31.41 ಲಕ್ಷ ರು ವಸೂಲು ಮಾಡದ ಇಲಾಖೆ; ಲೋಕಾಯುಕ್ತ ಬರೆದ ಪತ್ರಗಳೆಲ್ಲವೂ ಕಸದಬುಟ್ಟಿಗೆ

photo credit;oneindiakannada

ಬೆಂಗಳೂರು; ಚಿತ್ರದುರ್ಗ, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಬಾಕಿ ಇರುವ 31.41 ಲಕ್ಷ ರು. ವಸೂಲು ಮಾಡಲು ಉಪ ಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಅಧಿಕಾರಿಗಳು ಮುಂದಾಗಿಲ್ಲ.

 

ಹಣ ವಸೂಲು ಸಂಬಂಧದ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಹಲವು ಬಾರಿ ಉಪ ಲೋಕಾಯುಕ್ತರು ಮಾಡಿದ್ದ ಶಿಫಾರಸ್ಸುಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಕಸದ ಬುಟ್ಟಿಗೆ ಎಸೆದಿತ್ತು. ಹೀಗಾಗಿ ಉಪ ಲೋಕಾಯುಕ್ತರು ಬೇರೆ ದಾರಿಯಿಲ್ಲದೇ ಹಣ ವಸೂಲಾತಿಗೆ ಆರ್ಥಿಕ ಇಲಾಖೆಗೂ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಶಿಸ್ತು ತರಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಉಪ ಲೋಕಾಯುಕ್ತರು ಮತ್ತು ಆರ್ಥಿಕ ಇಲಾಖೆಯು ಬರೆದಿರುವ ಪತ್ರಗಳು ಮುನ್ನೆಲೆಗೆ ಬಂದಿವೆ.

 

ಚಿತ್ರದುರ್ಗ, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿನ ತಾಲೂಕು ಪಂಚಾಯ್ತಿ ಮತ್ತು ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ತೆರಿಗೆ ಸೇರಿದಂತೆ ಇನ್ನಿತರೆ ವಿಭಾಗಗಳಲ್ಲಿ ಹಣ ವಸೂಲು ಮಾಡಲು ಲೆಕ್ಕ ಪರಿಶೋಧನಾ ಇಲಾಖೆಯು ಶಿಫಾರಸ್ಸು ಮಾಡಿತ್ತು. ಆದರೆ ಇಲಾಖೆಗಳು ಈ ಬಗ್ಗೆ ಗಮನ ಹರಿಸದ ಕಾರಣ ಕೊಂಚೆ ಶಿವರುದ್ರಪ್ಪ ಎಂಬುವರು ಲೋಕಾಯುಕ್ತ ಸಂಸ್ಥೆಗೆ 2023ರ ಜುಲೈ 26ರಂದು ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಉಪ ಲೋಕಾಯುಕ್ತರು ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದರು.

 

ಹಿರಿಯೂರು ತಾಲೂಕು ಪಂಚಾಯ್ತಿ ವ್ಯಾಪ್ತಿಯ ರಂಗನಾಥಪುರ ಗ್ರಾಮ ಪಂಚಾಯ್ತಿಯಲ್ಲಿ 2016-17ನೇ ಸಾಲಿನಲ್ಲಿ ನಡೆದಿದ್ದ ಲೆಕ್ಕಪರಿಶೋಧನೆ ಪ್ರಕಾರ 86,865 ರು. ವಸೂಲಾತಿಗೆ ಬಾಕಿ ಇತ್ತು. ಅಲ್ಲದೆ ಈ ಹಣವನ್ನು ವಸೂಲು ಮಾಡಿ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಉಪ ಲೋಕಾಯುಕ್ತರು ಸೂಚನೆ ನೀಡಿದ್ದರು.

 

ಆದರೆ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಮ್‌ಕುಮಾರ್‍‌ ಎಂಬುವರು ಹಣ ವಸೂಲಿ ಸಂಬಂಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಣವನ್ನು 2023ರ ಆಗಸ್ಟ್‌ 14ರೊಳಗೆ ವಸೂಲು ಮಾಡಿ ವರದಿ ಸಲ್ಲಿಸಬೇಕು ಎಂದೂ ಸೂಚಿಸಿದ್ದರು ಎಂಬುದು ಲೋಕಾಯುಕ್ತ ಸಂಸ್ಥೆಯ ಸಹಾಯಕ ನಿಬಂಧಕರ ಪತ್ರದಿಂದ ತಿಳಿದು ಬಂದಿದೆ.

 

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕೆ ಸೂಗೂರು ಗ್ರಾಮ ಪಂಚಾಯ್ತಿಯಲ್ಲಿ 2017-18, 2018-19ನೇ ಸಾಲಿನಲ್ಲಿ ನಡೆದಿದ್ದ ಲೆಕ್ಕ ಪರಿಶೋಧನೆ ಪ್ರಕಾರ 5,48,119 ರು. ವಸೂಲಾತಿಗೆ ಬಾಕಿ ಇತ್ತು. ಕರ್ನಾಟಕ ಹಣಕಾಸು ಸಂಹಿತೆ 371ರ ಪ್ರಕಾರ ಒಟ್ಟು ಮೊತ್ತದ ಪೈಕಿ 1,95,553 ರು ಮೊತ್ತವನ್ನು ವಸೂಲು ಮಾಡಿರಲಿಲ್ಲ . ಈ ಹಣವನ್ನು 2023ರ ಆಗಸ್ಟ್‌ 8ರೊಳಗಾಗಿ ವಸೂಲು ಮಾಡಬೇಕು ಎಂದು ಲೋಕಾಯುಕ್ತ ಸಂಸ್ಥೆಯ ಸಹಾಯಕ ನಿಬಂಧಕರು ಸೂಚಿಸಿದ್ದರು.

 

ಹಿರಿಯೂರು ತಾಲೂಕಿನ ಪಿ ಡಿ ಕೋಟೆ ಗ್ರಾಮ ಪಂಚಾಯ್ತಿಯಲ್ಲಿ 2016-17ನೇ ಸಾಲಿನಲ್ಲಿ ನಡೆಸಿದ್ದ ಲೆಕ್ಕ ಪರಿಶೋಧನೆ ಪ್ರಕಾರ 2,20,370 ರು. ವಸೂಲಾತಿಗೆ ಬಾಕಿ ಇತ್ತು. ಈ ಮೊತ್ತವನ್ನು ವಸೂಲು ಮಾಡಿ 2023ರ ಆಗಸ್ಟ್‌ 8ರೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದರು.

 

ಹಾಗೆಯೇ ದಿಂಡಾವರ ಗ್ರಾಮ ಪಂಚಾಯ್ತಿಯಲ್ಲಿ 2016-17ನೇ ಸಾಲಿನಲ್ಲಿ ನಡೆಸಿದ್ದ ಲೆಕ್ಕ ಪರಿಶೋಧನೆ ಪ್ರಕಾರ 78,720 ರು. ವಸೂಲಾತಿಗೆ ಬಾಕಿ ಇತ್ತು. ಈ ಹಣವನ್ನು 2023ರ ಆಗಸ್ಟ್‌ 29ರೊಳಗೆ ವಸೂಲು ಮಾಡಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದರು.

 

ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲೂಕಿನ ಅಣಜಿ ಪಂಚಾಯ್ತಿಯಲ್ಲಿ 2018-19ನೇ ಸಾಲಿನಲ್ಲಿ ನಡೆಸಿದ್ದ ಲೆಕ್ಕ ಪರಿಶೋಧನೆ ಪ್ರಕಾರ 7,90,243 ರು. ವಸೂಲಾತಿಗೆ ಬಾಕಿ ಇತ್ತು. ಈ ಹಣವನ್ನು 2023ರ ಆಗಸ್ಟ್‌ 1ರೊಳಗೆ ವಸೂಲು ಮಾಡಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿತ್ತು.

 

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 2017-18 ಮತ್ತು 2018-19ನೇ ಸಾಲಿನಲ್ಲಿ ನಡೆದಿದ್ದ ಲೆಕ್ಕ ಪರಿಶೋಧನೆ ಪ್ರಕಾರ 52,09,468 ರು. ವಸೂಲಾತಿಗೆ ಬಾಕಿ ಇತ್ತು. ಈ ಪೈಕಿ ಹಣ ವಸೂಲು ಮಾಡಿದ್ದಾರಾದರೂ ವಸೂಲಾತಿಗೆ 18,51,637 ರು. ಬಾಕಿ ಇತ್ತು. ಈ ಹಣವನ್ನು 2023ರ ಆಗಸ್ಟ್‌ 11ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು.

 

ಲೋಕಾಯುಕ್ತ ಸಂಸ್ಥೆಯ ಉಪ ನಿಬಂಧಕರು ನೀಡಿದ್ದ ನಿರ್ದೇಶನಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಪಾಲಿಸದೇ ಉಲ್ಲಂಘಿಸಿತ್ತು. ಹೀಗಾಗಿ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೂ ಉಪ ಲೋಕಾಯುಕ್ತರು ಸರಣಿ ಪತ್ರಗಳನ್ನು ಬರೆದಿದ್ದರು.

SUPPORT THE FILE

Latest News

Related Posts