ಪಠ್ಯ ಪರಿಷ್ಕರಣೆ ವಿವಾದ; ಪಾಠ, ಪದ್ಯ, ಲೇಖನ ಹಿಂಪಡೆದ ಸಾಹಿತಿಗಳ ಮನವೊಲಿಕೆಗೆ ದುಂಬಾಲು ಬಿದ್ದ ಸರ್ಕಾರ

ಬೆಂಗಳೂರು; ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿ ಪಾಠ, ಪದ್ಯ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದ ಸಾಹಿತಿಗಳ ಮನವೊಲಿಕೆಗೆ ಮುಂದಾಗಿರುವ ಸರ್ಕಾರವು ಪರಿಷ್ಕರಣೆಯಾಗಿರುವ ಪಠ್ಯದಲ್ಲಿಯೇ ಪಾಠ ಮತ್ತು ಪದ್ಯಗಳನ್ನು ಮುಂದುವರೆಸಲು ಅನುಮತಿ ಪಡೆಯಲು ಸಾಹಿತಿಗಳ ದುಂಬಾಲು ಬಿದ್ದಿದೆ.

 

2022-23ನೇ ಶೈಕ್ಷಣಿಕ ಸಾಲಿಗೆ 01ರಿಂದ 10ನೇ ತರಗತಿ ಪರಿಷ್ಕೃತ ಕನ್ನಡ ಭಾಷಾ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದ್ದ ಪಾಠ/ಪದ್ಯಗಳನ್ನು ಸೇರ್ಪಡೆಗೊಳಿಸಲು ಅನುಮತಿ ನೀಡಿದ್ದ ಲೇಖಕ ದೇವನೂರು ಮಹಾದೇವ ಅವರು ಸೇರಿದಂತೆ ಹಲವರು ಅನುಮತಿಯನ್ನು ಹಿಂಪಡೆದಿದ್ದರು.

 

ಆದರೀಗ ಶೈಕ್ಷಣಿಕ ಹಿತದೃಷ್ಟಿಯನ್ನು ಮುಂದಿರಿಸಿರುವ ಸರ್ಕಾರವು ಪಠ್ಯ, ಪದ್ಯಗಳನ್ನು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಮುಂದುವರೆಸಲು ಅನುಮತಿ ಕೋರಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2022ರ ಆಗಸ್ಟ್‌ 8ರಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘2022-23ನೇ ಶೈಕ್ಷಣಿಕ ಸಾಲಿಗೆ 01ರಿಂದ 10ನೇ ತರಗತಿ ಪರಿಷ್ಕೃತ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾದ ಪಾಠ/ಪದ್ಯಗಳಿಗೆ ಲೇಖಕರಿಂದ ನೀಡಲಾದ ಅನುಮತಿಯನ್ನು ಹಿಂಪಡೆಯುವ ಬಗ್ಗೆ ಪರಿಶೀಲಿಸಲಾಗಿದೆ. ಪಠ್ಯಪುಸ್ತಕಗಳು ಮುದ್ರಣಗೊಂಡು ಶಾಲೆಗಳಿಗೆ ಸರಬರಾಜಾಗಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಹಿತದೃಷ್ಟಿಯಿಂದ ತಮ್ಮ ಪಠ್ಯ/ಪದ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಮುಂದುವರೆಸಲು ಅನುಮತಿ ಕೋರಿ ಸಂಬಂಧಿಸಿದ ಲೇಖಕರಿಗೆ ಅರೆ ಸರ್ಕಾರಿ ಪತ್ರ ಬರೆದು ವಿನಂತಿಸಬೇಕು,’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ನಿರ್ದೇಶಿಸಿದ್ದಾರೆ. ಸಚಿವ ಬಿ ಸಿ ನಾಗೇಶ್‌ ಅವರ ಸೂಚನೆ ಮೇರೆಗೆ ಈ ಪತ್ರವನ್ನು ಬರೆಯಲಾಗಿದೆ ಎಂದು ಗೊತ್ತಾಗಿದೆ.

 

 

ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದ್ದ ಲೇಖಕ ದೇವನೂರ ಮಹಾದೇವ, ಬೊಳುವಾರು ಮಹಮದ್ ಕುಂಞ, ರೂಪಾ ಹಾಸನ, ಈರಪ್ಪ ಎಂ. ಕಂಬಳಿ, ಚಂದ್ರಶೇಖರ್ ತಾಳ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಸರಜೂ ಕಾಟ್ಕರ್‌, ಎಸ್‌ ಜಿ ಸಿದ್ದರಾಮಯ್ಯ ಸೇರಿದಂತೆ ಹಲವರು ತಮ್ಮ ‍ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದರು. ಅಲ್ಲದೆ ತಮ್ಮ ಪಾಠ ‘ಸೇರಿದ್ದರೆ’ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದರು.

 

‘ಈ ಹಿಂದಿನ ಪಠ್ಯದಲ್ಲಿದ್ದ ಎಲ್.ಬಸವರಾಜು, ಎ.ಎನ್.ಮೂರ್ತಿರಾವ್, ಪಿ.ಲಂಕೇಶ್, ಸಾರಾ ಅಬೂಬಕರ್ ಮೊದಲಾದವರ ಕತೆ, ಲೇಖನಗಳನ್ನು ಕೈಬಿಟ್ಟವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ ಕುರಿತು ಏನೇನೂ ತಿಳಿದಿಲ್ಲ ಎಂದೇ ಅರ್ಥ. ಚಾತುರ್ವರ್ಣ ಹಿಂದೂ ಪ್ರಭೇದದ ಆರ್‌ಎಸ್‌ಎಸ್‌ ಸಂತಾನವಾದ ಬಿಜೆಪಿ ತನ್ನ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸದ ಕುತ್ತಿಗೆಗೆ. ನೂತನ ಪಠ್ಯ ಪರಿಷ್ಕರಣೆಯಲ್ಲಿಯೂ ಇದೇ ಆಗಿದೆ’ ಎಂದು ಆರೋಪಿಸಿದ್ದರು.

SUPPORT THE FILE

Latest News

Related Posts