ಶಿಕ್ಷಕರ ಅಕ್ರಮ ನೇಮಕ; ಬಿಜೆಪಿ ಅವಧಿಯಲ್ಲಿ ಅಮಾನತು, ಕಾಂಗ್ರೆಸ್‌ ಸರ್ಕಾರದಲ್ಲಿ ತೆರವು

ಬೆಂಗಳೂರು; ಸರ್ಕಾರಿ ಪ್ರೌಢಶಾಲೆಗಳಿಗೆ ಅಕ್ರಮವಾಗಿ ನೇಮಕವಾಗಿದ್ದಾರೆ ಎಂಬ ಗುರುತರವಾದ ಆರೋಪದಡಿಯಲ್ಲಿ ವಿಚಾರಣೆಗೆ ಗುರಿಯಾಗಿ ಅಮಾನತುಗೊಂಡಿದ್ದ ಶಿಕ್ಷಕರನ್ನು ಇದೀಗ ಮೇಲಾಧಿಕಾರಿಗಳ ಆದೇಶವಿಲ್ಲದೇ ಅಮಾನತು ತೆರವುಗೊಳಿಸುತ್ತಿರುವ  ಪ್ರಕರಣಗಳು ಇದೀಗ ಬಹಿರಂಗವಾಗಿವೆ.

 

ಅಮಾನತುಗೊಂಡಿದ್ದ ಶಿಕ್ಷಕರನ್ನು ಮೇಲಾಧಿಕಾರಿಗಳ ಆದೇಶವಿಲ್ಲದೆಯೇ ಅಮಾನತು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸಿರುವ ಪ್ರಕರಣವು ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೇರಿದ ಕೆಲವೇ ಕೆಲವು ದಿನದಲ್ಲಿ ಬೆಳಕಿಗೆ ಬಂದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಡಾ ವಿಶಾಲ್‌ ಆರ್‌ ಅವರು 2023ರ ಜೂನ್‌ 30ರಂದೇ ಪ್ರಕರಣದ ಕುರಿತು ವಿವರಗಳನ್ನು ಕೇಳಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಪತ್ರದಲ್ಲೇನಿದೆ?

 

2012-13ನೇ ಹಾಗೂ 2014-15ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರು ಗ್ರೇಡ್‌-2 ಹಾಗೂ ದೈಹಿಕ ಶಿಕ್ಷಕರು ಗ್ರೇಡ್‌-1 ನೇಮಕಾತಿಯಲ್ಲಿ ಅಕ್ರಮ ನೇಮಕಾತಿ ಹೊಂದಿರುವ ಶಿಕ್ಷಕರುಗಳ ಪ್ರಕರಣಗಳಲ್ಲಿ ಪ್ರಕರಣವು ತನಿಖಾ ಹಂತದಲ್ಲಿರುವುದರಿಂದ ಇವರ ಅಮಾನತನ್ನು ಮುಂದುವರೆಸಲು ಸೂಕ್ತವೆಂದು ತೀರ್ಮಾನಿಸಲಾಗಿತ್ತು. ಅಮಾನತುಗೊಂಡ ಶಿಕ್ಷಕರನ್ನು ಕರ್ನಾಟಕ ನಾಗರಿಕ ಸೇವಾ ನಿಯಮ 1958ರ ನಿಯಮ 98ರಂತೆ ಅಮಾನತು ಅವಧಿಯನ್ನು 03 ತಿಂಗಳ ಅವಧಿಯವರೆಗೆ ಮುಂದುವರೆಸಲು ಆಯಾ ಜಿಲ್ಲೆಯ ಶಿಸ್ತು ಪ್ರಾಧಿಕಾರಿಗಳಾದ ಉಪ ನಿರ್ದೇಶಕರು ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ.

 

ಆದರೆ ರಾಮನಗರ ಜಿಲ್ಲೆಯಲ್ಲಿನ ಓರ್ವ ಪ್ರಕರಣದಲ್ಲಿ ಮೇಲಾಧಿಕಾರಿಗಳಿಂದ ಯಾವುದೇ ಆದೇಶ ಪಡೆಯದೇ ಶಿಕ್ಷಕರ ಅಮಾನತು ತೆರವುಗೊಳಿಸಿ ಸ್ಥಳ ನಿಯುಕ್ತಿ ನೀಡಿರುವುದು ಗಮನಕ್ಕೆ ಬಂದಿರುತ್ತದೆ. ಹೀಗಾಗಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿನ ಇಂತಹ ಪ್ರಕರಣಗಳಲ್ಲಿ ಶಿಕ್ಷಕರ ಅಮಾನತನ್ನು ಮುಂದುವರೆಸಿರುವ ಕುರಿತಂತೆ ಅಥವಾ ಯಾವುದಾದರೂ ಪ್ರಕರಣದಲ್ಲಿ ಅಮಾನತನ್ನು ತೆರವುಗೊಳಿಸಲಾಗಿದ್ದರೇ ನಿರ್ದಿಷ್ಟ ವಿವರಗಳನ್ನು ಸಲ್ಲಿಸಬೇಕು ಎಂದು ಡಾ ವಿಶಾಲ್‌ ಅವರು ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಹೆಚ್ಚುವರಿ ಆಯುಕ್ತರ ಕಾರ್ಯಾಲಯಕ್ಕೆ ಜ್ಞಾಪನ ಪತ್ರ ಹೊರಡಿಸಿದ್ದರು.

 

 

2012-13 ಮತ್ತು 2014-15ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರು ಗ್ರೇಡ್‌ -2 ಹಾಗೂ ದೈಹಿಕ ಶಿಕ್ಷಕರು ಗ್ರೇಡ್‌-1 ನೇಮಕಾತಿಯಲ್ಲಿ ಅಕ್ರಮ ನೇಮಕಾತಿ ಹೊಂದಿರುವ ಶಿಕ್ಷಕರ ಪ್ರಕರಣಗಳಲ್ಲಿ ಅಮಾನತನ್ನು ಮುಂದುವರೆಸಲು ಸರ್ಕಾರವು ತೀರ್ಮಾನಿಸಿತ್ತು. ಆದರೀಗ ರಾಮನಗರ ಜಿಲ್ಲೆಯ ಒಂದು ಪ್ರಕರಣದಲ್ಲಿ ಮೇಲಾಧಿಕಾರಿಗಳಿಂದ ಯಾವುದೇ ಆದೇಶ ಪಡೆಯದೇ ಶಿಕ್ಷಕರ ಅಮಾನತನ್ನು ತೆರವುಗೊಳಿಸಿ ಸ್ಥಳ ನಿಯುಕ್ತಿಗೊಳಿಸಿರುವುದು ಗೊತ್ತಾಗಿದೆ.

 

 

 

ವಾಮಮಾರ್ಗದ ಮೂಲಕ ನೇಮಕಗೊಂಡಿದ್ದ ಶಿಕ್ಷಕರನ್ನು ತನಿಖೆಗೊಳಪಡಿಸಿದ್ದ ಸಿಐಡಿಯು ಆರೋಪವನ್ನು ಸಾಬೀತುಗೊಳಿಸಿತ್ತು. ಇದಾದ  ನಂತರ ಶಿಕ್ಷಣ ಇಲಾಖೆಯು ಅಕ್ರಮದಲ್ಲಿ ಭಾಗಿಯಾಗಿದ್ದ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತೇ ವಿನಃ ಅವರನ್ನು ಸೇವೆಯಿಂದ ವಜಾಗೊಳಿಸಿರಲಿಲ್ಲ.  ಹೀಗಾಗಿ   ಕೆಲ ಆರೋಪಿತ ಶಿಕ್ಷಕರು ಕರ್ನಾಟಕ ಆಡಳಿತ ನ್ಯಾಯಮಂಡಳಿ ಮತ್ತು ಹೈಕೋರ್ಟ್‌ ಕದ ತಟ್ಟಿದ್ದರು. ಇವರ ಅರ್ಜಿಗಳನ್ನು ಪುರಸ್ಕರಿಸಿದ್ದ ಹೈಕೋರ್ಟ್‌ ಅಮಾನತು ಆದೇಶ ಹಿಂಪಡೆದು ಸೇವೆಗೆ ಪುನರ್‍‌ ಸ್ಥಾಪಿಸಬೇಕು ಎಂದು ಹೈಕೋರ್ಟ್‌ 2023ರ ಜೂನ್‌ 6ರಂದು  ತೀರ್ಪು ನೀಡಿತ್ತು.

 

ಆದರೆ ಶಿಕ್ಷಣ ಇಲಾಖೆಯು ಈ ಆದೇಶವನ್ನು ಪ್ರಶ್ನಿಸಿರಲಿಲ್ಲ. ಈ  ಆದೇಶವನ್ನು ಮುಂದಿರಿಸಿದ್ದ ಕೆಲ ಶಿಕ್ಷಕರು ಸರ್ಕಾರದ ಗಮನಕ್ಕೆ ತಾರದೇ  ಜಿಲ್ಲಾ ಹಂತದಲ್ಲಿಯೇ ಅಮಾನತು ಆದೇಶ ರದ್ದುಗೊಳಿಸಿ ಸ್ಥಳ ನಿಯುಕ್ತಿಗೊಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ಈ ವಿಚಾರವು ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೂ ಬಂದಿಲ್ಲ ಎಂದು ಗೊತ್ತಾಗಿದೆ.

 

ಅಮಾನತು ಆದೇಶವನ್ನು ರದ್ದುಗೊಳಿಸುವ ಮುನ್ನ ಹೈಕೋರ್ಟ್‌ ಆದೇಶದ ಕುರಿತು ಜಿಲ್ಲಾ ಉಪ ನಿರ್ದೇಶಕರು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆದರೆ ಉಪ ನಿರ್ದೇಶಕರು ಮೇಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರದೆಯೇ  ಆದೇಶ ಹೊರಬಿದ್ದ ಮೂರೇ ಮೂರು ದಿನದಲ್ಲಿ  2023ರ ಜೂನ್‌ 9ರಂದು ತಮ್ಮ ಹಂತದಲ್ಲಿಯೇ  ಅಮಾನತು ಆದೇಶ ರದ್ದುಗೊಳಿಸಿ ಆಪಾದಿತ  ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಿದೆ ಎಂದು ತಿಳಿದು ಬಂದಿದೆ.

 

 

ಹಲವು ಅಭ್ಯರ್ಥಿಗಳಿಗೆ ವಾಮಮಾರ್ಗದಲ್ಲಿ ನೇಮಕ ಆದೇಶ ನೀಡಿ ಅಕ್ರಮ ಎಸಗಿರುವ ಪ್ರಕರಣವೊಂದನ್ನು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಹೊರಗೆಡವಿತ್ತು.

 

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ದೊಡ್ಡ ಸದ್ದು ಮಾಡಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆಯಲ್ಲಿಯೂ ಸದ್ದಿಲ್ಲದೇ ನಡೆದಿದೆ ಎನ್ನಲಾಗಿರುವ ಅಕ್ರಮವೊಂದು ಮುನ್ನೆಲೆಗೆ ಬಂದಿತ್ತು.

 

ತುಮಕೂರು ಜಿಲ್ಲೆಯ ಕುಣಿಗಲ್, ಗುಬ್ಬಿ, ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿವಿಧೆಡೆ ಅಕ್ರಮವಾಗಿ ನೇಮಕವಾಗಿರುವ ಶಿಕ್ಷಕರ ಹೆಸರುಗಳು ಮತ್ತು ಅಕ್ರಮ ಹೇಗೆಲ್ಲಾ ನಡೆದಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಈ ಸಂಬಂಧ ಮುಖ್ಯಮಂತ್ರಿ, ಸಚಿವ ಬಿ ಸಿ ನಾಗೇಶ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವೊಂದನ್ನು 2022ರ ಜುಲೈ 4ರಂದು ಬರೆದಿತ್ತು.

 

 

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪತ್ರದ ಪ್ರತಿ

 

‘ ಪ್ರೌಢಶಾಲೆಗಳಲ್ಲಿ  ಖಾಲಿ ಇದ್ದ ಸಹ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ಮತ್ತು ಕಂಡು ಕೇಳರಿಯದಂತಹ ಅಕ್ರಮಗಳು ಕಳೆದ ಹಲವು ವರ್ಷಗಳಿಂದಲೂ ನಡೆದಿವೆ. ಇದೇ ರೀತಿಯ ಅಕ್ರಮವು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವ ಅಭ್ಯರ್ಥಿಗಳಿಗೂ ಅಕ್ರಮವಾಗಿ ನೇಮಕಾತಿ ಪತ್ರ ನೀಡುವ ಮೂಲಕ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ,’ ಎಂದು ಸರ್ಕಾರದ ಗಮನಕ್ಕೆ ಪ್ರಾಥಮಿಕ ಮಾಹಿತಿಯನ್ನು ವೇದಿಕೆಯ ರಾಜ್ಯಾಧ್ಯಕ್ಷ ಬಿ ಎಸ್‌ ಮಲ್ಲಿಕಾರ್ಜುನಯ್ಯ ಅವರು ಪತ್ರದಲ್ಲಿ ಒದಗಿಸಿದ್ದರು.

 

ಬೆಂಗಳೂರು ವಿಭಾಗದಲ್ಲಿ ಇಂತಹದೊಂದು ಪ್ರಕರಣ ನಡೆದಿದೆ ಎಂದು ಶಂಕಿಸಿರುವ ವೇದಿಕೆಯು ಈ ಪ್ರಕರಣವು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಗಮನಕ್ಕೆ ಬಂದಿಲ್ಲ. ಅಥವಾ ಅವರನ್ನೂ ಕತ್ತಲಲ್ಲಿ ಇರಿಸಲಾಗಿದೆ. ಹಾಗೆಯೇ ಈ ಪ್ರಕರಣವು ಗೊತ್ತಿದ್ದೂ ಸುಮ್ಮನಿರುವ ಮೂಲಕ ಅಕ್ರಮಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೋ ಎಂಬುದನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು. ಈ ಕುರಿತು ‘ದಿ ಫೈಲ್‌’ 2022ರ ಜುಲೈ 5ರಂದೇ ವರದಿ ಪ್ರಕಟಿಸಿತ್ತು.

 

 

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ; ಆಯ್ಕೆಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ವಾಮಮಾರ್ಗದಲ್ಲಿ ಆದೇಶ?

ನವೀನ್ ಕುಮಾರ್ ಬಿ.ಎನ್ ಸಹ ಶಿಕ್ಷಕರು (ಕೆ.ಪಿ.ಎಸ್ ಅಮೃತೂರು, ಕುಣಿಗಲ್ ತಾಲ್ಲೂಕು ಸಿದ್ರಾಮಪ್ಪ ಬಿರಾದಾರ ಸಹ ಶಿಕ್ಷಕರು (ಹತ್ತಳ್ಳಿ ಹಿರಿಯ ಪ್ರಾಥಮಿಕ ಶಾಲೆ,ವಿಜಯಪುರ ಜಿಲ್ಲೆಯ ಚಡಚಣ ತಾಲೂಕು), ಮಹೇಶ್ ಸುಸಲಾದಿ ಸಹ ಶಿಕ್ಷಕರು, (ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹತ್ತಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ) , ದೇವೇಂದ್ರ ನಾಯಕ ಸಹ ಶಿಕ್ಷಕರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

 

‘ಈ ಅಭ್ಯರ್ಥಿಗಳೆಲ್ಲ ಈ ಹಿಂದೆ 2014-2015 ಸಾಲಿನಲ್ಲಿ  ಪ್ರೌಢಶಾಲೆಗಳ  ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇವರುಗಳು ಬೆಂಗಳೂರು ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ ಇವರ ಹೆಸರು ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ. ಬೆಂಗಳೂರು ವಿಭಾಗದ ಸಹ ನಿರ್ದೇಶಕರಾಗಿದ್ದ ಡಿ ಕೆ ಶಿವಕುಮಾರ್ (ಈಗ ನಿವೃತ್ತ) ದ್ವಿತೀಯ ದರ್ಜೆ ಸಹಾಯಕ ಪ್ರಸಾದ್ ಇವರು ಅಕ್ರಮ ನೇಮಕಕ್ಕೆ ಸಹಕರಿಸು ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಬಿಜಾಪುರ ಮೂಲದ ರಾಚಯ್ಯ ಹಿರೇಮಠ, ಇವರು ಮಧ್ಯವರ್ತಿಯಾಗಿದ್ದಾರೆ,’ ಎಂದು ಪತ್ರದಲ್ಲಿ ಆರೋಪಿಸಿದ್ದರು.

 

ಅಕ್ರಮವನ್ನು ಅನಾವರಣಗೊಳಿಸಿದ ವೇದಿಕೆ

 

ನೇಮಕಾತಿ ಸಂಬಂಧ ಮೊದಲು ಪ್ರಕಟಿಸುವ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇರುವುದಿಲ್ಲ. ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಆಯ್ಕೆ ಪಟ್ಟಿಯಲ್ಲಿದ್ದ ಕೆಲವು ಅಭ್ಯರ್ಥಿಗಳು ಯಾವುದೋ ಕಾರಣದಿಂದ ಕೆಲಸಕ್ಕೆ ಹಾಜರಾಗದೇ ಇರುವ ಕಾರಣಕ್ಕೆ ಈ ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ಖಾಲಿಯಾದ ಹುದ್ದೆಗಳಗೆ ಇವರು cut of percentage ಇರುವ ಅಭ್ಯರ್ಥಿಗಳನ್ನು ಪಟ್ಟಿಮಾಡಿ ನೇಮಕ ಮಾಡಿಕೊಳ್ಳದೇ ನೇಮಕಾತಿಯನ್ನು ಮುಂದೂಡುತ್ತಾರೆ. ಇದು ವರ್ಷಗಟ್ಟಲೇ ಹೀಗೆಯೇ ಮುಂದುವರೆಯುತ್ತದೆ ಎಂದು ವೇದಿಕೆಯು ಪತ್ರದಲ್ಲಿ ವಿವರಿಸಿತ್ತು.

 

 

ಆ ನಂತರದ ದಿನಗಳಲ್ಲಿ ಹಿಂದೆ ನಡೆದಿದ್ದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನು ಈ ಜಾಲವು ಸಂಪರ್ಕಿಸುತ್ತದೆ. ಇಂತಹ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಆಯ್ಕೆಯಾಗಲು ನಿಗದಿತ ಅಂಕಗಳು ಪಡೆಯದಿದ್ದರೂ ಲಕ್ಷಾಂತರ ರುಪಾಯಿ ಲಂಚ ಪಡೆದು ಇವರಿಗೆ ಮೂಲ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವೆರಿಫಿಕೇಶನ್ ಪತ್ರ ಕಳಿಸಿಕೊಟ್ಟಿದ್ದಾರೆ. ಆ ನಂತರ ಮೇಲಾಧಿಕಾರಿಗಳ ಗಮನಕ್ಕೆ ತರದೆಯೇ ನೇಮಕಾತಿ ಆದೇಶ ನೀಡಿದ್ದಾರೆ ಎಂದು ವೇದಿಕೆಯು ಪತ್ರದಲ್ಲಿ ಆರೋಪಿಸಿತ್ತು.

 

ಇದಾದ ನಂತರ ಖಾಲಿ ಇರುವ ಸರ್ಕಾರಿ ಪ್ರೌಢಶಾಲೆಯ ಸ್ಥಳ ತೋರಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ತೋರಿಸಿ ನೇಮಕಾತಿ ಆದೇಶ ನೀಡಿದ್ದಾರೆ. ಆದರೆ ನೇಮಕಾತಿ ನಿಯಮದ ಪ್ರಕಾರ ಮೊದಲನೇ ಆಯ್ಕೆ ಪಟ್ಟಿಯಲ್ಲಿ ನೇಮಕಾತಿ ಆಗದಿರುವ ಅಭ್ಯರ್ಥಿಗಳಿಗೆ ಕಟ್ ಆಫ್ ಪರ್ಸೆಂಟೇಜ್ ಎಷ್ಟಕ್ಕೆ ನಿಲ್ಲಿಸಲಾಗಿದೆಯೋ ಅದರ ಕೆಳಗಿನ ಅಂಕ ಪಡೆದ ಅಭ್ಯರ್ಥಿಗಳಿಗೆ ಈ ಎರಡನೇ ಪಟ್ಟಿಯಲ್ಲಿ ಹೆಸರು ಪ್ರಕಟಿಸಿ ನೇಮಕಾತಿ ಆದೇಶ ನೀಡಬೇಕು. ಇಲ್ಲದಿದ್ದರೆ ಖಾಲಿ ಹುದ್ದೆಗಳನ್ನು ಸರ್ಕಾರಕ್ಕೆ ಮರು ಹಿಂದಿರುಗಿಸಬೇಕು. ಆದರೆ ಇಲ್ಲಿ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ. ಹಣ ಪಡೆದು ಅಕ್ರಮವಾಗಿ ನೇಮಕ ನಡೆಸಲಾಗಿದೆ ಎಂದು ವೇದಿಕೆಯು ಆಪಾದಿಸಿತ್ತು.

 

ಈ ರೀತಿಯಾಗಿ ನೂರಾರು ಜನ ಅಭ್ಯರ್ಥಿಗಳಿಗೆ ಅಕ್ರಮವಾಗಿ ನೇಮಕಾತಿ ಆದೇಶ ಪ್ರತಿ ನೀಡಿ ಅಕ್ರಮ ನಡಸಲಾಗಿದೆ. ಇಡೀ ಪ್ರಕರಣೆದ ಕುರಿತು ಬೆಂಗಳೂರು ವಿಭಾಗದ ಸಹ ನಿರ್ದೇಶಕ ಡಿ ಕೆ ಶಿವಕುಮಾರ್ ದ್ವಿತೀಯ ದರ್ಜೆ ಸಹಾಯಕ ಪ್ರಸಾದ್ ಇವರನ್ನು ತನಿಖೆಗೊಳಪಡಿಸಬೇಕು ಎಂದು ಪತ್ರದಲ್ಲಿ ವೇದಿಕೆಯು ಒತ್ತಾಯಿಸಿತ್ತು.

 

‘ಈ ನೇಮಕಾತಿಗಳ ಮೂಲ ಆಯ್ಕೆಪಟ್ಟಿ, ಸರ್ಕಾರದ ಅಧಿಸೂಚನೆ, ಪೊಲೀಸ್‌ ವೆರಿಫಿಕೇಷನ್‌, ಈ ಅಧಿಸೂಚನೆ ಪ್ರಕಾರ ನಡೆದಿರುವ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳ ಮೂಲ ದಾಖಲಾತಿಗಳನ್ನು ದೂರುದಾರರ ಸಮ್ಮುಖದಲ್ಲಿ ಪರಿಶೀಲನೆ, ಪಾರದರ್ಶಕ ತನಿಖೆ ನಡೆಯಬೇಕು. 2014-15ರಿಂದ ಇಲ್ಲಿಯವರೆಗೂ ನಡೆದಿರುವ ಶಿಕ್ಷಕರ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳ ಮೂಲ ದಾಖಲೆಗಳೊಂದಿಗೆಯೇ ತನಿಖೆ ನಡೆಯಬೇಕು,’ ಎಂದು ಬಿ ಎಸ್‌ ಮಲ್ಲಿಕಾರ್ಜುನಯ್ಯ ಅವರು ಪತ್ರದಲ್ಲಿ ಕೋರಿದ್ದರು.

 

ಸಹ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ವಾಮಮಾರ್ಗದಲ್ಲಿ ನೇಮಕವಾಗಿದ್ದಾರೆ ಎಂಬುದನ್ನು ತನಿಖೆ ಮೂಲಕ ಸಾಬೀತಾದ   ಶಿಕ್ಷಕರನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆ ಎಲ್ಲಾ ಶಿಕ್ಷಕರನ್ನು ಅಮಾನತುಗೊಳಿಸಿತ್ತು. ಶಿಕ್ಷಕರ ಅಕ್ರಮ ನೇಮಕ ಪ್ರಕರಣವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಗದ್ದಲಕ್ಕೆ ಕಾರಣವಾಗಿತ್ತು.

 

ಅಲ್ಲದೇ ಬಿಜೆಪಿಯು ಈ ಪ್ರಕರಣವನ್ನು ರಾಜಕೀಯಕರಣಗೊಳಿಸಿತ್ತಲ್ಲದೇ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ಮೇಲೆ ಮುಗಿಬಿದ್ದಿತ್ತು. ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಶಾಸಕರು ಪ್ರಕರಣಗಳನ್ನು ಅಲ್ಲಗಳೆದಿದ್ದರು.

SUPPORT THE FILE

Latest News

Related Posts