ಬೆಂಗಳೂರು; ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ವ್ಯವಹಾರವನ್ನು ಕಾಗದರಹಿತಗೊಳಿಸುವ ಉದ್ದೇಶದಿಂದ ಅನುಷ್ಟಾನಗೊಳ್ಳಬೇಕಿದ್ದ ಇ-ವಿಧಾನ ಮಂಡಲ ಯೋಜನೆ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ನೀಡಿರುವ ನೋಟೀಸ್‌ಗೆ ಉತ್ತರಿಸಲು ತಡಬಡಾಯಿಸುತ್ತಿರುವ ವಿಧಾನಸಭೆ ಸಚಿವಾಲಯವು ಇದೇ ಯೋಜನೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳು ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ಆರೋಪದಡಿಯಲ್ಲಿ ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರನ್ನು ಸೇವೆಯಿಂದಲೇ ಅಮಾನತುಗೊಳಿಸಿದೆ.
ಇ-ವಿಧಾನ್ ಯೋಜನೆಯನ್ನು ಅನ್ಯ ರಾಜ್ಯಗಳು ಗರಿಷ್ಠ 20 ಕೋಟಿ ವೆಚ್ಚದಲ್ಲಿಯೇ ಪೂರ್ಣಗೊಳಿಸುತ್ತಿದ್ದರೆ ಕರ್ನಾಟಕ ವಿಧಾನಸಭೆಯು ಕಿಯೋನಿಕ್ಸ್ ಮೂಲಕ 254 ಕೋಟಿ ರು. ಮೊತ್ತದ ಕಾರ್ಯಯೋಜನೆ ಸಿದ್ಧಪಡಿಸಿತ್ತು. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.
ಕಿಯೋನಿಕ್ಸ್ ಮೂಲಕ 253.75 ಕೋಟಿ ರೂಪಾಯಿ ವೆಚ್ಚದಲ್ಲಿ ಇ-ವಿಧಾನ ಮಂಡಲ ಯೋಜನೆ ಜಾರಿ ಮಾಡುವುದರ ಬದಲಾಗಿ ನೇವಾ ಮೂಲಕ ಯೋಜನೆ ಜಾರಿಗೊಳಿಸಲು ಮುಂದಾಗಿದ್ದ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಮುಖಂಡ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೊತ್ತಿನಲ್ಲೇ ಗೌಪ್ಯ ಮಾಹಿತಿಗಳು ಸೋರಿಕೆಯಾಗಿವೆ ಎಂಬುದನ್ನು ಮುಂದಿರಿಸಿಕೊಂಡು ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿರುವ ವಿಧಾನಸಭೆ ಸಚಿವಾಲಯದ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಗೌಪ್ಯ ಮಾಹಿತಿ ಸೋರಿಕೆಯಾಗಿದ್ದವೇ?
ಇ-ವಿಧಾನ್ ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ದಿನಪತ್ರಿಕೆಗಳಲ್ಲಿ ಅನಾವಶ್ಯಕ ಮತ್ತು ಇಲ್ಲಸಲ್ಲದ ಟೀಕೆಗಳು, ಸುದ್ದಿಗಳು ಪ್ರಕಟವಾಗಿರುತ್ತವೆ. ಈ ಯೋಜನೆ ಕುರಿತು ಕೆಲವೊಂದು ಗೌಪ್ಯ ಮಾಹಿತಿಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಈ ಸಂಬಂಧ ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಂದು ವಿಧಾನಸಭೆ ಸಚಿವಾಲಯದ ಗಣಕ ವಿಭಾಗದ ನಿರ್ದೇಶಕ ಜೆ ಇ ಶಶಿಧರ್ ಅವರು 2022ರ ಜುಲೈ 6ರಂದು ಗೌಪ್ಯ ವರದಿಯನ್ನು ಸಲ್ಲಿಸಿದ್ದರು.
‘ವಿಧಾನಸಭೆಯ ಸಚಿವಾಲಯದ ಕೆಲಸ ಕಾರ್ಯಗಳು, ಯೋಜನೆಗೆ ಸಂಬಂಧಿಸಿದಂತೆ ಕಡತದಲ್ಲಿರುವ ಮಾಹಿತಿಗಳನ್ನು ಗೌಪ್ಯವಾಗಿಡುವುದು ವಿಧಾನಸಭೆ ಸಚಿವಾಲಯದ ಅಧಿಕಾರಿ, ಸಿಬ್ಬಂದಿಗಳ ಆದ್ಯ ಕರ್ತವ್ಯ. ಆದರೆ ಇ-ವಿಧಾನ್ ಯೋಜನೆ ಕುರಿತಾದ ಮಾಹಿತಿಗಳು ಸೋರಿಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಭಾಧ್ಯಕ್ಷರು ಈ ವಿಷಯದ ಬಗ್ಗೆ ಮಾಹಿತಿಗಳು ಯಾವ ಮೂಲಗಳಿಂದ ಮತ್ತು ಹೇಗೆ ಸೋರಿಕೆಯಾಗಿವೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು 2022ರ ಡಿಸೆಂಬರ್ 29ರಂದು ಟಿಪ್ಪಣಿ ಹೊರಡಿಸಿದ್ದರು.
ಸಚಿವಾಲಯದ ಕಾರ್ಯಗಳಿಗೆ ಸಂಬಂಧಿಸಿದ ಕೆಲವು ಗೌಪ್ಯ ಮಾಹಿತಿಗಳು ಸೋರಿಕೆಯಾಗುತ್ತಿರುವುದು ಮತ್ತು ಅನಾಮಧೇಯ ವ್ಯಕ್ತಿಗಳು ಜಿ-ಮೇಲ್ ಮೂಲಕ ಗಣಕ ವಿಭಾಗದ ನಿರ್ದೇಶಕರ ಅಧಿಕೃತ ಮೇಲ್‌ಗೆ ಮಾಹಿತಿ ನೀಡುತ್ತಿದ್ದರು ಎಂಬುದರ ಹಿಂದೆ ಸಚಿವಾಲಯದ ಅಧಿಕಾರಿ, ನೌಕರರ ಪಾತ್ರ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಲಸೂರು ಪೊಲೀಸ್ ಠಾಣೆಯ ಸೈಬರ್ ವಿಭಾಗದ ಇನ್ಸ್‌ಪೆಕ್ಟರ್ ಅವರಿಗೆ 2023ರ ಜನವರಿ 5ರಂದು ಪತ್ರ ಬರೆದಿತ್ತು.
ಈ ಕುರಿತು ತನಿಖೆ ನಡೆಸಿದ್ದ ಸೈಬರ್ ವಿಭಾಗದ ಇನ್ಸ್‌ಪೆಕ್ಟರ್ ಅವರು ಇ-ವಿಧಾನ್ ಯೋಜನೆಯ ಮಾಹಿತಿ ಸೋರಿಕೆಯಾಗಿರುವುದರಲ್ಲಿ ಅಧಿಕಾರಿಯ ಪಾತ್ರ ಇರುವುದು ಕಂಡು ಬಂದಿದೆ ಎಂದು ಇನ್ಸ್‌ಪೆಕ್ಟರ್ ವರದಿ ನೀಡಿದ್ದರು.
ಸಚಿವಾಲಯದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾಧ್ಯಮಗಳಿಗೆ ಇ-ವಿಧಾನ್ ಯೋಜನೆಯ ಮಾಹಿತಿಗಳನ್ನು ಸೋರಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಇದೊಂದು ಗುರುತರವಾದ ಲೋಪವೆಂದು ಗಂಭಿರವಾಗಿ ಪರಿಗಣಿಸಿರುವ ವಿಧಾನಸಭೆ ಸಚಿವಾಲಯವು ಕರ್ನಾಟಕ ವಿಧಾನಸಭೆ ಸಚಿವಾಲಯದ ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರವಾಗಿರುವ ಸಭಾಧ್ಯಕ್ಷರು 2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ ನೇಮಕಾತಿ ಹಾಗೂ ಸೇವಾ ಷರತ್ತುಗಳು ನಿಯಮ 8 ಮತ್ತು 9(ಓ) ಹಾಗೂ ಅದೇ ನಿಯಮಾವಳಿಯ ಅನುಸೂಚಿ ಷೆಡ್ಯೂಲ್ II ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10ರ ಮೇರೆಗೆ ಅಧಿಕಾರಿಯೊಬ್ಬರನ್ನು ಸೇವೆಯಿಂದಲೇ ಅಮಾನತಿನಲ್ಲಿರಿಸಿರುವುದು ಆದೇಶದಿಂದ ತಿಳಿದುಬಂದಿದೆ.
ನೇವಾ ಮೂಲಕ ಇ-ವಿಧಾನ ಮಂಡಲ ಯೋಜನೆ ಜಾರಿ ಮಾಡಿದರೆ ಆಗುವ ಅನುಕೂಲಗಳ ಕುರಿತು ವಿಧಾನಸಭೆಯ ಸ್ಪೀಕರ್‌ಗೆ 2022ರ ಮೇ 5ರಂದು ಪತ್ರ ಬರೆಯಲಾಗಿದೆ. ಕಿಯೋನಿಕ್ಸ್ ಮೂಲಕ ಯೋಜನೆ ಜಾರಿ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ 254 ಕೋಟಿ ರೂಪಾಯಿ ನಷ್ಟವಾಗಲಿರುವುದರಿಂದ ಮಧ್ಯಪ್ರವೇಶಿಸುವಂತೆ ಸ್ಪೀಕರ್‌ಗೆ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಮನವಿಯಲ್ಲಿ ಕೋರಿದ್ದರು.
ಇ-ವಿಧಾನ ಮಂಡಲ ಯೋಜನೆ ಜಾರಿಗೆ 2016-17ರಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) 60.84 ಕೋಟಿ ರೂಪಾಯಿ ಅಂದಾಜಿಸಿತ್ತು. ಆದರೆ, ಕರ್ನಾಟಕ ವಿಧಾನ ಮಂಡಲವು ಈ ಯೋಜನೆ ಜಾರಿಗೆ ಕಿಯೋನಿಕ್ಸ್ ಸಂಸ್ಥೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿತ್ತು. ಇದರಂತೆ ಕಿಯೋನಿಕ್ಸ್ ಸುಮಾರು 254 ಕೋಟಿ ರೂಪಾಯಿ ಯೋಜನೆಗೆ ತಗುಲುವುದಾಗಿ ವರದಿ ನೀಡಿತ್ತು.
ಇ-ವಿಧಾನ್ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳು ನಿಗದಿತ ಕಾಲಾವಧಿಯಲ್ಲಿಯೇ ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದರೂ ಕರ್ನಾಟಕ ವಿಧಾನಸಭೆ ಮಾತ್ರ ಇನ್ನೂ ತೆವಳುತ್ತಲೇ ಇದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ನೇವಾ ವನ್ನು ಬಹುತೇಕ ರಾಜ್ಯಗಳು ಪರಿಣಾಮಕಾರಿಯಾಗಿ ಮತ್ತು ಎಲ್ಲಿಯೂ ದುಂದುವೆಚ್ಚಕ್ಕೆ ಅವಕಾಶಮಾಡಿಕೊಡದೆಯೇ ಅನುಷ್ಠಾನಗೊಳಿಸುತ್ತಿದ್ದರೆ ಕರ್ನಾಟಕ ವಿಧಾನಸಭೆಯು ಇನ್ನೂ ಕಾರ್ಯಯೋಜನೆಗೆ ಅರ್ಥಿಕ ಇಲಾಖೆಯ ಅನುಮೋದನೆ ಪಡೆದಿಲ್ಲ. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಇ-ವಿಧಾನ ಅನುಷ್ಠಾನದಲ್ಲಿ ಅನ್ಯ ರಾಜ್ಯಗಳು ಮುಂದು; ವೆಚ್ಚದಲ್ಲಿನ ಏರಿಕೆಯಿಂದ ಹಿಂದೆಬಿದ್ದ ಕರ್ನಾಟಕ
ಹರ್ಯಾಣ, ಒಡಿಶಾ, ಬಿಹಾರ್, ಪಂಜಾಬ್, ಮೇಘಾಲಯ, ಮಣಿಪುರ, ಗುಜರಾತ್, ಅರುಣಾಚಲ ಪ್ರದೇಶ, ತ್ರಿಪುರ, ಮಿಜೋರಾಂ ರಾಜ್ಯಗಳ ವಿಧಾನಸಭೆಯು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಶೀಘ್ರದಲ್ಲಿಯೇ ಕಾಗದರಹಿತವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ದುಂದುವೆಚ್ಚಕ್ಕೆ ಅವಕಾಶವಿಲ್ಲದೆಯೇ ಗರಿಷ್ಠ 20 ಕೋಟಿ ರು.ವೆಚ್ಚದಲ್ಲಿ ಕಾರ್ಯಯೋಜನೆ ವರದಿ ಸಿದ್ದಪಡಿಸಿದ ಕಾರಣ ಅಲ್ಲಿನ ಆರ್ಥಿಕ ಇಲಾಖೆಯು ಯಾವುದೇ ತಕರಾರು ಇಲ್ಲದೆಯೇ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ.
ವೆಚ್ಚ ಏರಿಕೆಯಾಗಿರುವುದೆಲ್ಲಿ?
ಯೋಜನೆ ಅನುಷ್ಠಾನದ ಮೊದಲ ಹಂತದಲ್ಲಿ ಸಾಫ್ಟ್‌ವೇರ್‌ಗೆ 39.20 ಕೋಟಿ, ಹಾರ್ಡ್‌ವೇರ್, ನೆಟ್‌ವರ್ಕಿಂಗ್‌ಗೆ 1,24,26,14,655 ರು ಸೇರಿ ಒಟ್ಟು 1,63,46,87,002 ರು. ವೆಚ್ಚ ಅಂದಾಜಿಸಲಾಗಿದೆ. ಮೊದಲ ಹಂತಕ್ಕೆ ಖರೀದಿಯಾಗುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗೆ ಜಿ ಎಸ್ ಟಿ 29.42 ಕೋಟಿ ರು ಭರಿಸಬೇಕು.
ಅದೇ ರೀತಿ ಯೋಜನೆ ಅನುಷ್ಠಾನದ 2ನೇ ಹಂತದಲ್ಲಿ 63.15 ಲಕ್ಷ ರು., ಸಾಫ್ಟ್‌ವೇರ್‌ಗೆ ಎಂದು ಅಂದಾಜಿಸಿರುವ ವಿಧಾನಸಭೆ ಸಚಿವಾಲಯವು ಹಾರ್ಡ್‌ವೇರ್, ನೆಟ್‌ವರ್ಕಿಂಗ್‌ಗೆ 50.94 ಕೋಟಿ ರು. ಸೇರಿ ಒಟ್ಟು 51,57,50,173 ರು. ಎಂದು ಅಂದಾಜಿಸಿದೆ. 2ನೇ ಹಂತದ ಉಪಕರಣಗಳ ಖರೀದಿಗೆ ಜಿ ಎಸ್ ಟಿ ಶುಲ್ಕ 9,28,35,031 ರು. ಎಂದು ಅಂದಾಜಿಸಿದೆ ಎಂದು ಗೊತ್ತಾಗಿದೆ.
ವಿಧಾನಮಂಡಲವನ್ನು ಕಾಗದ ರಹಿತವನ್ನಾಗಿಸುವ ಸಂಬಂಧ 2014ರಲ್ಲಿ ಉಭಯ ಸದನಗಳ ಅಂದಿನ ಪೀಠಾಧ್ಯಕ್ಷರು ಅಧ್ಯಯನ ಸಮಿತಿ ರಚಿಸಿದ್ದರು. ಈ ಸಮಿತಿಯು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಈ ಸಂಬಂಧ ವರದಿಯನ್ನು ನೀಡಿತ್ತು. ಈ ಮಧ್ಯೆ ಬಜೆಟ್ ಪೂರ್ವದಲ್ಲಿ ಸುಮಾರು 66.00 ಕೋಟಿ ರು.ಗಳ ಅಂದಾಜು ಪಟ್ಟಿಯನ್ನು ನೀಡಿತ್ತು.
ಆದರೆ ವಿಧಾನಸಭೆ ಸಚಿವಾಲಯವು 253 ಕೋಟಿ ರು.ವೆಚ್ಚದಲ್ಲಿ ಇ-ವಿಧಾನಮಂಡಲ್ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಅಲ್ಲದೆ ಇ-ವಿಧಾನಮಂಡಲ ಯೋಜನೆ ಕುರಿತು ಶಾಸಕರಿಗೆ ಯಾವುದೇ ಪ್ರಾಥಮಿಕ ತರಬೇತಿಯನ್ನೂ ನೀಡಿಲ್ಲ. ಇ-ಆಫೀಸ್ ತಂತ್ರಾಂಶವನ್ನು ಸಚಿವಾಲಯದ ಅಧಿಕಾರಿಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಸುತ್ತಿಲ್ಲ. ಹೀಗಿರುವಾಗ ಇ-ವಿಧಾನಮಂಡಲ ಯೋಜನೆ ಅನುಷ್ಠಾನಗೊಳಿಸಲು ನಡೆಸುತ್ತಿರುವ ತರಾತುರಿಯ ಹಿಂದೆ ‘ಕಮಿಷನ್ ವ್ಯವಹಾರ’ವೂ ನಡೆದಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಕಾಗದ ರಹಿತ ವಿಧಾನಮಂಡಲ ವಹಿವಾಟು/ಕಲಾಪ ವ್ಯವಸ್ಥೆ ಮಾಡುವುದು ಮತ್ತು ಕಾಗದಕ್ಕಾಗಿ ವ್ಯಯ ಮಾಡುತ್ತಿರುವ ಸರ್ಕಾರದ ಹಣವನ್ನು ಉಳಿತಾಯ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆಗೆ ಕೇಂದ್ರ ಸರ್ಕಾರವೇ ಶೇ. 60ರಷ್ಟು ನೀಡುವ ಹಣವನ್ನು ಒದಗಿಸಲಿದೆ. ಆರಂಭಿಕ ಹಂತದಲ್ಲಿ ಕೇಂದ್ರದ ಅನುದಾನವನ್ನು ಬಳಸಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.