ಬೆಂಗಳೂರು; ಉದ್ಯೋಗಾವಕಾಶ ಸೃಷ್ಟಿ, ಔದ್ಯೋಗಿಕ ಕೌಶಲ್ಯ ವೃದ್ಧಿ, ಕೈಗಾರಿಕೋದ್ಯಮಕ್ಕೆ ಉತ್ತೇಜನ, ಸೆಮಿ ಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ದಿ, ಚೆನ್ನೈ, ಬೆಂಗಳೂರು ಕೈಗಾರಿಕೆ ಕಾರಿಡಾರ್‍ನಲ್ಲಿ ಕೈಗಾರಿಕೆ ಟೌನ್ ಶಿಪ್ ಸೇರಿದಂತೆ ಮತ್ತಿತರೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದಾರೆಯೇ ವಿನಃ ಇಂತಹ ಹಲವು ಯೋಜನೆಗಳಿಗೆ ಬಿಡಿಗಾಸನ್ನೂ ನೀಡಿಲ್ಲ.
ವಾಣಿಜ್ಯ ಕೈಗಾರಿಕೆ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ) ಇಲಾಖೆಗೆ ಸಂಬಂಧಿಸಿದಂತೆ 2023-24ನೇ ಸಾಲಿನ ಆಯವ್ಯಯ ಘೋಷಣೆಗಳಿಗೆ ಸಂಬಂಧಿಸಿದ ಕಂಡಿಕೆಗಳಿಗೆ ಬಿಡಿಗಾಸನ್ನೂ ಒದಗಿಸಿಲ್ಲ. ಈ ಎಲ್ಲವೂ ಕೇವಲ ಹೇಳಿಕೆಗಳೇ ಹೊರತು ಇವಕ್ಕೆ ಅನುದಾನವನ್ನು ನೀಡಿಲ್ಲ ಎಂಬುದು ಗೊತ್ತಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಒಂದೊಂದಾಗಿ ಅನುಷ್ಠಾನ ತರುತ್ತಲೇ ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲ ಎತ್ತುವುದರಲ್ಲಿ ನಿರತರಾಗಿರುವ ಹೊತ್ತಿನಲ್ಲಿಯೇ 2023-24ನೇ ಸಾಲಿನ ಆಯವ್ಯಯ ಘೋಷಣೆಗಳು ಕೇವಲ ಹೇಳಿಕೆಗಳೇ ಹೊರತು ಯೋಜನೆಗಳಲ್ಲ ಎಂಬ ಸಂಗತಿಯು ಇದೀಗ ಮುನ್ನೆಲೆಗೆ ಬಂದಿದೆ.
ಆಯವ್ಯಯ ಕಂಡಿಕೆ 252 ಸೇರಿದಂತೆ ಒಟ್ಟಾರೆ 16 ಕಂಡಿಕೆಗಳಿಗೆ ಬಿಡಿಗಾಸನ್ನೂ ನೀಡಿಲ್ಲ. ಈ ಕುರಿತು ಆರ್ಥಿಕ ಇಲಾಖೆಯು ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಹೇಳಿಕೆಗಳಿಗಷ್ಟೇ ಸೀಮಿತವಾದ ಕಂಡಿಕೆಗಳಿವು
ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅವಕಾಶ ಸೃಷ್ಟಿಸುವುದು, ಔದ್ಯೋಗಿಕ ಕೌಶಲ್ಯ ವೃದ್ಧಿಪಡಿಸುವುದು, ಕೈಗಾರಿಕೋದ್ಯಮ ಉತ್ತೇಜನ, ರಾಜ್ಯದಲ್ಲಿ ಸೆಮಿ ಕಂಡಕ್ಟರ್ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡಲು ಬೆಂಗಳೂರಿನ ಕಾಡುಗೋಡಿಯಲ್ಲಿ 100 ಎಕರೆ ಪ್ರದೇಶದಲ್ಲಿ ಟೆಕ್ನಾಲಜಿ ಇನ್ನೋವಷೇನ್ ಪಾರ್ಕ್ ಅಭಿವೃದ್ಧಿಪಡಿಸಿ ಇದರಲ್ಲಿ ತಾಂತ್ರಿಕ ಸಂಶೋಧನೆ ಸಂಸ್ಥೆ ಸ್ಥಾಪನೆ, ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ ವಿನ್ಯಾಸ, ಇತ್ಯಾದಿಗಳಿಗೆ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಘೋಷಿಸಿದ್ದರು. ಆದರಿದು ಕೇವಲ ಹೇಳಿಕೆಯಾಗಿಯೇ ಉಳಿದಿದೆಯೇ ವಿನಃ ಇದಕ್ಕಾಗಿ ಅನದಾನ ಒದಗಿಸಿಲ್ಲ ಎಂಬುದು ಪಟ್ಟಿಯಿಂದ ತಿಳಿದು ಬಂದಿದೆ.
ಚೆನ್ನೈ ಬೆಂಗಳೂರು ಕೈಗಾರಿಕೆ ಕಾರಿಡಾರ್‍ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರದ ಸ್ವಾಧೀನದಲ್ಲಿರುವ ಬಿಇಎಂಎಲ್ ಜಮೀನಿನಲ್ಲಿ ಬೃಹತ್ ಕೈಗಾರಿಕೆ ಟೌನ್ ಶಿಪ್, (ಕಂಡಿಕೆ 255), ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನಾ ಕ್ಲಸ್ಟರ್ ಮತ್ತು ದಕ್ಷಿಣ ಕನ್ನಡದಲ್ಲಿ ರಫ್ತು ಆಧರಿತ ಕೈಗಾರಿಕೆಗಳ ಕ್ಲಸ್ಟರ್‍ಗಳನ್ನು ಅಭಿವೃದ್ಧಿಗೊಳಿಸುವುದು, ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆ ಪ್ರೋತ್ಸಾಹಿಸಲು ಹೊಸ ನೀತಿ, ಮಂಡ್ಯದಲ್ಲಿರುವ ಮೈಸೂರ್ ಷುಗರ್ ಕಂಪನಿಗೆ ದುಡಿಯುವ ಬಂಡವಾಳ ಜೊತೆಗೆ ಕಾರ್ಖಾನೆ ಸುಸ್ಥಿರತೆ ಮತ್ತು ಉನ್ನತೀಕರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದು ಸಹ ಹೇಳಿಕೆಗಷ್ಟೇ ಸೀಮಿತವಾಗಿದೆ.
ಏರೋಸ್ಪೇಸ್ ವಲಯದಲ್ಲಿ ರಾಜ್ಯದ ಬಲವನ್ನು ವೃದ್ಧಿಸಲು ವಿಶೇಷವಾಗಿ ಎಂಎಸ್‌ಎಂಇಗಳ ಮೇಲೆ ಕೇಂದ್ರೀಕರಿಸಲು ಅತ್ಯಾಧುನಿಕ ಕರ್ನಾಟಕ ಏರೋಸ್ಪೇಸ್ ತಂತ್ರಜ್ಞಾನ ಕೇಂದ್ರವನ್ನು ದೇವನಹಳ್ಳಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್‌ನಲ್ಲಿ ಸ್ಥಾಪಿಸುವುದು ಸಹ ಹೇಳಿಕೆಗಷ್ಟೇ ಸೀಮಿತವಾಗಿದೆಯೇ ವಿನಃ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಅನುದಾನವನ್ನು ಒದಗಿಸಿಲ್ಲ ಎಂಬುದು ಗೊತ್ತಾಗಿದೆ.
ಕುಸಿತ ಕಾಣುತ್ತಿರುವ ಕೈ ಮಗ್ಗ ಉದ್ಯಮದ ಪುನಶ್ಚೇತನ, ಜವಳಿ ಸಿದ್ಧ ಉಡುಪುನೀತಿಯಡಿ ಹೂಡಿಕೆ ಆಕರ್ಷಣೆ, ಸ್ಥಳೀಯರಿಗೆ ಉದ್ಯೋಗ ಅವಕಾಶ ಸೃಷ್ಟಿಯೂ ಹೇಳಿಕೆಗಷ್ಟೇ ಸೀಮಿತವಾಗಿದೆ.
ಅದೇ ರೀತಿ ಹುಬ್ಬಳ್ಳಿ,ಕಲ್ಬುರ್ಗಿಯ ಚಿತ್ತಾಪುರ, ಉತ್ತರ ಕನ್ನಡದ ಕೋಡ್ಕಣಿ, ಬೆಳಗಾಔಇಯ ಕಣಗಲಾ, ಚಾಮರಾಜನಗರದ ಬದನಗುಪ್ಪೆ, ವಿಜಯಪುರದ ಇಂಡಿ ಮತ್ತು ಯಾದಗಿರಿಯ ಶಹಾಪೂರ ಹೀಗೆ ಏಳು ಸ್ಥಳಗಳಲ್ಲಿ ಹೊಸದಾಗಿ ಕೈಗಾರಿಕೆ ವಸಾಹತುಗಳನ್ನು ಹಂತಹಂತವಾಗಿ ಸ್ಥಾಪಿಸಲಾಗುವುದು ಎಂಬುದು ಸಹ ಹೇಳಿಕೆಗಷ್ಟೇ ಸೀಮಿತಗೊಂಡಿದೆ.
ಆಯವ್ಯಯ ಭಾಷಣದ ಕಂಡಿಕೆಗಳಲ್ಲದೇ ಕೆಲವು ಲೆಕ್ಕ ಶೀರ್ಷಿಕೆಗಳಡಿ ನಿರ್ದಿಷ್ಟ ಉದ್ದೇಶಕ್ಕಾಗಿ ಅನುದಾನವನ್ನೂ ಹಂಚಿಕೆ ಮಾಡಿದೆ. ಉದ್ದೇಶಿತ ಯೋಜನೆಗಳಿಗಾಗಿ ಮತ್ತು ಮುಂದುವರದ ಯೋಜನೆಗಳಿಗಾಗಿ ಕೊರತೆಯಾಗದ ರೀತಿಯಲ್ಲಿ ಒದಗಿಸಿರುವ ಒಟ್ಟಾರೆ ಅನುದಾನದ ಮಿತಿಯಲ್ಲಿ ಅನುದಾನ ಬಿಡುಗಡೆ ಮತ್ತು ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ 2023ರ ಆಗಸ್ಟ್ 5ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ.