ಬೆಂಗಳೂರು; ‘ಕೋಮು ಸಂಬಂಧಿತ ಗಲಭೆ ಪ್ರಕರಣಗಳಲ್ಲಿ ಮೃತರಾದ ಕುಟುಂಬಗಳ ಸದಸ್ಯರಿಗೆ/ ವಾರಸುದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಅವಕಾಶವಿಲ್ಲ ಮತ್ತು ಒಂದೊಮ್ಮೆ ಈ ನಿಧಿಯಿಂದ ಪರಿಹಾರ ನೀಡಿದರೆ ಇಂತಹ ನಿದರ್ಶನಗಳು ಮರುಕಳಿಸಬಹುದು,’ ಎಂದು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಅಧಿಕಾರಿಗಳ ಅಭಿಪ್ರಾಯವನ್ನು ಬದಿಗಿರಿಸಿದ್ದ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 25 ಲಕ್ಷ ರು. ಮಂಜೂರು ಮಾಡಿದ್ದರೇ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅಧಿಕಾರಿಗಳ ಅಭಿಪ್ರಾಯವನ್ನು ಬದಿಗೊತ್ತಿ ತಲಾ 25 ಲಕ್ಷ ರು.ನಂತೆ 6 ಮಂದಿ ಬಾಧಿತರ ಕುಟುಂಬಗಳಿಗೆ ಒಟ್ಟು 1.50 ಕೋಟಿ ರು ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಶಿವಮೊಗ್ಗ ನಗರದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಎಂಬಾತನಿಗೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 25 ಲಕ್ಷ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಜೂರು ಮಾಡಿದ್ದರು. ಆ ವೇಳೆಯಲ್ಲೂ ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಅಧಿಕಾರಿಗಳು ಇದಕ್ಕೆ ತಕರಾರು ಎತ್ತಿದ್ದರು.
ಅಲ್ಲದೇ ಹರ್ಷನ ಪ್ರಕರಣವು ಪೂರ್ವ ನಿದರ್ಶನವಾಗಲಿದೆ ಎಂದೂ ಎಚ್ಚರಿಸಿದ್ದರು. ಆದರೆ ಅಧಿಕಾರಿಗಳ ಅಭಿಪ್ರಾಯವನ್ನು ಪರಿಗಣಿಸದೆಯೇ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 25 ಲಕ್ಷ ರು.ಗಳನ್ನು ಮಂಜೂರು ಮಾಡಲು ಅನುಮೋದಿಸಿದ್ದರು. ಇದೀಗ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿಲುವನ್ನೇ ತಳೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1.50 ಕೋಟಿ ರು. ಮಂಜೂರು ಮಾಡುತ್ತಿದ್ದಂತೆಯೇ ರಾಜ್ಯದ ಇತರೆಡೆಗಳಲ್ಲಿ ಈ ಹಿಂದೆ ನಡೆದಿದ್ದ ಗಲಭೆಗಳಿಂದ ಬಾಧಿತರಾದವರಿಗೂ ಪರಿಹಾರ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಹರ್ಷನ ಪ್ರಕರಣ ಮತ್ತು ಫಾಜಿಲ್ ಸೇರಿದಂತೆ 6 ಮಂದಿಯ ಪ್ರಕರಣವನ್ನು ಪೂರ್ವ ನಿದರ್ಶನಗಳನ್ನಾಗಿ ಮುನ್ನೆಲೆಗೆ ತಂದಿರುವ ಹಲವರು ಪರಿಹಾರ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
ಸಿಎಂಆರ್‍ಎಫ್‌ನಿಂದ ಪರಿಹಾರಕ್ಕೆ ಕೋರಿರಲಿಲ್ಲ
ದಕ್ಷಿಣ ಕನ್ನಡ, ಗದಗ್, ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ಕೋಮು ಸಂಬಂಧಿತ ಗಲಭೆಗಳಲ್ಲಿ ಹತ್ಯೆಗೀಡಾಗಿದ್ದವರ ವಾರಸುದಾರರಿಗೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರದಿ ಮೇರೆಗೆ ಡಿಜಿಐಜಿಪಿ ವರದಿ ನೀಡಿದ್ದರು. ಆದರೆ ಎಲ್ಲಿಯೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಬೇಕು ಎಂದು ಕೋರಿರಲಿಲ್ಲ.
ಕೋಮು ಸಂಬಂಧಿತ ಗಲಭೆ/ಪ್ರಕರಣಗಳಲ್ಲಿ ಕೊಲೆಗೀಡಾಗಿರುವ ಪ್ರಕರಣಗಳಲ್ಲಿ ಪರಿಹಾರವನ್ನು ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದ್ದ ಒಳಾಡಳಿತ ಇಲಾಖೆಯು ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಕೋರಿತ್ತೇ ವಿನಃ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಬೇಕು ಎಂದು ಪ್ರಸ್ತಾವಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯಮಗಳನ್ನು ಮೀರಿ ಮತ್ತು ಅಧಿಕಾರಿಗಳ ಅಭಿಪ್ರಾಯವನ್ನು ಬದಿಗೊತ್ತಿ 1.50 ಕೋಟಿ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ ಮಂಜೂರು ಮಾಡಿದ್ದಾರೆ. ಇದು ಮುಖ್ಯಮಂತ್ರಿಗಳು ತಮ್ಮ ವಿವೇಚನೆಯನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ವಿಶೇಷ ಪ್ರಕರಣವೆಂದು ಪರಿಗಣಿಸಿ ತಲಾ ಇಪ್ಪತ್ತೈದು ಲಕ್ಷ ರು.ಗಳನ್ನು ಪರಿಹಾರವನ್ನಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವುದು ಎಂದು ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಈ ಸಂಬಂಧ ಪ್ರಕರಣಗಳ ಸಂಬಂಧಿತ ತಾಲೂಕುಗಳ ತಹಶೀಲ್ದಾರ್‍ರಿಗೆ 2023ರ ಜೂನ್ 16ರಂದು ಪತ್ರ ಬರೆದಿರುವುದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ 4 ಜನರಿಗೆ ತಲಾ 25 ಲಕ್ಷ ರು. ನಂತೆ ಒಟ್ಟು ಒಂದು ಕೋಟಿ ಹಾಗೂ ಗದಗ್, ಮಂಡ್ಯ ಜಿಲ್ಲೆಯ ಇಬ್ಬರಿಗೆ ತಲಾ ಇಪ್ಪತ್ತೈದು ಲಕ್ಷ ದಂತೆ ಪರಿಹಾರ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಆರ್‍ಟಿಜಿಎಸ್ ಮೂಲಕ ಪರಿಹಾರ ಧನ ವಿತರಿಸಲಾಗಿದೆ ಎಂದು ಗೊತ್ತಾಗಿದೆ.
ಸುಳ್ಯ ತಾಲೂಕಿನ ಕಳಂಜ ಗ್ರಾಮದ ಮಸೂದ್ (ಘಟನೆ ದಿನಾಂಕ; 19.07.2022) ಇದ್ರಿಶ್ ಪಾಷಾ ಮಂಡ್ಯ (ಘಟನೆ ದಿನಾಂಕ 31.03.2023) ಶಮೀರ್ ಗದಗ್ (ಘಟನೆ ದಿನಾಂಕ 17.01.2022), ಮಂಗಳೂರಿನ ಬಾಳಾ ಗ್ರಾಮದ ಮಂಗಳಾಪೇಟೆಯ ಮೊಹಮದ್ ಫಾಜಿಲ್,(ಘಟನೆ ದಿನಾಂಕ 28.07.2022) ಕಾಟಿಪಾಳ್ಯದ ಅಬ್ದುಲ್ ಜಲೀಲ್ (ಘಟನೆ ದಿನಾಂಕ; 24.12.2022), ದೀಪಕ್ ರಾವ್ (ಘಟನೆ ದಿನಾಂಕ 03.01.2018) ಅವರಿಗೆ ತಲಾ 25 ಲಕ್ಷ ರು.ನಂತೆ ಪರಿಹಾರ ಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವಿತರಿಸಲಾಗಿದೆ.
ಈ ಆರು ಮಂದಿ ವಿವಿಧ ದಿನಾಂಕಗಳಂದು ಕೊಲೆಯಾಗಿದ್ದು ಇವರುಗಳ ಕುಟುಂಬದ ವಾರಸುದಾರರಿಗೆ ಸರ್ಕಾರದ ವತಿಯಿಂದ ಪರಿಹಾರ ಧನ ಮಂಜೂರು ಮಾಡುವಂತೆ ದಕ್ಷಿಣ ಕನ್ನಡ, ಗದಗ್, ರಾಮನಗರ ಜಿಲ್ಲೆಯ ಪೊಲೀಸ್ ಆಯುಕ್ತರು ಕೋರಿದ್ದರು. ಈ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು ವಿಚಾರಣೆ ಹಂತದಲ್ಲಿರುತ್ತವೆ. ಹಾಗೂ ಇಂತಹ ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಅವಕಾಶವಿರುವುದಿಲ್ಲ. ಆದರೂ ಮುಖ್ಯಮಂತ್ರಿ ಅವರು ನಿರ್ದಿಷ್ಟ ಆದೇಶ ನೀಡಿದ್ದಲ್ಲಿ ಮಾತ್ರ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಕ್ರಮ ವಹಿಸಬಹುದು ಎಂದು ಅಧಿಕಾರಿಗಳು ಟಿಪ್ಪಣಿ ಹಾಕಿದ್ದರು ಎಂಬುದು ತಿಳಿದು ಬಂದಿದೆ.
ಕೋಮು ಸಂಬಂಧಿತ ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಿದ್ದೇ ಆದಲ್ಲಿ ಇಂತಹ ನಿದರ್ಶನಗಳು ಮರುಕಳಿಸಬಹುದು. ಇಂತಹ ಪ್ರಕರಣಗಳಿಗೆ ಪರಿಹಾರ ಬಿಡುಗಡೆ ಮಾಡಿದಲ್ಲಿ ಮುಂದೆ ಆರ್‍ಟಿಐ ಅಡಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.ಸಿಎಂಆರ್‍ಎಫ್ ಅಡಿಯಲ್ಲಿ ಇಂತಹ ಕೋಮು ಸಂಬಂಧಿತ ಪ್ರಕರಣಗಳಲ್ಲಿ ಪರಿಹಾರವನ್ನು ನೀಡಲು ಅವಕಾಶವಿರುವುದಿಲ್ಲ ಎಂದೂ ಅಭಿಪ್ರಾಯಿಸಿದ್ದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯು ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟ ನಿಧಿಯಾಗಿದೆ. ಸಿಎಂಆರ್‍ಎಫ್‌ನಿಂದ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಆದೇಶವೇ ಅಂತಿಮ. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ಆದೇಶ, ನಿರ್ದೇಶನವಿರುವುದಿಲ್ಲ. ಅಲ್ಲದೇ ಒಳಾಡಳಿತ ಇಲಾಖೆಯ ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ ವಾರಸುದಾರರ ಪೂರ್ಣ ಮಾಹಿತಿಯೂ ಲಭ್ಯವಿಲ್ಲ. ಈ ಸಂಬಂಧ ಮುಖ್ಯಮಂತ್ರಿಗಳು ಪರಿಹಾರದ ಬಗ್ಗೆ ಆದೇಶ ನೀಡಿದಲ್ಲಿ ಸಿಎಂಆರ್‍ಎಫ್ ನಿಯಮಗಳ ಪ್ರಕಾರ ವಾಸ್ತವ ವರದಿಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಂದ ವರದಿಗಳನ್ನು ಪಡೆಯಬಹುದು ಎಂದು ಟಿಪ್ಪಣಿ ಹಾಕಿದ್ದರು ಎಂಬುದು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಕಚೇರಿ ಮೂಲಗಳು ‘ದಿ ಫೈಲ್’ಗೆ ಖಚಿತಪಡಿಸಿವೆ.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅವರ ನಿರ್ದೇಶನದಂತೆ ಕಡತ ಮಂಡಿಸಿದ್ದ ಪರಿಹಾರ ನಿಧಿ ಶಾಖೆಯ ಅಧಿಕಾರಿಗಳು ‘ಸಿಎಂಆರ್‌ಎಫ್ ಅಡಿಯಲ್ಲಿ ಇಂತಹ ಪ್ರಕರಣಗಳಲ್ಲಿ ಪರಿಹಾರವನ್ನು ಈ ಹಿಂದೆ ನೀಡಿರುವುದಿಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಕೊಲೆ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಮೃತರಾದ ಅವಲಂಬಿತ ಕುಟುಂಬಗಳಿಗೆ ಪರಿಹಾರ ನೀಡಲು ಅವಕಾಶವಿರುವುದಿಲ್ಲ,’ ಎಂದು ಟಿಪ್ಪಣಿಯಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿರುವುದು ಕಡತದೊಳಗಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿತ್ತು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಹರ್ಷನಿಗೆ 25 ಲಕ್ಷ ರು ಪರಿಹಾರ; ಸಿಎಂ ವಿವೇಚನೆ ದುರುಪಯೋಗ, ವರ್ಷದ ಬಳಿಕ ಕಡತ ನೀಡಿದ ಸರ್ಕಾರ
ಪರಿಹಾರ ನಿಧಿಯ ಶಾಖೆಯ ಅಧಿಕಾರಿಗಳು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಬಜರಂಗ ದಳ ಕಾರ್ಯಕರ್ತ ಹರ್ಷ ಎಂಬಾತನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ 25 ಲಕ್ಷ ರು. ನೀಡಲು ಬಸವರಾಜ ಬೊಮ್ಮಾಯಿ ಅವರು ಅನುಮೋದಿಸಿದ್ದರು.
ಮೊದಲು ಕೋವಿಡ್ ಹಣ ಬಳಕೆ
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರು. ಹರ್ಷ ಕುಟುಂಬ ಸದಸ್ಯರಿಗೆ ಮಂಜೂರಾಗಿತ್ತಾದರೂ ಈ ಹಣವು ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆಗಿರಲಿಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು 2022ರ ಮಾರ್ಚ್ 10ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು ಎಂದು ಗೊತ್ತಾಗಿದೆ.
ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ತುರ್ತು 25 ಲಕ್ಷ ಪರಿಹಾರ ನೀಡಲು ಕೋವಿಡ್-19ರ ನಿಧಿ ಬಳಕೆ
ಹರ್ಷನ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆ (ಸಂಖ್ಯೆ; 38587794605)ಯಿಂದ 25 ಲಕ್ಷ ರು. ಪರಿಹಾರ ವಿತರಿಸಿ ಸ್ವೀಕೃತಿ ಪಡೆದು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಗೆ ಒಗಿಸಬೇಕು ಎಂದು ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ ಅವರು ಸೂಚಿಸಿದ್ದರು. ಆದರೆ ಈ ಪರಿಹಾರದ ಮೊತ್ತವು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆಗಿರಲಿಲ್ಲ ಎಂಬುದನ್ನು ಸ್ಮರಿಸಬಹುದು.
‘ಆದರೆ 2022 ರಲ್ಲಿ ಜನವರಿ 14 ರಂದು ಕೋಮುದಳ್ಳುರಿಗೆ ಬಲಿಯಾದ ನಮ್ಮ ಗದಗ ಜಿಲ್ಲೆಯ ನರಗುಂದದ ಸಮೀರ್ ಶಹಾಪುರ ಕುಟುಂಬವನ್ನು ಮರೆತು ಬಿಟ್ಟಿದೆ. ಇದನ್ನು ಸರಿಪಡಿಸಬೇಕು ಮತ್ತು ಸಮೀರ್ ಕುಟುಂಬಕ್ಕೆ ಪರಿಹಾರ ಘೋಷಿಸಿ ತಲುಪಿಸಬೇಕು. ಎಚ್ ಕೆ ಪಾಟೀಲ ಅವರು ಕೂಡ ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು. ಈಗಲಾದರೂ ಆ ಕಡೆಗೆ ಅವರು ಗಮನ ಹರಿಸಬೇಕು. ಸಿಎಂ ಸಿದ್ಧರಾಮಯ್ಯ ಅವರು ಕೋಮುದಳ್ಳುರಿಗೆ ಬಲಿಯಾದ ನರಗುಂದದ ಸಮೀರ್ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ,’ ಎಂದು ಲಡಾಯಿ ಪ್ರಕಾಶನದ ಬಸೂ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಅದೇ ರೀತಿ ಶ್ರೀರಾಮ ಸೇನೆ ಪುಂಡರು ಪುಟ್ಟ ಕಲ್ಲಂಗಡಿ ಹಣ್ಣಿನ ಬಡಪಾಯಿ ವ್ಯಾಪಾರಿಯಾದ ನಬೀಸಾಬರ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣವನ್ನೂ ಮುನ್ನೆಲೆಗೆ ತರಲಾಗಿದೆ. ಶ್ರೀರಾಮ ಸೇನೆಯ ಪುಂಡರ ಗುಂಪು ದಾಳಿ ನಡೆಸಿ 5 ಕ್ವಿಂಟಲ್ ಹಣ್ಣು ನಾಶ ಮಾಡಿ ಅವರ ಬದುಕನ್ನು ಬೀದಿಪಾಲು ಮಾಡಿತು. ಈ ದುಷ್ಕೃತ್ಯ ನಡೆದ ಮೇಲೆ ಬಿಜೆಪಿಯ ರಾಜ್ಯ ಸರ್ಕಾರ ಆ ಕಡೆ ತಿರುಗಿಯೂ ನೋಡಲಿಲ್ಲ. ಆಗಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಯಿ ಚಿತ್ರ ನೋಡಿ ಅತ್ತರೆ ವಿನಃ ಬೀದಿಪಾಲಾದ ನಬೀಸಾಬರ ಅಳಲನ್ನು ಒಂದಿಷ್ಟೂ ಕೇಳಿಸಿಕೊಳ್ಳಲಿಲ್ಲ. ನಬೀಸಾಬ ಮುಸಲ್ಮಾನ ಅನ್ನುವ ಕಾರಣಕ್ಕಾಗಿ ಈ ಸಾಮಾನ್ಯ ಮನುಷ್ಯನ ಕಣ್ಣೀರು ಅಂದಿನ ರಾಜ್ಯ ಸರ್ಕಾರಕ್ಕೆ ಏನೂ ಅನ್ನಿಸಲಿಲ್ಲ. ಅಂದು ಬೀದಿಪಾಲಾದ ನಬೀಸಾಬರ ಬದುಕನ್ನು ಸರಿಪಡಿಸುವ ಅಗತ್ಯ ಈಗಿನ ರಾಜ್ಯ ಸರ್ಕಾರದ ಮೇಲಿದೆ. ನಬೀಸಾಬರಿಗೆ ಪರಿಹಾರ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು,’ ಎಂದು ಬಸೂ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.