ಉಕ್ಕು ಕಾರ್ಖಾನೆ ಸ್ಥಾಪಿಸದ ಮಿತ್ತಲ್‌ಗೆ ನೋಟೀಸ್‌; 2,659 ಎಕರೆ ವಶಕ್ಕೆ ಪಡೆಯಲು ಸರ್ಕಾರ ನಿರ್ಲಕ್ಷ್ಯ

ಬೆಂಗಳೂರು; ಉಕ್ಕು ಕೈಗಾರಿಕೆ ಸ್ಥಾಪಿಸುವ ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯ ಕುಡಿತಿನಿ ಮತ್ತು ವೇಣಿವೀರಾಪುರ ಗ್ರಾಮಗಳಲ್ಲಿ ಒಟ್ಟಾರೆ 2,659.75 ಎಕರೆ ಜಮೀನನ್ನು 11 ವರ್ಷಗಳ ಹಿಂದೆಯೇ ಹಂಚಿಕೆಯಾಗಿದ್ದರೂ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಾಡಿರುವ ಆರ್ಸೆಲ್ಲಾರ್‌ ಮಿತ್ತಲ್‌ ಕಂಪನಿಗೆ ರಾಜ್ಯ ಸರ್ಕಾರವು ನೋಟೀಸ್‌ ಜಾರಿಗೊಳಿಸಿದೆ. ಆದರೆ ಇದುವರೆಗೂ ಈ ಜಮೀನುಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರವೂ ವಿಫಲವಾಗಿದೆ.

 

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಉಕ್ಕಿನ ಘಟಕ ಆರಂಭಿಸುವ ಉದ್ದೇಶದಿಂದ ಜಮೀನು ಹಂಚಿಕೆ ಮಾಡಿಸಿಕೊಂಡು ಕಾರ್ಖಾನೆಯನ್ನೇ ಸ್ಥಾಪಿಸದ ಕಾರಣ ಭೂಮಾಲೀಕರಿಗೆ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿರುವ ಬೆನ್ನಲ್ಲೇ ಉದ್ದೇಶಿತ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದೆ ಎಂದು ರಾಜ್ಯ ಸರ್ಕಾರವು 2023ರ ಫೆ.4ರಂದು ನೀಡಿರುವ ನೋಟೀಸ್‌ ಮುನ್ನೆಲೆಗೆ ಬಂದಿದೆ.

 

ಕೆಐಎಡಿಬಿಯು ಯೋಜನೆ ಅನುಷ್ಠಾನಕ್ಕಾಗಿ 03 ವರ್ಷಗಳ ಕಾಲ ಹೆಚ್ಚುವರಿಯಾಗಿ ಕಾಲಾವಕಾಶ ನೀಡಿ ( 2017 ಜುಲೈ 31) ಆದೇಶ ಹೊರಡಿಸಿದ ನಂತರ 6 ವರ್ಷಗಳಾದರೂ ಉಕ್ಕು ಘಟಕ ಸ್ಥಾಪನೆ ಮಾಡಿಲ್ಲ. ನಿಗದಿತ ಅವಧಿಯೊಳಗಾಗಿ ಯೋಜನೆ ಅನುಷ್ಠಾನಗೊಳಿಸಲು ಸಕಾರಾತ್ಮಾಕ ಕ್ರಮಗಳನ್ನು ಆರ್ಸೆಲ್ಲಾರ್‌ ಮಿತ್ತಲ್‌ ವಿಫಲವಾಗುತ್ತಲೇ ಇದ್ದರೂ ರಾಜ್ಯ ಸರ್ಕಾರವು ಕೇವಲ ನೋಟೀಸ್‌ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ವಿನಃ ಕಂಪನಿ ವಿರುದ್ಧ ಕಠಿಣ ಕ್ರಮಕೈಗೊಂಡಿಲ್ಲ.

 

ಮಿತ್ತಲ್‌ ಕಂಪನಿಗೆ ನೋಟೀಸ್‌ ಜಾರಿಗೊಳಿಸಿರುವ ಕುರಿತು ಸಂಡೂರು ಶಾಸಕ ಈ ತುಕಾರಾಮ್‌ ಅವರು ನಿಯಮ 73 ರಡಿ ನೀಡಿದ್ದ ಗಮನಸೆಳೆಯುವ ಸೂಚನೆಗೆ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ವಿಧಾನಸಭೆಗೆ ಮಾಹಿತಿ ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆರ್ಸೆಲ್ಲಾರ್‌ ಮತಿfತಲ್‌, ಎನ್‌ಎಂಡಿಸಿ, ಬ್ರಾಹ್ಮಿಣಿ ಸ್ಟೀಲ್‌ (ಉತ್ತಮ್‌ ಗಾಲ್ವಾ ಫೆರ್ಹೋಸ್‌) ಕಂಪನಿಗಳಿಗೆ ಕಾರ್ಖಾನೆ ಸ್ಥಾಪಿಸುವ ಉದ್ದೇಶದಿಂದ ಕೆಐಎಡಿಬಿಯು ಸುಮಾರು 11,100 ಎಕರೆ ರೈತರ ಮತ್ತು ಸರ್ಕಾರಿ ಭೂಮಿಯನ್ನು ನೀಡಿತ್ತು. ಆದರೆ ಕಂಪನಿಗಳು ಇದುವರೆಗೂ ಕಾರ್ಖಾನೆಗಳನ್ನು ಸ್ಥಾಪಿಸಿಲ್ಲ. ಹೀಗಾಗಿ ಕಂಪನಿಗಳೀಗೆ ನೀಡಿರುವ ರೈತರ ಜಮೀನನ್ನು ಸರ್ಕಾರಕ್ಕೆ ಹಿಂಪಡೆದು ಬೇರೆಯವರಿಗೆ ಕಾರ್ಖಾನೆ ಸ್ಥಾಪಿಸುವುದಕ್ಕೆ ಅನುವು ಮಾಡಿಕೊಡುವ ಸಂಬಂಧ ತುಕಾರಾಂ ಅವರು ಗಮನಸೆಳೆದಿದ್ದರು.

 

ಕೆಐಎಡಿಬಿಯ ಯೋಜನೆ ಅನುಷ್ಠಾನಕ್ಕಾಗಿ 3 ವರ್ಷಗಳ ಹೆಚ್ಚುವರಿ ಕಾಲಾವಕಾಶ ನೀಡಿದ್ದು ಕಂಪನಿಯು ನಿಗದಿತ ಅವಧಿಯೊಳಗಾಗಿ ಯೋಜನೆ ಅನುಷ್ಠಾನಗೊಳಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ 2020ರ ನವೆಂಬರ್‌ 27ರಂದು ಮಂಡಳಿಯಿಂದ ನೋಟೀಸ್‌ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಕಂಪನಿಯು ತಮಗೆ ಹಂಚಿಕೆಯಾಗಿದ್ದ ಜಮೀನಿನ ಪೈಕಿ ಕೆಲವು ಭೂಮಾಲೀಕರು ಹೆಚ್ಚುವರಿ ಭೂ ಪರಿಹಾರ ಕೋರಿ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಎಸ್‌ಎಲ್‌ಪಿ (14772-851/2018) ಪ್ರಕರಣವು ಬಾಕಿ ಇರುವ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ವಿಳಂಬವಾಗುತ್ತಿದೆ,’ ಎಂದು ಸಮಜಾಯಿಷಿ ನೀಡಿತ್ತು.

 

ಇದೀಗ ಸರ್ವೋಚ್ಛ ನ್ಯಾಯಾಲಯವು ಸಿವಿಲ್‌ ಅಪೀಲ್‌ (ಸಂಖ್ಯೆ 621-700/2023) ಅಡಿಯಲ್ಲಿನ ದಾವೆಗೆ ಸಂಬಂಧಿಸಿದಂತೆ ಭೂ ಮಾಲೀಕರಿಗೆ 03 ತಿಂಗಳ ಒಳಗಾಗಿ ಎಚ್ಚುವರಿ ಭೂ ಪರಿಹಾರವನ್ನು ಪಾವತಿಸಬೇಕು ಎಂದು 2023ರ ಜನವರಿ 31ರಂದು ಆದೇಶಿಸಿದೆ. ಈ ಪ್ರಕರಣವು ಈಗ ಇತ್ಯರ್ಥಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರವು ನ್ಯಾಯಾಲಯದ ಆದೇಶದ ಅನ್ವಯ ಕ್ರಮ ವಹಿಸುತ್ತಿದೆ ಎಂದು ಸದನಕ್ಕೆ ಸರ್ಕಾರವು ಉತ್ತರ ಒದಗಿಸಿದೆ.

 

ಅಲ್ಲದೇ ಯೋಜನೆ ಅನುಷ್ಠಾನಗೊಳಿಸುವಲ್ಲಿನ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ 2023ರ ಫೆ.4ರಂದು ಕೆಐಎಎಡಿಬಿ ಕಾಯ್ದೆ ಕಲಂ 34-ಬಿ 1 ಅನ್ವಯ ನೋಟೀಸ್‌ ಜಾರಿಗೊಳಿಸಿದೆ ಎಂದೂ ಮಾಹಿತಿ ಒದಗಿಸಿದೆ.

 

ಉಕ್ಕು ಉತ್ಪಾದನಾ ಘಟಕ ಆರಂಭಿಸಲು ಬಳ್ಳಾರಿಯ ಸಂಡೂರು ತಾಲೂಕಿನ ಕುಡಿತಿನಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರ್ಸೆಲರ್‌ ಮಿತ್ತಲ್‌ ಇಂಡಿಯಾ ಲಿಮಿಟೆಡ್‌ಗೆ 2,659.75 ಎಕರೆ ಹಂಚಿಕೆಯಾಗಿತ್ತು.

 

ಹಂಚಿಕೆಯಾದ 8 ವರ್ಷದ ಬಳಿಕ ಆರ್ಸೆಲರ್‌ ಮಿತ್ತಲ್‌ ಕಂಪನಿಯು 2018ರಲ್ಲಿ ಗುತ್ತಿಗೆ ಕರಾರು ಪತ್ರ ಮಾಡಿಕೊಂಡಿತ್ತು. ಆದರೂ ಉದ್ಧೇಶಿತ ಯೋಜನೆ ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

 

ಮಿತ್ತಲ್‌ ಕಂಪನಿಯ ಧೋರಣೆಯಿಂದ 10 ಸಾವಿರ ಜನರ ಉದ್ಯೋಗದ ಕನಸು ಕಮರಿ ಹೋಗಿತ್ತು. ಆರ್ಸೆಲರ್‌ ಮಿತ್ತಲ್‌ ಉಕ್ಕಿನ ಕಾರ್ಖಾನೆಗೆ ವಶಪಡಿಸಿಕೊಂಡ ಜಮೀನಿನಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಯಾಗದೇ, ಈ ಜಮೀನುಗಳಲ್ಲಿ ಸೌರವಿದ್ಯುತ್‌ ಘಟಕ ಸ್ಥಾಪನೆ ಮಾಡಲು ಮಿತ್ತಲ್‌ ಸಂಸ್ಥೆ ಸರ್ಕಾರದೊಡನೆ ನಡೆಸಿದ್ದ ಮಾತುಕತೆಗೆ ಭೂ ಸಂತ್ರಸ್ತರ ವಿರೋಧವಿತ್ತು.

 

50,000 ಕೋಟಿ ರೂ ಮೊತ್ತದೊಂದಿಗೆ ಎಸ್ಸಾರ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಜಾಗತಿಕ ದೈತ್ಯ ಉಕ್ಕಿನ ಕಂಪನಿ ಆರ್ಸೆಲರ್ ಮಿತ್ತಲ್, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಉಕ್ಕು ಯೋಜನೆಗಳನ್ನು ವಿಸ್ತರಿಸಲು ಯೋಜಿಸಿತ್ತು. ಆದರೆ ಕರ್ನಾಟಕದಲ್ಲಿ ಉದ್ಧೇಶಿತ ಕೈಗಾರಿಕೆಯನ್ನು ಈವರೆವಿಗೂ ಸ್ಥಾಪಿಸಲು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

12 ವರ್ಷಗಳಾದರೂ ಕೈಗಾರಿಕೆ ಸ್ಥಾಪನೆ ಮಾಡದ ಮಿತ್ತೆಲ್‌ ಕಂಪನಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ನೋಟೀಸ್‌ ನೀಡಿತ್ತು. ಈ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸೃಂಗ ಸಭೆಯಲ್ಲಿ 6,000 ಕೋಟಿ ರು ಬಂಡವಾಳ ಹೂಡಲು ಇದೇ ಮಿತ್ತಲ್‌ ಕಂಪನಿಯೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಂಡಿತ್ತು.

 

2010ರಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್) ವೇಳೆ ಬಳ್ಳಾರಿಯಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಕಂಪನಿ ಸಹಿ ಮಾಡಿತ್ತು. 6 ಮಿಲಿಯನ್ ಟನ್ ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿತ್ತು.

 

ನಂತರ ಈ ಉದ್ದೇಶದಿಂದ ಹಿಂದೆ ಸರಿದಿದ್ದ ಈ ಕಂಪನಿಯು ಜಮೀನು ಹಂಚಿಕೆಯಾದ ನಂತರ ಕೆಲವು ಕಾರಣಗಳನ್ನು ಮುಂದಿಟ್ಟಿತ್ತು. ಸೋಲಾರ್ ಪ್ಲಾಂಟ್ ಸ್ಥಾಪನೆಗೆ ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರಿತ್ತು. ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಈ ಕಂಪನಿ ಇದ್ದಕ್ಕಿದ್ದಂತೆ ಹಿಂದಕ್ಕೆ ಸರಿದು ಸೋಲಾರ್‌ ಪವರ್‌ ಘಟಕಗಳನ್ನು ಉತ್ಪಾದಿಸಲು ಕೋರಿತ್ತಾದರೂ ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ.

 

ಅಷ್ಟೇ ಅಲ್ಲದೇ ಬಳ್ಳಾರಿ ಜಿಲ್ಲೆಯಲ್ಲಿ ಆರ್ಸೆಲರ್‌ ಮಿತ್ತಲ್‌ ಸೇರಿದಂತೆ ಹಲವು ಕಂಪನಿಗಳು ಸಾವಿರಾರು ಎಕರೆಯನ್ನು 10-12 ವರ್ಷಗಳ ಹಿಂದೆಯೇ ಮಂಜೂರು ಮಾಡಿಸಿಕೊಂಡಿದ್ದರೂ ಇದುವರೆಗೂ ಒಂದೇ ಒಂದು ಘಟಕವನ್ನು ಆರಂಭಿಸಿಲ್ಲ. ಹೀಗಾಗಿ 11,543.37 ಎಕರೆ ನಿಷ್ಪ್ರಯೋಜಕವಾಗಿರುವುದು ಗೊತ್ತಾಗಿದೆ.
ವಿಧಾನಪರಿಷತ್‌ನಲ್ಲಿ ವೈ ಎಂ ಸತೀಶ್‌ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರು ಕೈಗಾರಿಕೆಗಳನ್ನು ಸ್ಥಾಪಿಸದೇ ಇರುವ ಕಂಪನಿಗಳು ಮತ್ತು ಮಂಜೂರಾಗಿದ್ದ ಜಮೀನಿನ ವಿವರಗಳನ್ನು ಕಳೆದ ವರ್ಷವೂ ಮಾಹಿತಿ ಒದಗಿಸಿದ್ದರು.

 

ಕೆಲವು ಕಂಪನಿಗಳಿಗಾಗಿಯೇ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕೆ ಪ್ರದೇಶಗಳನ್ನು ಅಭಿವೃದ್ದಿಪಡಿಸಿದ್ದರೂ 10 ವರ್ಷಗಳಾದರೂ ಒಂದೇ ಒಂದು ಘಟಕವನ್ನೂ ಆರಂಭಿಸಿಲ್ಲ ಎಂಬುದು ನಿರಾಣಿ ಅವರು ಉತ್ತರ ಒದಗಿಸಿದ್ದರು.

 

ಬಳ್ಳಾರಿ ಜಿಲ್ಲೆಯೊಂದರಲ್ಲೇ ಕೈಗಾರಿಕೆಗಳ ಸ್ಥಾಪನೆಗಾಗಿ ಕಳೆದ 10-12 ವರ್ಷಗಳಿಂದ 15,778.19 ಎಕರೆ ಮಂಜೂರು ಮಾಡಿದ್ದರ ಪೈಕಿ 11,543.37 ಎಕರೆ ಫಡಾ ಬಿದ್ದಂತಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಅದೇ ರೀತಿ ತುಂಗಾಭದ್ರಾ ಮಿನರಲ್‌ ಪ್ರೈವೈಟ್‌ ಲಿಮಿಟೆಡ್‌ಗೆ 2008ರ ನವೆಂರ್‌ 14ರಂದು 135.46 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. 2013ರ ಮೇ 31ರಂದು ಉತ್ತಮ್‌ ಗಾಲ್ವಾ ಕಂಪನಿಗೆ 3,966 ಎಕರೆ ಮತ್ತು 2015ರ ಜೂನ್‌ 15ರಂದು 911.8 ಎಕರೆ, ಬಳ್ಳಾರಿ ಗಾರ್ಮೆಂಟ್ಸ್‌ ಎಕ್ಸ್‌ಪೋರ್ಟ್ಸ್‌ ಕ್ಲಸ್ಟರ್‌ ಪ್ರೈ ಲಿಮಿಟೆಡ್‌ಗೆ 50 ಎಕರೆ, ಕರ್ನಾಟಕ ಫೆರೋ ಕಂಪನಿಗೆ 156.01 ಎಕರೆ, ಕರ್ನಾಟಕ ವಿಜಯನಗರ ಸ್ಟೀಲ್‌ ಲಿಮಿಟೆಡ್‌ (ಎನ್‌ಎಂಡಿಸಿ) 2,843.98 ಎಕರೆಯನ್ನು 2018ರ ಜನವರಿ 11ರಂದು ಮಂಜೂರು ಮಾಡಲಾಗಿತ್ತು.

 

ಇದಲ್ಲದೇ ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ 4,877.81 ಎಕರೆ ಜಮೀನನ್ನು ಕೈಗಾರಿಕೆ ನಿರ್ಮಾಣ ಉದ್ಧೇಶಕ್ಕೆ ಜಮೀನು ಹಂಚಿಕೆ ಮಾಡಿತ್ತು. ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ 2017ರಲ್ಲಿ ಗುತ್ತಿಗೆ ಕರಾರು ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಪ್ರಕ್ರಿಯೆ ನಡೆದು 5 ವರ್ಷಗಳಾದರೂ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

 

ಸಾವಿರಾರು ಎಕರೆ ಜಮೀನಿನಲ್ಲಿ ಉದ್ದೇಶಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಎರಡೂ ಕಂಪನಿಗಳಿಗೆ 2020ರ ನವೆಂಬರ್‌ 27ರಂದು ತಿಳಿವಳಿಕೆ ನೋಟೀಸ್‌ ಜಾರಿಗೊಳಿಸಿತ್ತು.

 

2010ರ ಸಮಾವೇಶದಲ್ಲಿ 36 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದ್ದ ರೆಡ್ಡಿ ಸೋದರರ ಒಡೆತನದ ಬ್ರಾಹ್ಮಿಣಿ ಇಂಡಸ್ಟ್ರೀಸ್ ಕರ್ನಾಟಕ ಲಿಮಿಟೆಡ್ ಕಂಪನಿಯು ಹಂಚಿಕೆ ಮಾಡಿಸಿಕೊಂಡಿದ್ದ ಜಮೀನನ್ನು ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ ಅಕ್ರಮವಾಗಿ ಮಾರಾಟ ಮಾಡಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಆ ಕಂಪನಿಯು ಕೂಡ ಕಾರ್ಖಾನೆ ಸ್ಥಾಪನೆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ .

the fil favicon

SUPPORT THE FILE

Latest News

Related Posts