ಬೆಂಗಳೂರು; ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಪೊಲೀಸ್ ಅಧಿಕಾರವನ್ನು ಮರುಸ್ಥಾಪಿಸಲಾಗಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರವು ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಒಂದನೇ ಉಪ ಲೋಕಾಯುಕ್ತ ಹುದ್ದೆಯು ಕಳೆದ 9 ತಿಂಗಳಿನಿಂದಲೂ ಖಾಲಿ ಇದ್ದರೂ ಭರ್ತಿ ಮಾಡುವ ಗೋಜಿಗೆ ಹೋಗಿಲ್ಲ.
ಹಾಲಿ ಲೋಕಾಯುಕ್ತರಾಗಿರುವ ಬಿ ಎಸ್ ಪಾಟೀಲ್ ಅವರಿಂದ ತೆರವಾಗಿರುವ ಉಪ ಲೋಕಾಯುಕ್ತ ಹುದ್ದೆಗೆ ಭರ್ತಿ ಮಾಡುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಜಾಗೃತ ವಿಭಾಗ) 2022ರ ಜೂನ್ 24ರಂದೇ ಕಡತವನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿತ್ತು. ಈ ಕಡತವು ಕಳೆದ 9 ತಿಂಗಳಿನಿಂದಲೂ ತೆವಳುತ್ತಿದೆ.
ಈ ಕಡತವು 2022ರ ಡಿಸೆಂಬರ್ 2ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಳಿ ಇತ್ತು. ನಂತರ ಆ ಕಚೇರಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿ ಸೇರಿ ಮೂರು ತಿಂಗಳಾಗಿದೆ. ಆದರೂ ಈ ಕಡತಕ್ಕೆ ಇನ್ನೂ ಮುಕ್ತಿ ದೊರೆತಿಲ್ಲ ಎಂದು ಗೊತ್ತಾಗಿದೆ.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಒಂದನೇ ಉಪ ಲೋಕಾಯುಕ್ತ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿ, ತುರ್ತಾಗಿ ಹುದ್ದೆ ತುಂಬುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸೋಮವಾರ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಬೆಂಗಳೂರಿನ ವಕೀಲ ಎಸ್ ಉಮಾಪತಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತ್ತು.
ಅರ್ಜಿದಾರರ ವಾದ ಆಲಿಸಿದ್ದ ಪೀಠವು ಪ್ರತಿವಾದಿಗಳಾದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಸೇವಾ ನಿಯಮಗಳು) ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು.
ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಸ್ ವಿಶ್ವನಾಥ್ ಶೆಟ್ಟಿ ಅವರು ಜನವರಿ ಕೊನೆಯ ವಾರದಲ್ಲಿ ನಿವೃತ್ತಿ ಹೊಂದಿದ್ದರು. ಈ ಹುದ್ದೆಗೆ ಮೊದಲ ಉಪ ಲೋಕಾಯುಕ್ತ ಹುದ್ದೆಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರನ್ನು ಜೂನ್‌ನಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಹೀಗಾಗಿ, ಆ ಸ್ಥಾನವು ಖಾಲಿಯಾಗಿದೆ. ಈ ಹುದ್ದೆಗೆ ಸೂಕ್ತವಾದವರನ್ನು ಭರ್ತಿ ಮಾಡುವಂತೆ ಅರ್ಜಿದಾರರು ಕೋರಿದ್ದರು.
ಎರಡನೇ ಉಪ ಲೋಕಾಯುಕ್ತ ಹುದ್ದೆಗೆ ಮಾರ್ಚ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಲೋಕಾಯುಕ್ತರಾಗಿ ಐದು ವರ್ಷ ಪೂರೈಸಿದ್ದ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ನಿವೃತ್ತಿ ಬಳಿಕ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮುಖ್ಯಸ್ಥರಿಲ್ಲದೇ ಖಾಲಿ ಇತ್ತು.
ಬದ್ಧತೆ ಇದ್ದ ಸರ್ಕಾರ ಆಗಿದ್ದಲ್ಲಿ, ನ್ಯಾ. ವಿಶ್ವನಾಥ ಶೆಟ್ಟಿ ಅವರ ನಿರ್ಗಮನ ಮೊದಲೇ ಅರ್ಹ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕಿತ್ತು ಎಂಬ ಅಭಿಪ್ರಾಯ ಕೇಳಿಬಂದಿತ್ತು. ನ್ಯಾ ವಿಶ್ವನಾಥ ಶೆಟ್ಟಿ ಅವರು ನಿವೃತ್ತಿಯದರೂ ಅದರ ಬಗ್ಗೆ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಟೀಕೆಗೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಸರ್ಕಾರವು ಖಾಲಿಯಿದ್ದ ಉಪ ಲೋಕಾಯುಕ್ತ ಹುದ್ದೆಗೆ ನ್ಯಾ. ಕೆ.ಎನ್ ಫಣೀಂದ್ರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಫಣೀಂದ್ರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರ ಬೆನ್ನಲ್ಲೇ ಸರ್ಕಾರವು ಉಪ ಲೋಕಾಯುಕ್ತರಾಗಿದ್ದ ಬಿ ಎಸ್ ಪಾಟೀಲ್ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಿಸಿತ್ತು. ಹೀಗಾಗಿ ಮತ್ತೊಂದು ಉಪ ಲೋಕಾಯುಕ್ತ ಸ್ಥಾನ ಖಾಲಿ ಬಿದ್ದಿರುವುದನ್ನು ಸ್ಮರಿಸಬಹುದು.