ತಿಪ್ಪಗೊಂಡನಹಳ್ಳಿ ಜಲಾಶಯ; ಅಕ್ರಮ ನಿರ್ಮಾಣ, ಒತ್ತುವರಿ ಮಾಹಿತಿ ನೀಡದೇ ವಿಫಲ, ಶೋಕಾಸ್‌ ನೋಟೀಸ್‌

ಬೆಂಗಳೂರು; ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿಯಮಬಾಹಿರ ನಿರ್ಮಾಣಗಳು ಮತ್ತು ಒತ್ತುವರಿಗಳ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳದಿರುವುದು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿದೆ. ಅಲ್ಲದೇ ಜಲಾನಯನ ಪ್ರದೇಶದಲ್ಲಿನ ಉಲ್ಲಂಘನೆಗಳನ್ನು ನಿಯಂತ್ರಿಸುವುದು ಮತ್ತು ಉಲ್ಲಂಘನೆ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳದ ಮಂಡಳಿಯ ಬೇಜವಾಬ್ದಾರಿತನವೂ ಬಹಿರಂಗವಾಗಿದೆ.

 

ಅಕ್ರಮದಾರರನ್ನು ರಕ್ಷಿಸುವ ಸಲುವಾಗಿ ತನ್ನ ಕಾನೂನುಬದ್ಧ ಕೆಲಸದಲ್ಲಿ ಹಾಗೂ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ, ರಾಷ್ಟ್ರೀಯ ಹಸಿರು ಪೀಠ ಮತ್ತು ರಾಜ್ಯ ಸರ್ಕಾರದ ಆದೇಶಗಳ ಬಗ್ಗೆ ಅಸಡ್ಡೆ ಮತ್ತು ನಿಷ್ಕ್ರಿಯತೆ ತೋರಿದೆ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಿದೆ. ಈ ಕುರಿತು ಎರಡು ವಾರದೊಳಗೆ ಉತ್ತರ ನೀಡಬೇಕು ಎಂದು ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಮಂಡಳಿ  ಅಧ್ಯಕ್ಷರಿಗೆ  ಶೋಕಾಸ್‌ ನೋಟೀಸ್‌ ಜಾರಿಗೊಳಿಸಿದ್ದಾರೆ. ಈ ನೋಟೀಸ್‌ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಾಲಿನ್ಯ ರಹಿತ ಮಳೆ ನೀರು ಹರಿಯುವಿಕೆ ಮತ್ತು ನೀರಿನ ಹರಿಯುವಿಕೆಯಲ್ಲಿ ಆಗುವ ಅಡೆತಡೆಗಳು ಇರಬಾರದು ಎಂಬ ಕಾರಣಕ್ಕೆ, ಜಲಾಶಯದ ಜಲಾನಯನ ಪ್ರದೇಶದ ವ್ಯಾಪ್ತಿಯ ಸಮಗ್ರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ಪ್ರದೇಶಕ್ಕೆ ಅನ್ವಯಿಸುವಂತೆ ಹಲವಾರು ನಿರ್ಭಂದಗಳನ್ನು ವಿಧಿಸಿದ್ದ ರಾಜ್ಯ ಸರ್ಕಾರವು 2003ರ ನವೆಂಬರ್‌ 18ರಂದು (ಸಂಖ್ಯೆ FEE 21`5 ENV 2000) ಅಧಿಸೂಚನೆ ಹೊರಡಿಸಿತ್ತು.

 

ಈ ಅಧಿಸೂಚನೆಯ ಹೊರತಾಗಿಯೂ ಜಲಾನಯನ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಅಕ್ರಮ ಕಟ್ಟಡಗಳು ತಲೆ ಎತ್ತಿದ್ದವು ಮತ್ತು ಒತ್ತುವರಿಯಾಗಿತ್ತು. ಈ ಸಂಬಂಧ (WP 38218/2013) ಮತ್ತು ಇತರ ಅನೇಕ ಪ್ರಕರಣಗಳು ಉಚ್ಚ ನ್ಯಾಯಾಲಯದ ಮುಂದಿವೆ. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜಲಾನಯನ ಪ್ರದೇಶವನ್ನು ಕಾಪಾಡುವ ಹೊಣೆ ಹೊತ್ತಿದ್ದ ಸರ್ಕಾರದ ಇಲಾಖೆಗಳ ಮತ್ತು ಪ್ರಾಧಿಕಾರಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಪ್ರದೇಶದಲ್ಲಿ ನಡೆದಿರುವ ಅಕ್ರಮ ಮತ್ತು ನಿಯಮ ಉಲ್ಲಂಘಿಸಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಂಣ ಮಂಡಳಿಗೆ 2014ರ ನವೆಂಬರ್‌ 28ರಂದು ಆದೇಶಿಸಿತ್ತು ಎಂಬುದು ಶೋಕಾಸ್‌ ನೋಟೀಸ್‌ನಿಂದ ತಿಳಿದು ಬಂದಿದೆ.

 

ನ್ಯಾಯಾಲಯವು ನೀಡಿದ್ದ ಆದೇಶದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೂಕ್ತ ಮಾಹಿತಿಯನ್ನು ಒದಗಿಸಿಲ್ಲ.

 

ಈ ನೋಟಿಸ್ ನಲ್ಲಿ, ಉಚ್ಚ ನ್ಯಾಯಾಲಯದಲ್ಲಿನ (WP 38218/2013) (ಟಿ. ರಾಜ್ಕುಮಾರ್ Vs ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಎರಡನೇ ಪ್ರತಿವಾದಿಯಾಗಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನವೆಂಬರ್‌ 28, 2014ರಂದು ನೀಡಿರುವ ದೈನಂದಿನ ಆದೇಶವನ್ನು ಉಲ್ಲೇಖಿಸಲಾಗಿದೆಯಲ್ಲದೇ ನ್ಯಾಯಾಲಯವು ಕೇಳಿರುವ ಮಾಹಿತಿ ನೀಡದಿರುವುದಕ್ಕೆ ಕಾರಣ ಕೇಳಿ ನೊಟಿಸ್ ನೀಡಿರುವುದು ಗೊತ್ತಾಗಿದೆ.

 

ನೋಟೀಸ್‌ನಲ್ಲೇನಿದೆ?

 

ಮಾಲಿನ್ಯ ನಿಯಂತ್ರಣ ಮಂಡಳಿಯು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ನಡೆದಿರುವ ಅಭಿವೃದ್ಧಿಗಳನ್ನು, ಒತ್ತುವರಿಗಳನ್ನು, ಮತ್ತು ಇತರೆ ಉಲ್ಲಂಘನೆಗಳನ್ನು ಗಮನಿಸಿ ಮಾಹಿತಿ ಒದಗಿಸುವ ಮೂಲಕ ನ್ಯಾಯಾಲಯಕ್ಕೆ ಸಹಾಯ ಮಾಡಬೇಕಿತ್ತು. ಪ್ರಮುಖವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಾನಯನ ಪ್ರದೇಶದಲ್ಲಿನ ಉಲ್ಲಂಘನೆಗಳನ್ನು ನಿಯಂತ್ರಿಸುವುದು ಮತ್ತು ಉಲ್ಲಂಘನೆ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಇದುವರೆಗೂ ಯಾವ ಮಾಹಿತಿಯನ್ನು ಮಾಲಿನ್ಯ ನಿಯಂತ್ರಣ ನೀಡಿಲ್ಲ ಎಂಬುದು ತಿಳಿದು ಬಂದಿದೆ.

 

 

“ಇದು ಸರ್ಕಾರದ ಮತ್ತು ಉಚ್ಚ ನ್ಯಾಯಾಲಯವು ತಿಪ್ಪಗೊಂಡನಹಳ್ಳೀ ಜಲಾನಯನ ಪ್ರದೇಶವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೊರಡಿಸಿರುವ ಆದೇಶಗಳನ್ನು ಪಾಲಿಸುವಲ್ಲಿ ಬೇಜಬ್ದಾರಿತನ ತೋರುತ್ತದೆ. ಮತ್ತು ಇದು ಮಾಲಿನ್ಯ ನಿಯಂತ್ರಣ ಮಂಡಳಿಯು ಒತ್ತುವರಿದಾರರಿಗೆ ಹಾಗು ಉಲ್ಲಂಘನೆ ಮಾಡಿರುವವರೊಂದಿಗೆ ಅಪವಿತ್ರವಾಗಿ ರಕ್ಷಿಸುವ ಉದ್ದೇಶದಿಂದ ಕೂಡಿದೆ. ಹಾಗೂ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ನಿರಂತರವಾಗಿ ವಿಫಲವಾಗಿದೆ. ಈ ಕುರಿತು ಎರಡು ವಾರಗಳ ಒಳಗೆ ಕಾರಣ ನೀಡಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

 

ನ್ಯಾಯಾಲಯವು, ಸರ್ಕಾರದ ಹಲವಾರು ಇಲಾಖೆಗಳು ಮತ್ತು ಪ್ರಾಧಿಕಾರಗಳು ತಮ್ಮ ಕೆಲಸ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದೆ. ಮತ್ತು ಸರ್ಕಾರದ ವರದಿಗಳಂತೆ 2003ಕ್ಕಿಂತ ಮುಂಚಿತವಾಗಿ 34 ಅಕ್ರಮ ಕಟ್ಟಡಗಳು, ತದನಂತರ, ಅಂದರೆ ಅಧಿಸೂಚನೆ ಹೊರಡಿಸಿದ ನಂತರ, ನಿರ್ಬಂಧಗಳನ್ನು ಉಲ್ಲಂಘಿಸಿ 137 ಕಟ್ಟಡಗಳ ನಿರ್ಮಾಣ ಮತ್ತು 146 ಅನಧಿಕೃತ ಬಡಾವಣೆಗಳ ನಿರ್ಮಾಣವಾಗಿದೆ. ಮತ್ತು ಅವು ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. ಈ ಬಗ್ಗೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ ಎಂದು ನೋಟೀಸ್‌ನಲ್ಲಿ ವಿವರಿಸಲಾಗಿದೆ.

 

ರಾಜ್ಯ ಮತ್ತು ಕೆಂದ್ರ ಸರ್ಕಾರಗಳು ಮಾಲಿನ್ಯ ತಡೆಗಟುವ ನಿಟ್ಟಿನಲ್ಲಿ ಕಾಲಕಾಲಕ್ಕೆ ರೂಪಿಸುವ ಕಾಯ್ದೆಗಳನ್ನು ಜಾರಿಗೊಳಿಸಬೇಕಿತ್ತು. ಮಾಲಿನ್ಯವನ್ನು ನಿಯಂತ್ರಿಸುವ ಮಹತ್ವದ ಜವಾಬ್ದಾರಿಯನ್ನು ಮತು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಿತ್ತು. ಆದರೆ ಈ ಅಧಿಕಾರವನ್ನು ಹೊಂದಿದ್ದರೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಭಾಯಿಸಿಲ್ಲ ಎಂದು ನೋಟಿಸ್ ನಲ್ಲಿ ಪ್ರಸ್ತಾಪಿಸಿದೆ.

 

ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಿರುವ ನೋಟಿಸ್ ನಲ್ಲಿ ಉಲ್ಲೇಖಿಸಿರುವ ಪ್ರಕರಣವು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಇನ್ನೂ ಅಂತಿಮ ವಿಚಾರಣಾ ಹಂತದಲ್ಲಿರುವುದು ನ್ಯಾಯಾಲಯದ ವೆಬ್ಸೈಟ್‌ನಿಂದ ತಿಳಿದು ಬಂದಿದೆ. 2021 ರ ನವೆಂಬರ್ ನಂತರ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆದಿಲ್ಲ. ಆದರೆ, ಏಕಾಏಕಿ ಈ ಪ್ರಕರಣವನ್ನು ಉಲ್ಲೇಖಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಅದು ಇತರ ಪ್ರಮುಖ ಪ್ರತಿವಾದಿಗಳನ್ನು ಬಿಟ್ಟು ಕಾರಣ ಕೇಳಿ ನೋಟಿಸ್ ನೀಡಿರುವುದಕ್ಕೆ ಯಾವುದೇ ಸಮರ್ಥನೆಗಳನ್ನು ನೋಟೀಸ್‌ನಲ್ಲಿ ಪ್ರಸ್ತಾಪಿಸಿಲ್ಲ.

 

2013 ರಲ್ಲಿ ರಾಜ್ಯ ಸರ್ಕಾರವು, 2003 ರ ಅಧಿಸೂಚನೆಯ ನಿರ್ಭಂದಗಳನ್ನು ಉಲ್ಲಂಘಿಸಿ ನಡೆದಿದ್ದ ನಿರ್ಮಾಣ ಮತ್ತು ಒತ್ತುವರಿಗಳನ್ನು ಮನ್ನಾ ಮಾಡುವ ಉದ್ದೇಶದಿಂದ ಹೊಸ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ, ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.
ಉಚ್ಚ ನ್ಯಾಯಾಲಯದಲ್ಲಿನ ಪ್ರಕರಣದಲ್ಲಿ ಮತ್ತು ಅದೇ ಆದೇಶದಲ್ಲಿ, ರಾಜ್ಯ ಸರ್ಕಾರವು ನಿಯಮ ಬಾಹಿರ ನಿರ್ಮಾಣದಾರರನ್ನು ಮತು ಒತ್ತುವರಿದಾರರನ್ನು ರಕ್ಷಿಸುವ ಸಲುವಾಗಿ 2003 ರ ಅಧಿಸೂಚನೆಯನ್ನು ಹಿಂಪಡೆದು, ಈಗ ಹೊಸ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ತಿಳಿಸಿದೆ.

 

ವಿಶೇಷವೆಂದರೆ ನ್ಯಾಯಾಲಯವು ಆ ಅಧಿಸೂಚನೆಗೆ ತಡೆಯಾಜ್ಞೆ ನೀಡಿತ್ತಾದರೂ ಇದುವರೆಗೂ ಈ ತಡೆಯಾಜ್ಞೆ ತೆರವಾಗಿಲ್ಲ. ಹಾಗೆಯೇ, ಸರ್ಕಾರವು ತಿಪ್ಪಗೊಂಡಣಹಳ್ಳಿ ಜಲಾಶಯದ ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 2003 ರ ಅಧಿಸೂಚನೆಯನ್ನು ಉಳಿಸಿಕೊಳ್ಳುತ್ತದೆಯೇ ಅಥವಾ 2014ರ ಅಧಿಸೂಚನೆಯಂತೆ ಮುಂದುವರೆಯುತ್ತದೆಯೊ ಅಥವಾ ಮತ್ತೊಂದು ಹೊಸ ನಿಯಮಾವಳಿಗಳನ್ನು ಪ್ರಸ್ತಾಪ ಮಾಡುತ್ತದೆಯೆ ಎಂಬ ನ್ಯಾಯಾಲಯದ ಪ್ರಶ್ನೆಗೆ ಸರ್ಕಾರವು ಇಲ್ಲಿಯವರೆಗೆ ಸಮರ್ಪಕವಾದ ಉತ್ತರ ನೀಡಿಲ್ಲ.

 

ಬೆಂಗಳೂರು ನಗರ ಹಾಗು ಸುತ್ತಲಿನ ಹಳ್ಳಿಗಳಿಗೆ ನಿರಂತರವಾಗಿ ನೀರು ಪೂರೈಸುವ ಸಲುವಾಗಿ ಮೈಸೂರು ಮಹಾರಾಜರ ಕಾಲದಲ್ಲಿ  (1930ರಲ್ಲಿ) ನಿರ್ಮಾಣವಾಗಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವು  1960ರ ದಶಕದಲ್ಲಿ  ಕಾವೇರಿ ನೀರು ಪೂರೈಕೆಯಾಗುವವರೆಗೂ ಪ್ರಮುಖ ನೀರಿನ ಮೂಲವಾಗಿತ್ತು.

 

ಕಳೆದ ಒಂದು ದಶಕದ ಹಿಂದಿನ ವರೆಗೂ ಈ ಜಲಾಶಯದಿಂದ ಬೆಂಗಳೂರಿಗೆ ಭಾಗಶಃ ನೀರು ಪೂರೈಕೆಯಾಗುತ್ತಿತ್ತು. ಈ ಜಲಾಶಯದಲ್ಲಿ ಹೂಳು ತುಂಬಿರುವ ಮತ್ತು ಮಾಲಿನ್ಯದಿಂದ ಈ ನೀರು ಕುಲುಷಿತಗೊಂಡಿರುವ ಕಾರಣ ಬೆಂಗಳೂರು ನಗರಕ್ಕೆ ಇಲ್ಲಿಂದ ನೀರು ಪೂರೈಕೆಯನ್ನು ನಿಲ್ಲಿಸಲಾಗಿತ್ತು.

 

ಇತ್ತೀಚಿನ ದಿನಗಳಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳೆತ್ತುವ ಹಾಗು ಸ್ವಚ್ಚಗೊಳಿಸುವ ಕಾರ್ಯ ಕೈಗೊಂಡಿದ್ದು, ಅಲ್ಲಿಂದ ಬೆಂಗಳೂರಿಗೆ ಹೊಸ ಕೊಳವೆಗಳನ್ನು ಅಳವಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ರಾಜ್ಯ ಸರಕಾರದ ಮಹಾತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೂಲಕ ಈ ಜಲಾಶಯಕ್ಕೆ ನೀರನ್ನು ಹರಿಸುವ ಪ್ರಸ್ತಾಪವು ಕೂಡ ಇದೆ.

the fil favicon

SUPPORT THE FILE

Latest News

Related Posts