಸ್ ಕಲೆಕ್ಟಿವ್‌ಗೆ ತಿಳಿಸಿದರು.
“ಇಂದು ನೈಸರ್ಗಿಕ ಸಂಪತ್ತನ್ನು ತನಗೆ ಸಿಕ್ಕಷ್ಟು ಬೆಲೆಗೆ ಮಾರುವ ಅತ್ಯಾತುರದಲ್ಲಿ ಸಚಿವಾಲಯ ಇರುವುದನ್ನು ತೋರಿಸುತ್ತದೆ.”
ಭ್ರಷ್ಟಾಚಾರ ವಿರೋಧಿ ಅಲೆಯಿಂದಾಗಿ ಅಧಿಕಾರ ಪಡೆದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು, ಕಲ್ಲಿದ್ದಲು ಹಗರಣವನ್ನು ತನ್ನ ಪ್ರಚಾರದಲ್ಲಿ ಅವ್ಯಾಹತವಾಗಿ ಬಳಸಿಕೊಂಡಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಆಗಸ್ಟ್ 2014ರ ತನ್ನ ಐತಿಹಾಸಿಕ ತೀರ್ಪಿನಲ್ಲಿ, ಹಲವಾರು ವರ್ಷಗಳಿಂದ ಹಂಚಿಕೆಯಾಗಿದ್ದ 204 ಕಲ್ಲಿದ್ದಲು ಗಣಿಗಳ ಹಂಚಿಕೆಯನ್ನು ರದ್ದುಪಡಿಸಿತ್ತು. ಈ ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು: ಹರಾಜು ಪ್ರಕ್ರಿಯೆಗೆ ಒಳಪಡಿಸದೆ “ಪರಿಶೋಧನಾ ಸಮಿತಿಯ” ಮೂಲಕ ಹಂಚಿಕೆ ಮಾಡಲಾಗಿತ್ತು.
2015ರ ಹೊತ್ತಿಗೆ ಮೋದಿ ಸರ್ಕಾರವು 204 ಕಲ್ಲಿದ್ದಲು ಗಣಿಗಳನ್ನು ಪಾರದರ್ಶಕವಾಗಿ ಹರಾಜು ಹಾಕಲು ಹೊಸ ಕಾನೂನು ತಂದಿತು. ಈ 204 ಗಣಿಗಳ ಪಟ್ಟಿಯಲ್ಲಿ ಇಲ್ಲದ ಗಣಿಗಳನ್ನು ಮತ್ತೊಂದು ಕಾಯ್ದೆಯ ಅಡಿಯಲ್ಲಿ ಹರಾಜು ಹಾಕಲಾಗುತ್ತಿತ್ತು. ಈ ಕಾಯ್ದೆಯ ಅಡಿಯಲ್ಲಿ ಕೆಲವು ಗಣಿಗಳನ್ನು ಖಾಸಗಿ ಕಂಪನಿಗಳಿಗೆ ಹರಾಜು ಹಾಕಲಾಗುತ್ತಿತ್ತು ಮತ್ತು ಕೆಲವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುತ್ತಿತ್ತು. ಖಾಸಗಿ ಕಂಪನಿಗಳು ಹರಾಜಿನಲ್ಲಿ ಭಾಗವಹಿಸಲು ಕೆಲವು ನಿರ್ಬಂಧಗಳನ್ನು ಉಳಿಸಿಕೊಳ್ಳಲಾಗಿತ್ತು. ಆದರೆ 2020 ರ ಹೊತ್ತಿಗೆ ಇವನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು.
2015ರಲ್ಲಿ ಈ ಗಣಿಗಳ ಹರಾಜಿನಿಂದ ಬೊಕ್ಕಸಕ್ಕೆ ಅಂದಾಜು ಮೂರು ಲಕ್ಷ ಕೋಟಿ ರೂಪಾಯಿಗಳಷ್ಟು ಆದಾಯ ಬರಲಿದೆ ಎಂದು ಸರ್ಕಾರ ಹೇಳಿತ್ತು. ವರ್ಷಾನುವರ್ಷ ಸರ್ಕಾರವು ಹರಾಜಿನ ಮಾನದಂಡಗಳನ್ನು ಒಂದೊಂದಾಗಿ ಬದಲಾಯಿಸುತ್ತಾ, ಖಾಸಗಿ ಕಂಪನಿಗಳು ಸುಲಭವಾಗಿ ಕಡಿಮೆ ದರದಲ್ಲಿ ಗಣಿಗಳನ್ನು ಬಾಚಿಕೊಳ್ಳುವಂತಹ ವ್ಯವಸ್ಥೆ ನಿರ್ಮಾಣ ಮಾಡಿತು. ಸರ್ಕಾರದ ಅಧಿಕಾರಿಗಳು ಕಲ್ಲಿದ್ದಲು ಉತ್ಪಾದನೆಯು ಬೇಡಿಕೆಗಿಂತ ಹೆಚ್ಚಿದೆ ಎಂದು ಹೇಳುತ್ತಿರುವ ಸಂದರ್ಭದಲ್ಲಿಯೇ, ಈ ಕ್ರಮಗಳನ್ನು ಕೈಗೊಂಡಿದೆ.
ಅಂತಿಮವಾಗಿ, ತನ್ನ ಪಾರದರ್ಶಕತೆಯ ಬಗ್ಗೆ ಎದೆಯುಬ್ಬಿಸಿ ಮಾತನಾಡುತ್ತಿದ್ದ ಮೋದಿ ಸರ್ಕಾರವು, ಐದು ವರ್ಷಗಳಲ್ಲಿ ತನ್ನ ಈ ನಿರ್ಧಾರವನ್ನು ತಲೆಕೆಳಗೆ ಮಾಡಿ, ಖಾಸಗಿ ಕಂಪನಿಗಳಿಗೆ ಗಣಿಗಳನ್ನು ಉನ್ನತಾಧಿಕಾರ ಸಮಿತಿಯ ಮೂಲಕ ಹಂಚಿಕೆ ಮಾಡುವ ಸಮಾನಂತರ ವ್ಯವಸ್ಥೆಯನ್ನು ಸೃಷ್ಟಿಸಿತ್ತು.
2020ರ ಮೇನಲ್ಲಿ ಈ ಸಮಿತಿಯನ್ನು ಸೃಷ್ಟಿಸಲಾಯಿತು. ಏಕ ಬಿಡ್ ಸಲ್ಲಿಕೆಯಾದಂತಹ ಸಂದರ್ಭದಲ್ಲಿ, ಮತ್ತೊಮ್ಮೆ ಅಧಿಕಾರಿಗಳ ಗುಂಪಿನ ಮೂಲಕ ಕಲ್ಲಿದ್ದಲು ಗಣಿಗಳನ್ನು ಯಾವ ಕಂಪನಿಗೆ ನೀಡಬೇಕು ಅಥವಾ ನೀಡಬಾರದು ಎನ್ನುವ ಅಧಿಕಾರ ಹೊಂದಿರುವ ಸಮಿತಿಯ ಮೂಲಕ ಹಂಚಿಕೆ ಮಾಡಲಾಗುತ್ತಿತ್ತು. ಸ್ವತಂತ್ರ ಅಧ್ಯಯನಗಳಿಂದ ಧೃಢಪಟ್ಟಿರುವ ವಿಚಾರವೆಂದರೆ, ಈ ಗಣಿಗಳ ಏಕ ಬಿಡ್ ಸ್ವೀಕೃತಿಯ ಕಾರಣದಿಂದ ಹಂಚಿಕೆಯಾಗಿದ್ದರಿಂದ, ಇವುಗಳಿಂದ ಬಂದ ಆದಾಯವೂ ಕೂಡ ಕಡಿಮೆಯೆ ಆಗಿರುತ್ತದೆ. ಈ ಮೂಲಕ ಸರ್ವೋಚ್ಚ ನ್ಯಾಯಾಲಯ 2014ರ ತೀರ್ಪನ್ನು ಸಂಪೂರ್ಣವಾಗಿ ತಲೆಕೆಳಗೂ ಮಾಡಲಾಗಿದೆ.
ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಈ ಹೊಸ ಲೋಪಗಳು, ಖಾಸಗಿ ಕಂಪನಿಗಳು ಒಳಸಂಚು ನಡೆಸಲು ಸುಲಭ ದಾರಿಯನ್ನು ಒದಗಿಸಿದೆ. ದಿ ರಿಪೋರ್ಟರ್ಸ್ ಕಲೆಕ್ಟಿವ್ ಬಹಿರಂಗಪಡಿಸಿದಂತೆ, ಈ ಹಿಂದೆ ಕಂಪನಿಗಳು ಸ್ಪರ್ಧೆಯನ್ನು ತಪ್ಪಿಸಲು ಬಹಳ ಸಂಕೀರ್ಣವಾದ ಶೆಲ್ ಕಂಪನಿಗಳ ಸರಣಿಯನ್ನೇ ಸೃಷ್ಟಿಸಬೇಕಿತ್ತು ಮತ್ತು ನೈಜ ಸಂಭಾವ್ಯ ಸ್ಪರ್ಧಿಯಿಂದ ಕಾಟಾಚಾರದ ಭಾಗವಹಿಸಿಕೆ ಇರುತ್ತಿತ್ತು.
ಸ್ಪರ್ಧಿಗಳು ಪೂರ್ವನಿರ್ಧಾರಿತ ಒಳಸಂಚಿನ ಮೂಲಕ ಈ ಹಿಂದೆ ಹಸ್ತಕ್ಷೇಪ ನಡೆಸಿರುವ ಬಗ್ಗೆ ಕಲ್ಲಿದ್ದಲು ಸಚಿವಾಲಯ ಮತ್ತು ಸಿಎಜಿ ಎಚ್ಚರಿಸಿದ್ದವು. ಈಗ ತನಗೆ ಬೇಕಾದ ಗಣಿಯನ್ನು ತನಗೆ ಬೇಕಾದ ಕನಿಷ್ಠ ದರಕ್ಕೆ ಪಡೆಯಲು ಯಾವುದೇ ಕಂಪನಿಯು ಮಾಡಬೇಕಾಗಿರುವುದು, ತನ್ನನ್ನು ಬಿಟ್ಟು ಬೇರಾರು ಕೂಡ ಹರಾಜಿನಲ್ಲಿ ಭಾಗವಹಿಸಿದಂತೆ ನೋಡಿಕೊಂಡರೆ ಸಾಕು ಎಂದು ತಜ್ಞರು ಎಚ್ಚರಿಸುತ್ತಾರೆ.
ಈ ಲೇಖನ ಸರಣಿಯ ಮೊದಲ ಭಾಗದಲ್ಲಿ, ವಿದ್ಯುತ್ ಉತ್ಪಾದಕರ ಸಂಘವು ದೇಶದ ಅತ್ಯಂತ ದಟ್ಟ ಅರಣ್ಯ ಪ್ರದೇಶವಾದ ಸಿಂಗ್ರೌಲಿ ಅರಣ್ಯ ಪ್ರದೇಶದಲ್ಲಿನ ಮಾರಾ II ಮಹಾನ್ ಗಣಿಯನ್ನು ಸರ್ಕಾರವು ಗಣಿಗಾರಿಕೆಗೆ ತೆರೆಯಲು ಲಾಬಿ ನಡೆಸಿದ್ದನ್ನು ತಿಳಿಸಲಾಗಿತ್ತು. ಈ ಕೆಲಸದಲ್ಲಿ ಯಶಸ್ವಿಯಾದ ನಂತರ, ಸಂಘದ ಒಬ್ಬ ಸದಸ್ಯ ಮಾತ್ರ ಈ ಗಣಿಗೆ ಬಿಡ್ ಸಲ್ಲಿಸಿತು – ಅದು ಅದಾನಿ ಸಮೂಹವಾಗಿತ್ತು. ಈ ಹರಾಜಿನಲ್ಲಿ ಸ್ಪರ್ಧೆಯನ್ನು ಕೊಲ್ಲಲು, ಸಂಘದ ಇತರ ಸದಸ್ಯರುಗಳು ಸೇರಿ ಒಳಸಂಚಿನಲ್ಲಿ ಭಾಗಿಯಾಗಿರುವ ಬಗ್ಗೆ ದಿ ರಿಪೋರ್ಟರ್ಸ್ ಕಲೆಕ್ಟಿವ್ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.
“2014ರ ಕಲ್ಲಿದ್ದಲು ಹಗರಣದ ಮೂಲ ಹೂರಣವೇ ಸರ್ಕಾರವು ಗಣಿಗಳನ್ನು ಸೂಕ್ತ ದರವನ್ನು ಕಂಡುಕೊಳ್ಳದೆ ಹಂಚುವ ಮೂಲಕ ಸಾಕಷ್ಟು ಆದಾಯ ನಷ್ಟಕ್ಕೆ ಕಾರಣವಾಗಿದೆ ಎನ್ನುವುದಾಗಿತ್ತು” ಎನ್ನುತ್ತಾರೆ ಇಂಧನ ಮತ್ತು ಸ್ವಚ್ಛಗಾಳಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ನಂದಿಕೇಶ್ ಶಿವಲಿಂಗಂ.
“ಕಲ್ಲಿದ್ದಲು ಗಣಿಗಳನ್ನು ಪಾರದರ್ಶಕವಾಗಿ ಹರಾಜು ಹಾಕಬೇಕೆನ್ನುವ ಕಲ್ಪನೆಗೆ ಏನಾಯಿತು? ಆ ಕಲ್ಪನೆಯು ನಿಧಾನವಾಗಿ ಬಿಚ್ಚಲ್ಪಡುತ್ತಿದೆ.”
ಪೂರ್ಣಗೊಂಡ ವೃತ್ತ
ಕಾರ್ಪೊರೇಟ್ ಕಂಪನಿಗಳಲ್ಲಿ, ಮೋದಿ ಸರ್ಕಾರದ ಮೊದಲ ಸುತ್ತಿನ ಕಲ್ಲಿದ್ದಲು ಹರಾಜು ಸಾಕಷ್ಟು ಆಸಕ್ತಿ ಮತ್ತು ಸ್ಪರ್ಧೆಯನ್ನು ಸೃಷ್ಠಿಸಿತ್ತು.
2015ರ ಜನವರಿಯಲ್ಲಿ ಅಂದಿನ ಗೃಹ ಮಂತ್ರಿಯಾಗಿದ್ದ ರಾಜನಾಥ್ ಸಿಂಗ್ ಅವರು “ಕಲ್ಲಿದ್ದಲು ಗಣಿಗಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಯಲ್ಲಿ ಪಾರದರ್ಶಕತೆ ತರುವ ಬಗ್ಗೆ ಗಮನ ಹರಿಸಿದ್ದೇವೆ” ಎಂದು ಹೇಳಿದ್ದರು, ಮುಂದುವರೆದು, “ಬಂಡವಾಳ ಹೂಡಿಕೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಹೆಚ್ಚಿನ ಅಭಿವೃದ್ಧಿಗೆ ಅವಶ್ಯಕವಾಗಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಮರಳಿ ತರಲು ಯಶಸ್ವಿಯಾಗಿದ್ದೇವೆ” ಎಂದಿದ್ದರು.
ಆದರೆ ಮುಂದಿನ ಸುತ್ತಿನ ಹರಾಜುಗಳಲ್ಲಿ, ಸ್ಪರ್ಧಿಗಳ ಸಂಖ್ಯೆ ಇಳಿಕೆಯಾಗಿತ್ತು, ತತ್ಫಲವಾಗಿ ಸರ್ಕಾರಕ್ಕೆ ಬಂದ ಆದಾಯವು ಕೂಡ ಇಳಿಕೆ ಕಂಡಿತ್ತು.
ಮೊದಲ ಐದು ಸುತ್ತಿನ ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರವು 71 ಕಲ್ಲಿದ್ದಲು ಗಣಿಗಳನ್ನು ಹರಾಜಿಗಿಟ್ಟಿತ್ತು, ಅದರಲ್ಲಿ 31 ಮಾರಾಟವಾದವು. ಕಲ್ಲಿದ್ದಲು ಗಣಿಗಳ ಹರಾಜು ಆಸಕ್ತಿಯನ್ನು ಸೃಷ್ಟಿಸಲು ವಿಫಲವಾದಾಗ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯನ್ನು ಪರಿಚಯಿಸಿ, ಕಲ್ಲಿದ್ದಲು ಕ್ಷೇತ್ರವನ್ನು ಸಂಪೂರ್ಣವಾಗಿ ತೆರೆದಿಟ್ಟರು. ಅವರ ಮಾತುಗಳಲ್ಲೇ ಹೇಳಬೇಕೆಂದರೆ “ದಶಕಗಳ ಲಾಕ್ಡೌನ್” ನಿಂದ ಬಿಡುಗಡೆ ಮಾಡಲಾಗಿತ್ತು. ಈ ಸಮಯದಲ್ಲಿ ದೇಶವು ಕೋವಿಡ್ – 19 ನಿಂದ ತತ್ತರಿಸಿತ್ತು.
ಮೋದಿ ಅವರು ವಾಣಿಜ್ಯ ಗಣಿಗಾರಿಕೆಗೆ ತೆರೆಯುವ ಮುನ್ನ, ನಿರ್ದಿಷ್ಟ ಬಳಕೆದಾರರು ಮಾತ್ರ, ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ಭಾಗವಹಿಸಬಹುದಿತ್ತು – ಉದಾಹರಣೆಗೆ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಸ್ಥಾವರ ನಡೆಸುವವರು. ವಾಣಿಜ್ಯ ಗಣಿಗಾರಿಕೆಯ ವ್ಯವಸ್ಥೆಯಡಿ, ಮೋದಿ ಸರ್ಕಾರವು, ಕಲ್ಲಿದ್ದಲು ಗಣಿ ಹರಾಜಿನಲ್ಲಿ ಭಾಗವಹಿಸುವಿಕೆಗೆ ಇದ್ದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಿತು.
ಅದು, ಹರಾಜು ಪ್ರಕ್ರಿಯೆಯ ನಿಯಮಾವಳಿಗಳನ್ನು ಬದಲಾಯಿಸಿತು. ಮೋದಿ ಸರ್ಕಾರದ ಹಿಂದಿನ ಕಲ್ಲಿದ್ದಲು ಹರಾಜು ವ್ಯವಸ್ಥೆಯಲ್ಲಿ, ತನ್ನದೇ ವಿದ್ಯುತ್ ಸ್ಥಾವರ ಹೊಂದಿದ ಕಂಪನಿಯು, ಗಣಿ ಪ್ರದೇಶಕ್ಕೆ ಹೆಚ್ಚಿನ ದರ ನೀಡಿದರೆ ಯಶಸ್ವಿಯಾಗುತ್ತಿತ್ತು. ಆದರೆ, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿ, “ಆದಾಯ ಹಂಚಿಕೆ”ಯು ಆದ್ಯತೆ ಪಡೆಯಿತು – ಅಂದರೆ, ಕಂಪನಿಯು ತಾನು ಉತ್ಪಾದಿಸಿದ ಕಲ್ಲಿದ್ದಲಿನ ಆದಾಯದಲ್ಲಿ ಎಷ್ಟು ಶೇಕಡಾ ಆದಾಯವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಸಿದ್ದವಿದೆ ಎನ್ನುವುದಾಗಿತ್ತು. ಸರ್ಕಾರಕ್ಕೆ ಹೆಚ್ಚಿನ ಪಾಲು ನೀಡುವ ಕಂಪನಿಯು ಜಯಿಸುತ್ತಿತ್ತು.
ಮೊದಲ ಸುತ್ತಿನ ವಾಣಿಜ್ಯ ಹರಾಜಿನ ವ್ಯವಹಾರವನ್ನು ಮತ್ತಷ್ಟು ಹಿತಕರವಾಗಿಸಲು – ಕಂಪನಿಯು ಬಿಡ್ ಮಾಡಬಹುದಾದ ‘ಕನಿಷ್ಠ ದರ’ ವನ್ನು (Floor Price) ಕಡಿಮೆ ಮಾಡಲಾಯಿತು.
ಹರಾಜಿನಲ್ಲಿ ಭಾಗವಹಿಸಲು ಇದ್ದ ನಿರ್ಭಂಧಗಳನ್ನು ಮತ್ತು ಕನಿಷ್ಠ ಅರ್ಹತೆಗಳನ್ನು ಬಹುತೇಕ ಕಡಿತಗೊಳಿಸಿದ ಬಳಿಕವೂ, ಹರಾಜಿಗೆ ವ್ಯಕ್ತವಾದ ಆಸಕ್ತಿ ಅಷ್ಟಕಷ್ಟೆ. ಅನೇಕ ಕಲ್ಲಿದ್ದಲು ಗಣಿಗಳು ಮಾರಾಟವಾಗದೆ ಉಳಿದವು, ಮತ್ತೆ ಅನೇಕ ಗಣಿಗಳಿಗೆ ಕೇವಲ ಒಂದೊಂದೇ ಬಿಡ್ ಸ್ವೀಕೃತಿಯಾಗಿತ್ತು.
ಏಕ ಬಿಡ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರವು, ‘ಆವರ್ತ ಹರಾಜು’ (Rolling Auction) ವ್ಯವಸ್ಥೆಯನ್ನು ಅಳವಡಿಸಿಕೊಂಡಿತು, ಇದರಲ್ಲಿ ಏಕ ಬಿಡ್ ಸಲಿಕೆಯಾಗಿದ್ದಂತಹ ಗಣಿಗಳನ್ನು ಮತ್ತೊಂದು ಸುತ್ತಿನ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುತ್ತಿತ್ತು.
ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜು ಪ್ರಕ್ರಿಯೆಯನ್ನು ಘೋಷಿಸುವ ಮೊದಲೇ, ಸರ್ಕಾರವು, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕಾನೂನು ವ್ಯವಹಾರಗಳು ಹಾಗೂ ಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯನ್ನು ಸೃಷ್ಟಿಸಿತ್ತು. ಈ ಸಮಿತಿಯ ಒಂದಾನೊಂದು ಕೆಲಸವೆಂದರೆ, ಹರಾಜ ಪ್ರಕ್ರಿಯೆಯಲ್ಲಿ ಕಲ್ಲಿದ್ದಲು ಗಣಿಯೊಂದಕ್ಕೆ, ನಿರಂತರ ಹರಾಜು ಪ್ರಕ್ರಿಯೆಯ ನಂತರವೂ ಏಕ ಬಿಡ್ ಸ್ವೀಕೃತಿಯಾಗಿದ್ದರೆ, ಆ ಗಣಿಯ ಹಂಚಿಕೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದು.
ಹರಾಜು ಪ್ರಕ್ರಿಯೆಯು ಎರಡು ಹಂತಗಳನ್ನು ಹೊಂದಿದೆ – ತಾಂತ್ರಿಕ ಅರ್ಹತೆ ಮತ್ತು ಹಣಕಾಸು ಬಿಡ್. ತಾಂತ್ರಿಕ ಸುತ್ತಿನಲ್ಲಿ, ನಮೂದಿತ ಆರಂಭಿಕ ದರದ ಆಧಾರದ ಮೇಲೆ ಬಿಡ್‍ದಾರರ ಶ್ರೇಣಿಕೃತ ಪಟ್ಟಿ ಮಾಡಲಾಗುತ್ತದೆ. ಟೆಂಡರ್ ಹರಾಜು ಪ್ರಕ್ರಿಯೆ ಮುಂದುವರೆಯಲು, ಕನಿಷ್ಠ ಎರಡು ಕಂಪನಿಗಳು ತಾಂತ್ರಿಕ ಸುತ್ತಿನಲ್ಲಿ ಅರ್ಹತೆ ಪಡೆದುಕೊಂಡಿರಬೇಕು, ಒಂದೊಮ್ಮೆ ಎರಡಕ್ಕಿಂತ ಕಡಿಮೆ ಬಿಡ್ ಸ್ವೀಕೃತಿಯಾಗಿದ್ದರೆ ಆ ಹರಾಜನ್ನು ರದ್ದುಪಡಿಸಲಾಗುತ್ತದೆ.
ಆದರೆ ಮೊದಲ ಸುತ್ತಿನ ಹರಾಜಿನಲ್ಲಿ, ಹರಾಜಾಗದೆ ಬಾಕಿ ಉಳಿದ ಗಣಿಗಳಿಗಾಗಿ ನಡೆಸಲಾಗುವ ಎರಡನೇ ಸುತ್ತಿನ ಹರಾಜಿನ ಟೆಂಡರ್ ದಾಖಲೆಗಳಲ್ಲಿ ಈ ಕನಿಷ್ಠ ಅರ್ಹತೆಯನ್ನು ತೆಗೆದುಹಾಕಲಾಗಿದೆ. ಈಗ ಕೇವಲ ಒಂದೇ ಕಂಪನಿ ಎರಡನೇ ಸುತ್ತಿಗೆ ಪ್ರವೇಶ ಪಡೆಯಬಹುದು ಮತ್ತು ಅದರ ಆರಂಭಿಕ ಪ್ರಸ್ತಾವಿತ ದರವನ್ನು ಒಪ್ಪಿಕೊಳ್ಳಲಾಗುತ್ತದೆ. ತದನಂತರ ಈ ವಿಚಾರವನ್ನು ಉನ್ನತಾಧಿಕಾರ ಸಮಿತಿಗೆ ವರ್ಗಾಯಿಸಲಾಗುತ್ತದೆ ಮತ್ತು ಅದು ಈ ಗಣಿಯನ್ನು ಹಂಚಿಕೆ ಮಾಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುತ್ತದೆ.
2022, ಆಗಸ್ಟ್ 17ರಂದು ಉನ್ನತಾಧಿಕಾರ ಸಮಿತಿಯು ಪೂರ್ವ ಗೋಂಡಬಹೇರ ಉಜ್ಜೇನಿ ಗಣಿಯನ್ನು ಅದಾನಿ ಒಡೆತನದ, ಎಂಪಿ ನ್ಯಾಚುರಲ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಗೆ ಹಂಚಿಕೆ ಮಾಡಲು ನಿರ್ದೇಶಿಸಿತು. ಅದಾನಿ ಕಂಪನಿಯು, ಕೇವಲ 5% ಆದಾಯ ಹಂಚಿಕೊಳ್ಳುವ ಷರತ್ತಿನೊಂದಿಗೆ, ಈ ಗಣಿಯನ್ನು ಯಾವುದೇ ಸ್ಪರ್ಧೆಯಿಲ್ಲದೆ ತನ್ನದಾಗಿಸಿಕೊಂಡಿತು. ತುಲನಾತ್ಮಕವಾಗಿ ನೋಡಿದರೆ, ಮೊದಲ ಸುತ್ತಿನ ವಾಣಿಜ್ಯ ಹರಾಜಿನಲ್ಲಿ ಆದಾಯ ಪಾಲು ಹಂಚಿಕೆಯನ್ನು ಕನಿಷ್ಠ 4% ಎಂದು ನಿಗಧಿಪಡಿಸಲಾಗಿತ್ತು.
ಪೂರ್ವ ಗೋಂಡಬಹೆರಾ ಉಜ್ಜೇನಿ ಗಣಿಯು ಪುನರಾವರ್ತಿತ ಹರಾಜು ಪ್ರಕ್ರಿಯೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಿಡ್‍ಗಳನ್ನು ಆಕರ್ಷಿಸಲು ವಿಫಲವಾದ ನಂತರ, ಉನ್ನತಾಧಿಕಾರ ಸಮಿತಿಯ ಮೂಲಕ ಹಂಚಿಕೆ ಮಾಡಲಾದ ಎರಡು ಗಣಿಗಳಲ್ಲಿ ಒಂದಾಗಿದೆ. ಮತ್ತೊಂದು ಗಣಿಯಾದ ತೋಕಿಸುಡ್ II ಗಣಿಯನ್ನು ಟ್ವೆಂಟಿಫಸ್ಟ್ ಸೆಂಚುರಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಹಂಚಲಾಗಿದೆ.
ಮೇಲಿನ ಎರಡು ಪ್ರಕರಣಗಳು, ಕಳೆದ ಮೂರು ವರ್ಷಗಳಲ್ಲಿ ಏಕ ಬಿಡ್ ಸ್ವೀಕೃತಿ ಕಾರಣದಿಂದ ಹಂಚಿಕೆ ಮಾಡಿರುವ ಕನಿಷ್ಠ 10 ಪ್ರಕರಣಗಳಲ್ಲಿ ಸೇರಿರುವವು. “ಈ ಮುಂಚೆ ಪರಿಶೋಧನಾ ಸಮಿತಿ ಗಣಿಗಳನ್ನು ಹಂಚುತ್ತಿತ್ತು. ಈಗ ಉನ್ನತಾಧಿಕಾರ ಸಮಿತಿ ಇದೆ. ಕೆಲಸ ಒಂದೇ, ಆದರೆ ಹೆಸರು ಮಾತ್ರ ಬದಲಾಗಿದೆ” ಎಂದು ಐಐಎಂ ಲಕ್ನೋದ ಪ್ರಿಯಾಂಶು ಗುಪ್ತಾ ದಿ ರಿಪೋರ್ಟರ್ಸ್ ಕಲೆಕ್ಟಿವ್‌ಗೆ ತಿಳಿಸಿದರು.
ಈ ಹಂಚಿಕೆ ವ್ಯವಸ್ಥೆಯು ದೇಶವನ್ನು ಒಂದು ಸುತ್ತು ಹಾಕಿಸಿ, ಉತ್ತಮ ದರ ನಿಗದಿಯನ್ನು ಖಾತ್ರಿಪಡಿಸಿಕೊಳ್ಳುಲು ಸರ್ವೋಚ್ಚ ನ್ಯಾಯಾಲಯ ಮತ್ತು ಕಾನೂನು ಮಾರ್ಪಾಡುಗಳ ಮೂಲಕ ಪರಿಹರಿಸಲು ಪ್ರಯತ್ನಿಸಿದ್ದ ಮೂಲ ಸಮಸ್ಯೆಯಲ್ಲಿದ್ದಲ್ಲಿಗೆ ತಂದು ನಿಲ್ಲಿಸಿದೆ.
ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನ ನಾಲ್ಕು ಸುತ್ತುಗಳನ್ನು ವಿಶ್ಲೇಷಿಸಿರುವ ಗುಪ್ತಾ ಅವರ ಪ್ರಕಾರ, ಹರಾಜಿನಲ್ಲಿ ಭಾಗವಹಿಸಿದ್ದ ಕಂಪನಿಗಳು ಕಡಿಮೆಯಾದಂತೆ, ಸರ್ಕಾರದ ಆದಾಯವು ಕುಸಿತ ಕಂಡಿತು. ಏಕ ಬಿಡ್ ಸ್ವೀಕೃತಿಯಾಗಿದ್ದ ಗಣಿಗಳಿಂದ ಸರ್ಕಾರಕ್ಕೆ ಬಂದ ಆದಾಯದ ಪಾಲು ಕನಿಷ್ಠವಾಗಿದೆ.
“ಕಲ್ಲಿದ್ದಲು ಗಣಿಗಳ ಬಗ್ಗೆ ಆಸಕ್ತಿ ಇಲ್ಲವೆಂದರೆ, ಖಂಡಿತವಾಗಿಯೂ ಅದು ಬೇಡಿಕೆ ಇಲ್ಲದಿರುವುದನ್ನು ತೋರಿಸುತ್ತದೆ. ಆದರೆ ಬೇಡಿಕೆ ಹೆಚ್ಚಾಗುವ ತನಕ ಕಾಯದೆ, ಸಚಿವಾಲಯವು ಯಾರು ಬಾಗಿಲು ಬಡಿಯುತ್ತಾರೊ ಅವರಿಗೆ ಗಣಿಯನ್ನು ಒಪ್ಪಿಸಲು ತೀರ್ಮಾನಿಸಿದೆ” ಎಂದು ಶಿವಲಿಂಗಂ ಅವರು ಬೆರಳು ತೋರಿಸುತ್ತಾರೆ.
ಮುಂದುವರೆದು, “ಪ್ರಸ್ತುತ ನಮಗೆ ವರ್ಷಕ್ಕೆ 800 – 900 ದಶಲಕ್ಷ ಟನ್ (80 – 90 ಕೋಟಿ ಟನ್) ಕಲ್ಲಿದ್ದಲಿನ ಅವಶ್ಯಕತೆ ಇದೆ, ಆದರೆ ನೀವು ಸುಮಾರು ಇನ್ನೂರು ಕೋಟಿ ಟನ್ ಸಂಗ್ರಹದ ಗಣಿಗಳನ್ನು ಹಂಚಿಕೆ ಮಾಡಿದರೆ ನಿಮಗೆ ಬೇಡಿಕೆ ಎಲ್ಲಿಂದ ಬರಬೇಕು” ಎಂದು ಪ್ರಶ್ನಿಸುತ್ತಾರೆ ಶಿವಲಿಂಗಂ.
ಭಾರತಕ್ಕೆ ಎಷ್ಟು ಕಲ್ಲಿದ್ದಲಿನ ಅವಶ್ಯಕತೆ ಇದೆ ಎನ್ನುವುದನ್ನು ವಿದ್ಯುತ್ ಬೇಡಿಕೆಯ ಆಧಾರದ ಮೇಲೆ ಅಂದಾಜಿಸಲಾಗುತ್ತದೆ. ದೇಶದಲ್ಲಿನ 85% ಕಲ್ಲಿದ್ದಲನ್ನು ವಿದ್ಯುತ್ ಕ್ಷೇತ್ರವು ಬಳಸುತ್ತದೆ. ದೇಶದ ಬಹುಪಾಲು ವಿದ್ಯುತ್ ಉತ್ಪಾದನೆಯ – ನಿಖರವಾಗಿ ಹೇಳಬೇಕೆಂದರೆ 75% ಕಲ್ಲಿದ್ದಲು ಆಧಾರಿತವಾಗಿದೆ.
2018ರಲ್ಲಿ ಸರ್ಕಾರಿ ಒಡೆತನದ ಕೋಲ್ ಇಂಡಿಯಾ (Coal India) ಪ್ರಕಟಿಸಿದ ಎ ಕೋಲ್ ವಿಷನ್ (A Coal Vision) ದಾಖಲೆಯ ಪ್ರಕಾರ, ಭಾರತದ 2030ರ ವರೆಗಿನ ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲಿನ ಅವಶ್ಯಕತೆಯನ್ನು 2017 ರವರೆಗೆ ಹಂಚಿಕೆ ಮಾಡಿರುವ ಕಲ್ಲಿದ್ದಲು ಗಣಿಗಳಿಂದ ಪೂರೈಸಿಕೊಳ್ಳಬಹುದು.
ಆದರೆ, ಕೋವಿಡ್ ನಂತರ ಮತ್ತು ವಿಶ್ವದ ಆರ್ಥಿಕ ಹಿಂಜರಿತದ ತುರುವಾಯು ವಿದ್ಯುತ್ ಬೇಡಿಕೆ ಅಂದಾಜನ್ನು ಹಲವರು ಪರಿಷ್ಕರಿಸಿದ್ದಾರೆ.
ದೇಶದ ವಿದ್ಯುತ್ ಬೇಡಿಕೆಯ ಬಗ್ಗೆ 2023ರಲ್ಲಿ, ಆದಿತ್ಯ ಲೊಲ್ಲ, ಶಿವಲಿಂಗಂ, ಗುಪ್ತ ಮತ್ತು ಸುನಿಲ್ ದಹಿಯಾ ಅವರುಗಳು ಪ್ರಕಟಿಸಿದ ವರದಿಯ ಪ್ರಕಾರ, ಸಾಂಪ್ರದಾಯಿಕ ದರದಲ್ಲಿ ದೇಶದ ವಿದ್ಯುತ್ ಬೇಡಿಕೆಯ ಏರಿಕೆಯನ್ನು 6% ಎಂದು ಅಂದಾಜಿಸಿದರೆ, 2030 ರಲ್ಲಿನ ಒಟ್ಟು ವಿದ್ಯುತ್ ಉತ್ಪಾದನೆಗೆ ಬೇಕಾಗಿರುವ ಕಲ್ಲಿದ್ದಲು 1,200 ದಶಲಕ್ಷ ಟ್ನ್ (120 ಕೋಟಿ ಟನ್). ಸರ್ಕಾರವು 2030ರ ವರೆಗೆ 2,200 ದಶಲಕ್ಷ ಟನ್ (220 ಕೋಟಿ ಟನ್) ಉತ್ಪಾದನೆ ಮಾಡಬಹುದಾದಷ್ಟು ಕಲ್ಲಿದ್ದಲು ಗಣಿಗಳನ್ನು ಹಂಚಿಕೆ ಮಾಡಿರುವುದನ್ನು ಬೊಟ್ಟು ಮಾಡುತ್ತಾರೆ.
ಇಂದನ ಮತ್ತು ಸ್ವಚ್ಛ ಗಾಳಿ ಅಧ್ಯಯನ ಕೇಂದ್ರವು ಈಗಾಗಲೇ ಹಂಚಿಕೆ ಮಾಡಿರುವ ಕಲ್ಲಿದ್ದಲು ಗಣಿಗಳು 2030ರ ಹೊತ್ತಿಗಿನ ಬೇಡಿಕೆಗಿಂತ 15-20% ಹೆಚ್ಚಾಗಿರುತ್ತದೆ ಎಂದು ಈ ಹಿಂದೆಯೇ ತೋರಿಸಿತ್ತು.
ಆದರೆ ಈ ಯಾವ ವಿಚಾರವೂ ಕಲ್ಲಿದ್ದಲು ಸಚಿವಾಲಯಕ್ಕೆ ತಿಳಿದಿಲ್ಲವೆಂದಲ್ಲ. ಮಾರ್ಚ್ 2023ರಲ್ಲಿ ಭಾರತವು 2026ರಿಂದ ಕಲ್ಲಿದ್ದಲನ್ನು ರಫ್ತು ಮಾಡುತ್ತದೆ ಎಂದು ಗಣಿ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದರು.
ಅನುವಾದ; ಸಿ ಎನ್ ದೀಪಕ್