ಅನುದಾನ;ವಿವಿಗಳಿಗೆ ಅಸಮಾನ ಹಂಚಿಕೆ, ಸೌಲಭ್ಯಗಳಿಂದ ವಂಚಿತರಾದ ಪರಿಶಿಷ್ಟ ವಿದ್ಯಾರ್ಥಿಗಳು

photo credit;deccanhearald

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ 24 ವಿಶ್ವವಿದ್ಯಾಲಯಗಳಿಗೆ ಸಮಾನವಾಗಿ ಅನುದಾನ ಹಂಚಿಕೆಯಾಗುತ್ತಿಲ್ಲ. ಹೀಗಾಗಿ ಅನುದಾನದ ಕೊರತೆಯಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿನ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯು ಪತ್ತೆ ಹಚ್ಚಿದೆ.

 

ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿನ ವಿಶ್ವವಿದ್ಯಾಲಯಗಳು, ಕಾರ್ಯಕ್ರಮಗಳು, ಯೋಜನೆಗಳು ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಪರಿಶೀಲನೆ ನಡೆಸಿರುವ ಸಮಿತಿಯು ವಿಶ್ವವಿದ್ಯಾಲಯಗಳಲ್ಲಿನ ಅಸಮಾನ ಹಂಚಿಕೆಯನ್ನು ಮುನ್ನೆಲೆಗೆ ತಂದಿದೆ.

 

ಪಿಹೆಚ್‌ಡಿ, ಎಂ ಫಿಲ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಫೆಲೋಶಿಪ್‌ ಮತ್ತು ನಿರ್ವಹಣಾ ವೆಚ್ಚವು ಒಂದೊಂದು ವಿಶ್ವವಿದ್ಯಾಲಯದಲ್ಲಿ ಒಂದೊಂದು ರೀತಿ ಹಂಚಿಕೆ ಮಾಡುವ ಮೂಲಕ ತಾರತಮ್ಯ ಎಸಗಲಾಗಿದೆ. ಅಲ್ಲದೇ ವಿಶ್ವವಿದ್ಯಾಲಯಗಳಲ್ಲಿ ಏಕರೂಪವಾಗಿ ಸಮಾನ ಫೆಲೋಶಿಪ್‌ ನೀಡಲು ಸಮಾನ ನಿಯಮವನ್ನು ಇದುವರೆಗೂ ರೂಪಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಮೈಸೂರು ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ನೀಡದ ಕಾರಣ ನೂರಾರು ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

‘ಉನ್ನತ ಶಿಕ್ಷಣ ಇಲಾಖೆಯಡಿ ಬರುವ 24 ವಿಶ್ವವಿದ್ಯಾಲಯಗಳಿಗೆ ಎಸ್‌ಸಿಸಿಪಿ ಮತ್ತು ಎಸ್‌ಟಿಪಿ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡದಿರುವುದು, ಅನುದಾನದ ಕೊರತೆಯಿಂದಾಗಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಸಮಿತಿಯು ಗಮನಿಸಿತು. ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸಮಾನವಾಗಿ ಹಣ ಹಂಚಿಕೆ ಮಾಡಲು ಅನುದಾನ ಕೊರತೆ ಇದೆ. ವಿದ್ಯಾರ್ಥಿಗಳ ಪ್ರವೇಶಾತಿ ಆಧಾರದ ಮೇಲೆ ತರ್ಕಬದ್ಧವಾಗಿ ಅನುದಾನ ಹಂಚಿಕೆ ಮಾಡಬೇಕು,’ ಎಂದು ಸಮಿತಿಯು ಸಲಹೆ ನೀಡಿದೆ.

 

ರಾಜ್ಯದಲ್ಲಿ 53 ಪರಿಶಿಷ್ಟ ಜಾತಿಯ ಕ್ಷೇತ್ರಗಳಿವೆ. ಅಲ್ಲಿಯ ಅಭಿವೃದ್ಧಿಗಾಗಿ ಹಣ ಹಂಚಿಕೆಯಾಗುತ್ತಿಲ್ಲ. ಮೀಸಲಾತಿ ಕ್ಷೇತ್ರಗಳಲ್ಲಿ ಶೇ. 50ರಷ್ಟು ವಿದ್ಯಾರ್ಥಿಗಳಿರುವ ಕಡೆ 1 ಅಥವಾ 2 ಕೊಠಡಿಗಳನ್ನು, ವಿದ್ಯಾರ್ಥಿಗಳಿಲ್ಲದ ಕಡೆ 3 ಅಥವಾ 4 ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇಲಾಖೆಯು ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲ. ಹೀಗಾಗಿ ಅನುದಾನದ ದುರುಪಯೋಗ ಮತ್ತು ಅಸಮತೋಲನವಾಗುತ್ತಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ.

 

ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡಲು ಉನ್ನತ ಶಿಕ್ಷಣ ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಲ್ಯಾಪ್‌ಟಾಪ್‌ ನೀಡಲು 62 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಅಧಿಕಾರಿಗಳೇ ಸಮಿತಿಗೆ ಮಾಹಿತಿ ಒದಗಿಸಿದ್ದಾರೆ.

 

ಇನ್ನು ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳು ಭರ್ತಿಯಾಗಿಲ್ಲ.ಹುದ್ದೆಗಳು ಭರ್ತಿಯಾಗದ ಕಾರಣ ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆಯಾದರೂ ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳಿಗೆ ಯಾವುದ ಮೀಸಲಾತಿ ಅನುಸರಿಸಿಲ್ಲ. ಇದರಿಂದಾಗಿ ಒಂದು ಸಮುದಾಯದವರು ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಸಮಿತಿಯು ವರದಿಯಲ್ಲಿ ವಿವರಿಸಿದೆ.

 

ಪಿಹೆಚ್‌ಡಿ, ಎಂ ಫಿಲ್‌ ವ್ಯಾಸಂಗ ಮಾಡುತ್ತಿರುವ ಪ.ಜಾತಿ ಮತ್ತ ಪ.ಪಂಗಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಫೆಲೋಶಿಪ್‌ ಜತೆಗೆ ಸಮಾಜ ಕಲ್ಯಾಣ ಇಲಾಖೆಯಿಂದಲೂ ಎಸ್‌ಸಿಪಿ ಮತ್ತು ಟಿಎಸ್‌ಪಿ ಅಡಿ ಹೆಚ್ಚುವರಿ ಅನುದಾನ ಪಡೆದು ಪ್ರತಿ ವಿದ್ಯಾರ್ಥಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ಮಾಸಿಕ 10,000 ರು.ಗಳನ್ನು ಸಮಾನವಾಗಿ ನೀಡಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

SUPPORT THE FILE

Latest News

Related Posts