ಬೆಂಗಳೂರು; ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 9,018 ಮಕ್ಕಳು ಅಪಹರಣ ಅಥವಾ ಕಾಣೆಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ರಾಜ್ಯ ಸರ್ಕಾರವು ಅಂಕಿ ಅಂಶಗಳನ್ನು ಬಹಿರಂಗಗೊಳಿಸಿದೆ.
ವಿಧಾನಪರಿಷತ್‌ನಲ್ಲಿ ಗೋವಿಂದರಾಜು ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವ ಆರಗ ಜ್ಞಾನೇಂದ್ರ ಅವರು ಬಹಿರಂಗಪಡಿಸಿರುವ ಅಂಕಿ ಅಂಶಗಳ ಪೈಕಿ ಎಷ್ಟು ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ ಎಂಬ ಬಗ್ಗೆ ನಿರ್ದಿಷ್ಟ ಸಂಖ್ಯೆಯನ್ನು ಒದಗಿಸಿಲ್ಲ. 9,018 ಮಕ್ಕಳು ಅಪಹರಣಕ್ಕೊಳಾಗಿದ್ದಾರೆಯೇ ಅಥವಾ ಕಾಣೆಯಾಗಿದ್ದಾರೆಯೇ ಎಂಬ ಬಗ್ಗೆ ಪ್ರತ್ಯೇಕಿಸಿ ಅಂಕಿ ಅಂಶಗಳನ್ನು ಒದಗಿಸಿಲ್ಲ.
‘ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ಸರಾಸರಿ 10ರಿಂದ ಶೇ.20ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ಕಳೆದ 8 ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಿ ಹೆಚ್ಚಾಗಿಲ್ಲ,’ ಎಂದು ಉತ್ತರ ನೀಡಿದ್ದಾರೆ.
9,018 ಮಕ್ಕಳ ಪೈಕಿ 2,858 ಗಂಡು ಮಕ್ಕಳನ್ನು ಅಪಹರಣ ಮಾಡಲಾಗಿದೆ. ಅದೇ ರೀತಿ 6,160 ಹೆಣ್ಣು ಮಕ್ಕಳನ್ನು ಅಪಹರಣ ಮಾಡಲಾಗಿದೆ. 2020ರಿಂದ 2023ರವರೆಗೆ 1,720 ಗಂಡುಮಕ್ಕಳು, 4,404 ಹೆಣ್ಣುಮಕ್ಕಳು ಸೇರಿ ಒಟ್ಟಾರೆ 6,124 ಮಕ್ಕಳ ಅಪಹರಣವಾಗಿದ್ದಾರೆ ಎಂಬುದು ಉತ್ತರದಿಂದ ಗೊತ್ತಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 4,242 ಮಕ್ಕಳ ಅಪಹರಣ/ಕಾಣೆಯಾಗಿರುವ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 12,592 ಪೋಕ್ಸೋ ದಾಖಲಾಗಿವೆ. 853 ಬಾಲ್ಯ ವಿವಾಹ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿವೆ. 319 ಬಾಲಕಾರ್ಮಿಕ ತಡೆ ಕಾಯ್ದೆ ಪ್ರಕರಣಗಳು ದಾಖಲಾಗಿವೆ. ಜೆಜೆ ಕಾಯ್ದೆ ಅಡಿ 292 ಪ್ರಕರಣಗಳು ದಾಖಲಾಗಿವೆ
2012ರಿಂದ 2023ರ ಜನವರಿ ಅಂತ್ಯಕ್ಕೆ 20,010 ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 9,434 ಪ್ರಕರಣಗಳು ವರದಿಯಾಗಿದ್ದರೆ , ಬಿಜೆಪಿ ಸರ್ಕಾರದ ಮೂರು ವರ್ಷಗಳಲ್ಲಿ 8,333 ಪ್ರಕರಣಗಳು ವರದಿಯಾಗಿವೆ.
ಒಟ್ಟು 20,010 ಪ್ರಕರಣಗಳ ಪೈಕಿ 19,147 ಪ್ರಕರಣಗಳು ನಿಜ ಎಂದು ಹೇಳಲಾಗಿದ್ದರೇ 385 ಪ್ರಕರಣಗಳು ಸುಳ್ಳು ಎಂದು ಹೇಳಲಾಗಿದೆ. 478 ಪ್ರಕರಣಗಳನ್ನು ವರ್ಗಾವಣೆ ಮಾಡಲಾಗಿದೆ. 1,277 ಪ್ರಕರಣಗಳಲ್ಲಿ ಕನ್ವಿಕ್ಷನ್ ಆಗಿದೆ. 6,766 ಪ್ರಕರಣಗಳು ವಿಲೇವಾರಿಯಾಗಿವೆ. 9,940 ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿ ಇವೆ,. 94 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿಲ್ಲ ಎಂಬುದು ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.