ಬೆಂಗಳೂರು; ನೇರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಉಪ ವಲಯ ಅರಣ್ಯಾಧಿಕಾರಿಗಳಿಗೆ 15 ವರ್ಷಗಳಾದರೂ ಒಂದೇ ಒಂದು ಮುಂಬಡ್ತಿ ದೊರೆತಿಲ್ಲ. ಅರ್ಹತೆ ಹೊಂದಿದ್ದರೂ ಸಹ ಮುಂಬಡ್ತಿ ಸೌಲಭ್ಯ ಇಲ್ಲದೆಯೇ ಉಪ ವಲಯ ಅರಣ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ಇದೀಗ ಬಹಿರಂಗವಾಗಿದೆ.
ವಲಯ ಅರಣ್ಯಾಧಿಕಾರಿಗಳ ಹುದ್ದೆಯ ಮುಂಬಡ್ತಿ ಆದೇಶ ಹೊರಡಿಸಲು ತಲಾ 4 ಲಕ್ಷ ರುಪಾಯಿ ಸಂಗ್ರಹಿಸಲಾಗುತ್ತಿದೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿರುವ ಬೆನ್ನಲ್ಲೇ 15 ವರ್ಷಗಳಿಂದಲೂ ಮುಂಬಡ್ತಿ ನೀಡಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಬರೆದಿದ್ದ ಪತ್ರಗಳನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದಿದ್ದಾರೆ.
ಈ ಸಂಬಂಧ ಉಪ ವಲಯ ಅರಣ್ಯಾಧಿಕಾರಿಗಳು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವಲಯ ಅರಣ್ಯಾಧಿಕಾರಿ ವೃಂದದ ಬಡ್ತಿಗೆ ಅರ್ಹತೆ ಪರಿಶೀಲಿಸಿಲು ಸೇವಾ ವಿವರಗಳನ್ನು ಪಡೆದುಕೊಂಡಿರುವ ಅರಣ್ಯ ಇಲಾಖೆಯು ಮುಂಬಡ್ತಿ ನೀಡಲು ಮೀನ ಮೇಷ ಎಣಿಸುತ್ತಿದೆ. ಮುಂಬಡ್ತಿಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ದೂರರ್ಜಿ ನೆಪವನ್ನು ಮುಂದಿರಿಸಿರುವ ಸರ್ಕಾರವು ಮುಂಬಡ್ತಿ ನೀಡದೇ ಕಾಲಹರಣ ಮಾಡುತ್ತಿದೆ ಎಂಬ ಗುರುತರವಾದ ಆರೋಪವೂ ಕೇಳಿ ಬಂದಿದೆ.
ದೂರಿನಲ್ಲೇನಿದೆ?
2009ನೇ ಸಾಲಿನಲ್ಲಿ ನೇರ ನೇಮಕಾತಿ ಮುಖಾಂತರ ಆಯ್ಕೆಯಾಗಿರುವ ಉಪ ವಲಯ ಅರಣ್ಯಾಧಿಕಾರಿಗಳಿಗೆ ಇದುವರೆಗೂ ಕನಿಷ್ಠ ಒಂದೂ ಮುಂಬಡ್ತಿ ದೊರೆತಿಲ್ಲ. ಸುದೀರ್ಘವಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ವಲಯ ಅರಣ್ಯಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದುವ ಎಲ್ಲಾ ಅರ್ಹತೆ ಇದ್ದರೂ ಇದುವರೆಗೂ ಸೌಲಭ್ಯ ನೀಡಿಲ್ಲ. ವೇತನ ಶ್ರೇಣಿ ಮೇಲ್ದರ್ಜೆಗೇರಿಸಿದ್ದರೂ ವೇತನದಲ್ಲಿಯೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವ ಖಂಡ್ರೆ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಜೇಷ್ಠತೆ ಪಟ್ಟಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಕಾರಣ ನಿಯಮ 32 ಮತ್ತು ನಿಯಮ 42 ಪ್ರಕಾರ ನ್ಯಾಯಾಲಯದ ಅಂತಿಮ ಷರತ್ತಿಗೊಳಪಟ್ಟು ವಲಯ ಅರಣ್ಯಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ ಈ ಹಿಂದೆಯೂ ಸಹ ಅನೇಕ ಬಾರಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಷರತ್ತಿಗೊಳಪಟ್ಟು ಮುಂಬಡ್ತಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಹಾಗೆಯೇ ಉಳಿಕೆ ಮೂಲ ವೃಂದದ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ ವೃಂದದಿಂದ ವಲಯ ಅರಣ್ಯಾಧಿಕಾರಿ ವೃಂದದ ಬಡ್ತಿಗೆ ಅರ್ಹತೆ ಪರಿಶೀಲಿಸಲು ಸೇವಾ ವಿವರಗಳನ್ನು ಪಡೆಯಲಾಗಿದೆ. ಆದರೆ ಇದುವರೆಗೂ ಯಾವುದೇ ಮುಂಬಡ್ತಿ ನೀಡಿಲ್ಲ ಎಂದು ಅಳಲು ತೋಡಿಕೊಂಡಿರುವುದು ತಿಳಿದು ಬಂದಿದೆ.
‘2009ರ ಜನವರಿ 28ರ ಜೇಷ್ಠತೆ ಅರ್ಹತಾ ದಿನಾಂಕ ಹೊಂದಿದ್ದೇವೆ. ಜೇಷ್ಠತೆಯ ಸೇವಾ ಹಿರಿತನದಲ್ಲಿ ನಮಗಿಂತ ಹಿರಿಯ ಉಪ ವಲಯ ಅರಣ್ಯಾಧಿಕಾರಿಗಳು ಯಾರೂ ಇರುವುದಿಲ್ಲ. ಹೀಗಾಗಿ ಉಳಿಕೆ ಮೂಲ ವೃಂದದ ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರ ವೃಂದದಿಂದ ವಲಯ ಅರಣ್ಯಾಧಿಕಾರಿ ವೃಂದದ ಬಡ್ತಿಗೆ ಅರ್ಹತೆ ಪರಿಶೀಲಿಸಬೇಕು. ನ್ಯಾಯಾಲಯದ ಅಂತಿಮ ತೀರ್ಪಿಗೆ ಷರತ್ತಿಗೊಳಪಟ್ಟು ಮುಂಬಡ್ತಿ ನೀಡಬೇಕು,’ ಎಂದು ಸಚಿವರಿಗೆ ಕೋರಿರುವುದು ಗೊತ್ತಾಗಿದೆ.
ಕೃಷಿ ಇಲಾಖೆಯಲ್ಲಿಯೂ ಲಂಚದ ಆರೋಪ ಕೇಳ ಬಂದಿರುವ ಕುರಿತು ಪ್ರಕರಣವು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆಯಲ್ಲಿಯೂ ಮುಂಬಡ್ತಿಗೆ ಹಣ ವಸೂಲು ಮಾಡಲಾಗುತ್ತಿದೆ ಎಂದು ಖುದ್ದು ಸಚಿವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮೈಸೂರು ಮೂಲದ ಪ್ರಕಾಶ್ ಎಂಬುವರು ಸಲ್ಲಿಸಿರುವ ದೂರು ಮಹತ್ವ ಪಡೆದುಕೊಂಡಿತ್ತು.
ಮುಂಬಡ್ತಿ ಆದೇಶಕ್ಕೂ ಲಂಚ; ತಲಾ 4 ಲಕ್ಷ ರು. ಸಂಗ್ರಹ ಆರೋಪ, ದೂರುದಾರನಿಗೆ ಸಮನ್ಸ್ ಜಾರಿ
ಚಿಕ್ಕಬಳ್ಳಾಪುರ, ಬೆಳಗಾಂ ವೃತ್ತ, ಕೆನರಾ ವೃತ್ತದ ವಲಯ ಅರಣ್ಯಾಧಿಕಾರಿಗಳು ಬೆಂಗಳೂರಿಗೆ ಕರೆಸಿಕೊಂಡು ಹಣವನ್ನು ಸಂಗ್ರಹಿಸಿದ್ದಾರೆ. ಹಣವನ್ನು ಫೋನ್ ಪೇ ಮೂಲಕವೂ ಸಂಗ್ರಹಿಸಿದ್ದಾರೆ. ಈ ಫೋನ್ ಪೇ ನಂಬರ್ ಕೂಡ ಎಪಿಸಿಸಿಎಫ್ ಪಿ ಆಂಡ್ ಆರ್ ಹೆಸರಿನಲ್ಲಿದೆ ಎಂಬ ವಿವರವನ್ನೂ ದೂರಿನಲ್ಲಿ ವಿವರಿಸಲಾಗಿತ್ತ.
ಈ ದೂರನ್ನು ಪರಿಶೀಲಿಸಿರುವ ಅರಣ್ಯ ಸಂಚಾರಿ ದಳದ ತನಿಖಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ವರುಣ್ ಕುಮಾರ್ ಎಂಬುವರು ದೂರುದಾರನಿಗೆ 2023ರ ಜೂನ್ 27ರಂದು ಸಮನ್ಸ್ ಜಾರಿಗೊಳಿಸಿದ್ದರು.
ವಲಯ ಅರಣ್ಯಾಧಿಕಾರಿ ಹುದ್ದೆಯ ಮುಂಬಡ್ತಿ ಆದೇಶ ಹೊರಡಿಸಲು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸಿಬ್ಬಂದಿಗಳಾದ ರಾಜೇಶ, ಇರೇಗಾಡ, ಹನುಂತಪ್ಪ ಮತ್ತು ಸೌಜನ್ಯ ಎಂಬುವರು ತಲಾ 4 ಲಕ್ಷ ರು. ಹಣ ಸಂದಾಯ ಮಾಡಬೇಕು ಎಂದು ಬೇಡಿಕೆ ಇರಿಸುತ್ತಿದ್ದಾರೆ ಎಂದು ಮೈಸೂರು ಮೂಲದ ಪ್ರಕಾಶ್ ಎಂಬುವರು 2023ರ ಮಾರ್ಚ್ 29ರಂದು ಮೊದಲು ದೂರರ್ಜಿ ಸಲ್ಲಿಸಿದ್ದರು. ಇದಾದ ನಂತರವೂ 2023ರ ಜೂನ್ 7ರಂದು ದೂರು ಎರಡನೇ ದೂರರ್ಜಿ ಸಲ್ಲಿಸಿದ್ದರು.
‘ಚುನಾವಣೆ ಘೋಷಣೆಗೂ ಮುನ್ನ ವಲಯ ಅರಣ್ಯ ಅಧಿಕಾರಿಗಳ ಮುಂಬಡ್ತಿ ಸಂಬಂಧ ಕಡತ ಸೃಜನೆಯಾಗಿದ್ದರೂ ಅದನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿರಲಿಲ್ಲ. ಈ ಸಂಬಂಧ ದೂರು ಸಲ್ಲಿಸಿದ 15 ದಿನಗಳ ನಂತರ ದೂರನ್ನು ಹಿಂಡೆದುಕೊಳ್ಳಬೇಕು ಎಂದು ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳು ಒತ್ತಡ ಹೇರಿದ್ದರು. ಆದರೆ ದೂರನ್ನು ಹಿಂಪಡೆದುಕೊಂಡಿಲ್ಲ. ಆ ನಂತರವೂ ಒತ್ತಡ ಹೆಚ್ಚಿತ್ತು. ಈ ಕುರಿತು ಇಲಾಖೆಯಿಂದ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿರುವುದು ನನ್ನ ಗಮನಕ್ಕೆ ಇದುವರೆಗೂ ಬಂದಿಲ್ಲ,’ ಎಂದು ದೂರುದಾರ ಪ್ರಕಾಶ್ ಎಂಬುವರು ವಿವರಿಸಿದ್ದರು.
ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿ ರಘು (ಮೊಬೈಲ್ ಸಂಖ್ಯೆ 9886786602), ಬಂಡಿಪುರ ಎಸ್‌ಟಿಪಿಎಫ್‌ನ ರಾಮಾಂಜನೇಯಲು (ಮೊಬೈಲ್ ಸಂಖ್ಯೆ 8971050605), ಬೆಳಗಾಂ ವೃತ್ತದ ಸೋಮಶೇಖರ ಪಾವಟೆ, ಕೆನರಾ ವೃತ್ತದ ಆನಂದ ಪೂಜಾರ ಅವರು ನಗದು ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಅದೇ ರೀತಿ ‘ ವಾಟ್ಸಾಪ್ ಕರೆ ಮೂಲಕ ಸಿಬ್ಬಂದಿಗಳನ್ನು ಸಂಪರ್ಕಿಸಲಾಗುತ್ತಿದ್ದು ಭ್ರಷ್ಟಾಚಾರಕ್ಕೆ ಸಾಕ್ಷಿ ದೊರೆಯದಂತೆ ಜಾಗ್ರತೆ ವಹಿಸುತ್ತಿದ್ದಾರೆ. ಈ ನೌಕರರ ಮತ್ತು ಕುಟುಂಬದವರ ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಯ ವಿವರ ತಾಳೆ ಮಾಡಿದರೆ ದಾಖಲೆ ದೊರೆಯುತ್ತದೆ. ಈ ದಾಖಲೆಗಳು ಇಲಾಖೆ ವಿಚಾರಣೆಯಲ್ಲಿ ದೊರೆತ ನಂತರವೂ ಕ್ರಮ ಕೈಗೊಳ್ಳದೇ ಅಧಿಕಾರಿಗಳು ಸಿಬ್ಬಂದಿಯ ಭ್ರಷ್ಟಾಚಾರಕ್ಕೆ ಸಹಮತ ನೀಡುತ್ತಿದ್ದಾರೆ,’ ಎಂದು ದೂರದಾರ ಪ್ರಕಾಶ್ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ.
ವಿಶೇಷವೆಂದರೆ ಹಣ ವಸೂಲಿಗೆ ಬಳಸಿರುವ ಪೋನ್ ಪೇ ಯನ್ನು ಎಪಿಸಿಸಿಸಿಎಫ್ ಹೆಸರಿನಲ್ಲಿ ಕಚೇರಿ ಸಿಬ್ಬಂದಿ ಉಪಯೋಗಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಲಾಖೆಯ ಜಾಗೃತ ವಿಭಾಗದಿಂದ ವಿಚಾರಣೆ ಪೂರ್ಣಗೊಳಿಸಿದ ನಂತರ ಕ್ರಮ ಜರುಗಿಸಿಲ್ಲ ಮತ್ತು ಸಾಕ್ಷಿಗಳನ್ನು ನಾಶಪಡಿಸಲು ಮತ್ತು ದೂರನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿನಲ್ಲಿ ಆಪಾದಿಸಿರುವುದನ್ನು ಸ್ಮರಿಸಬಹುದು.