ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಸರ್ಕಾರದ ಅವಧಿಯಲ್ಲಿ 8,245 ರೈತರ ಆತ್ಮಹತ್ಯೆ; ಅಂಕಿ ಅಂಶ ಬಿಡುಗಡೆ

ಬೆಂಗಳೂರು; ರಾಜ್ಯದಲ್ಲಿ ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇನ್ನಿತರೆ ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದರೂ ಕಳೆದ 2013-14ನೇ ಸಾಲಿನಿಂದ 2022-23ರವರೆಗೆ ರಾಜ್ಯದಲ್ಲಿ ಒಟ್ಟಾರೆ 8,245 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಿಧಾನಪರಿಷತ್‌ನ ಅಧಿವೇಶನದಲ್ಲಿ ಮುನಿರಾಜಗೌಡ ಪಿ ಎಂ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಕೃಷಿ ಸಚಿವ ಬಿ ಸಿ ಪಾಟೀಲ್‌ ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ್ದಾರೆ.

 

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5,341 ರೈತರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಟ್ಟು 2,904 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಹಾವೇರಿ ಜಿಲ್ಲೆಯಲ್ಲಿ 2020-21 ಮತ್ತು 2021-22ರಲ್ಲಿ ಒಟ್ಟು 131 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 2013-14ರಿಂದ 2022-23ರ ಇದುವರೆಗೂ ರಾಜ್ಯದಲ್ಲಿ ಒಟ್ಟಾರೆ 8,245 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿವೆ ಎಂದು ಲಿಖಿತ ಉತ್ತರ ಒದಗಿಸಿದ್ದಾರೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಹಾವೇರಿ ಜಿಲ್ಲೆಯಲ್ಲಿ 2020-21ರಲ್ಲಿ 63 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 16 ಪ್ರಕರಣಗಳು ತಿರಸ್ಕೃತಗೊಂಡಿದ್ದರೆ 47 ಪ್ರಕರಣಗಳನ್ನು ಅರ್ಹವೆಂದು ದಾಖಲಿಸಲಾಗಿದೆ. ಅದೇ ರೀತಿ ಇದೇ ಹಾವೇರಿ ಜಿಲ್ಲೆಯಲ್ಲಿ 2021-22ರಲ್ಲಿ 68 ಪ್ರಕರಣಗಳು ವರದಿಯಾಗಿದ್ದರೆ ಈ ಪೈಕಿ 16 ಪ್ರಕರಣಗಳನ್ನು ತಿರಸ್ಕೃತಗೊಳಿಸಿ ಉಳಿದ 44 ಪ್ರಕರಣಗಳನ್ನು ಅರ್ಹವೆಂದು ದಾಖಲಿಸಲಾಗಿದೆ.

 

 

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯಲ್ಲಿ 2020-21ರಲ್ಲಿ 40 ಪ್ರಕರಣಗಳು ವರದಿಯಾಗಿದ್ದರೆ ಈ ಪೈಕಿ 4 ಪ್ರಕರಣಗಳನ್ನು ತಿರಸ್ಕೃತಗೊಳಿಸಿ ಉಳಿದ 36 ಪ್ರಕರಣಗಳನ್ನು ಅರ್ಹವೆಂದು ದಾಖಲಿಸಿಕೊಳ್ಳಲಾಗಿದೆ. ಇದೇ ಶಿವಮೊಗ್ಗ ಜಿಲ್ಲೆಯಲ್ಲಿ 2021-22ರಲ್ಲಿ ವರದಿಯಾಗಿದ್ದ 40 ಪ್ರಕರಣಗಳ ಪೈಕಿ 1 ಪ್ರಕರಣವನ್ನು ತಿರಸ್ಕೃಗೊಳಿಸಿ ಉಳಿದ 34 ಪ್ರಕರಣಗಳನ್ನು ಅರ್ಹವೆಂದು ದಾಖಲಿಸಲಾಗಿದೆ. ಬಾಕಿ 5 ಪ್ರಕರಣಗಳನ್ನು ಇತ್ಯರ್ಥಕ್ಕೆ ಬಾಕಿ ಇರಿಸಿಕೊಂಡಿದೆ.

 

2013-14ರಲ್ಲಿ 89, 2014-15ರಲ್ಲಿ 117, 2015-16ರಲ್ಲಿ 1,525, 2016-17ರಲ್ಲಿ 1,203, 2017-18ರಲ್ಲಿ 1,232, 2018-19ರಲ್ಲಿ 1,084, 2019-20ರಲ್ಲಿ 1,091, 2020-21ರಲ್ಲಿ 851, 2021-22ರಲ್ಲಿ 859, 2022-23ರಲ್ಲಿ 103 ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

 

2013-14ರಲ್ಲಿ ರಾಜ್ಯದಲ್ಲಿ ವರದಿಯಾಗಿದ್ದ 89 ಪ್ರಕರಣಗಳಲ್ಲಿ 25 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಈ ಅವಧಿಯಲ್ಲಿ 54 ಅರ್ಹ ಪ್ರಕರಣಗಳೆಂದು ದಾಖಲಿಸಲಾಗಿದೆ. 2014-15ರಲ್ಲಿ ವರದಿಯಾಗಿದ್ದ 117 ಪ್ರಕರಣಗಳ ಪೈಕಿ 24 ಪ್ರಕರಣಗಳನ್ನು ತಿರಸ್ಕರಿಸಿದ್ದರೆ 93 ಪ್ರಕರಣಗಳನ್ನಷ್ಟೇ ಅರ್ಹ ಎಂದು ದಾಖಲಿಸಲಾಗಿದೆ.

 

2015-16ರಲ್ಲಿ ವರದಿಯಾದ 1,525 ಪ್ರಕರಣಗಳ ಪೈಕಿ 463 ಪ್ರಕರಣಗಳು ತಿರಸ್ಕೃತವಾಗಿದ್ದರೆ 1,062 ಪ್ರಕರಣಗಳು ಅರ್ಹವೆಂದು ದಾಖಲಿಸಲಾಗಿದೆ. 2016-17ರಲ್ಲಿ 1,203 ಪ್ರಕರಣಗಳ ಪೈಕಿ 271 ಪ್ರಕರಣಗಳನ್ನು ತಿರಸ್ಕೃತಗೊಂಡಿದ್ದರೆ 932 ಪ್ರಕರಣಗಳು ಅರ್ಹವೆಂದು ದಾಖಲಿಸಲ್ಪಟ್ಟಿದೆ. 2017-18ರಲ್ಲಿ 1,323 ಪ್ರಕರಣಗಳ ಪೈಕಿ 271 ಪ್ರಕರಣಗಳು ತಿರಸ್ಕೃತಗೊಂಡಿದ್ದರೆ 1,052 ಪ್ರಕರಣಗಳು ಅರ್ಹವೆಂದು ದಾಖಲಿಸಲಾಗಿದೆ.

SUPPORT THE FILE

Latest News

Related Posts