ಮಾದಾರ ಚನ್ನಯ್ಯ ಗುರುಪೀಠಕ್ಕೆ ದುಗ್ಗಾಣಿ ಬೆಲೆಗೆ 81 ಎಕರೆ ಗೋಮಾಳ; ಭಾಗ್ವತ್‌ ಭೇಟಿ ಬೆನ್ನಲ್ಲೇ ಆದೇಶ ಬಹಿರಂಗ

ಬೆಂಗಳೂರು; ಕರ್ನಾಟಕ ಭೂ ಕಂದಾಯ ನಿಯಮ ಉಲ್ಲಂಘಿಸಿ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ 81.23 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಿರುವ ರಾಜ್ಯ ಸರ್ಕಾರವು ಪ್ರಚಲಿತ ಮಾರ್ಗಸೂಚಿ ದರದ ಶೇ. 10ರಷ್ಟು ಮಾತ್ರ ವಿಧಿಸುವ ಮೂಲಕ ದುಗ್ಗಾಣಿ ಬೆಲೆಗೆ ಮಂಜೂರು ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧುಮ್ಮವಾಡ ಹೋಬಳಿಯ ಕಾಡನಕೊಪ್ಪ ಹಾಗೂ ಚಳಮಟ್ಟಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 81.23 ಎಕರೆ ಗೋಮಾಳ ಜಮೀನನ್ನು ಕಂದಾಯ ಇಲಾಖೆಯು 2022ರ ಏಪ್ರಿಲ್‌ 29ರಂದು ಆದೇಶ ಹೊರಡಿಸಿದೆ.

 

ಸರ ಸಂಘ ಸಂಚಾಲಕ ಮೋಹನ್ ಭಾಗ್ವತ್‌ ಅವರು ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ಕೊಟ್ಟಿರುವ ಬೆನ್ನಲ್ಲೇ ಗೋಮಾಳ ಜಮೀನು ಮಂಜೂರು ಮಾಡಿರುವ ಆದೇಶವೂ ಮುನ್ನೆಲೆಗೆ ಬಂದಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಎರಡೂ ಗ್ರಾಮಗಳಲ್ಲಿನ ಜಮೀನುಗಳ ಪ್ರಚಲಿತ ಮಾರ್ಗಸೂಚಿ ದರವು ಪ್ರತಿ ಎಕರೆಗೆ 2,78,000 ಮತ್ತು 2,70,000 ರು. ಇದೆ. 81.23 ಎಕರೆ ವಿಸ್ತೀರ್ಣದ ಜಮೀನಿಗೆ ಒಟ್ಟಾರೆ 2,24,81,250 ರು. ಆಗಲಿದೆ ಎಂದು ಧಾರವಾಡ ಜಿಲ್ಲಾಧಿಕಾರಿಯು ವರದಿ ನೀಡಿದ್ದರು. ಇದರ ಪ್ರಕಾರ ಪ್ರಚಲಿತ ಮಾರ್ಗಸೂಚಿ ದರದ ಶೇ.10ರಷ್ಟು ಎಂದು ಲೆಕ್ಕ ಹಾಕಿದರೆ ಪ್ರತಿ ಎಕರೆಗೆ ಕೇವಲ 27,800 ರು.ಆಗಲಿದೆ. ಇದರಂತೆ ಒಟ್ಟು 81.23 ಎಕರೆಗೆ ಕೇವಲ 22,58,194 ರು.ಗಳಾಗಲಿದೆ. ಪ್ರತಿ ಎಕರೆಗೆ 2,50,000 ರು. ನಂತೆ ಒಟ್ಟಾರೆ 81.23 ಎಕರೆಗೆ 2, 03, 7,500 ರು ನಷ್ಟವಾದಂತಾಗಿದೆ.

 

ಚಿತ್ರದುರ್ಗದಲ್ಲಿರುವ ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಸರ್ವೆ ನಂಬರ್‌ 71ರಲ್ಲಿ 24.23 ಎಕರೆ ಮತ್ತು ಚಳಮಟ್ಟಿ ಗ್ರಾಮದ ಸರ್ವೆ ನಂಬರ್‌ 65ರಲ್ಲಿ 57.00 ಎಕರೆ ಸೇರಿ ಒಟ್ಟಾರೆ 81.23 ಎಕರೆ ಜಮೀನನ್ನು ಟ್ರಸ್ಟ್‌ಗೆ ಮಂಜೂರು ಮಾಡಬೇಕು ಎಂದು 2021ರ ಆಗಸ್ಟ್‌ 8ರಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು ಎಂಬುದು ಆದೇಶದ ನಡವಳಿಯಿಂದ ತಿಳಿದು ಬಂದಿದೆ.

 

ಇದನ್ನಾಧರಿಸಿ ‘ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4)ರ ಅನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಹಿತದೃಷ್ಟಿಯಿಂದ ಕರ್ನಾಟಕ ಭೂಮಂಜೂರಾತಿ ನಿಯಮಗಳು 1969ರನಿಯಮ 27ರಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(ಎ)(1)(i)(2) ಸಡಿಲಿಸಿ ಪ್ರಸ್ತಾಪಿತ ಜಮೀನಿನ ಪ್ರಚಲಿತ ಮಾರ್ಗಸೂಚಿ ದರದ ಶೇ.10ರಷ್ಟು ಹಾಗೂ ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆ,’ ಎಂದು ಆದೇಶದಲ್ಲಿ ವಿವರಿಸಿದೆ.

 

 

ಗೋಮಾಳ, ಹುಲ್ಲುಗಾವಲು ಪ್ರದೇಶಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಭೂ ಮಂಜೂರಾತಿ ಕಾಯ್ದೆಯಲ್ಲಿ ಅವಕಾಶಗಳಿಲ್ಲದಿದ್ದರೂ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ 81.23 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಲು ಕಂದಾಯ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವ ಸಂಪುಟವು ಅನುಮೋದಿಸಿತ್ತು.

 

81.23 ಎಕರೆ ವಿಸ್ತೀರ್ಣ ಹೊಂದಿರುವ ಹುಲ್ಲುಗಾವಲು ಪ್ರದೇಶವನ್ನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸ್ಪಷ್ಟ ನಿಲುವು ತಾಳಿಲ್ಲ. ಹುಲ್ಲುಗಾವಲು ಪ್ರದೇಶವನ್ನು ಮಂಜೂರು ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಪ್ರಸ್ತಾವನೆಯನ್ನು ತಿರಸ್ಕರಿಸಬಹದು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆಯಾದರೂ ಶೈಕ್ಷಣಿಕ ಮತ್ತು ಸಾಂಸ್ಕೃತಿ ಚಟುವಟಿಕೆಗಳಿಗಾಗಿ ಗೋಮಾಳ ಸ್ವರೂಪದಿಂದ ತಗ್ಗಿಸಬಹುದು. ಕರ್ನಾಟಕ ಭೂ ಕಂದಾಯ ಕಾಯ್ದೆ 1966ರ 97(4) ಅನ್ವಯ ಮತ್ತು ಕರ್ನಾಟಕ ಭೂ ಮಂಜೂರಾತಿ 1969ರ ನಿಯಮ 27 ಮತ್ತು ಕರ್ನಾಟಕ ಭೂ ಮಂಜೂರಾತಿ 1969ರ ಕಾಯ್ದೆ 22 ಎ (1)(i) (2) ಅನ್ವಯ ಮಾರುಕಟ್ಟೆ ಬೆಲೆ ನಿಗದಿಪಡಿಸಿ ಮಂಜೂರು ಮಾಡಬಹುದು ಎಂದು ಪ್ರಸ್ತಾಪಿಸಿರುವುದು ಪ್ರಸ್ತಾವನೆಯ ಪ್ರತಿಯಿಂದ ತಿಳಿದು ಬಂದಿದೆ.

 

ಈ ಎರಡೂ ಅಂಶವನ್ನು ಆರ್ಥಿಕ ಇಲಾಖೆಯು ಉಲ್ಲೇಖಿಸಿದೆಯಲ್ಲದೆ ಧಾರವಾಡ ಜಿಲ್ಲಾಧಿಕಾರಿ ನೀಡಿರುವ ವರದಿಯನ್ನು ಎತ್ತಿ ಹಿಡಿದಿದೆ. ‘ಜಿಲ್ಲಾಧಿಕಾರಿಗಳು ಈ ಪ್ರಸ್ತಾವನೆಯನ್ನು ನಿಯಮಾನುಸಾರ ಅಂಗೀಕರಿಸಲಾಗುವುದಿಲ್ಲ ಎಂದು ತಿಳಿಸಿರುವುದರಿಂದ ಕಂದಾಯ ಇಲಾಖೆಯ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ. ಗೋಮಾಳ ಭೂಮಿ ನೀಡಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಕಾನೂನು ಇಲಾಖೆಯೂ 2022ರ ಜನವರಿ 14ರಂದು ಅಭಿಪ್ರಾಯ ನೀಡಿದೆ,’ ಎಂದು ಉಚ್ಛರಿಸಿರುವ ಆರ್ಥಿಕ ಇಲಾಖೆಯು 2022ರ ಫೆ.13ರಂದು ಹಿಂಬರಹ ನೀಡಿದೆ.

 

ಆರ್ಥಿಕ ಮತ್ತು ಕಾನೂನು ಇಲಾಖೆಯು ನೀಡಿರುವ ಎರಡೂ ಅಭಿಪ್ರಾಯಗಳನ್ನು ಕಂದಾಯ ಇಲಾಖೆಯು ಒಪ್ಪಿದೆ. ಆದರೂ 81.23 ಎಕರೆ ಮಂಜೂರು ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟದ ಹೆಗಲಿಗೆ ವರ್ಗಾಯಿಸಿ ಕೈತೊಳೆದುಕೊಂಡಿರುವುದು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ಚಲಮಟ್ಟಿ ಗ್ರಾಮದಲ್ಲಿ 273 ಮತ್ತು ಅದೇ ರೀತಿ ಇದಕ್ಕೆ ಹೊಂದಿಕೊಂಡಿರುವ ಕಾಡನಕೊಪ್ಪ ಗ್ರಾಮದಲ್ಲಿ 478 ಜಾನುವಾರುಗಳಿವೆ. ಇನ್ನುಳಿದ 144 ಎಕರೆ ಹುಲ್ಲುಗಾವಲು ಇದೆ. ಇದಲ್ಲದೆ 72.25 ಎಕರೆ ಸರ್ಕಾರಿ ಜಾಗವೂ ಇದೆ. ಅದೇ ರೀತಿ ಬಗರ್‌ ಹುಕುಂ ಸಾಗುವಳಿ ಸಕ್ರಮಗೊಳಿಸುವ ಸಂಬಂಧ ನಮೂನೆ 57ರ ಅನ್ವಯ ಸಲ್ಲಿಕೆಯಾಗಿರುವ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಹೀಗಾಗಿ ಖಾಸಗಿ ಉದ್ದೇಶಕ್ಕೆ ಜಾಗವನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ಪ್ರಾಥಮಿಕ ವರದಿ ನೀಡಿದ್ದರು ಎಂಬುದು ಪ್ರಸ್ತಾವನೆಯಿಂದ ಗೊತ್ತಾಗಿದೆ.

 

ಧಾರವಾಡ ಜಿಲ್ಲಾಧಿಕಾರಿ ಅವರು 2022ರ ಮಾರ್ಚ್‌ 22ರಂದು ಮತ್ತೊಂದು ವರದಿ ನೀಡಿದ್ದರು. ಚಲಮಟ್ಟಿ ಗ್ರಾಮದ ಸರ್ವೆ ನಂಬರ್‌ 65/ಎ ನಲ್ಲಿದ್ದ ಒಟ್ಟು 66.20 ಎಕರೆ ಪೈಕಿ 55.03 ಎಕರೆಯಲ್ಲಿ ಭೂ ಮಂಜೂರಾತಿಗಾಗಿ 19 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದೇ ರೀತಿ ಕಾಡನಕೊಪ್ಪ ಗ್ರಾಮದ ಸರ್ವೆ ನಂಬರ್‌ 71ರಲ್ಲಿ 24.23 ಎಕರೆ ಪೈಕಿ 23.25 ಎಕರೆಯಲ್ಲಿ ಭೂ ಮಂಜೂರಾತಿಗಾಗಿ ನಮೂನೆ 57ರ ಅನ್ವಯ ಸಲ್ಲಿಕೆಯಾಗಿದ್ದ 10 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಿದ್ದರು.

the fil favicon

SUPPORT THE FILE

Latest News

Related Posts