ಹಲಾಲ್‌ ಪ್ರಮಾಣಪತ್ರ; ಹುಯಿಲೆಬ್ಬಿಸಿದ್ದವರಿಗೆ ಮುಖಭಂಗಕ್ಕೀಡು ಮಾಡಿದ ಸರ್ಕಾರ

ಬೆಂಗಳೂರು; ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಗಳಿಗೆ ಹಲಾಲ್‌ ಸರ್ಟಿಫೈಡ್‌ ಕಟ್ಟಡ ಎಂಬ ಪ್ರಮಾಣ ಪತ್ರ ನೀಡಲು ಮುನಿಸಿಪಲ್‌ ಕಾಯ್ದೆಗಳಲ್ಲಿ ಅವಕಾಶವೇ ಇಲ್ಲ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ.

 

ಆಸ್ಪತ್ರೆಗಳೂ ಸೇರಿದಂತೆ ಇನ್ನಿತರೆ ಕಟ್ಟಡಗಳಿಗೂ ಹಲಾಲ್ ಪ್ರಮಾಣಪತ್ರ ನೀಡುತ್ತಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಸಂಭವಿಸುತ್ತಿದೆ ಇದರಿಂದ ತೆರಿಗೆ ಮೂಲಕ ಬರಬೇಕಾದ ಹಣ ತಪ್ಪಿ ಹೋಗುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಇತ್ತೀಚೆಗಷ್ಟೇ ಹುಯಿಲೆಬ್ಬಿಸಿದ್ದರು. ಅಲ್ಲದೆ ಈ ಸಂಬಂಧ ಖಾಸಗಿ ವಿಧೇಯಕವನ್ನೂ ಮಂಡಿಸಲಾಗುವುದು ಎಂದೂ ಹೇಳಿದ್ದರು. ಸರ್ಕಾರವು ನೀಡಿರುವ ಉತ್ತರದಿಂದಾಗಿ ರವಿಕುಮಾರ್‌ ಅವರಿಗೆ ಮುಖಭಂಗವಾದಂತಿದೆ.

 

ಆದರೀಗ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರೇ ಎನ್‌ ರವಿಕುಮಾರ್‌ ಅವರಿಗೆ ನೀಡಿರುವ ಉತ್ತರದಲ್ಲಿ ‘ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಗಳಿಗೆ ಹಲಾಲ್‌ ಸರ್ಟಿಫೈಡ್‌ ಕಟ್ಡ ಎಂಬುದಾಗಿ ಪ್ರಮಾಣ ಪತ್ರ ನೀಡಲು ಮುನಿಸಿಪಲ್‌ ಕಾಯ್ದೆಗಳಲ್ಲಿ ಅವಕಾಶವೇ ಇಲ್ಲ,’ ಎಂದು ನೀಡಿರುವ ಸ್ಪಷ್ಟನೆಯು ಮಹತ್ವ ಪಡೆದುಕೊಂಡಿದೆ.

 

ರಾಜ್ಯದಲ್ಲಿ ಹಲವಾರು ಕಟ್ಟಡಗಳು ಹಲಾಲ್‌  ಸರ್ಟಿಫೈಡ್‌ ಕಟ್ಟಡ ಎಂಬುದಾಗಿ ಜಾಹೀರಾತು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಈ ಕುರಿತು ಸರ್ಕಾರದ ನಿಲುವೇನು, ಸರ್ಕಾರವು ಎಂದಿನಿಂದ  ಹಲಾಲ್‌ ಪ್ರಮಾಣಪತ್ರವನ್ನು ನೀಡುತ್ತಿದೆ ಎಂದು ವಿಧಾನಪರಿಷತ್‌ನ ಸದಸ್ಯ ಎನ್‌ ರವಿಕುಮಾರ್‌ ಅವರು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರು.

 

ಅಲ್ಲದೇ ಹಲಾಲ್‌ ಸರ್ಟಿಫೈಡ್‌ ಕಟ್ಟಡ ಎಂದರೇನು, ಈ ಕಟ್ಟಡವನ್ನು ಕೇವಲ ಒಂದು ಧರ್ಮ ವಿಶೇಷದವರು ಮಾತ್ರ ಖರೀದಿಸಬೇಕು ಎಂಬುದರ ಕುರಿತು ಸರ್ಕಾರದ ನಿಲುವೇನು, ಯಾವುದೇ ಕಟ್ಟಡ ಇಂತಹ ಹಲಾಲ್‌ ಪ್ರಮಾಣೀಕೃತ ಕಟ್ಟಡ ಎಂಬುದಾಗಿ ಘೋಷಣೆಯು ಸಮಾಜದಲ್ಲಿ ಸಂಘರ್ಷವನ್ನು ಉಂಟು ಮಾಡುವ ಕಾರಣಕ್ಕಾಗಿ ಅಂತಹ ಕಟ್ಟಡಗಳಿಗೆ ನೀಡಿದ ಅನುಮತಿಯನ್ನು ಶಾಶ್ವತವಾಗಿ ರದ್ದುಗೊಳಿಸುವ ಕುರಿತು ಸರ್ಕಾರದ ನಿಲುವೇನು, ಸದರಿ ಕಟ್ಟಡದ ಮಾರಾಟ, ಖರೀದಿ ನೋಂದಣಿಯನ್ನು ತಡೆಹಿಡಿಯುವ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಎಂದೂ ಪ್ರಶ್ನೆ ಕೇಳಿದ್ದರು.

 

ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ‘ಹಲಾಲ್‌ ಸರ್ಟಿಫಿಕೇಟ್‌ನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ನೀಡುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡಗಳಿಗೆ ಹಲಾಲ್‌ ಸರ್ಟಿಫೈಡ್‌ ಕಟ್ಟಡ ಎಂಬ ಪ್ರಮಾಣ ಪತ್ರ ನೀಡುತ್ತಿರುವ ಯಾವುದೇ ಪ್ರಕರಣವೂ ವರದಿಯಾಗಿರುವುದಿಲ್ಲ,’ ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.

 

ನಗರಾಭಿವೃದ್ಧಿ ಸಚಿವ ಬೈರತಿಬಸವರಾಜು ಅವರು ನೀಡಿರುವ ಉತ್ತರದ ಪ್ರತಿ

 

ಹಲಾಲ್ ಮುದ್ರೆ ಹಾಕುವ ಪದ್ದತಿ ಕೇವಲ ಮಾಂಸಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಆಸ್ಪತ್ರೆ, ಅನೇಕ ಖಾದ್ಯ, ಬೇರೆ ಬೇರೆ ಕಡೆಗಳಲ್ಲೂ ಹಲಾಲ್ ಮುದ್ರೆ ಇದೆ. ಪ್ರಮಾಣಪತ್ರ ಕೊಡಲು ಇವರು ಯಾರು ಎಂದು ಎನ್‌ ರವಿಕುಮಾರ್‌ ಅವರು ಇತ್ತೀಚೆಗಷ್ಟೇ ಪ್ರಶ್ನಿಸಿದ್ದರು.

 

ಹಲಾಲ್​​ಗೆ ಮುಖ್ಯ ಅಥಾರಿಟಿ ಏನು, ಹಲಾಲ್ ಸಂಸ್ಥೆಯ ವ್ಯಾಪ್ತಿ ಎಷ್ಟು, ಕಿರಾಣಿ ಅಂಗಡಿ ಪದಾರ್ಥಗಳ ಮೇಲೆ ಹಲಾಲ್ ಪ್ರಮಾಣಪತ್ರ ನೀಡುತ್ತಾರೆ. ಆಸ್ಪತ್ರೆಗೂ ಹಲಾಲ್ ಪ್ರಮಾಣಪತ್ರ ನೀಡುತ್ತಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಆಗುತ್ತಿದೆ. ತೆರಿಗೆ ಮೂಲಕ ಬರಬೇಕಾದ ಹಣ ತಪ್ಪಿ ಹೋಗುತ್ತಿದೆ ಎಂದು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts