ಬೆಂಗಳೂರು; ಜನರಲ್ ಸ್ಟೋರ್, ಬ್ಯಾಂಗಲ್ ಸ್ಟೋರ್, ಸಾಮಾನ್ಯ ಹೋಟೆಲ್, ಕಿರಾಣಿ ಅಂಗಡಿ, ಹೋಟೆಲ್ ತಿಂಡಿ ತಯಾರಿಸುವ ಸ್ಥಳ, ದಾಸ್ತಾನು ಕೋಣೆ ಹೀಗೆ ರಾಜ್ಯದಲ್ಲಿ ಎಲ್ಲೆಂದರಲ್ಲಿ ಎಗ್ಗಿಲ್ಲದೇ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಕಾರು, ಆಟೋಗಳಲ್ಲಿಯೂ ಮದ್ಯ ತಂದು ದಿನಿತ್ಯವೂ ಮಾರಾಟ ಮಾಡಲಾಗುತ್ತಿದೆ.
ಈ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ನಿರಂತರವಾಗಿ ದೂರುಗಳೂ ಸಲ್ಲಿಕೆಯಾಗುತ್ತಿವೆ. ಆದರೂ ಕಾಂಗ್ರೆಸ್ ಸರ್ಕಾರವು ಅಕ್ರಮ ಮದ್ಯ ಮಾರಾಟವನ್ನು ತಡೆಯಲು ಯಾವುದೇ ಕ್ರಮ ವಹಿಸಿಲ್ಲ!.
ಅಷ್ಟೇ ಅಲ್ಲದೇ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿ ಒಡತಿಯರಿಗೆ ನೇರವಾಗಿ ಪಾವತಿಯಾಗುತ್ತಿರುವ 2,000 ರುಪಾಯಿಯನ್ನೂ ಮನೆಯ ಗಂಡಸರು ಕಸಿದು ಮದ್ಯದ ಅಂಗಡಿಗಳಿಗೆ ಸುರಿಯುತ್ತಿದ್ದಾರೆ!
ರಾಜ್ಯವು ಕುಡುಕರ ತೋಟವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರವನ್ನು ಟೀಕೆಗೆ ಗುರಿ ಮಾಡಿರುವ ಬೆನ್ನಲ್ಲೇ ಇದೀಗ ರಾಜ್ಯದ ಬಹುತೇಕ ಕಡೆಗಳಲ್ಲಿನ ಜನರಲ್ ಸ್ಟೋರ್, ಬ್ಯಾಂಗಲ್ ಸ್ಟೋರ್‍ಗಳಲ್ಲಿಯೂ ಎಗ್ಗಿಲ್ಲದೆಯೇ ಮದ್ಯ ಮಾರಾಟ ಆಗುತ್ತಿದೆ ಎಂದು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿರುವ ದೂರುಗಳು ಮುನ್ನೆಲೆಗೆ ಬಂದಿವೆ.
ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಎಲ್ಲಾ ಯೋಜನೆಗಳಿಗೆ ಸಾವಿರಾರು ಕೋಟಿ ರುಪಾಯಿಗಳನ್ನು ಹೊಂದಿಸಲು ಮದ್ಯ ಮಾರಾಟದ ಆದಾಯವನ್ನೇ ನೆಚ್ಚಿಕೊಂಡಿದೆ ಎಂದು ಅಬಕಾರಿ ಇಲಾಖೆಯ ಆಯುಕ್ತರು ಎಂದು ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದರು.
ಮದ್ಯ ಮಾರಾಟದಲ್ಲಿ ನಿರೀಕ್ಷೆ ಗುರಿಗೂ ಮೀರಿ ಹೆಚ್ಚು ಮಾರಾಟ ಮಾಡಬೇಕು ಎಂದು ಸಚಿವ ಆರ್ ಬಿ ತಿಮ್ಮಾಪುರ ಅವರೂ ಸಹ ಅಧಿಕಾರಿಗಳಿಗೆ ಸೂಚಿಸಿದ್ದರು. ಇತ್ತೀಚೆಗೆ ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಮದ್ಯ ಮಾರಾಟ ಆದಾಯ ಕುಂಠಿತವಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಗ್ರಾಮಾಂತರ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗುತ್ತಿದೆ ಎಂದು ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗುತ್ತಿವೆ. ಆದರೂ ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಮೌನ ವಹಿಸಿದ್ದಾರೆ. ಹೀಗಾಗಿ ಗ್ರಾಮಸ್ಥರು ನೇರವಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಿಗೆ ದೂರು ಸಲ್ಲಿಸುತ್ತಿದ್ದಾರೆ. ಆದರೆ ಗೃಹ ಸಚಿವರ ಕಾರ್ಯಾಲಯವು ಆ ಎಲ್ಲಾ ದೂರುಗಳನ್ನು ಜಿಲ್ಲಾ ಎಸ್‌ಪಿ ಗಳಿಗೆ ರವಾನಿಸಿ ಕೈತೊಳೆದುಕೊಳ್ಳುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್, ನಿಡುವಳಿ, ವಾಟೇಖಾನ್‌ನ ಗ್ರಾಮಸ್ಥರು ಗೃಹ ಸಚಿವರಿಗೆ ನೇರವಾಗಿ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಿಡುವಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಎಗ್ಗಿಲ್ಲದೇ ಜನರಲ್ ಸ್ಟೋರ್, ಬ್ಯಾಂಗಲ್ ಸ್ಟೋರ್‍ಗಳಲ್ಲಿ ಮದ್ಯ ಮಾರಾಟ ಆಗುತ್ತಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕೂಲಿ ಕಾರ್ಮಿಕ ಮಹಿಳೆಯರು ನೇರವಾಗಿ ಬಾಧಿತರಾಗಿರುವುದು ದೂರಿನಿಂದ ತಿಳಿದು ಬಂದಿದೆ.
‘ನಾವು ಕೂಲಿ ಕಾರ್ಮಿಕರು. ಹೆಚ್ಚಿನ ಪಾಲು ಮಹಿಳೆಯರು. ಹೆಚ್ಚಿನವರು ಎಸ್ ಸಿ , ಎಸ್ ಟಿ ಸಮುದಾಯಕ್ಕೆ ಸೇರಿದವರು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಜನರಲ್ ಸ್ಟೋರ್, ಬ್ಯಾಂಗಲ್ ಸ್ಟೋರ್, ಹೋಟೆಲ್‌ಗಳಲ್ಲಿ ಎಗ್ಗಿಲ್ಲದೇ ಕಳಪೆ ಮಟ್ಟದ ಬ್ರಾಂದಿ ಮಾರಾಟ ಮಾಡಲಾಗುತ್ತಿದೆ. 35 ರು ಬೆಲೆ ಇರುವ ಬ್ರಾಂದಿಯನ್ನು 70 ರು.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗಂಡಂದಿರುವ ದಿನನಿತ್ಯ ಕುಡಿದು ಬರುವುದು, ದಿನ ನಿತ್ಯ ಗಲಾಟೆ ಮಾಡುವುದು, ಹೊಡೆಯುವುದು, ಹಿಂಸಿಸುವುದು ನಡೆಯುತ್ತಿದೆ,’ ಎಂದು ದೂರಿನಲ್ಲಿ ಮಹಿಳೆಯರು ಗೋಳು ತೋಡಿಕೊಂಡಿದ್ದಾರೆ.
ಅಲ್ಲದೇ ‘ ಪಡಿತರ ಚೀಟಿಯಿಂದ ತಂದ ಅಕ್ಕಿಯನ್ನು ಹೋಟೆಲ್‌ಗೆ ಕೊಂಡೊಯ್ದು ಮಾರಾಟ ಮಾಡಿ ಬ್ರಾಂದಿ ಸೇವಿಸುತ್ತಿದ್ದಾರೆ. ಹೋಟೆಲ್‌ಗಳಲ್ಲಿಯೇ ಬ್ರಾಂದಿ ಮಾರಾಟ ಮಾಡಲಾಗುತ್ತಿದೆ. ಮಹಿಳೆಯರಿಗೆ ಬರುವ 2 ಸಾವಿರ ರು.ಗಳನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬರಲು ಹಿಂಸೆಯನ್ನೂ ನೀಡಲಾಗುತ್ತಿದೆ. ಇದು ಮಾನಸಿಕ ಮತ್ತು ದೈಹಿಕ ಹಿಂಸೆಯಾಗಿದೆ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ನಿಡುವಾಳೆಯಲ್ಲಿರುವ ಶಾಂತಿ ಹೋಟೆಲ್ ಮತ್ತು ಗಿರಿ ಹೋಟೆಲ್‌ಗಳಿಗೆ ಪಡಿತರವನ್ನು ಮಾರಾಟ ಮಾಡಿ ಅಲ್ಲಿಂದಲೇ ಮದ್ಯವನ್ನೂ ಖರೀದಿಸಲಾಗುತ್ತಿದೆ ಎಂದು ಗುರುತರವಾಗಿ ದೂರಿರುವ ಮಹಿಳೆಯರು, ಬಾಳೂರು ಪೊಲೀಸ್ ಸ್ಟೇಷನ್ ಇನ್ಸ್‌ಪೆಕ್ಟರ್‍ಗೆ ಮಾಹಿತಿ ಇದ್ದರೂ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಆಪಾದಿಸಿದ್ದಾರೆ. ‘ ಪ್ರತಿ ತಿಂಗಳೂ ಪೊಲೀಸ್ ಇನ್ಸ್‌ಪೆಕ್ಟರ್‍ಗೆ 3 ಸಾವಿರ ರು.ನಿಂದ 5 ಸಾವಿರ ತನಕ ಮಾಮೂಲಿ ನೀಡಲಾಗುತ್ತಿದೆ. ಅಲ್ಲದೇ ಬೆಳಗಿನ ಜಾವ 5 ಗಂಟೆಯಿಂದಲೇ ಕಾರು, ಆಟೋಗಳಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ,’ ಎಂದೂ ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.
ದೂರು ನೀಡಿರುವ ಮಹಿಳೆಯರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಹೆಸರು, ಅಂಗಡಿಗಳ ಮಾಲೀಕರ ಹೆಸರನ್ನೂ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮರ್ಕಲ್‌ನ ಕಾಗಿನಕೊಂಡದ ಮೋಹನ್ ದಾಸ್ ಪೂಜಾತಿ, ಯೋಗೇಶ್, ಸುಬ್ಬರಾಯ ಎಂಬುವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಬೆಳಿಗ್ಗೆಯಿಂದಲೇ ನಿರಂತರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ವಿಠಲ್, ಲಲಿತ, ಸುಶೀಲ, ಉದಯ, ಸುರೇಶ್ ಭಂಡಾರಿ, ದೇಜಪ್ಪ, ಭರತ್, ನೀಲಯ್ಯ, ರವಿ, ಸುಮಿತ್ರ ಆಚಾರಿ ಎಂಬುವರಿಗೆ ಸೇರಿದ ಅಂಗಡಿ, ಮುಂಗಟ್ಟು, ತೋಟದ ಮನೆ, ಹೋಟೆಲ್‌ನಲ್ಲಿ ತಿಂಡಿ ತಯಾರಿಸುವ ಕೋಣೆ, ದವಸ ಧಾನ್ಯಗಳ ದಾಸ್ತಾನು ಮಾಡುವ ಕೋಣೆ, ಸೌದೆ ಕೊಟ್ಟಿಗೆ, ಫ್ಯಾನ್ಸಿ ಸ್ಟೋರ್‍ಗಳಲ್ಲಿಯೂ ಅಕ್ರಮವಾಗಿ ನಿರಂತರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ 35,000 ಕೋಟಿ ರುಪಾಯಿಗಳಿಗೂ ಮೀರಿ ಅತ್ಯಧಿಕ ರಾಜಸ್ವ ಸಂಗ್ರಹಿಸುವ ಭಾಗವಾಗಿಯೇ ಮದ್ಯ ಮಾರಾಟ ಗುರಿಯನ್ನೂ ಹೆಚ್ಚಳ ಮಾಡುವುದು ಮತ್ತು ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಕುರಿತೂ ರಾಜ್ಯ ಸರ್ಕಾರವು ಗಂಭೀರವಾಗಿ ಚಿಂತಿಸಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಮೇಲೆ ಒತ್ತಡವನ್ನೂ ಹೇರಲಾಗುತ್ತಿದೆ. ಅಬಕಾರಿ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ 2023ರ ಜೂನ್ 9ರಂದು ನಡೆಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಆರ್ ಬಿ ತಿಮ್ಮಾಪುರ್ ಅವರು ಈ ನಿರ್ದೇಶನ ನೀಡಿದ್ದರು.
‘ಒಟ್ಟಾರೆಯಾಗಿ ಘನ ಸರ್ಕಾರವು ಕರ್ನಾಟಕ ಜನತೆಗೆ ರೂಪಿಸಿರುವ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಬಕಾರಿ ಇಲಾಖೆಯಿಂದ ಹೆಚ್ಚಿನ ಅಂದರೆ 35,000 ಕೋಟಿ ರು.ಗಳ ರಾಜಸ್ವ ಸಂಗ್ರಹಣೆಯು ನಿರೀಕ್ಷೆಯಲ್ಲಿದ್ದು. ಪ್ರಸ್ತುತ ವರ್ಷಕ್ಕೆ ನೀಡಿರುವ ಗುರಿಯು ಅತ್ಯಧಿಕವಾಗಿದೆ. ಸದರಿ ನಿರೀಕ್ಷೆಯನ್ನು ಮೀರಿ ರಾಜಸ್ವ ಸಂಗ್ರಹಿಸುವ ದಿಸೆಯಲ್ಲಿ ಆದಾಯ ವೃದ್ಧಿಸಲು (Revenue Generate) ಮಾಡಲು ಇರುವ ಎಲ್ಲಾ ಸಾಧ್ಯತೆಗಳ ಕಡೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು, ವಿಭಾಗೀಯ ಅಬಕಾರಿ ಜಂಟಿ ಆಯುಕ್ತರುಗಳು ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ತಮ್ಮ ಗಮನಹರಿಸಬೇಕು,’ ಎಂದು ಅಬಕಾರಿ ಆಯುಕ್ತರು ನಿರ್ದೇಶಿಸಿದ್ದನ್ನು ಸ್ಮರಿಸಬಹುದು.
ಮದ್ಯ ಮಾರಾಟ ಗುರಿ ಹೆಚ್ಚಳ
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮದ್ಯ ಮಾರಾಟ ಗುರಿ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಆಗ ಕೇಳಿ ಬಂದಿದ್ದ ವಿರೋಧ ಮತ್ತು ಲೋಕಾಯುಕ್ತರ ಸೂಚನೆ ಮೇರೆಗೆ ಮೂರು ವರ್ಷಗಳ ಹಿಂದೆಯೇ ಮದ್ಯ ಮಾರಾಟದ ಗುರಿಯನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ಕೈ ಬಿಡಲಾಗಿತ್ತು. ಆದರೀಗ ಪ್ರಸ್ತುತ ಗುರಿ ಹಂಚಿಕೆ ಮಾಡುವ ಬಗ್ಗೆ ಸಚಿವರು ನೀಡುವ ನಿರ್ದೇಶನ ಅನುಸಾರ ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಇಲಾಖೆ ಆಯುಕ್ತರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಜನಪ್ರಿಯ ಯೋಜನೆಗಳ ಅನುಷ್ಠಾನ; ಅತ್ಯಧಿಕ ರಾಜಸ್ವ ಸಂಗ್ರಹಣೆಗೆ ಗುರಿ ನಿಗದಿ, ಆನ್‌ಲೈನ್ ಮದ್ಯ ಮಾರಾಟ!
‘ಮದ್ಯ ಮಾರಾಟದ ಗುರಿಯನ್ನು ಹಂಚಿಕೆ ಮಾಡಿ ಸಾಧಿಸುವ ಬಗ್ಗೆ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರುಗಳಿಗೆ ಹೆಚ್ಚಿನ ಅನುಭವ ಇರುವುದರಿಂದ ಆಯಾ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರುಗಳಿಗೆ ಮದ್ಯ ಮಾರಾಟದ ಸಾಧನೆ ಜವಾಬ್ದಾರಿಯನ್ನು ನೀಡುವುದು ಉತ್ತಮ,’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.