ಅಬಕಾರಿ ಹಗರಣ; ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್‌ಬ್ಯಾಕ್‌ ಆರೋಪ

ಬೆಂಗಳೂರು; ಕರ್ನಾಟಕ ರಾಜ್ಯದ ಕಾಕಂಬಿ (ಮೊಲ್ಯಾಸಿಸ್‌)ಯನ್ನು ಹೊರರಾಜ್ಯ/ಹೊರರಾಷ್ಟ್ರಕ್ಕೆ ರಫ್ತು ಮಾಡುತ್ತಿದ್ದ ಸ್ಥಳೀಯ ಕಂಪನಿ ಮತ್ತು ಬಂದರನ್ನು ಹೊರಗಿಟ್ಟು ಮುಂಬೈನ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಗೋವಾ ಬಂದರಿನ ಮೂಲಕ ರಫ್ತಿಗೆ ಅನುಮತಿ ನೀಡಲು ಒತ್ತಡ ಹೇರಿರುವ ಅಬಕಾರಿ ಸಚಿವ ಗೋಪಾಲಯ್ಯ ಅವರು ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಲಿದ್ದ ಆದಾಯಕ್ಕೂ ಕಲ್ಲು ಹಾಕಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಅಲ್ಲದೇ ಹೊರರಾಜ್ಯದ ಕಂಪನಿಯಿಂದ ಪ್ರತಿ ಮೆಟ್ರಿಕ್‌ ಟನ್‌ಗೆ 400 ರು.ನಂತೆ 2 ಲಕ್ಷ ಮೆಟ್ರಿಕ್‌ ಟನ್‌ಗೆ 8 ಕೋಟಿ ರು. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಆಪಾದನೆಗೂ ಸಚಿವ ಗೋಪಾಲಯ್ಯ ಅವರು ಗುರಿಯಾಗಿದ್ದಾರೆ. ದೆಹಲಿಯಲ್ಲಿ ಅಬಕಾರಿ ಹಗರಣವು ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಅಬಕಾರಿ ಇಲಾಖೆ ವ್ಯಾಪ್ತಿಯ ಕಾಕಂಬಿ ಹಗರಣವೂ ಮುನ್ನೆಲೆಗೆ ಬಂದಿದೆ.

 

ಕಾಕಂಬಿಯನ್ನು ಸರಾಗವಾಗಿ ರಫ್ತು ಮಾಡಲು ಮೂಲಸೌಕರ್ಯಗಳನ್ನು ಹೊಂದಿರುವ ಟರ್ಮಿನಲ್‌ ರಾಜ್ಯದ ಕಾರವಾರ ಬಂದರಿನಲ್ಲಿದ್ದರೂ ಮುಂಬೈ ಮೂಲದ ಕಂಪನಿಗೆ ಗೋವಾದ ಬಂದರು ಮೂಲಕ ರಫ್ತು ಮಾಡಲು ಅನುಮತಿ ನೀಡುವ ಸಂಬಂಧ ಪ್ರಸ್ತಾವನೆಯನ್ನು  ಅಬಕಾರಿ ಇಲಾಖೆಯು ಆರ್ಥಿಕ ಇಲಾಖೆಗೆ  (ಕಡತ ಸಂಖ್ಯೆ; ಎಫ್‌ಡಿ 16 ಇಎಫ್ಎಲ್‌ 2022)  ಸಲ್ಲಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಈ ಹಿಂದೆಯೂ ಇದೇ ಕಂಪನಿಯು ಸಲ್ಲಿಸಿದ್ದ ಪ್ರಸ್ತಾವನೆ/ಕೋರಿಕೆಯನ್ನು ಇಲಾಖೆಯು ತಿರಸ್ಕರಿಸಿತ್ತು ಎಂದು ತಿಳಿದು ಬಂದಿದೆ. ಆದರೂ ಈ ಕಡತದ ಹಿಂದೆ ಬಿದ್ದಿರುವ ಸಚಿವರ ಕಚೇರಿಯ ಕೆಲ ಅಧಿಕಾರಿಗಳು ಅನುಮೋದನೆ ಪಡೆಯಲು ಆರ್ಥಿಕ ಇಲಾಖೆ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಹೊರರಾಷ್ಟ್ರಗಳಿಗೆ ಸ್ಥಳೀಯ ಬಂದರು ಮೂಲಕ ಕಾಕಂಬಿ ರಫ್ತು ಮಾಡಲು ಅವಕಾಶವಿದೆಯೇ ಹೊರತು ಹೊರರಾಜ್ಯಗಳ ಬಂದರುಗಳ ಮೂಲಕ ಮುಖಾಂತರ ರಫ್ತು ಮಾಡಲು ಅವಕಾಶವಿಲ್ಲ. ಆದರೆ ನಿಯಮಬಾಹಿರವಾಗಿ ಹೊರರಾಜ್ಯದ ಬಂದರು ಮೂಲಕ ರಫ್ತು ಮಾಡಲು ಅನುಮತಿ ನೀಡಲು   ಮುಂದಾಗಿರುವ ಇದೊಂದೇ ಪ್ರಕರಣದಿಂದ ಸರ್ಕಾರದ ಬೊಕ್ಕಸಕ್ಕೆ 2 ಕೋಟಿ ರು ನಷ್ಟವಾಗಲಿದೆ ಎಂದು ಗೊತ್ತಾಗಿದೆ.

 

ಸ್ಥಳೀಯ ಬಂದರು ಮೂಲಕ ರಫ್ತು ಮಾಡುವ ಸಂಬಂಧ ಸರ್ಕಾರದ ಖಾತರಿಯೊಂದಿಗೆ ಇಲ್ಲಿನ ಸ್ಥಳೀಯ ಹೂಡಿಕೆದಾರರು/ರಫ್ತುದಾರರ ಕಂಪನಿಯು ಕನಿಷ್ಠ 50 ಕೋಟಿ ರು ಹೂಡಿಕೆ ಮಾಡಿದೆ. ಕನಿಷ್ಠ ಪಕ್ಷ 30ರಿಂದ 40 ಮಂದಿಗೆ ಉದ್ಯೋಗ ಲಭಿಸಿದೆ. ಒಂದೊಮ್ಮೆ ಹೊರರಾಜ್ಯದ ಕಂಪನಿಗೆ ಹೊರರಾಜ್ಯದ ಬಂದರು ಮೂಲಕ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ಸ್ಥಳೀಯ ಹೂಡಿಕೆದಾರ/ರಫ್ತುದಾರ ಕಂಪನಿಯ ಮೂಲ ಬಂಡವಾಳಕ್ಕೆ ಪೆಟ್ಟು ಬೀಳಲಿದೆ. ಅಂದಾಜು 400ರಿಂದ 500 ಟ್ರಕ್‌, ಟ್ಯಾಂಕರ್‌ಗಳ ಮಾಲೀಕರು ಮತ್ತು ನೂರಾರು ಮಂದಿಯ ಮಂದಿಯ ಉದ್ಯೋಗವನ್ನು ಕಸಿದುಕೊಂಡಂತಾಗುತ್ತದೆ ಎಂದು ಹೇಳಲಾಗುತ್ತಿದೆ.

 

‘ಕರ್ನಾಟಕದ ಬಂದರು ಮೂಲಕ ರಫ್ತು ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ಗಣನೀಯ ಪ್ರಮಾಣದಲ್ಲಿ ಆದಾಯ ಸಿಗುತ್ತದೆ. ರಫ್ತುದಾರರು ರಾಜ್ಯದ ಬಂದರು ಇಲಾಖೆಗೆ ಹಡಗುಕಟ್ಟೆ ಸುಂಕ, ಹಡಗು ನಿಲುಗಡೆ, ಬಂದರು ನಿರ್ವಹಣೆ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಪಾವತಿಸಲಾಗುತ್ತದೆ. ರಾಜ್ಯದ ಕಾಕಂಬಿಯನ್ನು ಬೇರೆ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಅನುಮತಿ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟಾಗುತ್ತದೆ, ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

ಇದಷ್ಟೇ ಅಲ್ಲ,  ಮುಂಬೈನ  ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ರಾಜ್ಯ ಸರ್ಕಾರವು ಅನುಮತಿ ನೀಡಿದ್ದೇ ಆದಲ್ಲಿ ರಾಜ್ಯದಲ್ಲಿ ಈ ಕಂಪನಿಯು ಖರೀದಿಸಿದ ಕಾಕಂಬಿಯು ಗಡಿ ದಾಟಿ ಗೋವಾ ರಾಜ್ಯಕ್ಕೆ ಹೋದ ಮೇಲೆ ರಾಜ್ಯದ ಅಬಕಾರಿ ಇಲಾಖೆಯ ಹತೋಟಿಯು ಇಲ್ಲದಂತಾಗುತ್ತದೆ. ಹೀಗೆ ಖರೀದಿಸಿರುವ ಕಾಕಂಬಿಯು ದುರುಪಯೋಗವಾಗುವ ಎಲ್ಲಾ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

 

ಮತ್ತೊಂದು ವಿಶೇಷವೆಂದರೆ ದೇಶದ ಯಾವುದೇ ರಾಜ್ಯ ಸರ್ಕಾರವು ತಮ್ಮ ರಾಜ್ಯದ ಸರಹದ್ದಿನ ಆಚೆ ಅಂದರೆ ಇತರೆ ರಾಜ್ಯಕ್ಕೆ ತಮ್ಮ ರಾಜ್ಯದಲ್ಲಿ ಉತ್ಪಾದನೆಯಾದ ಕಾಕಂಬಿಯನ್ನು ಸಾಗಿಸಲು ಅನುಮತಿ ನೀಡುವುದಿಲ್ಲ. ಮಹಾರಾಷ್ಟ್ರ ರಾಜ್ಯವು ಮಹಾರಾಷ್ಟ್ರದಲ್ಲಿ ಕಾಕಂಬಿ ಖರೀದಿಸಿ ಅದನ್ನು ಕರ್ನಾಟಕರ ರಾಜ್ಯಕ್ಕೆ ಸಾಗಾಣಿಕೆ ಮಾಡಿ  ಕರ್ನಾಟಕದಿಂದ ವಿದೇಶಕ್ಕೆ ರಫ್ತು ಮಾಡಲು ಅನುಮತಿ ನೀಡುತ್ತಿಲ್ಲ. ಹೀಗಿದ್ದರೂ ಸಚಿವ ಗೋಪಾಲಯ್ಯ ಅವರು ರಾಜ್ಯದ ಕಾಕಂಬಿಯನ್ನು ಹೊರರಾಜ್ಯದ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲು ಅನುಮತಿ ದೊರಕಿಸಿಕೊಡಲು ಮುಂದಾಗಿರುವುದಕ್ಕೆ ಇಲಾಖಾಧಿಕಾರಿಗಳಲ್ಲೇ ಆಕ್ಷೇಪ ಕೇಳಿ ಬಂದಿದೆ.

 

ಕಾಕಂಬಿ ನಿಯಂತ್ರಣ ಕಾಯ್ದೆ 1965 ರದ್ದುಗೊಂಡ ನಂತರ ಭಾರತ ಸರ್ಕಾರವು 1996ರಲ್ಲಿ ಕಾಕಂಬಿ ನಿಯಂತ್ರಣದ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಇದರ ಪ್ರಕಾರ ಕಾಂಬಿಯನ್ನು ಕೇವಲ ರಸ್ತೆ ಸಾಗಾಣಿಕೆ ಅನುಮತಿಯಿಂದ ನಿಯಂತ್ರಣಗೊಳಿಸುವ ಅಧಿಕಾರವು ರಾಜ್ಯದ ಅಬಕಾರಿ ಆಯುಕ್ತರಿಗಿದೆ. ಆದರೆ ಕಾಕಂಬಿ ಒಂದು ಸಮಾಜ ವಿದ್ರೋಹಿ ವಸ್ತು (ಮದ್ಯ ತಯಾರಿಸುವ ಕಚ್ಛಾ ವಸ್ತು) ಎಂದು ಪರಿಗಣಿಸಿರುವುದರಿಂದ ಇದರ ದುರ್ಬಳಕೆ ತಡೆಯುವ ಎಲ್ಲಾ ಅಧಿಕಾರವನ್ನೂ ರಾಜ್ಯ ಅಬಕಾರಿ ಆಯುಕ್ತರು ಹೊಂದಿದ್ದಾರೆ.

 

ಇಂತಹ ಸೂಕ್ಷ್ಮ ವಿಚಾರದ ಕಾಕಂಬಿ ನಿಯಂತ್ರಣದ ಕಡತಗಳಿಗೆ ಸಚಿವರಿಂದ ನಿಯಮಬಾಹಿರವಾಗಿ ಅನುಮೋದನೆ ದೊರಕಿಸಿಕೊಡಲಾಗುತ್ತಿದೆ. ಡಿಸ್ಟಲರಿಗಳಿಗೆ ಪರವಾನಿಗೆ ನೀಡಲು ಅಬಕಾರಿ ಉಪ ಆಯುಕ್ತರಿಗೆ ಅಧಿಕಾರವಿದೆ. ರಫ್ತು ಮಾಡುವ ಪರವಾನಿಗೆಯನ್ನು ಈಗ ಕೇಂದ್ರೀಕೃತಗೊಳಿಸಿ ಅದನ್ನು ರಾಜ್ಯದ ಅಬಕಾರಿ ಆಯುಕ್ತರಿಗೆ ನೀಡಲಾಗಿದೆ. ಹೀಗಾಗಿ ಸಚಿವರ ಸೂಚನೆ ಮತ್ತು ಒತ್ತಡದ ಕಾರಣಕ್ಕೆ ಆಯುಕ್ತರು ಕೂಡ ತಲೆಬಾಗುತ್ತಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಪ್ರಭಾವಿ ಡಿಸ್ಟಲರಿಗಳ ಪರವಾಗಿ ಅಬಕಾರಿ ಇಲಾಖೆಯ ಉಪ ಆಯುಕ್ತರು ಕಡತಗಳನ್ನು ತಮ್ಮ ಹಂತದಲ್ಲೇ ವಿಲೇವಾರಿ ಮಾಡುತ್ತಿದ್ದಾರೆ.

 

ಸಕ್ಕರೆ ಕಾರ್ಖಾನೆಗಳಿಂದ ರಾಜ್ಯದಲ್ಲಿ ಅಂದಾಜು 25.00 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯು ಉತ್ಪಾದನೆಯಾಗುತ್ತಿದೆ. 1 ಮೆಟ್ರಿಕ್‌ ಟನ್‌ಗೆ 7 ಸಾವಿರದಿಂದ 10 ಸಾವಿರ ದರವಿದೆ. ಯೂರೋಪ್‌ ರಾಷ್ಟ್ರಗಳಲ್ಲಿ ಒಂದು ಮೆಟ್ರಿಕ್‌ ಟನ್‌ಗೆ ಕನಿಷ್ಠ 8 ಸಾವಿರ ರು. ಸಾಗಾಣಿಕೆ ವೆಚ್ಚವೂ ಸೇರಿದಂತೆ ಒಟ್ಟಾರೆ ಮೆಟ್ರಿಕ್‌ ಟನ್‌ಗೆ 15 ಸಾವಿರ ರು. ದರವಿದೆ. ಡಿಸ್ಟಿಲರಿಸ್‌, ಕ್ಯಾಟಲ್‌ಫೀಡ್‌, ರಫ್ತು ಕಂಪನಿಗಳು ಕಾಕಂಬಿಯನ್ನು ಖರೀದಿ ಮಾಡುತ್ತವೆ. ಕರ್ನಾಟಕದಿಂದ ಯೂರೋಪ್‌ ರಾಷ್ಟ್ರ, ಮಧ್ಯ ಏಷ್ಯಾ ದೇಶಗಳು, ವಿಯೆಟ್ನಾಂ, ಫಿಲಿಫೈನ್ಸ್‌, ದಕ್ಷಿಣ ಕೊರಿಯಾ, ತೈವಾನ್‌ನಲ್ಲಿನ ವಿವಿಧ ಕಂಪನಿಗಳು ಕಾಕಂಬಿಯನ್ನು ಖರೀದಿ ಮಾಡುತ್ತವೆ.

the fil favicon

SUPPORT THE FILE

Latest News

Related Posts