ಬೆಂಗಳೂರು; ಅಧಿಕಾರಿಯೊಬ್ಬರ ವರ್ಗಾವಣೆ ಮಾಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ಹೆಸರಿನಲ್ಲಿ 1.50 ಕೋಟಿ ಲಂಚ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷವು ಇದುವರೆಗೂ ತುಟಿ ಬಿಚ್ಚದಿರುವುದರ ಹಿಂದಿನ ರಹಸ್ಯವೂ ಇದೀಗ ಬಯಲಾಗಿದೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ದಿನಗಳಲ್ಲಿ ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ನಿರತವಾಗಿ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿತ್ತು. ಅದರಲ್ಲೂ ಮುಖ್ಯವಾಗಿ ಜಾತ್ಯಾತೀತ ಜನತಾದಳದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದ್ದರು.
ಕಳೆದ ಜುಲೈನಲ್ಲಿ ನಡೆದಿದ್ದ ಬಜೆಟ್ ಅಧಿವೇಶನದಲ್ಲಿಯೂ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಇತರೆ ಸಚಿವರ ಮೇಲೂ ಆರೋಪಗಳ ಮಳೆಯನ್ನೇ ಸುರಿಸಿದ್ದರು. ಈ ವೇಳೆ ವರ್ಗಾವಣೆ ವ್ಯಾಪಾರ, ದಂಧೆ ಎಂಬ ಪದ ಬಳಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ನಡೆದಿತ್ತು.
ಈ ಎಲ್ಲಾ ಬೆಳವಣಿಗಳ ನಡೆದ ನಂತರ ಅಧಿಕಾರಿಯೊಬ್ಬರ ವರ್ಗಾವಣೆಗಾಗಿ 1.50 ಕೋಟಿ ಲಂಚ ನೀಡಿದ್ದರ ಪ್ರಕರಣದಲ್ಲಿ ಕೋಲಾರದ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರ ಹೆಸರನ್ನೂ ಕೂಡ ಪ್ರಸ್ತಾಪ ಮಾಡಲಾಗಿತ್ತು. ಆದರೂ ಹೆಚ್ ಡಿ ಕುಮಾರಸ್ವಾಮಿ ಅವರು ಈ ಪ್ರಕರಣದ ಬಗ್ಗೆ ಸೊಲ್ಲೆತ್ತಿರಲಿಲ್ಲ.
ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಕೇಳಿ ಬಂದಿದ್ದ ಲಂಚದ ಆರೋಪ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಡೀ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕ ಎಚ್ ಡಿ ಕುಮಾರಸ್ವಾಮಿ ಅವರು ಕೋಲಾರದ ಗಲ್ ಪೇಟೆ ಪ್ರಕರಣದ ಕುರಿತಂತೆ ಮೌನ ಮುರಿಯದಿರುವುದರ ಹಿಂದಿನ ರಹಸ್ಯ ಇದೀಗ ಬಯಲಾಗಿದೆ.
ಅಧಿಕಾರಿಯೊಬ್ಬರ ವರ್ಗಾವಣೆಗಾಗಿ 1.50 ಕೋಟಿ ಲಂಚ ಪಡೆದಿರುವ ಪ್ರಕರಣದಲ್ಲಿ ಬಿ ಮುಬಾರಕ್ ಎಂಬುವರು ಮೊದಲನೇ ಆರೋಪಿ. ಇವರು ಜಾತ್ಯಾತೀತ ಜನತಾದಳದಿಂದ ಕೋಲಾರ ನಗರಸಭೆಯ ಸದಸ್ಯರಾಗಿ ಚುನಾಯಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಅವರು ಈ ಪ್ರಕರಣದ ಬಗ್ಗೆ ತುಟಿ ಬಿಚ್ಚಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಒಂದೊಮ್ಮೆ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಆರೋಪಿಯಾಗಿದ್ದರೆ ಹೆಚ್ ಡಿ ಕುಮಾರಸ್ವಾಮಿ ಅವರು ಇಡೀ ಪ್ರಕರಣವನ್ನು ಮುನ್ನೆಲೆಗೆ ತಂದು ಆಡಳಿತ ಪಕ್ಷದ ವಿರುದ್ಧ ಮುಗಿಬೀಳುತ್ತಿದ್ದರು. ಅಷ್ಟೇ ಅಲ್ಲ, ಈ ಪ್ರಕರಣದ ಬಗ್ಗೆ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಸಹ ದನಿ ಎತ್ತಿದ್ದರು. ಆದರೆ ಬಿಜೆಪಿ ಪಕ್ಷವು ಮೌನ ವಹಿಸಿದೆ.
ಇನ್ನು ಅದೇ ರೀತಿ ಚೆಲುವರಾಯಸ್ವಾಮಿ ಅವರು ಲಂಚ ಕೇಳಿದ್ದಾರೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ರಾಜ್ಯಪಾಲರು ವರದಿ ಕೇಳಿ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದರ ಕುರಿತು ಕಾಂಗ್ರೆಸ್ ಸರ್ಕಾರವು ಸಿಐಡಿಗೆ ವಹಿಸಿದೆ. ಆದರೆ ವರ್ಗಾವಣೆ ಮಾಡಿಸಿಕೊಡಲು 1.50 ಕೋಟಿ ರು. ಲಂಚ ಪಡೆಯಲಾಗಿದೆ ಎಂಬ ದೂರು ಮತ್ತು ಎಫ್‌ಐಆರ್‍ನ್ನೇ ಮುಚ್ಚಿಟ್ಟಿದ್ದಾರೆ ಎಂಬುದು ದಾಖಲೆ ಸಮೇತ ನಿರೂಪಿತವಾಗಿದ್ದರೂ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸದಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ.
ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ವ್ಯಾಪಾರ ನಡೆಯುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಈಗಲೂ ವಾಗ್ದಾಳಿಯನ್ನು ಮುಂದುವರೆಸಿದೆ. ಆದರೆ ವರ್ಗಾವಣೆ ಮಾಡಿಸಿಕೊಡಲು ಅಧಿಕಾರಿಯೊಬ್ಬರಿಂದ 1.50 ಕೋಟಿ ಲಂಚ ಪಡೆದಿರುವ ಸಂಬಂಧ ಎಫ್‌ಐಆರ್ ದಾಖಲಾಗಿರುವ ಕೋಲಾರದ ಗಲ್‌ಪೇಟೆ ಪ್ರಕರಣದಲ್ಲಿ ಈ ಎರಡೂ ಪಕ್ಷಗಳು ದಿವ್ಯ ಮೌನ ತಾಳಿವೆ.
ಗಲ್ ಪೇಟೆ ಪ್ರಕರಣವನ್ನು ಪ್ರಬಲ ಅಸ್ತ್ರದಂತೆ ಪ್ರಯೋಗಿಸಲು ರಾಜಕೀಯವಾಗಿ ಅತೀ ಹೆಚ್ಚು ಅವಕಾಶಗಳಿದ್ದರೂ ಸಹ ಈ ಎರಡೂ ಪಕ್ಷಗಳು ಮೌನಕ್ಕೆ ಜಾರಿದ್ದು ಹೊಂದಾಣಿಕೆ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾದಂತಿದೆ.
ವರ್ಗಾವಣೆಗೆ 1.50 ಕೋಟಿ ಲಂಚ; ಗಲ್‌ಪೇಟೆ ಪ್ರಕರಣ ಪ್ರಬಲ ಅಸ್ತ್ರವಾಗಿದ್ದರೂ ಜೆಡಿಎಸ್ ಪ್ರಯೋಗಿಸಿಲ್ಲವೇಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹೆಸರನ್ನು ಮುಂದಿರಿಸಿ ವರ್ಗಾವಣೆಗಾಗಿ ಹಣದ ಬೇಡಿಕೆ ಇರಿಸಿದ್ದ ದೂರು ಮತ್ತು ಇದನ್ನಾಧರಿಸಿ ದಾಖಲಿಸಿದ್ದ ಎಫ್‌ಐಆರ್, ನಂತರ ರಾತ್ರೋರಾತ್ರಿ ಎಫ್‌ಐಆರ್ ಬದಲಿಸಿ ‘ಒಬ್ಬರನ್ನು ವರ್ಗಾವಣೆ ಮಾಡಿಸಿಕೊಡಲು’ ಎಂಬ ಸಾಲನ್ನು ತೆಗೆದು ಹಾಕಿತ್ತು. ಕಾಣದ ಕೈಗಳ ಒತ್ತಡದಿಂದ ಈ ಎಫ್‌ಐಆರ್‍ನ್ನು ಪೊಲೀಸರು ಬದಲಾಯಿಸಿದ್ದರು. ತಕ್ಷಣವೇ ದೂರುದಾರನಿಂದ ಮತ್ತೊಂದು ದೂರು ಪಡೆದು ಅದರಲ್ಲಿ ‘ಒಬ್ಬರನ್ನು ವರ್ಗಾವಣೆ ಮಾಡಿಸಿಕೊಡಲು’ ಎಂಬ ಸಾಲು ಇರದಂತೆ ನೋಡಿಕೊಳ್ಳಲಾಗಿದೆ. ಎರಡನೇ ದೂರನ್ನಾಧರಿಸಿ ಪೊಲೀಸರು ಎರಡನೇ ಎಫ್‌ಐಆರ್ ದಾಖಲಿಸಿದ್ದು ಬಹಿರಂಗಗೊಂಡಿತ್ತು.
ವರ್ಗಾವಣೆಗಾಗಿ 1.50 ಕೋಟಿ ಬೇಡಿಕೆ; ತಡರಾತ್ರಿ ದೂರೇ ಅದಲು ಬದಲು, ಪ್ರಭಾವಿಗಳ ಒತ್ತಡಕ್ಕೆ ಮಣಿದ ಪೊಲೀಸರು!
ಇದಾದ ನಂತರ 2023ರ ಜೂನ್ 29ರಂದು ವಿಧಾನ ಸೌಧದ ಕೂಗಳತೆ ದೂರದಲ್ಲಿರುವ ರೇಸ್ ಕೋರ್ಸ್ ರಸ್ತೆ ಬಳಿ ಅನಾಮಿಕ ಅಧಿಕಾರಿ ಬಳಿ ಮಧ್ಯವರ್ತಿಗಳ ಜೊತೆ ಚರ್ಚೆ ನಡೆದಿತ್ತು. ದೂರುದಾರ ಪ್ರತಾಪ್ ತಮ್ಮ ದೂರಿನಲ್ಲಿ ಉಲ್ಲೇಖಿಸಿರುವಂತೆ ವರ್ಗಾವಣೆಗಾಗಿ ಒಟ್ಟು 1.50 ಕೋಟಿ ರು.ಗೆ ಬೇಡಿಕೆ ಇರಿಸಲಾಗಿತ್ತು. ಮುಂಗಡವಾಗಿ ಅಂದೇ 25.ಲಕ್ಷ ರು.ಗಳನ್ನು ಹಿರಿಯ ಅಧಿಕಾರಿಯಿಂದ ಕೋಲಾರದ ನಗರ ಸಭಾ ಸದಸ್ಯ ಬಿ.ಮುಬಾರಕ್ ಗೆ ಸಂದಾಯ ಮಾಡಲಾಗಿತ್ತು ಎಂಬ ಅಂಶವು ಎಫ್‌ಐಆರ್‍ನಲ್ಲಿ ವಿವರಿಸಲಾಗಿತ್ತು.
25 ಲಕ್ಷ ರು.ಗಳನ್ನು ಮೊದಲು ಮುಂಗಡವಾಗಿ ನೀಡಿದ ನಾಲ್ಕೇ ನಾಲ್ಕು ದಿನದಲ್ಲಿ ಅಂದರೆ 2023ರ ಜುಲೈ 2ರಂದು 25 ಲಕ್ಷ ರು., 2023ರ ಜುಲೈ 22ರಂದು ಕೋಲಾರದ ಹೊರ ವಲಯದ ಜಾಲಪ್ಪ ಮೆಡಿಕಲ್ ಕಾಲೇಜ್ ಬಳಿ ಇರುವ ನಾಗಾರ್ಜುನ ಹೋಟೆಲ್ ನಲ್ಲಿ 50 ಲಕ್ಷ ರು. ಮಧ್ಯವರ್ತಿ ಎಂದು ಹೇಳಲಾಗಿರುವ ಖಾದ್ರಿ ಎಂಬುವರಿಗೂ ಕಮಿಷನ್ ರೂಪದಲ್ಲಿ 9 ಲಕ್ಷ ರು ಹೀಗೆ ಒಟ್ಟು 1.09 ಕೋಟಿ ರು.ಹಣ ಸಂದಾಯ ಮಾಡಲಾಗಿತ್ತು. ಎಂದು ಎಫ್‌ಐಆರ್‍ನಲ್ಲಿ ನಮೂದಿಸಲಾಗಿದೆ.
ಮೊದಲ ದೂರಿನಲ್ಲಿ ಪ್ರಸ್ತಾಪಿಸಿದ್ದ ‘ವರ್ಗಾವಣೆಗಾಗಿ’ ಎಂಬ ಅಂಶಗಳನ್ನೇ ಎಫ್‌ಐಆರ್‍ನಲ್ಲಿಯೂ ದಾಖಲಿಸಿ ಅಧಿಕೃತಗೊಳಿಸಲಾಗಿತ್ತು. ಆದರೆ ಈ ಎಫ್‌ಐಆರ್ ಬಹಿರಂಗವಾದರೇ ಇಡೀ ಸರ್ಕಾರಕ್ಕೆ ಕಂಟಕವಾಗಬಹುದು, ಕಡೆಗೆ ತಮಗೇ ಮುಳುವಾಗಬಹುದು ಎಂಬ ಲೆಕ್ಕಾಚಾರ ನಡೆಸಿದ್ದ ಪೊಲೀಸರು ದೂರುದಾರನನ್ನೇ ಕರೆಸಿಕೊಂಡು ‘ವರ್ಗಾವಣೆಗಾಗಿ’ ಎಂಬ ಪದವನ್ನೇ ತೆಗೆಸಿದ್ದರು ಎಂದು ಗೊತ್ತಾಗಿದೆ.
ಆರೋಪಿ ಪೀರ್ ಸೈಯದ್ ಖಾದರ್ ಆಲ ಷಾ ಖಾದ್ರಿ ಎಂಬುವರ ಮೂಲಕ ದೂರುದಾರ ಪ್ರತಾಪ್‌ಗೆ ಪರಿಚಿತವಾಗಿದ್ದ ಮುಬಾರಕ್ ಎಂಬಾತ ಎಂ ಎಲ್ ಸಿ ನಸೀರ್ ಅಹ್ಮದ್ ಅವರ ಹೆಸರನ್ನು ಮುಂದಿರಿಸಿ ಹಣ ಪಡೆದಿರುವುದು ಎಫ್‌ಐಆರ್‍ನಿಂದ ತಿಳಿದು ಬಂದಿದೆ. ಈ ಕುರಿತು ‘ದಿ ಫೈಲ್’ 2023ರ ಆಗಸ್ಟ್ 2ರಂದು ವರದಿ ಪ್ರಕಟಿಸಿತ್ತು.
ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಹೆಸರು ಬಳಕೆ; ಗುತ್ತಿಗೆ, ಬಾಕಿ ಬಿಲ್ ಬಿಡುಗಡೆಗೆ 1 ಕೋಟಿ ವಸೂಲು
‘ಎಂಎಲ್‌ಸಿ ನಜೀರ್ ಅಹ್ಮದ್ ಹೆಸರಿನಲ್ಲಿ ಮೆಸೇಜ್‌ಗಳು ಬಂದಿದ್ದು ದೂರುದಾರ ಅದನ್ನು ನಂಬಿದ್ದ. ತದ ನಂತರ ಅವರ ನಡವಳಿಕೆ ಬಗ್ಗೆ ಅನುಮಾನಗೊಂದು ವಿಚಾರಿಸಿದಾಗ ಮುಬಾರಕ್ ಬೇರೊಂದು ಮೊಬೈಲ್‌ನಲ್ಲಿ ಎಂಎಲ್‌ಸಿ ನಜೀರ್ ಅಹ್ಮದ್ ಎಂದು ಸೇವ್ ಮಾಡಿಕೊಂಡು ದೂರುದಾರನಿಗೆ ಮೊಬೈಲ್‌ನಲ್ಲಿ ಮುಬಾರಕ್ ಮತ್ತು ನಜೀರ್ ಅಹ್ಮದ್ ಅವರು ಚಾಟಿಂಗ್ ಮಾಡಿರುವಂತೆ ಮೆಸೇಜ್ ಚಾಟ್ ಮಾಡಿಕೊಂಡು ಆ ಚಾಟಿಂಗ್ ಮೆಸೇಜ್‌ಗಳನ್ನು ದೂರುದಾರ ನಂಬುವಂತೆ ಅವರಿಗೆ ಕಳಿಸಿದ್ದ, ‘ ಎಂದು ಎಫ್‌ಐಆರ್‍ನಲ್ಲಿ ವಿವರಿಸಲಾಗಿದೆ.