ರಾಷ್ಟ್ರೋತ್ಥಾನಕ್ಕೆ ಗೋಮಾಳ; 6 ಜಿಲ್ಲೆಗಳಲ್ಲಿ ಬಾಕಿ ಇರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟಕ್ಕೆ ಮಂಡಿಸಲು ಒತ್ತಡ?

ಬೆಂಗಳೂರು; ರಾಜ್ಯದ ವಿವಿಧೆಡೆ ಗೋಮಾಳವನ್ನು ಮಂಜೂರು ಮಾಡಿಸಿಕೊಂಡಿರುವ ರಾಷ್ಟ್ರೋತ್ಥಾನ ಪರಿಷತ್‌ ಇದೀಗ ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಹೊಸಪೇಟೆ, ಮಂಡ್ಯ, ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಅಂದಾಜು 20 ಎಕರೆ ವಿಸ್ತೀರ್ಣದ ಗೋಮಾಳದ ಮೇಲೆ ಕಣ್ಣು ಹಾಕಿದೆ.

 

ರಾಜ್ಯದ ವಿವಿಧೆಡೆ ಗೋಮಾಳ ಜಮೀನುಗಳನ್ನು ಮಂಜೂರು ಮಾಡಿಸಿಕೊಳ್ಳಲು ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಕೇಶವ ಶಿಲ್ಪದಲ್ಲಿ ಕಚೇರಿ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಯು ಭೂ ಬ್ಯಾಂಕ್‌ ಹೊಂದಲು ಮುಂದಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಹುಕೋಟಿ ರು. ಬೆಲೆಬಾಳುವ ಜಮೀನುಗಳನ್ನು ಮಾರುಕಟ್ಟೆ ಬೆಲೆಯ ಶೇ.25ರಷ್ಟು ರಿಯಾಯಿತಿ ದರದಲ್ಲಿ ಮಂಜೂರು ಮಾಡಿಸಿಕೊಳ್ಳಲು ಸರ್ಕಾರದ ಮೇಲೆ ಸತತವಾಗಿ ಒತ್ತಡ ಹೇರುತ್ತಿದೆ ಎಂದು ತಿಳಿದು ಬಂದಿದೆ.

 

ರಾಷ್ಟ್ರೀಯ ನೂತನ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಮುಂದಿರಿಸಿಕೊಂಡು ಶೈಕ್ಷಣಿಕ ಕೇಂದ್ರಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಗೋಮಾಳ ಜಮೀನು ಮಂಜೂರಿಗಾಗಿ ವಿವಿಧ ಜಿಲ್ಲಾಧಿಕಾರಿಗಳ ಬಳಿ ಇರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಅವರು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

 

ಈ ಸಂಬಂಧ ಎನ್‌ ಮಂಜುನಾಥ್‌ ಪ್ರಸಾದ್‌ ಅವರು 2022ರ ಏಪ್ರಿಲ್‌ 21ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಷ್ಟ್ರೋತ್ಥಾನ ಪರಿಷತ್‌ನ ವಿವಿಧ ಪ್ರಸ್ತಾವನೆಗಳು ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಬಾಕಿ ಇದ್ದು ಸದರಿ ಪ್ರಸ್ತಾವನೆಗಳನ್ನು ಕೂಡಲೇ ಜಿಲ್ಲಾಧಿಕಾರಿಯವರಿಂದ ಪಡೆದು ತುರ್ತಾಗಿ ಪಡೆದು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಮುಖ್ಯಮಂತ್ರಿಯವರು ನಿರ್ದೇಶಿಸಿದ್ದಾರೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

ಚಾಮರಾಜನಗರ ಯಡಪರೆ ಗ್ರಾಮ, ಚಿಕ್ಕಮಗಳೂರಿನ ಹಿರೇಮಗಳೂರು ಗ್ರಾಮದಲ್ಲಿ 8 ಎಕರೆ, ಮೈಸೂರು ತಾಲೂಕಿನ ಇಲವಾಲ ಗ್ರಾಮದಲ್ಲಿ 1 ಎಕರೆ, ಹೊಸಪೇಟೆಯಲ್ಲಿ 6 ಎಕರೆ, ಮಂಡ್ಯದ ಬಿ ಹೊಸೂರು ಗ್ರಾಮದಲ್ಲಿ ಒಟ್ಟು 5-20 ಎಕರೆ, ಯಾದಗಿರಿ ಜಿಲ್ಲೆಯ ಮರನಾಳ ಗ್ರಾಮದಲ್ಲಿ 5 ಎಕರೆ, ಆನೇಕಲ್‌ ತಾಲೂಕಿನಲ್ಲಿ 1-33 ಎಕರೆ ಸೇರಿದಂತೆ ಒಟ್ಟು 21 ಎಕರೆ ಜಮೀನು ಮಂಜೂರಾತಿಗಾಗಿ ರಾಷ್ಟ್ರೋತ್ಥಾನ ಪರಿಷತ್‌ ಸರ್ಕಾರದ ಮೇಲೆ ಒತ್ತಡ ಹೇರಿರುವುದು ಪ್ರಸ್ತಾವನೆಗಳಿಂದ ತಿಳಿದು ಬಂದಿದೆ.

 

ಎನ್‌ ಮಂಜುನಾಥ್‌ ಪ್ರಸಾದ್‌ ಅವರು ಹೊರಡಿಸಿದ ಟಿಪ್ಪಣಿ ಪ್ರತಿ

 

ಈಗಾಗಲೇ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿಯಲ್ಲಿ   9 ಎಕರೆ ವಿಸ್ತೀರ್ಣದ ಗೋಮಾಳವನ್ನು ಮಂಜೂರು ಮಾಡಿ ಈ ಸಂಬಂಧ ಆದೇಶವನ್ನು ಹೊರಡಿಸಿದೆ. ಮಾರುಕಟ್ಟೆಯಲ್ಲಿ ಅಂದಾಜು 9 ಕೋಟಿಗೂ ಅಧಿಕ ಬೆಲೆ ಬಾಳುತ್ತಿದ್ದರೂ ರಾಷ್ಟ್ರೋತ್ಥಾನ ಪರಿಷತ್‌ಗಾಗಿ ಮಾರುಕಟ್ಟೆ ಬೆಲೆಯಲ್ಲಿನ ಶೇ.25ರಷ್ಟು ರಿಯಾಯಿತಿ ದರದಲ್ಲಿ ಜಮೀನು ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9.32 ಎಕರೆ ಗೋಮಾಳ, ಬೈಯಪ್ಪನಹಳ್ಳಿ, ಕಲ್ಬುರ್ಗಿಯಲ್ಲಿ 17 ಎಕರೆ , ಬಳ್ಳಾರಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ಸಿ ಎ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್‌ ಈಗಾಗಲೇ ಮಂಜೂರು ಮಾಡಿಸಿಕೊಂಡಿದೆ.

 

ಹೊಸಪೇಟೆಯ ಜಂಬೂನಾಥನಹಳ್ಳಿಯಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲು ಸಲ್ಲಿಸಿರುವ ಪ್ರಸ್ತಾವನೆ ಸದ್ಯ ಚಾಲನೆಯಲ್ಲಿದೆ. ಈ ಮಧ್ಯೆ ಹಾವೇರಿಯಲ್ಲಿಯೂ 10 ಎಕರೆ ಮಂಜೂರಾತಿ ಸಂಬಂಧ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹಾವೇರಿ ಜಿಲ್ಲಾಧಿಕಾರಿಗೆ 2022ರ ಆಗಸ್ಟ್‌ 8ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts