ಬೆಂಗಳೂರು; ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಸರ್ವೆ ನಂಬರ್ 79ರಲ್ಲಿ 38 ಕೋಟಿಗೂ (ಸರ್ಕಾರಿ ಮಾರ್ಗಸೂಚಿ ಮೌಲ್ಯ) ಹೆಚ್ಚು ಬೆಲೆಬಾಳುವ ಒಟ್ಟು 17 ಎಕರೆ 35 ಗುಂಟೆ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಲು ಸಹಕರಿಸಿದ್ದಾರೆ ಎಂದು ಆರೋಪಕ್ಕೆ ಒಳಗಾಗಿರುವ ಅಧಿಕಾರಿ, ನೌಕರರ ವಿರುದ್ಧ ಕಂದಾಯ ಇಲಾಖೆಯು ಇನ್ನೂ ಕಾನೂನು ಕ್ರಮ ಕೈಗೊಂಡಿಲ್ಲ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ 2023ರ ಮಾರ್ಚ್ 17ರಂದು ನಡೆದ ವಿಧಾನಪರಿಷತ್‌ನ ಅರ್ಜಿ ಸಮಿತಿ ಸಭೆಯಲ್ಲಿ ಚರ್ಚೆಯಾಗಿತ್ತು. ಅಲ್ಲದೇ ಇದಕ್ಕೆ ಸಂಬಂಧಿಸಿದ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ನೀಡಿದ್ದ ನಿರ್ದೇಶನವನ್ನು ಕಂದಾಯ ಇಲಾಖೆಯ (ಸೇವೆಗಳು-3) ಅಧೀನ ಕಾರ್ಯದರ್ಶಿಯು ಪಾಲಿಸಿಲ್ಲ ಎಂದು ಗೊತ್ತಾಗಿದೆ.
ಈ ಸಂಬಂಧ 2023ರ ಮಾರ್ಚ್ 18ರಂದು ಕಂದಾಯ ಇಲಾಖೆಯ (ಭೂ ಮಂಜೂರಾತಿ-1) ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಮ್ಮ ಸಿ ಅವರು ಕಂದಾಯ ಇಲಾಖೆಯ (ಸೇವೆಗಳು-3) ಅಧೀನ ಕಾರ್ಯದರ್ಶಿಗೆ ಪತ್ರ (ಸಂಖ್ಯೆ ಆರ್‌ಡಿ 33 ಎಲ್‌ಜಿಕ್ಯೂ 2021) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇದೇ ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಸರ್ವೆ ನಂಬರ್ 80ರಲ್ಲಿಯೂ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಿತ್ತು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಸರ್ವೆ ನಂಬರ್ 79ರಲ್ಲಿಯೂ 17 ಎಕರೆ 35 ಗುಂಟೆ ಜಮೀನು ಖಾಸಗಿಯವರ ಪಾಲಾಗಿರುವ ಪ್ರಕರಣವೂ ಮುನ್ನೆಲೆಗೆ ಬಂದಿದೆ.
‘ಯಲಹಂಕ ಜಾಲ ಹೋಬಳಿ ಶೆಟ್ಟಿಗೆರೆ ಗ್ರಾಮದ ಸರ್ವೆ ನಂಬರ್ 79ರಲ್ಲಿ ಒಟ್ಟು 80-29 ಎಕರೆ ಜಮೀನಿನ ಪೈಕಿ 17-35 ಎಕರೆ ಜಮೀನನ್ನು ಖಾಸಗಿಯವರ ಪಾಲಾಗಲು ಸಹಕರಿಸಿರುವ ಅಧಿಕಾರಿ/ನೌಕರರ ವಿರದ್ಧ ಕೈಗೊಂಡ ಶಿಸ್ತು ಕ್ರಮದ ಮಾಹಿತಿಯನ್ನು ನೀಡಬೇಕು ಎಂದು ವಿಧಾನಪರಿಷತ್ ಅರ್ಜಿಗಳ ಸಮಿತಿಯು (ಅರ್ಜಿ ಸಂಖ್ಯೆ 94/2020) ನಿರ್ದೇಶನ ನೀಡಿರುತ್ತದೆ. ಈ ಪ್ರಕರಣದಲ್ಲಿ ಎಸಗಿದ್ದಾರೆ ಎನ್ನಲಾದ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿ, ನೌಕರರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮದ ಮಾಹಿತಿಯನ್ನು ಕೂಡಲೇ ಒದಗಿಸಬೇಕು,’ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಪತ್ರ ಬರೆದಿರುವುದು ಗೊತ್ತಾಗಿದೆ. ಹಲವಾರು ಬಾರಿ ನೆನಪೋಲೆಗಳನ್ನು ಬರೆದಿದ್ದರೂ ಶಿಸ್ತು ಕ್ರಮದ ಮಾಹಿತಿಯನ್ನೇ ಒದಗಿಸದಿರುವುದು ಆರೋಪಿತ ಅಧಿಕಾರಿ, ನೌಕರರ ರಕ್ಷಣೆಗೆ ನಿಂತಿದೆಯೇ ಎಂಬ ಅನುಮಾನಕ್ಕೆ ದಾರಿಮಾಡಿಕೊಟ್ಟಿದೆ.
ಭೂ ದಾಖಲೆಗಳ ಪ್ರಕಾರ ಜಾಲ ಹೋಬಳಿಯ ಸರ್ವೆ ನಂಬರ್ 79ರಲ್ಲಿ ಒಟ್ಟು 115.09 ಎಕರೆ ಇದೆ. ಇದರಲ್ಲಿ 62.28 ಎಕರೆ ಖರಾಬು ಗೋಮಾಳ ಜಮೀನು ಎಂದು ನಮೂದಾಗಿದೆ. ಇನ್ನುಳಿದ 16 ಎಕರೆ ವಿಸ್ತೀರ್ಣ ಜಮೀನು ಕ್ರಮವಾಗಿ ಸಯ್ಯದ್ ಅಪ್ಸ್ ಮಹಮ್ಮದ್ ಅವರಿಗೆ ಒಟ್ಟು 15 ಎಕರೆ, ವಿದ್ಯಾ ಗೋಯಿಲ್ ಎಂಬುವರ ಹೆಸರಿನಲ್ಲಿ 1 ಎಕರೆ ಜಮೀನು ಇರುವುದು ಗೊತ್ತಾಗಿದೆ.
ಜಾಲ ಹೋಬಳಿ ಶೆಟ್ಟಿಗೆರೆ ಗ್ರಾಮದ ಸರ್ವೆ ನಂಬರ್ 80ರಲ್ಲಿ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಲು ಅಕ್ರಮಕ್ಕೆ ಸಹಕರಿಸಿದ್ದ ಆರೋಪದಡಿ ಭೂ ಮಾಪಕ ರಂಗಸ್ವಾಮಿ (45) ಎಂಬುವರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಭೂ ಮಾಪನಾ ಇಲಾಖೆಯ ಅಧಿಕಾರಿ ಇ. ಪ್ರಕಾಶ್ ಅವರು ಕೆಲ ದಾಖಲೆ ಸಮೇತ ದೂರು ನೀಡಿದ್ದರು. ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು ಕಚೇರಿಯಲ್ಲಿ ಸರ್ಕಾರಿ ಭೂ ಮಾಪಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ರಂಗಸ್ವಾಮಿ ಎಂಬಾತ ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಸರ್ವೇ ನಂಬರ್ 80ರಲ್ಲಿರುವ ಕ್ರಯಕ್ಕೆ ಪಡೆದಿರುವ 24 ಎಕರೆ ಜಮೀನು ದುರಸ್ತಿಪಡಿಸುವುದಕ್ಕಾಗಿ ರಚನಾ ಎಂಬುವವರು 2006ರ ಮಾರ್ಚ್ 31ರಂದು ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ್ದ ಅಂದಿನ ತಹಶೀಲ್ದಾರ್, ಜಮೀನು ಅಳತೆಗೆ ಆದೇಶ ಹೊರಡಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿತ್ತು.
ಸರ್ವೇ ನಂಬರ್ 80ರ ಜಮೀನು, ಸರ್ಕಾರಿ ಖರಾಬು ಜಮೀನು. ಈ ಸಂಬಂಧ ಲಭ್ಯವಿರುವ ಸರ್ಕಾರಿ ಕಡತಗಳನ್ನು ಸಂಗ್ರಹಿಸಿ ಅಳತೆ ಮಾಡಿ ವರದಿ ನೀಡಬೇಕಿತ್ತು. ಆದರೆ ದಾಖಲೆಗಳು ಕಣ್ಮರೆಯಾಗಿದ್ದವು ಎಂದು ಹೆಳಲಾಗಿತ್ತು. ಹೀಗಾಗಿ ಇವುಗಳನ್ನು ಪುನರ್ ಸೃಷ್ಟಿಸಿ ಪುನಃ ಅಳತೆ ಮಾಡಬೇಕಿತ್ತು. ಅರ್ಜಿದಾರರು ನೀಡಿದ್ದ ದಾಖಲೆಗಳನ್ನೇ ಅಂತಿಮವೆಂದು ಪರಿಗಣಿಸಿದ್ದ ಆರೋಪಿ ರಂಗಸ್ವಾಮಿ, ಅಳತೆ ಮಾಡಿ ವರದಿ ಸಲ್ಲಿಸಿದ್ದರು. ಇದರಿಂದಾಗಿ ಸರ್ಕಾರಿ ಜಮೀನು, ಖಾಸಗಿ ವ್ಯಕ್ತಿಗಳ ಪಾಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿತ್ತು.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ಹಲವಾರು ಪ್ರಕರಣಗಳಲ್ಲಿ ಅಧಿಕಾರಿ, ನೌಕರರು ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ಸೇರಿದಂತೆ ಮತ್ತಿತರೆ ತನಿಖಾ ಸಂಸ್ಥೆಗಳು ಆರೋಪ ಸಾಬೀತು ಪಡಿಸಿದ್ದರೂ ಕ್ರಮಕೈಗೊಳ್ಳುವ ಬಗ್ಗೆ ಕಂದಾಯ ಸಚಿವರಾಗಿದ್ದ ಅಶೋಕ್ ಅವರು ಯಾವುದೇ ಕಠಿಣ ನಿಲುವು ತಳೆದಿಲ್ಲ ಎಂದು ಗೊತ್ತಾಗಿದೆ.