ಬೆಂಗಳೂರು; ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಇದರಿಂದ ದುರ್ಮರಣಕ್ಕೀಡಾಗುವ ಮಕ್ಕಳು ಮತ್ತು ಇತರರ ಅವಲಂಬಿತರಿಗೆ ಪರಿಹಾರ ಒದಗಿಸಲು ಗ್ರಾಮ ಪಂಚಾಯ್ತಿಗಳಲ್ಲಿ ಅನುದಾನ ಲಭ್ಯವಿಲ್ಲ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಅಲ್ಲದೇ ಇಂತಹ ಪ್ರಕರಣಗಳಲ್ಲಿ ಅನುದಾನ ಒದಗಿಸಿಕೊಳ್ಳುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಆಯವ್ಯಯ ಪೂರ್ವದಲ್ಲಿ ಅನುದಾನ ಒದಗಿಸಿಕೊಂಡಿಲ್ಲ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.
ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಬಿಕೆ ಗ್ರಾಮದಲ್ಲಿ ಬೀದಿ ನಾಯಿಗಳು ಕಚ್ಚಿದ ಪರಿಣಾಮ ದುರ್ಮರಣ ಹೊಂದಿದ ಮಗುವಿನ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ಒದಗಿಸಬೇಕು ಎಂದು ಹೈಕೋರ್ಟ್‌ನ ಧಾರವಾಡ ಪೀಠದ ಆದೇಶ ಪಾಲಿಸುವ ಸಂಬಂಧದ ಪ್ರಕರಣದಲ್ಲಿ ಬೀದಿ ನಾಯಿಗಳ ಕಡಿತ, ನಿಯಂತ್ರಣ, ಪರಿಹಾರಕ್ಕೆ ಸೂಕ್ತ ಅನುದಾನ ಲಭ್ಯವಾಗಿಸಿಕೊಳ್ಳುವ ಸಂಬಂಧ ಇಲಾಖೆಯಲ್ಲಿ ಚರ್ಚೆ ನಡೆದಿದೆ. ಅಲ್ಲದೇ ಈ ಸಂಬಂಧ ಸ್ಥಳೀಯ ಗ್ರಾಮ ಪಂಚಾಯ್ತಿಯಲ್ಲಿ ಅನುದಾನ ಲಭ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಅಸಹಾಯಕತೆ ವ್ಯಕ್ತಪಡಿಸಿದೆ.
ಜಿಲ್ಲಾ ಪಂಚಾಯ್ತಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಪಾವತಿಸಲು ನಿರ್ಧರಿಸಲಾಗಿದೆಯಾದರೂ ಇದೊಂದು ಅನಾವಶ್ಯಕ ವೆಚ್ಚ ಎಂಬ ತೀರ್ಮಾನಕ್ಕೆ ಬಂದಿದೆ. ಇಂತಹ ಅನಾವಶ್ಯಕ ವೆಚ್ಚ ಮಾಡುವುದನ್ನು ತಪ್ಪಿಸಲು ಜಿಲ್ಲಾ ಪಂಚಾಯ್ತಿಯಿಂದ ಭರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದಿರುವ ಇಲಾಖೆಯು ಒಂದೊಮ್ಮೆ ಸರ್ಕಾರದ ಆದೇಶವನ್ನು ಹಿಂಪಡೆದುಕೊಂಡಲ್ಲಿ ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು ಎಂಬ ಭೀತಿಯನ್ನೂ ವ್ಯಕ್ತಪಡಿಸಿದೆ. ಈ ಸಂಬಂಧ ‘ದಿ ಫೈಲ್’ಗೆ ಹಲವು ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ ಎಫ್‌ಡಿ 345, ವೆಚ್ಚ 6/2023) ಲಭ್ಯವಾಗಿವೆ.
‘ಗ್ರಾಮ ಪಂಚಾಯ್ತಿ ವಶದಲ್ಲಿರುವ ಗ್ರಾಮ ಪಂಚಾಯ್ತಿಯ ನಿಧಿಯು ಅನುಮತಿಸುವಷ್ಟರ ಮಟ್ಟಿಗೆ ಕೆಲವೊಂದು ವಿಷಯಗಳ ಬಗ್ಗೆ ಪಂಚಾಯ್ತಿ ಪ್ರದೇಶದೊಳಗೆ ಸೂಕ್ತ ಅವಕಾಶ ಕಲ್ಪಿಸುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತ ಆಯವ್ಯಯಕ್ಕನುಗುಣವಾಗಿ ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳವಂತೆ ಹಾಗೂ ಇದಕ್ಕಾಗಿ ಪ್ರತ್ಯೇಕವಾಗಿ ಅನುದಾನವನ್ನು ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯದ ಆಯುಕ್ತರ ಹಂತದಲ್ಲಿ ಕಟಾಯಿಸುವುದಾಗಲೀ ಬ್ಯಾಂಕ್ ಖಾತೆ ತೆರೆಯುವುದಾದಲೀ ಅಗತ್ಯತೆ ಕಂಡು ಬರುತ್ತಿಲ್ಲ,’ ಎಂದು ಆರ್ಥಿಕ ಇಲಾಖೆಯು 2023 ಮೇ 19ರಂದು ಆರ್‍ಡಿಪಿಆರ್ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅಭಿಪ್ರಾಯಿಸಿತ್ತು.
ಪ್ರಕರಣದ ವಿವರ
ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಬಿಕೆ ಗ್ರಾಮದಲ್ಲಿ ಬೀದಿ ನಾಯಿಗಳು ಮಗುವನ್ನು ಕಚ್ಚಿದ್ದರಿಂದಾಗಿ ಮಗುವು ದುರ್ಮರಣ ಹೊಂದಿತ್ತು. ಈ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದ ಧಾರವಾಡ ಪೀಠದ ಮುಂದೆ ರಿಟ್ ಅರ್ಜಿ ( ಸಂಖ್ಯೆ 110352/2019)ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪೀಠವು ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮವಹಿಸಬೇಕು ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಯಿಂದ 10 ಲಕ್ಷ ರು.ಗಳನ್ನು ಪಾವತಿಸಬೇಕು ಎಂದು ಆದೇಶಿಸಿತ್ತು.
ಈ ಆದೇಶ ಪಾಲನೆ ಸಂಬಂಧ ಅಭಿಪ್ರಾಯ ಕೋರಿದ್ದ ಕಡತವು ಇಲಾಖೆಗಳ ಕಂಬಗಳನ್ನು ಸುತ್ತುತ್ತಿದೆಯೇ ವಿನಃ ಆದೇಶ ಹೊರಬಿದ್ದು ವರ್ಷವಾದರೂ 2023ರ ಜುಲೈ ತಿಂಗಳು ಅಂತ್ಯಗೊಳ್ಳುತ್ತಿದ್ದರೂ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂಬುದು ತಿಳಿದು ಬಂದಿದೆ. ಈ ಸಂಬಂಧದ ಕಡತ ಇನ್ನಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಳಿಗೆ ಬರಬೇಕಿದೆ.
ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಇರುವ ಬೀದಿ ನಾಯಿಗಳ ರಕ್ಷಣೆ, ಸಂತಾನ ನಿಯಂತ್ರಣ ಹಾಗೂ ರೋಗಗ್ರಸ್ಥ ನಾಯಿಗಳ ಚಿಕಿತ್ಸೆ, ಆರೈಕೆ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಗಳ ನಿಯಮಗಳ ಅನ್ವಯ ತಾಲೂಕು ಮಟ್ಟದ ಕಾರ್ಯಾಚರಣೆ ಹಾಗೂ ಮೇಲುಸ್ತುವಾರಿ ಸಮಿತಿ ರಚಿಸಬೇಕು. ಈ ಸಂಬಂಧ ಸರ್ಕಾರವು 2021ರಲ್ಲಿಯೇ ಆದೇಶ ಹೊರಡಿಸಿದೆಯಾದರೂ ಬೀದಿನಾಯಿಗಳ ದಾಳಿಯಿಂದ ದುರ್ಮರಣಕ್ಕೀಡಾದವರಿಗೆ ಪರಿಹಾರ ನೀಡುವ ಸಂಬಂಧ ಸ್ಥಳೀಯ ಗ್ರಾಮ ಪಂಚಾಯ್ತಿಗಳಲ್ಲಿ ಅನುದಾನವನ್ನು ಲಭ್ಯವಾಗಿಸಿಕೊಂಡಿಲ್ಲ ಎಂದು ಗೊತ್ತಾಗಿದೆ.
‘ಬೆಳಗಾವಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಬಾಲಕನೊಬ್ಬ ಬೀದಿ ನಾಯಿ ಕಡಿತದಿಂದ ಸಾವನ್ನಪ್ಪಿದ್ದು ಗ್ರಾಮಾಂತರ ಸ್ಥಳೀಯ ಸಂಸ್ಥೆಯಿಂದ 10 ಲಕ್ಷ ರು.ಗಳನ್ನು ಪಾವತಿಸಬೇಕು ಎಂದು ಉಚ್ಛ ನ್ಯಾಯಾಲಯವು ಆದೇಶಿಸಿರುತ್ತದೆ. ಪ್ರಸ್ತುತ ಗ್ರಾಮ ಪಂಚಾಯ್ತಿಯಲ್ಲಿ ಅನುದಾನ ಲಭ್ಯವಿಲ್ಲದಿರುವುದರಿಂದ ಜಿಲ್ಲಾ ಪಂಚಾಯ್ತಿಯಲ್ಲಿ ಲಭ್ಯ ಅನುದಾನದಲ್ಲಿ ಪಾವತಿಸಲು ಸೂಚಿಸಲಾಗಿದೆ. ಇಂತಹ ಅನಾವಶ್ಯಕ ವೆಚ್ಚ ಮಾಡುವುದನ್ನು ತಪ್ಪಿಸಲು ಮೇಲಿನಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಈಗಾಗಲೇ ಹೊರಡಿಸಿರುವ ಆದೇಶವನ್ನು ಹಿಂಪಡೆದಲ್ಲಿ ನ್ಯಾಯಾಲಯ ನಿಂದನೆಗೆ ಒಳಗಾಗುವ ಸಂಭವವಿರುತ್ತದೆ,’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನಿರ್ದೇಶಕರಾದ ಪಿ ಶಿವಶಂಕರ್ ಅವರು ಟಿಪ್ಪಣಿಯಲ್ಲಿ ನಮೂದಿಸಿರುವುದು ಗೊತ್ತಾಗಿದೆ.
ಪರಿಹಾರ ಪಾವತಿಸುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ್ದ ಇಲಾಖೆಯು 8 ಅಂಶಗಳಿಗೆ ಮಾಹಿತಿ ಕೋರಿತ್ತು.
ಯಾವ ಯಾವ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ದಾಳಿಯಿಂದ ಜೀವಹಾನಿಯಾದ ಎಷ್ಟು ಪ್ರಕರಣಗಳಿವೆ, ಪಾವತಿಸಲಾಗಿರುವ ಮೊತ್ತ ಎಷ್ಟು, ಯಾವ ಯಾವ ಮೂಲಗಳಿಂದ ಪಾವತಿಸಲಾಗುತ್ತಿದೆ, ನ್ಯಾಯಾಲಯದ ಆದೇಶದಂತೆ ಈ ಪ್ರಕರಣದಲ್ಲಿ ಪರಿಹಾರ ನೀಡಲು ಇಲಾಖೆಯು ಯಾವ ಕ್ರಮ ವಹಿಸಿದೆ, ಶಾಸನಬದ್ಧ ಅನುದಾನದಲ್ಲಿ ಶೇ.2ರಷ್ಟು ಅನುದಾನವನ್ನು ಇಂತಹ ಪ್ರಕರಣಗಳಿಗೆ ಮೀಸಲಿಡಲು ಯಾವ ಮಾನದಂಡಗಳ ಅಡಿಯಲ್ಲಿ ಕೋರಲಾಗಿದೆ, ಈ ಅನುದಾನವನ್ನು ಇತರೆ ಉದ್ದೇಶಗಳಿಗೆ ಬಳಕೆ ಮಾಡಿದ್ದಲ್ಲಿ ಅನುದಾನದ ಕೊರತೆ ಉಂಟಾಗುವುದಿಲ್ಲವೇ, ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ವಿವಿಧ ಇಲಾಖೆಯಡಿ ಸಮನ್ವಯಗೊಳಿಸಲಾಗಿದೆಯೇ ಎಂದು ಮಾಹಿತಿ ಕೋರಿತ್ತು ಎಂದು ಗೊತ್ತಾಗಿದೆ.
ಪ್ರಸ್ತಾಪಿತ ಪ್ರಕರಣವನ್ನು ನಿರ್ವಹಣೆ ಮಾಡಲು ಎನ್‌ಜಿಒ ಸಂಘ ಸಂಸ್ಥೆಗಳು ಸ್ಥಳೀಯ ಪ್ರಾಧಿಕಾರಗಳಿಂದ ಸಂಪನ್ಮೂಲಗಳನ್ನು ಭರಿಸಲು ತಮ್ಮ ಹಂತದಲ್ಲಿಯೇ ನಿಯಂತ್ರಣ ಕ್ರಮ ವಹಿಸಲು ಆಡಳಿತ ಇಲಾಖೆಯಿಂದ ಸಾಧ್ಯವಿಲ್ಲವೇ, ಶಾಸನಬದ್ಧ ಅನುದಾನದಲ್ಲಿ ಶೇ.2ರಷ್ಟು ಅನುದಾನವನ್ನು ಕಟಾಯಿಸಲು ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತರಿಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗೆ ಸೂಕ್ತ ಕಾರಣ, ಸ್ಪಷ್ಟೀಕರಣ ನೀಡುವುದು, ಇಂತಹ ಪ್ರಕರಣಗಳು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಯವ್ಯಯ ಪೂರ್ವದಲ್ಲಿ ಅನುದಾನ ಒದಗಿಸಲು ಆಡಳಿತ ಇಲಾಖೆಯು ಕ್ರಮ ಕೈಗೊಳ್ಳದಿರಲು ಕಾರಣವೇನು ಎಂಬ ಅಂಶಗಳಿಗೆ ಸ್ಪಷ್ಟೀಕರಣ ಕೋರಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಇದಕ್ಕೆ ತಕರಾರು ಎತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ‘ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದಾಗ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿದಂತೆ ಕಂಡು ಬರುತ್ತಿಲ್ಲ. ಕೇವಲ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ ಅಡಿಯಲ್ಲಿ ಮಾತ್ರ ಈ ಅಂಶಗಳನ್ನು ಪರಿಶೀಲಿಸಿ ಅಭಿಪ್ರಾಯ ನೀಡಿದಂತೆ ಕಂಡು ಬರುತ್ತದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿತ್ತು.
ಭಾರತ ಸರ್ಕಾರವು ರಚಿಸಿರುವ ಪ್ರಾಣಿ ಸಂತಾನ ನಿಯಂತ್ರಣ ನಯಮಗಳು 2023ರ ಅನ್ವಯ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮತ್ತು ರೇಬಿಸ್ ವ್ಯಾಕ್ಸಿನ್ ನೀಡುವ ಬಗ್ಗೆ ಮೇಲ್ವಿಚಾರಣೆ ಹಾಗೂ ತಾಲೂಕು ಮಟ್ಟದಲ್ಲಿ ಈ ಎಲೆfಲಾ ಕ್ರಮ ಕೈಗೊಳ್ಳಲು ಮೂಲಭೂತ ಸೌಕರ್ಯಗಳು ಬೇಕು. ಈ ಸಂಬಂಧ ಸೂಕ್ತ ಸಂಸ್ಥೆಗಳನ್ನು ಗುರುತಿಸಿ ನಿರ್ವಹಣೆ ಮೇಲ್ವಿಚಾರಣೆ ಮಾಡಲು ಸೂಕ್ತ ಅನುದಾನ ಅಗತ್ಯ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಗ್ರಾಮಾಂತರ ಪ್ರದೇಶದ ಜನಸಂಖ್ಯೆಯ ಶೇ.2ರಷ್ಟು ನಾಯಿಗಳ ಸಂಖ್ಯೆಯಲ್ಲಿವೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳ ಅನುದಾನದ ಶೇ.2ರಷ್ಟನ್ನು ಕಡ್ಡಾಯವಾಗಿ ಈ ಕಾರ್ಯಕ್ರಮಕ್ಕೆ ಮುಡಿಪಾಗಿಡಬೇಕು ಎಂದು ಇಲಾಖೆಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.