ಬೆಂಗಳೂರು; ರಾಜ್ಯದ ಒಂದು ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆಯಲ್ಲಿನ ಕಲ್ಲಿನ ಪರಿಮಾಣದ ನಿರ್ಧಾರಣೆಯಲ್ಲಿನ ವ್ಯತ್ಯಾಸವು 38.74 ಮೆಟ್ರಿಕ್ ಟನ್‌ನಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ತರಹದ ಗುತ್ತಿಗೆಗೆಳನ್ನು ಪರಿಗಣಿಸಿದಾಗ ಅಂದಾಜು 18,000 ದಿಂದ 20,000 ಕೋಟಿ ರು. ವಾರ್ಷಿಕ ವರಮಾನ ನಷ್ಟವಾಗಲಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕಳವಳ ವ್ಯಕ್ತಪಡಿಸಿದೆ.
2017-18ನೇ ಸಾಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ರಾಜಸ್ವ ವಲಯ) ವರದಿಯಲ್ಲಿನ ಕರ್ನಾಟಕದಲ್ಲಿ ಅಪ್ರಧಾನ ಖನಿಜಗಳ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ವ್ಯವಸ್ಥಿತ ಮತ್ತು ವೈಜ್ಞಾನಿಕ ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆ ಮೇಲಿನ ಕಾರ್ಯ ನಿರ್ವಹಣಾ ಲೆಕ್ಕಪರಿಶೋಧನೆ ಕುರಿತು ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವಿಧಾನಮಂಡಲಕ್ಕೆ ಮಂಡಿಸಿರುವ ವರದಿಯಲ್ಲಿ ಕಲ್ಲು ಗಣಿಗಾರಿಕೆಯಲ್ಲಿನ ಕಲ್ಲಿನ ಪರಿಮಾಣದ ನಿರ್ಧರಣೆಯಲ್ಲಿನ ವ್ಯತ್ಯಾಸದಿಂದಾಗಿ ಸಂಭವಿಸಲಿರುವ ವರಮಾನದ ನಷ್ಟವನ್ನು ಅಂದಾಜಿಸಿದೆ.
ಬೆಂಗಳೂರು ಗ್ರಾಮಾಂತರ ಸೇರಿದಂತೆ 13 ಜಿಲ್ಲೆಗಳಲ್ಲಿ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದ ಪ್ರದೇಶಗಳಲ್ಲಿ ಮತ್ತು ಗುತ್ತಿಗೆ ಇಲ್ಲದ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಂದ ವಸೂಲು ಮಾಡಬೇಕಿದ್ದ 354.26 ಕೋಟಿ ರು. ಪೈಕಿ ಕೇವಲ 34.06 ಕೋಟಿ ಮಾತ್ರ ವಸೂಲು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಪಿಎಸಿಗೆ ಉತ್ತರ ನೀಡಿದ್ದರ ಬೆನ್ನಲ್ಲೇ 20,000 ಕೋಟಿ ವರಮಾನ ನಷ್ಟವನ್ನು ಅಂದಾಜಿಸಿರುವುದು ಇಷ್ಟೊಂದು ಪ್ರಮಾಣದ ವರಮಾನವು ಸರ್ಕಾರದ ಬೊಕ್ಕಸದಿಂದ ತಪ್ಪಿ ಹೋಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಮಹಾಲೇಖಪಾಲರು ಒಂದೇ ಒಂದು ತಾಲೂಕಿನ ಕಲ್ಲು ಗಣಿಗಾರಿಕೆಯ ಪರಿಮಾಣದ ನಿರ್ಧಾರಣೆಯ ಕುರಿತಾದ ವ್ಯತ್ಯಾಸವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ತಂತ್ರಜ್ಞಾನದ ಸೇವೆಯನ್ನು ಬಳಸಿಕೊಂಡು ಲೆಕ್ಕ ಹಾಕಿ 38.74 ಕೋಟಿ ಮೆಟ್ರಿಕ್ ಟನ್‌ಗಳಷ್ಟಿದ್ದು, ರಾಜಧನ ರೂಪದಲ್ಲಿ ಸಂಭಾವ್ಯ ವರಮಾನ ನಷ್ಟ ರೂ 638.70 ಕೋಟಿಯಿಂದ ಹಾಗೂ 2,324.40 ಕೋಟಿ ನಡುವೆ ಇರುತ್ತದೆ ಎಂದು ವರದಿಯಲ್ಲಿ ಆಕ್ಷೇಪಿಸಿದ್ದರು.
‘ಇಷ್ಟು ಪ್ರಮಾಣದ ಸಂಭಾವ್ಯ ವರಮಾನ ನಷ್ಟಕ್ಕೆ ಸಮಿತಿ ತೀವ್ರ ಕಳವಳವನ್ನು ವ್ಯಕ್ತಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಎಲ್ಲಾ ತರಹದ ಗುತ್ತಿಗೆಗಳನ್ನು ಪರಿಗಣಿಸಿದಾಗ ಇದು ಅಂದಾಜು 18,000 ರಿಂದ 20,000 ಕೋಟಿ ವಾರ್ಷಿಕ ವರಮಾನ ನಷ್ಟವಾಗುವುದರಲ್ಲಿ ಪರಿಣಿಮಿಸಿದೆ, ‘ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಅಭಿಪ್ರಾಯಿಸಿದೆ.
ಅಲ್ಲದೆ ತೆರಿಗೆಯೇತರ ರಾಜಸ್ವವನ್ನು ವೃದ್ಧಿಸಲು ಅವಶ್ಯಕವಾಗಿರುವ ತುರ್ತು ಕ್ರಮಗಳನ್ನು ಹಿಂದೆ ಕರ್ನಾಟಕ ಸಾರಾಯಿ ಮಾರಾಟವನ್ನು ನಿಷೇಧಿಸಿ ಅಬಕಾರಿ ಇಲಾಖೆಯ ಆದಾಯವನ್ನು ಸುವ್ಯವಸ್ಥಿತಗೊಳಿಸಿದ ರೀತಿಯಲ್ಲಿಯೇ ಅಕ್ರಮ ಗಣಿಗಾರಿಕೆ ತಡೆಗಟ್ಟುವ ವಿಷಯದಲ್ಲೂ ಪರಿಣಾಮಕಾರಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂದೂ ಸಮಿತಿಯು ಶಿಫಾರಸ್ಸು ಮಾಡಿದೆ.
ಅಲ್ಲದೇ ‘ರಾಜ್ಯವು ಅಪ್ರಧಾನ ಖನಿಜಗಳಿಂದ ಪ್ರಸ್ತುತ ಸ್ವೀಕರಿಸುತ್ತಿರುವ ಸುಮಾರು 6,300 ಕೋಟಿ ತೆರಿಗೆಯೇತರ ರಾಜಸ್ವವನ್ನು ಎರಡರಿಂದ ಮೂರು ಪಟ್ಟು ವರ್ಧಿಸಲು ಇಲಾಖೆಗೆ ವಿಪುಲ ಅವಕಾಶಗಳಿವೆ. ಆದ್ದರಿಂದ ರಾಜ್ಯದ ರಾಜಸ್ವ ಆದಾಯವನ್ನು ವೃದ್ಧಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು,’ ಎಂದೂ ಸಮಿತಿಯು ಶಿಫಾರಸ್ಸು ಮಾಡಿದೆ.
ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2018ರ ಮಾರ್ಚ್ ಅಂತ್ಯಕ್ಕೆ ಸಲ್ಲಿಸಿದ್ದ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ ವರದಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿರುವ 354.26 ಕೋಟಿ ರು. ನಷ್ಟದ ಕುರಿತು ವಿಸ್ತೃತವಾಗಿ ಚರ್ಚಿಸಿತ್ತು. ವರದಿ ಸಲ್ಲಿಕೆಯಾಗಿ 3 ವರ್ಷಗಳಾಗಿದ್ದರೂ ದಂಡ ವಸೂಲಾತಿಗೆ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ರಾಜಕೀಯ ಹಿನ್ನೆಲೆ ಮತ್ತು ಪ್ರಭಾವಿಗಳ ಒಡೆತನದಲ್ಲಿರುವ ಕಲ್ಲು ಗಣಿ ಗುತ್ತಿಗೆದಾರರಿಂದ ಬಾಕಿ ಇರುವ 324 ಕೋಟಿ ರು.ಗಳನ್ನು ವಸೂಲು ಮಾಡಲು ಕಠಿಣ ಕ್ರಮ ಕೈಗೊಳ್ಳದಿರುವುದು ತಿಳಿದು ಬಂದಿದೆ.
ಸಿಎಜಿ ವರದಿಯಲ್ಲಿನ ಕಂಡಿಕೆಗಳಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಿದ್ಧಪಡಿಸಿರುವ 103ಕ್ಕೂ ಹೆಚ್ಚು ಪುಟಗಳ ಟಿಪ್ಪಣಿಯ ಅನುಪಾಲನಾ ವರದಿಯನ್ನು ಆಧರಿಸಿ ‘ದಿ ಫೈಲ್’ 2021ರ ಸೆಪ್ಟಂಬರ್ 7ರಂದೇ ವರದಿ ಪ್ರಕಟಿಸಿತ್ತು.
ಅಕ್ರಮ ಗಣಿಗಾರಿಕೆ; 354 ಕೋಟಿ ದಂಡದಲ್ಲಿ ವಸೂಲು ಮಾಡಿದ್ದು ಕೇವಲ 34 ಕೋಟಿ
ಸಿಎಜಿ ವರದಿ ಆಧರಿಸಿ ಕೈಗೊಂಡಿರುವ ಕ್ರಮದ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಹಾಲಪ್ಪ ಆಚಾರ್ ಅವರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ.
ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಚಾಮರಾಜನಗರ, ಹಾಸನ, ಗದಗ್‌ನ ಒಟ್ಟು 8 ಕಚೇರಿಗಳ ವ್ಯಾಪ್ತಿಗೆ ಸಂಬಂಧಿಸಿದಂತೆ 223.25 ಕೋಟಿ ಮತ್ತು ಚಾಮರಾಜನಗರ, ತುಮಕೂರು, ರಾಮನಗರ, ಮೈಸೂರು, ಚಿಕ್ಕಬಳ್ಳಾಪುರ, ಉಡುಪಿ ಸೇರಿದಂತೆ ಒಟ್ಟು 6 ಕಚೇರಿಗಳಿಗೆ ಸಂಬಂಧಿಸಿದಂತೆ 131.01 ಕೋಟಿ ಸೇರಿ ಒಟ್ಟು 354.26 ಕೋಟಿ ರು.ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ವಸೂಲಾತಿ ಮಾಡಬೇಕಿತ್ತು. ಆದರೆ ಈ ಪೈಕಿ ಕೇವಲ 34.06 ಕೋಟಿ ಮಾತ್ರ ವಸೂಲು ಮಾಡಿರುವುದು ಅನುಪಾಲನಾ ವರದಿಯಿಂದ ಗೊತ್ತಾಗಿದೆ.
ಜಿಲ್ಲಾವಾರು ವಿವರ ಇಲ್ಲಿದೆ
ದಕ್ಷಿಣ ಕನ್ನಡದಲ್ಲಿ ವಸೂಲು ಮಾಡಬೇಕಿದ್ದ 15.79 ಕೋಟಿ ರು ಪೈಕಿ ಕೇವಲ 13.06 ಲಕ್ಷ ರು. ವಸೂಲಾಗಿದ್ದು ಇನ್ನೂ 15. 65 ಕೋಟಿ ರು. ಬಾಕಿ ಇದೆ. ವಿಜಯಪುರದಲ್ಲಿ 2.41 ಕೋಟಿ ರು ಪೈಕಿ 21. 49 ಲಕ್ಷ ರು. ವಸೂಲು ಮಾಡಲಾಗಿದೆ. ಈ ಜಿಲ್ಲೆಯಲ್ಲಿ 2.19 ಕೋಟಿ ರು. ಬಾಕಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ 9.03 ಕೋಟಿ ಪೈಕಿ 2. 64 ಕೋಟಿ ವಸೂಲಿ ಮಾಡಲಾಗಿದ್ದು ಇನ್ನೂ 6.38 ಕೋಟಿ ರು. ವಸೂಲಿಗೆ ಬಾಕಿ ಉಳಿದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 22. 09 ಕೋಟಿ ರು.ನಲ್ಲಿ 1.83 ಕೋಟಿ ರು ಮಾತ್ರ ವಸೂಲಾಗಿದೆ. ಇದೊಂದೆ ಜಿಲ್ಲೆಯಲ್ಲಿ 20.25 ಕೋಟಿ ರು. ವಸೂಲಿಗೆ ಬಾಕಿ ಇದೆ. ಚಾಮರಾಜನಗರ ಜಿಲ್ಲೆಯಲ್ಲಿ 1.50 ಕೋಟಿ ರು ಪೈಕಿ 3.80 ಲಕ್ಷ ರು. ಮಾತ್ರ ವಸೂಲಾಗಿದೆ. ಇನ್ನೂ 1.46 ಕೋಟಿ ರು. ವಸೂಲು ಮಾಡಬೇಕಿದೆ.
ಹಾಸನ ಜಿಲ್ಲೆಯಲ್ಲಿ 15.46 ಕೋಟಿ ರು ಪೈಕಿ 15. 07 ಲಕ್ಷ ರು. ವಸೂಲಿ ಮಾಡಿ ಇನ್ನೂ 15.31 ಕೋಟಿ ರು. ಬಾಕಿ ವಸೂಲು ಮಾಡಿಲ್ಲ. ಗದಗ್ ಜಿಲ್ಲೆಯಲ್ಲಿ 14. 77 ಕೋಟಿ ರು. ರು. ಪೈಕಿ 33. 92 ಲಕ್ಷ ರು. ವಸೂಲಿ ಮಾಡಿರುವ ಜಿಲ್ಲಾಡಳಿತ 14. 43 ಕೋಟಿ ರು. ವಸೂಲು ಮಾಡಬೇಕಿದೆ. ತುಮಕೂರು ಜಿಲ್ಲೆಯಲ್ಲಿ 14. 62 ಕೋಟಿ ರು.ನಲ್ಲಿ 4. 28 ಕೋಟಿ ವಸೂಲು ಮಾಡಿದ್ದು ಇನ್ನೂ 10. 34 ಕೋಟಿ ರು. ಬಾಕಿ ವಸೂಲು ಮಾಡಿಲ್ಲ.
ರಾಮನಗರ ಜಿಲ್ಲೆಯಲ್ಲಿ 56. 64 ಕೋಟಿ ರು.ನಲ್ಲಿ 6. 41 ಕೋಟಿ ರು ವಸೂಲು ಮಾಡಿದ್ದು ಇನ್ನೂ 50. 23 ಕೋಟಿ ರು. ಬಾಕಿ ಇದೆ. ಇದು ಉಳಿದ ಜಿಲ್ಲೆಗಳಿಗಿಂತಲೂ ಹೆಚ್ಚಿನ ಮೊತ್ತವಾಗಿದೆ. ಚಿಕ್ಕಬಳ್ಳಾಪುರದಲ್ಲಿ 36. 25 ಕೋಟಿ ರು.ನಲ್ಲಿ 9.50 ಕೋಟಿ ರು ಮಾತ್ರ ವಸೂಲು ಮಾಡಿ 26. 66 ಕೋಟಿ ರು. ಬಾಕಿಗೆ ಕ್ರಮ ಕೈಗೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ 16. 42 ಕೋಟಿ ರು.ನಲ್ಲಿ 4. 03 ಕೋಟಿ ರು ಮಾತ್ರ ವಸೂಲು ಮಾಡಿರುವ ಜಿಲ್ಲಾಡಳಿತವು ಇನ್ನೂ 12. 39 ಕೋಟಿ ರು. ವಸೂಲು ಮಾಡುವ ಗೋಜಿಗೆ ಹೋಗಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುತ್ತಿಗೆ ಇಲ್ಲದ ಪ್ರದೇಶಗಳಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡಿ 12. 46 ಕೋಟಿ ರು. ಬೊಕ್ಕಸಕ್ಕೆ ನಷ್ಟವುಂಟಾಗಿತ್ತು. ಗುತ್ತಿಗೆ ಪ್ರದೇಶ ಹೊರಗೆ ಗಣಿಗಾರಿಕೆ ಮಾಡಿರುವ ಪ್ರಕರಣದಲ್ಲಿ 2.52 ಕೋಟಿ ರು.ನಲ್ಲಿ ನಯಾ ಪೈಸೆಯನ್ನೂ ವಸೂಲು ಮಾಡಿಲ್ಲ. ಅದೇ ರೀತಿ ಗಣಿ ಯೋಜನೆಯಲ್ಲಿ ನಿಗದಿಪಡಿಸಿರುವ ವಾರ್ಷಿಕ ಗುರಿ ಮೀರಿ ಉತ್ಪಾದನೆ ಮಾಡಿರುವ ಪ್ರಮಾಣಕ್ಕೆ ರಾಜಧನ ಮತ್ತು ಖನಿಜದ ಮೌಲ್ಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಇದ್ದ 19.53 ಲಕ್ಷ ರು. ಪೈಕಿ ನಯಾ ಪೈಸೆಯನ್ನೂ ವಸೂಲು ಮಾಡಿಲ್ಲದಿರುವುದು ಅನುಪಾಲನಾ ವರದಿಯಿಂದ ಗೊತ್ತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುತ್ತಿಗೆ ಇಲ್ಲದ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿರುವ ಪ್ರಕರಣಗಳಲ್ಲಿ 12.02 ಕೋಟಿ ರು.ನಲ್ಲಿ ನಯಾ ಪೈಸೆಯೂ ವಸೂಲಾಗಿಲ್ಲ. ಹಾಗೆಯೇ ಗಣಿ ಯೋಜನೆಯಲ್ಲಿ ನಿಗದಿಪಡಿಸಿರುವ ವಾರ್ಷಿಕ ಗುರಿ ಮೀರಿ ಉತ್ಪಾದನೆ ಮಾಡಿರುವ ಪ್ರಮಾಣಕ್ಕೆ ರಾಜಧನ ಮತ್ತು ಖನಿಜದ ಮೌಲ್ಯ, ಉತ್ಪಾದನೆ ಪ್ರಮಾಣವನ್ನು ಜಿಪಿಎಸ್ ಮೂಲಕ ಅಳತೆ ಮಾಡಿರುವ ಪ್ರಕರಣದಲ್ಲಿಯೂ ನಯಾ ಪೈಸೆ ವಸೂಲು ಮಾಡಿಲ್ಲ.
ಚಾಮರಾಜನಗರ ಜಿಲ್ಲೆಯಲ್ಲಿ ಗುತ್ತಿಗೆ ಇಲ್ಲದ ಪ್ರದೇಶಗಳಲ್ಲಿ ಕಾನೂನುಬಾಹಿರ ಗಣಿಗಾರಿಕೆ ನಡೆಸಿರುವ ಪ್ರಕರಣದಲ್ಲಿ 19. 51 ಕೋಟಿ ರು. ನಷ್ಟವಾಗಿರುವ ಪ್ರಕರಣದಲ್ಲಿಯೂ ಬಿಡಿಗಾಸನ್ನೂ ವಸೂಲು ಮಾಡಿಲ್ಲ. ಹಾಸನ ಜಿಲ್ಲೆಯಲ್ಲಿ ಗುತ್ತಿಗೆ ಇಲ್ಲದ ಪ್ರದೇಶಗಳಲ್ಲಿ ಕಾನೂನು ಬಾಹಿರ ಗಣಿಗಾರಿಕೆ ನಡೆಸಿರುವ ಪ್ರಕರಣಗಳಲ್ಲಿ 8.62 ಕೋಟಿ ರು. ನಲ್ಲಿಯೂ ಬಿಡಿಗಾಸು ಬಂದಿಲ್ಲ. ಅದೇ ರೀತಿ ಗಣಿ ಯೋಜನೆಯಲ್ಲಿ ನಿಗದಿಪಡಿಸಿರುವ ವಾರ್ಷಿಕ ಗುರಿ ಮೀರಿ ಉತ್ಪಾದನೆ ಮಾಡಿರುವ ಪ್ರಮಾಣಕ್ಕೆ ರಾಜಧನ ಮತ್ತು ಖನಿಜದ ಮೌಲ್ಯ ಮತ್ತು ದಂಡಕ್ಕೆ ಸಂಬಂಧಿಸಿದಂತೆ 6.19 ಕೋಟಿ ರು.ನಲ್ಲಿ ಕವಡೆ ಕಾಸೂ ವಸೂಲಾಗಿಲ್ಲ ಎಂಬುದು ಅನುಪಾಲನಾ ವರದಿಯಿಂದ ತಿಳಿದು ಬಂದಿದೆ.
ಗದಗ್‌ನಲ್ಲಿ ಗಣಿ ಯೋಜನೆಯಲ್ಲಿ ನಿಗದಿಪಡಿಸಿರುವ ವಾರ್ಷಿಕ ಗುರಿ ಮೀರಿ ಉತ್ಪಾದನೆ ಮಾಡಿರುವ ಪ್ರಮಾಣಕ್ಕೆ ರಾಜಧನ ಮತ್ತು ಖನಿಜ ಮೌಲ್ಯ ಹಾಗೂ ದಂಡಕ್ಕೆ ಸಂಬಂಧಿಸಿದಂತೆ 1.13 ಕೋಟಿ ರು. ಮತ್ತು ಉತ್ಪಾದನೆ ಪ್ರಮಾಣದಲ್ಲಿ ವ್ಯರ್ಥಗಳ ಪ್ರಮಾಣಕ್ಕೆ ರಾಜಧನ 64. 96 ಲಕ್ಷ ರು.ನಲ್ಲಿಯೂ ನಯಾ ಪೈಸೆ ವಸೂಲಾಗಿಲ್ಲ.
2018ರ ಮಾರ್ಚ್ 31ರ ಅಂತ್ಯಕ್ಕೆ ಸಿಎಜಿ ವರದಿ ನೀಡಿತ್ತು. ರಾಜ್ಯದಲ್ಲಿ ಅಪ್ರಧಾನ ಖನಿಜಗಳ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ವ್ಯವಸ್ಥಿತ ಮತ್ತು ವೈಜ್ಞಾನಿಕ ಗಣಿಗಾರಿಕೆಮತ್ತುಪರಿಸರ ಸಂರಕ್ಷಣೆ ಕುರಿತಂತೆ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ ನಡೆಸಿತ್ತು. ಇದಕ್ಕೆ ಸಂಬಂಧಿಸಿದಂತಗೆ 223.25 ಕೋಟಿ ಮೊತ್ತವೂ ಒಳಗೊಂಡಂತೆ ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿತ್ತು. ರಾಜಧನಕ್ಕೆ ಸಂಂಧಿಸಿದಂತೆ 131.01 ಕೋಟಿ ಒಳಗೊಂಡದಂತೆ ದಂಡವನ್ನು ವಿಧಿಸದಿರುವುದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿಯಲ್ಲಿ ಚರ್ಚಿಸಲಾಗಿತ್ತು.
ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ವಿಜಯಪುರ ಜಿಲ್ಲೆಯಲ್ಲಿನ ಕಲ್ಲು ಗಣಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡಿದೆ. 52 ಕಲ್ಲು ಗಣಿ ಗುತ್ತಿಗೆಗಳಲ್ಲಿ 3 ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 49 ಗುತ್ತಿಗೆದಾರರಿಗೆ ದಂಡ ವಸೂಲು ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ. 49 ಗುತ್ತಿಗೆದಾರರಲ್ಲಿ 22 ಗುತ್ತಿಗೆದಾರರಿಂದ 3. 04 ಕೋಟಿ ವಸೂಲು ಮಾಡಿ ಸರ್ಕಾರಕ್ಕೆ ಜಮೆ ಮಾಡಲಾಗಿದೆ. ಇಷ್ಟೂ ಜಿಲ್ಲೆಗಳಲ್ಲಿ 29,800 ಚದರ ಮೀಟರ್‌ಗಳಲ್ಲಿ 52 ಗುತ್ತಿಗೆಗಳು ಮುಕ್ತಾಯಗೊಂಡಿದ್ದರೂ ಗಣಿಗಾರಿಕೆ ಮುಂದುವರೆದಿತ್ತು.
ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ವಿಜಯನಗರದಲ್ಲಿ 46,000 ಚದರ ಮೀಟರ್‌ಗಳಲ್ಲಿ 33 ಅಪ್ರಧಾನ ಖನಿಜ ಗಣಿಗಳಲ್ಲಿ ಅವುಗಳ ಸೀಮೆಯನ್ನೂ ಮೀರಿದಂತೆ ಹೊರ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲಾಗಿತ್ತು. ಈ ಪ್ರಕರಣಗಳಲ್ಲಿನ ಒಟ್ಟು 33 ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ. 12 ಗುತ್ತಿಗೆದಾರರಿಂದ 75.77 ಲಕ್ಷ ರು. ವಸೂಲು ಮಾಡಲಾಗಿದೆ.
ಇದೇ ಜಿಲ್ಲೆಗಳಲ್ಲಿ 1.07 ಲಕ್ಷ ಚದರ ಮೀಟರ್‌ಗಳಲ್ಲಿ 109 ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಕಾನೂನುಬಾಹಿರ ಗಣಿಗಾರಿಕೆ ನಡೆಸಿದ್ದ ಪ್ರಕರಣಗಳಲ್ಲಿ 11 ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 98 ಗುತ್ತಿಗೆದಾರರಿಗೆ ದಂಡ ವಸೂಲು ಮಾಡಲು ನೋಟೀಸ್ ನೀಡಲಾಗಿದೆ. 98 ಗುತ್ತಿಗೆದಾರರಲ್ಲಿ 22 ಗುತ್ತಿಗೆದಾರರದಿಂದ 1.79 ಕೋಟಿ ರು. ವಸೂಲು ಮಾಡಿ ಸರ್ಕಾರಕ್ಕೆ ಜಮೆ ಮಾಡಿರುವುದು ತಿಳಿದು ಬಂದಿದೆ.