ಗಾರ್ಮೆಂಟ್‌ ನೌಕರನಿಂದ ಹಣಕ್ಕೆ ಬೇಡಿಕೆ ; ‘ದಿ ಫೈಲ್‌’ ವರದಿ ಬೆನ್ನಲ್ಲೆ ವೈದ್ಯರಿಬ್ಬರ ಅಮಾನತು

ಬೆಂಗಳೂರು; ಸರ್ಕಾರಿ ಆಸ್ಪತ್ರೆಯ ವೈದ್ಯರಿಬ್ಬರು ಗಾರ್ಮೆಂಟ್‌ ನೌಕರನೊಬ್ಬನಿಂದ ಹಣಕ್ಕೆ ಬೇಡಿಕೆ ಇರಿಸಿದ್ದ ವಿಡಿಯೋವನ್ನಾಧರಿಸಿ ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದೀಗ ವೈದ್ಯರಿಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

 

ಈ ಘಟನೆಯು ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿತ್ತು. ಬಿಡದಿ ನಿವಾಸಿ ಗಾರ್ಮೆಂಟ್‌ ನೌಕರ ಮಂಜುನಾಥ ಎಂಬುವರ ಪತ್ನಿ ರೂಪಾ ಅವರಿಗೆ ಹೆರಿಗೆ ಮಾಡಿಸಿದ್ದಕ್ಕೆ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ ಶಶಿಕಲಾ ಹಾಗೂ ಡಾ ಐಶ್ವರ್ಯ ಎಂಬುವರು 6 ಸಾವಿರ ರುಪಾಯಿಗಳ ಲಂಚಕ್ಕೆ ಬೇಡಿಕೆ ಇರಿಸಿದ್ದರು.

 

‘ನೀವ್‌ ಕೊಡೋ ಟೂ ತೌಸಂಡ್‌ನ್ನು ನಾನೊಬ್ಳೇ ಇಟ್ಕೊಳ್ಳಲ್ಲ…ನಾನು ಎಲ್ರಿಗೂ ಡಿವೈಡ್‌ ಮಾಡ್ಬೇಕು… ನೀವ್ ಕೊಟ್ಟಿರೋ ಟೂ ತೌಸೆಂಡ್‌ನಲ್ಲಿ ಯಾರ್ಯಾರಿಗೆ ಕೊಡ್ಲಿ….ನಾನೊಬ್ಳೇ ಇಟ್ಕೊಳ್ಳಲ್ಲ..’
ಗಾರ್ಮೆಂಟ್‌ ನೌಕರ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಗೋಗರೆದರೂ ಮತ್ತು ವೇತನ ಆಗಿಲ್ಲ ಎಂದು ಅಂಗಲಾಚಿದರೂ ಕಿಂಚಿತ್ತೂ ಕರಗದ ಆಸ್ಪತ್ರೆ ನೌಕರರು ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸುವ ಮೂಲಕ ಕ್ರೌರ್ಯವನ್ನು ಮೆರೆದಿದ್ದರು.

 

‘ನಾನು ಅವ್ರಿಗೆ ಟೂ ತೌಸಂಡ್‌ ಕೊಡ್ಬೇಕು. ಇವ್ರಿಗೆ ಟೂ ತೌಸಂಡ್‌ ಕೊಡ್ಬೇಕು….ನೀವು ಕೊಡೋ ಟೂ ತೌಸೆಂಡ್‌ನ್ನು ಫೈವ್‌ ಹಂಡ್ರೆಡ್‌ ನಂತೆ ಹಂಚಬೇಕು.ಯಾರಿಗೆ ಕೊಡ್ಲಿ…ನೀವೇ ಕೊಟ್ಟು ಹೋಗಿ…ನನಗೆ ತಲೆನೋವೇ ಇರಲ್ಲ….ಎಲ್ರಿಗೋ ಒಂದೇ ರೂಲ್ಸು….ಪಾರ್ಟಿಯಾಲಿಟಿ ಮಾಡೋಕ್ಕಾಗಲ್ಲ….’ ಎಂದು ಗಾರ್ಮೆಂಟ್‌ ನೌಕರನಿಂದ ಹಣ ಸುಲಿಗೆ ಇಳಿದಿದ್ದರು. ಈ ಕುರಿತು ‘ದಿ ಫೈಲ್‌’ ಮಧ್ಯಾಹ್ನ 12.12 ಗಂಟೆಗೆ ವಿಡಿಯೋ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

‘ಟೂ ತೌಸಂಡ್‌ ನಾನೊಬ್ಳೆ ಇಟ್ಕೊಳ್ಳಲ್ಲ, ಅದು ಸಾಕಾಗಲ್ಲ, ನೀವೇ ಕೊಟ್ಹೋಗಿ’; ಸರ್ಕಾರಿ ಆಸ್ಪತ್ರೆ ಕ್ರೌರ್ಯ ದರ್ಶನ

ವರದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲೇ ಉಳಿದ ಮಾಧ್ಯಮಗಳು ‘ದಿ ಫೈಲ್‌’ ವರದಿಯನ್ನು ಹಿಂಬಾಲಿಸಿದವು. ತಕ್ಷಣವೇ ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವೈದ್ಯರಿಬ್ಬರನ್ನು ಪತ್ತೆ ಹಚ್ಚಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ ಸಚಿವ ಡಾ ಕೆ ಸುಧಾಕರ್‌ ಕೂಡ ಟ್ವೀಟ್‌ ಕೂಡ ಮಾಡಿದ್ದಾರೆ.

 

‘ಕೇವಲ ಸುಸಜ್ಜಿತ ಕಟ್ಟಡಗಳು, ಅತ್ಯಾಧುನಿಕ ಉಪಕರಣಗಳು, ಅತ್ಯುತ್ತಮ ಭೌತಿಕ ಮೂಲಸೌಕರ್ಯಗಳಿಂದ ಒಂದು ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ. ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ಉಳ್ಳ ವೃತ್ತಿಪರ ವೈದ್ಯರಿಂದ ಒಂದು ಆಸ್ಪತ್ರೆ ಒಳ್ಳೆಯ ಆಸ್ಪತ್ರೆ ಎನಿಸಿಕೊಳ್ಳುತ್ತದೆ.

 

ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಭ್ರಷ್ಟಾಚಾರ ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಮನೋಧರ್ಮ ಇಲ್ಲದ ವೈದ್ಯರು, ಸಿಬ್ಬಂದಿಗಳನ್ನು ಮುಲಾಜಿಲ್ಲದೇ ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದು ಟ್ವೀಟ್‌ ಮಾಡಿದ್ದಾರೆ.

 

‘ಆಸ್ಪತ್ರೆ ವೈದ್ಯರು ಹಣಕ್ಕೆ ಬೇಡಿಕೆ ಇಟ್ಟಿರುವುದು ವಿಡಿಯೊದಲ್ಲಿ ಬಹಿರಂಗ ಆಗಿದೆ. ವಿಡಿಯೊದಲ್ಲಿ ಮಾತನಾಡಿರುವ ಇಬ್ಬರೂ ವೈದ್ಯರನ್ನು ಈಗಾಗಲೇ ಸೇವೆಯಿಂದ ಅಮಾನತು ಮಾಡಲಾಗಿದೆ. ಉಳಿದಂತೆ ಇನ್ನೂ ಯಾರು ಯಾರಿಗೆ ಹಣ ಸಂದಾಯ ಆಗುತ್ತಿತ್ತು ಎಂಬುದರ ಕುರಿತು ಇಲಾಖೆ ಮಟ್ಟದಲ್ಲಿ ತನಿಖೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

SUPPORT THE FILE

Latest News

Related Posts