ಬೆಂಗಳೂರು; ಕಳೆದ 2014-15ರಿಂದ 2018ರವರೆಗೆ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಮನಗರ ಜಿಲ್ಲೆ ಸೇರಿದಂತೆ ಹಲವೆಡೆ ನಿರ್ಮಿಸಿದ್ದ ತಡೆಗೋಡೆಗಳು ಅತ್ಯಂತ ಕಳಪೆಯಿಂದ ಕೂಡಿವೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ಅಧ್ಯಯನ ವರದಿ ಬಹಿರಂಗವಾದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸರ್ಕಾರವು ಮತ್ತೊಮ್ಮೆ 750 ಕಿ ಮೀ ಉದ್ದದ ಕಾಡಂಚಿನ ಪ್ರದೇಶಗಳಲ್ಲಿ 200 ಕೋಟಿ ರು. ವೆಚ್ಚದಲ್ಲಿ ಸಮಗ್ರ ಬ್ಯಾರಿಕೇಡ್ ನಿರ್ಮಾಣಕ್ಕೆ ಕೈ ಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ 2023-24ನೇ ಸಾಲಿನ ಪರಿಷ್ಕೃತ ಆಯವ್ಯಯದ ಕುರಿತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಮಂಡಿಸಿರುವ ಪ್ರಾತ್ಯಕ್ಷಿಕೆಯಲ್ಲಿ ಮಾನವ ಕಾಡಾನೆ ಸಂಘರ್ಷ ನಿಯಂತ್ರಣಕ್ಕೆ ಸಮಗ್ರ ಬ್ಯಾರಿಕೇಡ್ ನಿರ್ಮಾಣ ಯೋಜನೆಯನ್ನು ಪ್ರಸ್ತಾಪಿಸಿದೆ.
ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿರುವಂತೆ ಸಮಗ್ರ ಬ್ಯಾರಿಕೇಡ್ ನಿರ್ಮಾಣ ಯೋಜನೆಯು ಪ್ರಸಕ್ತ ಆಯವ್ಯಯದಲ್ಲಿ ಹೊಸ ಯೋಜನೆ ಎಂದು ಹೇಳಿಕೊಂಡಿದೆ. ಇಲಾಖೆಯು ಸಿದ್ಧಪಡಿಸಿರುವ ಪ್ರಾತ್ಯಕ್ಷಿಕೆಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅದೇ ರೀತಿ ಕೃಷ್ಣ ಮೃಗ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆ, ಪುನರ್ವಸತಿ ಕೇಂದ್ರಗಳ ನಿರ್ಮಾಣ ಯೋಜನೆ, ಹಸಿರು ಕವಚ ಯೋಜನೆ ಮತ್ತು ಹಸಿರು ಬೆಂಗಳೂರು ಯೋಜನೆಗಾಗಿ ಒಟ್ಟಾರೆ 527 ಕೋಟಿ ರು. ಹೆಚ್ಚುವರಿಯಾಗಿ ಅನುದಾನ ಒದಗಿಸಬೇಕು ಎಂದು ಇಲಾಖೆಯು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಲಾಗಿದೆ. ಈ ಪ್ರಾತ್ಯಕ್ಷಿಕೆಗೆ ಸಚಿವ ಈಶ್ವರ್ ಖಂಡ್ರೆ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.
ಸಮಗ್ರ ಬ್ಯಾರಿಕೇಡ್ ನಿರ್ಮಾಣಕ್ಕೆ 200 ಕೋಟಿ, ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶಕ್ಕೆ 2.00 ಕೋಟಿ, ಪುನರ್ವಸತಿ ಕೇಂದ್ರಗಳ ನಿರ್ಮಾಣ ಯೋಜನೆಗೆ 75 ಕೋಟಿ, ಹಸಿರು ಕವಚ ಯೋಜನೆಗೆ 200 ಕೋಟಿ, ಹಸಿರು ಬೆಂಗಳೂರು ಯೋಜನೆಗೆ 50 ಕೋಟಿ ಹೆಚ್ಚುವರಿಯಾಗಿ ಅನುದಾನ ಒದಗಿಸಬೇಕು ಎಂದು ಪ್ರಸ್ತಾಪಿಸಿರುವುದು ಪ್ರಾತ್ಯಕ್ಷಿಕೆಯಿಂದ ತಿಳಿದು ಬಂದಿದೆ.
‘ರಾಜ್ಯದಲ್ಲಿ ಮಾನವ ಕಾಡಾನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ಅರಣ್ಯ ಪ್ರದೇಶದ ಸುತ್ತಲೂ ರೈಲ್ವೇ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಗಳನ್ನು 2015-16ನೇ ಸಾಲಿನಿಂದ ಕೈಗೆತ್ತಿಕೊಳ್ಳಲಾಗುತ್ತಿದ್ದು ಸಮರ್ಪಕವಾಗಿ ಮಾನವ ಪ್ರಾಣಿ ಸಂಘರ್ಷ ನಿಯಂತ್ರಿಸಲು ಒಂದು ಹೊಸ ಹೆಜ್ಜೆಯಾಗಿ 750 ಕಿ ಮೀ ಕಾಡಂಚಿನ ಪ್ರದೇಶಗಳಲ್ಲಿ ಸಮಗ್ರ ಬ್ಯಾರಿಕೇಡ್ ನಿರ್ಮಾಣ ಯೋಜನೆಯನ್ನು ಉದ್ದೇಶಿಸಲಾಗಿದೆ. ಈ ಕಾಮಗಾರಿಗಳ ಅನುಷ್ಠಾನಕ್ಕೆ 2023-24ರಲ್ಲಿ 200 ಕೋಟಿ ಮೀಸಲಿರಿಸಿಕೊಳ್ಳಲಾಗಿದೆ,’ ಎಂದು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಲಾಗಿದೆ.
ಕಳೆದ 2014-15ರಿಂದ 2018ರವರೆಗೆ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಮನಗರ ಜಿಲ್ಲೆ ಸೇರಿದಂತೆ ಹಲವೆಡೆ ನಿರ್ಮಿಸಿದ್ದ ತಡೆಗೋಡೆಗಳು ಅತ್ಯಂತ ಕಳಪೆಯಿಂದ ಕೂಡಿವೆ. ನಿರ್ವಹಣೆಗೆ ಅನುದಾನ ಬಿಡುಗಡೆ ಆಗದೇ ಇರುವುದು ಅಥವಾ ಅನುದಾನ ಬಳಕೆಗೆ ಅವಕಾಶವೂ ಇರಲಿಲ್ಲ ಎಂದು ಮೌಲ್ಯಮಾಪ ಪ್ರಾಧಿಕಾರ ನಡೆಸಿದ್ದ ಅಧ್ಯಯನ ವರದಿಯಿಂದ ಬಹಿರಂಗವಾಗಿತ್ತು.
‘2014-15ರಿಂದ 2018-19ರ ಅವಧಿಯಲ್ಲಿ ರಾಮನಗರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ತಡೆಗೋಡೆಗಳು ಅತ್ಯಂತ ಕಳಪೆಯಿಂದ ಕೂಡಿವೆ. ಅವುಗಳನ್ನು ನಿರ್ವಹಣೆ ಮಾಡಿಲ್ಲ. ಶೇ.50ಕ್ಕಿಂತಲೂ ಹೆಚ್ಚು ಅಧಿಕ ಹಾನಿಗೆ ಒಳಗಾಗಿವೆ. ಕಾರ್ಯನಿರ್ವಹಣೆ ಸ್ಥಿತಿಯಲ್ಲಿಲ್ಲ. ಅವುಗಳನ್ನು ಮತ್ತೆ ಕಾರ್ಯನಿರ್ವಹಿಸುವ ರೀತಿಯಲ್ಲಿ ಪುನಶ್ಚೇತನಗೊಳಿಸುವುದು ಸಾಧ್ಯವೇ ಇಲ್ಲ. ಬಹುತೇಕ ತಡೆಗೋಡೆಗಳನ್ನು 2014-15ರಲ್ಲಿ ನಿರ್ಮಿಸಲಾಗಿದ್ದು ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ,’ ಎಂದು ಅಧ್ಯಯನ ತಂಡವು ವಿವರಿಸಿತ್ತು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಮಾನವ ಆನೆ ಸಂಘರ್ಷ; ಕಾಂಗ್ರೆಸ್ ಸರ್ಕಾರದಲ್ಲಿ ನಿರ್ಮಾಣವಾದ ತಡೆಗೋಡೆಗಳು ಅತ್ಯಂತ ಕಳಪೆ
ಚಾಮರಾಜನಗರ, ಬಂಡೀಪುರ ಮತ್ತು ನಾಗರಹೊಳೆಗಳಲ್ಲಿ ಕೆಲವು ಮಧ್ಯಮ ಶ್ರೇಣಿಯಲ್ಲಿವೆ. ಸ್ವಲ್ಪ ಮಟ್ಟಿನ ನಿರ್ವಹಣೆ ಅಗತ್ಯವಿದೆ. 2014-15ರಲ್ಲಿ ನಿರ್ಮಾಣವಾಗಿರುವ ತಡೆಗೋಡೆಗಳ ನಿರ್ವಹಣೆಗೆ ಅನುದಾನದ ಕೊರತೆ ಕಂಡು ಬಂದಿದೆ. ಮೈಸೂರಿನಲ್ಲಿ ಶೇ.75ರಷ್ಟು ಇಪಿಟಿಗಳು ಮಧ್ಯಮ ಶ್ರೇಣಿಯಲ್ಲಿದ್ದರೆ ಶೇ.25ರಷ್ಟು ಕಳಪೆಯಿಂದ ಕೂಡಿವೆ. 2017-18 ಮತ್ತು 2018-19ರಲ್ಲಿ ನಿರ್ಮಿಸಿರುವ ತಡೆಗೋಡೆಗಳ ನಿರ್ವಹಣೆಗಾಗಿ ಯಾವುದೇ ಅನುದಾನವನ್ನೂ ಹಂಚಿಕೆ ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.
ನಿರ್ವಹಣೆಗೆ ಅನುದಾನ ಬಿಡುಗಡೆ ಆಗದೇ ಇರುವುದು ಅಥವಾ ಅನುದಾನ ಬಳಕೆಗೆ ಅವಕಾಶ ಇಲ್ಲದ ಕಾರಣದಿಂದ ಇಪಿಟಿಗಳನ್ನು ನಿರ್ವಹಣೆ ಮಾಢದೇ ಇದ್ದರೆ ಕೆಲವು ವರ್ಷಗಳಲ್ಲಿ ಹೂಳು ತುಂಬಿಕೊಂಡು ಇಪಿಟಿಗಳು ಬಳಕೆಗೆ ಅಯೋಗ್ಯವಾಗುತ್ತವೆ. ‘ಒಟ್ಟಾರೆಯಾಗಿ ಹೇಳುವುದಾದರೇ ಆರಂಭದ ವರ್ಷಗಳಾದ 2014-15, 2015-16, 2016-17ರ ಅವಧಿಯಲ್ಲಿ ನಿರ್ಮಾಣವಾಗಿರುವ ತಡೆಗೋಡೆಗಳು ನಿರ್ವಹಣೆ ಕೊರತೆ, ಅನುದಾನದ ಅಲಭ್ಯತೆ ಮತ್ತು ಸೂಕ್ತ ನಿಗಾ ಇಲ್ಲದ ಕಾರಣ ಕಳಪೆ ಸ್ಥಿತಿಯಲ್ಲಿವೆ,’ ಎಂದು ವರದಿಯಲ್ಲಿ ವಿವರಿಸಲಾಗಿತ್ತು.
ಆನೆ ದಾಳಿಗಳ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದರೂ ರಾಮನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿತ್ತು.
ಮೈಸೂರಿನಲ್ಲಿ 2017-18 ಮತ್ತು 2018-19ರಲ್ಲಿ ಕೇವಲ 39.1 ಕಿ ಮೀ ತಡೆಗೋಡೆ ನಿರ್ಮಿಸಿದ್ದರೇ ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 382 ಕಿ ಮೀ ತಡೆಗೋಡೆ ನಿರ್ಮಿಸಲಾಗಿ ದೆ. ಹುಣಸೂರು ಮತ್ತು ವಿರಾಜಪೇಟೆ ವಿಭಾಗಗಳಲ್ಲಿಯೂ ತಡೆಗೋಡೆ ನಿರ್ಮಾಣದ ಪ್ರಮಾಣ ಅತ್ಯಂತ ಕಡಿಮೆ ಇದೆ. 16.3 ಕಿ ಮೀ ಮತ್ತು 9.14 ಕಿ ಮೀ ಉದ್ದದ ಎಲ್ಲಾ ರೀತಿಯ ತಡೆಗೋಡೆ ನಿರ್ಮಿಸಲಾಗಿದೆ ಎಂದು ವರದಿ ವಿವರಿಸಿದೆ. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಆನೆ ದಾಳಿ ಪ್ರಕರಣ ಸಂಖ್ಯೆ ಹೆಚ್ಚಳ; ತಡೆಗೋಡೆಗಳ ನಿರ್ಮಾಣದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಬಹಿರಂಗ
ಅಧ್ಯಯನ ಅವಧಿಯಲ್ಲಿ ರಾಮನಗರದಲ್ಲಿ ಕೇವಲ 9.86 ಕಿ ಮೀ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಮತ್ತು ಸಂಘರ್ಷದ ಪ್ರಕರಣಗಳು 2016-17ರಲ್ಲಿ 1,441 ಇದ್ದದ್ದು 2017-18ರಲ್ಲಿ 3,095ಕ್ಕೆ ಏರಿಕೆಯಾಗಿವೆ. ಮೈಸೂರಿನಲ್ಲಿ 40.10ಕಿ ಮೀ ಮಾತ್ರ ತಡೆಗೋಡೆ ಇದ್ದರೂ ಪ್ರಕರಣಗಳ ಸಂಖ್ಯೆ 767ರಿಂದ 1,248ವರೆಗೆ ಇದೆ ಎಂಬುದನ್ನು ವರದಿ ಹೊರಗೆಡವಿತ್ತು.