ಬೆಂಗಳೂರು; ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿ ಜ್ಞಾನಜ್ಯೋತಿ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಆರೋಪಿಗಳು ಅಭ್ಯರ್ಥಿಗಳ ಓಎಂಆರ್ ಶೀಟ್‌ನಲ್ಲಿ ಖಾಲಿ ಬಿಟ್ಟಿದ್ದ ಪ್ರಶ್ನೆಗಳಿಗೆ ಸಿಸಿಟಿಟವಿಯಲ್ಲಿ ಕಾಣಿಸಿಕೊಳ್ಳದಂತೆ ಮರೆಯಾಗಿದ್ದುಕೊಂಡೇ ಸರಿ ಉತ್ತರ ಬರೆದಿದ್ದರು. ಇದಕ್ಕಾಗಿ ಅವರಿಗೆ ದೊರೆತಿದ್ದು ಹೆಚ್ಚುವರಿಯಾಗಿ ಕೇವಲ ನಾಲ್ಕೇ ನಾಲ್ಕು ಸಾವಿರ ರುಪಾಯಿ. ಆದರೆ ಅಕ್ರಮಕೂಟದ ಇತರ ಸದಸ್ಯರು ಎಣಿಸಿಕೊಂಡಿದ್ದು ಲಕ್ಷ..ಲಕ್ಷ ರುಪಾಯಿ!
ಪಿಎಸ್‌ಐ ನೇಮಕಾತಿಯ ಪರೀಕ್ಷೆಯಲ್ಲಿ ನಡೆದಿರುವ ಹಲವು ಅಕ್ರಮಗಳ ಕುರಿತು ಸಿಐಡಿ ತನಿಖಾಧಿಕಾರಿಗಳು ದೋಷಾರೋಪಣೆ ಪಟ್ಟಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ದೋಷಾರೋಪಣೆ ಪಟ್ಟಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಬಿಜೆಪಿ ಪಕ್ಷದ ನಾಯಕಿ ದಿವ್ಯಾ ಹಾಗರಗಿ ನೇತೃತ್ವದಲ್ಲಿಯೇ ರಚನೆಯಾಗಿದ್ದ ಅಕ್ರಮ ಕೂಟದ ಸದಸ್ಯರು ಪಿಎಸ್‌ಐ ಅಭ್ಯರ್ಥಿ ಲೆಕ್ಕದಲ್ಲಿ ತಲಾ 25 ಲಕ್ಷ ರು.ಗಳನ್ನು ಹಂಚಿಕೊಳ್ಳಲು ತೀರ್ಮಾನ ಮಾಡಿಕೊಂಡು ಅದರಂತೆ ಹಣ ಹಂಚಿಕೊಂಡಿದ್ದರೇ ಇವರ ಕಾರ್ಯಾಚರಣೆಗೆ ಸಹಕರಿಸಿದ್ದ ಪರಿವೀಕ್ಷಕರಿಗೆ ಹೆಚ್ಚುವರಿಯಾಗಿ ನಾಲ್ಕು ಸಾವಿರಗಳನ್ನಷ್ಟೇ ನೀಡಿ ಅಕ್ರಮದ ಲಾಭದಲ್ಲಿ ದಿವ್ಯಾ ಹಾಗರಗಿ, ಮೇಳಕುಂದಿ ಗುಂಪಿನ ಸಿಂಹಪಾಲು ಪಡೆದಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಅಕ್ರಮ ಲಾಭದ ಆಮಿಷಕ್ಕೆ ಒಳಗಾಗಿದ್ದ ಪರಿವೀಕ್ಷಕರು ಪರೀಕ್ಷಾ ನಿಯಮದಂತೆ ನಡೆದುಕೊಂಡಿರಲಿಲ್ಲ. ಪರೀಕ್ಷಾ ಕೊಠಡಿಯಲ್ಲಿಯೇ ಅಭ್ಯರ್ಥಿಗಳು ಉತ್ತರಗಳನ್ನು ಬರೆದಿರುವ ಒಎಂಆರ್ ಶೀಟ್‌ಗಳನ್ನು ಎನ್‌ವಲಪ್ ಕವರ್‌ನಲ್ಲಿ ಹಾಕಿ, ಸೀಲ್ ಮಾಡಿ ಪರೀಕ್ಷಾ ಕೇಂದ್ರದ ಉಸ್ತುವಾರಿ ಪೊಲೀಸ್ ಅಧಿಕಾರಿಗೆ ಕೊಡಬೇಕಿತ್ತು. ಆದರೆ ಅವರು ಹಾಗೇ ಮಾಡದೇ ಉದ್ದೇಶಪೂರ್ವಕವಾಗಿ ಅಕ್ರಮ ಎಸಗಿ 20 ನಿಮಿಷ ತಡವಾಗಿ ಸ್ಟಾಫ್ ರೂಂಗೆ ಆಗಮಿಸಿ ಸ್ಟಾಫ್ ರೂಮಿನಲ್ಲಿ ಬಂದು ಉತ್ತರಗಳನ್ನು ಬರೆದಿರುವ ಒಎಂಆರ್ ಶೀಟ್‌ಗಳನ್ನು ಹಾಕಿರುವ ಎನವಲಪ್ ಕವರ್‌ನ್ನು ಸೀಲ್ ಮಾಡಿ ಪರೀಕ್ಷಾ ಕೇಂದ್ರದ ಉಸ್ತುವಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿ ಹೊಸಮನಿ ಅವರಿಗೆ ನೀಡಿದ್ದರು ಎಂಬುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
‘ಪಿಎಸ್‌ಐ ಅಭ್ಯರ್ಥಿಗಳು ಪೇಪರ್ ಒಎಂಆರ್ ಶೀಟ್‌ಗಳಲ್ಲಿ ಖಾಲಿ ಬಿಟ್ಟಿದ್ದ ವೃತ್ತಗಳಲ್ಲಿ ಅಕ್ರಮವಾಗಿ ಉತ್ತರಗಳನ್ನು ಭರ್ತಿ ಮಾಡಿದ್ದ ಸಾವಿತ್ರಿ ಕಾಬಾ, ಸುಮಾ ಕಂಬಾಳಿಮಠ, ಸಿದ್ದಮ್ಮ ಬಿರಾದಾರ, ಅರ್ಚನಾ ಹೊನಗೇರಿ, ಸುನಂದ, ಸುನೀತಾ ಮುಲಗೆ ಎಂಬ ಪರಿವೀಕ್ಷಕರಿಗೆ ಅಕ್ರಮ ಲಾಭದ ಆಸೆ ತೋರಿಸಿ ಕಡೆಯಲ್ಲಿ ತಲಾ 4,000 ರು.ಗಳ ಅಕ್ರಮ ಲಾಭದ ಹಣವನ್ನು ಆರೋಪಿ-26ರ ಮೂಲಕ ಕೊಟ್ಟಿರುತ್ತಾರೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.
ಪರೀಕ್ಷೆ ಮುಗಿಯಲು 10-15 ನಿಮಿಷ ಬಾಕಿ ಇರುವಾಗ ಎ-26 ಅವರು ಪ್ರಶ್ನೆಪತ್ರಿಕೆಯ ಉತ್ತರಗಳಿರುವ ಚೀಟಿ ಮತ್ತು ಎರಡು ಬಾಲ್‌ಪೆನ್‌ಗಳನ್ನು ಆರೋಪಿ ಅರ್ಚನಾ ಹೊನಗೇರಿ ಅವರಿಗೆ ಕೊಡಲಾಗಿತ್ತು. ಮಧ್ಯಾಹ್ನ 4-30ಕ್ಕೆ ಪರೀಕ್ಷೆ ಮುಗಿದ ಮೇಲೆ ಎಲ್ಲಾ ಅಭ್ಯರ್ಥಿಗಳು ಬ್ಲಾಕ್‌ನಿಂದ ಹೊರಹೋದ ಮೇಲೆ ಪಕ್ಕದ 15 ಎ ಬ್ಲಾಕ್‌ನಲ್ಲಿದ್ದ ಸುನಂದ, ಸುನಿತಾ ಅವರ ಬಳಿ ಅರ್ಚನಾ ಹೊನಗೇರಿ ಕೊಟ್ಟ ಉತ್ತರಗಳಿದ್ದ ಚೀಟಿ ಮತ್ತು ನೀಲಿ ಇಂಕ್ ಬಾಲ್ ಪೆನ್ ಕೊಡಲಾಗಿತ್ತು ಎಂಬ ಅಂಶವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.
‘ಪಿಎಸ್‌ಐ ಅಭ್ಯರ್ಥಿ ಶಾಂತಿಬಾಯಿ ಅವರ ರೋಲ್ ನಂಬರ್ (9221957) ಇದ್ದ ಒಎಂಆರ್ ಉತ್ತರ ಪತ್ರಿಕೆಯಲ್ಲಿ ಭರ್ತಿ ಮಾಡಿದ್ದ ವೃತ್ತಗಳನ್ನು ಹೊರತುಪಡಿಸಿ ಖಾಲಿ ಬಿಟ್ಟಿದ್ದ 89 ವೃತ್ತಗಳಲ್ಲಿ ಚೀಟಿಯಲ್ಲಿದ್ದ ಬಿ ಶ್ರೇಣಿಯ ಉತ್ತರಗಳನ್ನು ಸಿಸಿಟಿವಿಯಲ್ಲಿ ಸೆರೆಯಾಗದಂತೆ ಬಚ್ಚಿಟ್ಟುಕೊಂಡು ಮೊದಲನೆ ಮಹಡಿ ಪೂರ್ವ ದಿಕ್ಕಿನಲ್ಲಿರುವ ಮೂರನೇ ಕೊಠಡಿ ಮುಂಭಾಗದಲ್ಲಿ ಕುಳಿತು ಉತ್ತರ ಬರೆದಿದ್ದರು.’ ಎಂದು ಕಾರ್ಯಾಚರಣೆಯ ಮತ್ತೊಂದು ಮುಖವನ್ನು ದೋಷಾರೋಪಣೆ ಪಟ್ಟಿಯಲ್ಲಿ ಅನಾವರಣಗೊಳಿಸಲಾಗಿದೆ.