‘ದಿ ಫೈಲ್‌’-ವಾರ್ತಾಭಾರತಿ ವರದಿ ಪರಿಣಾಮ; ಕಿದ್ವಾಯಿಗೆ ಉಚಿತ ಜಮೀನು ಕಾಯ್ದಿರಿಸಲು ಸೂಚನೆ

ಬೆಂಗಳೂರು; ಮೈಸೂರಿನಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಂಶೋಧನೆ ಘಟಕ ನಿರ್ಮಾಣ ಉದ್ದೇಶಕ್ಕೆ ಕಂದಾಯ ಇಲಾಖೆಯು ಶೇ.50ರಷ್ಟು ದರ ವಿಧಿಸಿರುವುದರ ಕುರಿತು ‘ದಿ ಫೈಲ್‌’ ಮತ್ತು ವಾರ್ತಾಭಾರತಿಯು ವರದಿ ಪ್ರಕಟಿಸುತ್ತಿದ್ದಂತೆ ಕಂದಾಯ ಇಲಾಖೆಯು ಸೆಪ್ಟಂಬರ್‌ 2022ರಲ್ಲಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದುಕೊಂಡು ಜಮೀನನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಹೆಸರಿನಲ್ಲಿ ಕಾಯ್ದರಿಸಲು ಪತ್ರ ಬರೆದಿದೆ.

 

ಸಂಘ ಪರಿವಾರದ ಅಂಗಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳಿಗೆ ಮಾರುಕಟ್ಟೆ ದರದ ಶೇ.25ರಷ್ಟು ದರದಲ್ಲಿ ನಿಯಮಬಾಹಿರವಾಗಿ ಸರ್ಕಾರಿ ಖರಾಬು, ಗೋಮಾಳ ಮಂಜೂರು ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಉಚಿತವಾಗಿ ಜಮೀನು ನೀಡದೇ ಶೇ.50ರಷ್ಟು ದರ ವಿಧಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ‘ದಿ ಫೈಲ್‌’ ಮತ್ತು ವಾರ್ತಾಭಾರತಿಯು ಅಕ್ಟೋಬರ್‌ 3ರಂದು ವರದಿ ಪ್ರಕಟಿಸಿತ್ತು.

ಕಿದ್ವಾಯಿ ಆಸ್ಪತ್ರೆ ಜಮೀನಿಗೆ ಶೇ.50ರ ದರ, ರಾಷ್ಟ್ರೋತ್ಥಾನಕ್ಕೆ ಶೇ.25 ರಿಯಾಯಿತಿ; ಉಚಿತ ಮಂಜೂರೇಕಿಲ್ಲ?

 

ವರದಿ ಪ್ರಕಟವಾದ ಹತ್ತೇ ಹತ್ತು ದಿನಗಳಲ್ಲಿ ಹಿಂದಿನ ಆದೇಶವನ್ನು ಹಿಂಪಡೆದುಕೊಂಡಿದೆಯಲ್ಲದೆ ಆದೇಶವನ್ನು ಮಾರ್ಪಾಡಿಸಿದೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮೈಸೂರು ಜಿಲ್ಲಾಧಿಕಾರಿಗೆ 2022ರ ಅಕ್ಟೋಬರ್‌ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್‌ 125ರಲ್ಲಿ 18 ಎಕರೆ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ಅನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(1)(ಸಿ) ಅನ್ವಯ ಮಾರುಕಟ್ಟೆ ಮೌಲ್ಯದ ಶೇ.50ರಷ್ಟು ವಿಧಿಸಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಂಶೋಧನ ಘಟಕ ನಿರ್ಮಾಣ ಉದ್ದೇಸಕ್ಕೆ ಮಂಜೂರು ಮಾಡಲು ಅನುಮತಿಸಿದೆ ಎಂದು ತಿಳಿಸಿರುವುದನ್ನು ಮಾರ್ಪಡಿಸಿ ಈ ಜಮೀನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಸಂಶೋಧನಾ ಘಟಕ ನಿರ್ಮಾಣದ ಉದ್ದೇಶಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 71ರ ಅನ್ವಯ ವೈದ್ಯಕೀಯ ಶಿಕ್ಷಣ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಲು ಸರ್ಕಾರದ ಪೂರ್ವಾನುಮೋದನೆ ನೀಡಲಾಗಿದೆ ಎಂದು ತಿಳಿಸಿದೆ.

 

 

ಮೈಸೂರು ತಾಲೂಕಿನ ಇಲವಾಲ ಗ್ರಾಮದಲ್ಲಿ 1 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಬೇಕು ಎಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿರುವ ಬೆನ್ನಲ್ಲೇ ಇದೇ ಇಲವಾಲ ಹೋಬಳಿಯಲ್ಲಿ ಕಿದ್ವಾಯಿ ಗಂಥಿ ಸಂಸ್ಥೆಗೆ ಶೇ.50ರಷ್ಟು ದರ ವಿಧಿಸಿರುವುದು ಮುನ್ನೆಲೆಗೆ ಬಂದಿತ್ತು.

 

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 125ರಲ್ಲಿ 29.00 ಎಕರೆ ವಿಸ್ತೀರ್ಣ ಹೊಂದಿರುವ ಸರ್ಕಾರಿ ಖರಾಬಿನಲ್ಲಿರುವ 18 ಎಕರೆ ಜಮೀನನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಉಚಿತವಾಗಿ ಮಂಜೂರು ಮಾಡಲು ಇನ್ನೂ ಅನುಮತಿ ನೀಡಿಲ್ಲ. ಬದಲಿಗೆ ಮಾರುಕಟ್ಟೆ ಮೌಲ್ಯದ ಶೇ. 50ರಷ್ಟು ದರ ವಿಧಿಸಿ ಮಂಜೂರು ಮಾಡಿದೆ. ಇದನ್ನು ರದ್ದುಪಡಿಸಿ ಉಚಿತವಾಗಿ ಮಂಜೂರು ಮಾಡಿ ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಯು ಕಂದಾಯ ಇಲಾಖೆಗೆ ಹಲವು ಬಾರಿ ಪತ್ರಗಳನ್ನು ಬರೆದರೂ ಇನ್ನೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.

 

ಕಿದ್ವಾಯಿ ಗಂಥಿ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಒಂದು ಸರ್ಕಾರಿ ಸ್ವಾಯತ್ತ ಸಂಸ್ಥೆ. ಈ ರೀತಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಸ್ವಾಯತ್ತ ಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ನಡೆಯುತ್ತಿದ್ದು, ಯಾವುದೇ ಮೌಲ್ಯ ನಿಗದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಇಲವಾಲದಲ್ಲೂ ಉಚಿತವಾಗಿ ಜಮೀನು ಮಂಜೂರು ಮಾಡಬೇಕು ಎಂದು ಪತ್ರದಲ್ಲಿ ಕೋರಿದೆ.

 

ಹಿಂದಿನ ಪತ್ರದಲ್ಲೇನಿತ್ತು?

 

ಕಿದ್ವಾಯಿ ಗಂಥಿ ಸಂಸ್ಥೆಯು ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ದೇಶದ ಹೆಮ್ಮೆಯ ಸಂಸ್ಥೆ. ಕಿದ್ವಾಯಿ ಸಂಸ್ಥೆಯು ಪ್ರತಿ ವರ್ಷ ಸುಮಾರು 4.5 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಸಂಸ್ಥೆಗೆ ಬರುವ ಹೆಚ್ಚಿನ ರೋಗಿಗಳು ಬಡತನ ರೇಖೆಗಿಂತ ಕೆಳಗಿನವರಾಗಿದ್ದಾರೆ.

 

ಮೈಸೂರು ಜಿಲ್ಲೆ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್‌ 125ರಲ್ಲಿ 18 ಎಕರೆ ಜಮೀನನ್ನು ಮಾರುಕಟ್ಟೆ ಮೌಲ್ಯದ ಶೇ.50ರಷ್ಟು ವಿಧಿಸಿ ಕಿದ್ವಾಯಿ ಸಂಸ್ಥೆಗೆ ಮಂಜೂರು ಮಾಡಿರುವುದನ್ನು ರದ್ದುಪಡಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಜಮೀನನ್ನು ಸಂಶೋಧನಾ ಘಟಕ ನಿರ್ಮಾಣದ ಉದ್ದೇಶಕ್ಕಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 71ರಂತೆ ಉಚಿತವಾಗಿ ಮಂಜೂರು ಮಾಡಬೇಕು. ಮತ್ತು ಇದನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಪತ್ರದಲ್ಲಿ ಕೋರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts