ಸ್ವಚ್ಛಭಾರತ್‌ ಸೇರಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಿಡುಗಡೆಯಾಗದ 921 ಕೋಟಿ;ತುಟಿ ಬಿಚ್ಚದ ಸರ್ಕಾರ

photo credit; tv9

ಬೆಂಗಳೂರು; ದೇವಾಲಯಕ್ಕಿಂತ ಶೌಚಾಲಯ ಮುಖ್ಯ ಎಂದು ಗಾಂಧಿ ಜಯಂತಿಯಂದೇ ಸ್ವಚ್ಛ ಭಾರತ್‌ ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಿ ಗಾಂಧೀಜಿ ಬಳಸುತ್ತಿದ್ದ ಕನ್ನಡಕವನ್ನೇ ಲಾಂಛನವಾಗಿ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿರುವ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕಳೆದೊಂದು ವರ್ಷದಲ್ಲಿ ಇದೇ ಯೋಜನೆಗೆ ಹಂಚಿಕೆ ಮಾಡಿದ್ದ ಒಟ್ಟು ಅನುದಾನದ ಪೈಕಿ 145.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿಲ್ಲ.

 

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಸ್ವಚ್ಚ ಭಾರತ ಯೋಜನೆಯೂ ಸೇರಿದಂತೆ ಆರೋಗ್ಯ, ವಸತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಟ್ಟು 921.22 ಕೋಟಿ ರು. ಅನುದಾನ ಬಿಡುಗಡೆಯಾಗಿಲ್ಲ.

 

ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಲಕ್ಷಾಂತರ ಕೋಟಿ ರು ಬಿಡುಗಡೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗಷ್ಟೇ ಜಾಹೀರಾತು ನೀಡಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದರ ಬೆನ್ನಲ್ಲೇ ನಾಲ್ಕು ಇಲಾಖೆಗಳಲ್ಲಿ 921. 22 ಕೋಟಿ ರು. ಬಿಡುಗಡೆಯಾಗಿಲ್ಲ ಎಂಬ ಅಂಶವು ಬಹಿರಂಗವಾಗಿದೆ.

 

ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಕುರಿತು 2022ರ ಮೇ 20ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರವು 921.22 ಕೋಟಿ ರು. ಬಿಡುಗಡೆ ಮಾಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ. ಅಧಿಕಾರಿಗಳು ಒದಗಿಸಿರುವ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆರ್‌ಡಿಪಿಆರ್‌ ಇಲಾಖೆ ಒದಗಿಸಿರುವ ಮಾಹಿತಿ ಪ್ರತಿ

 

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಅಡಿಯಲ್ಲಿ ಜಾರಿಗೊಳಿಸಿರುವ ಸ್ವಚ್ಚ ಭಾರತ ಯೋಜನೆಯಡಿ 145.00 ಕೋಟಿ, ಪಿಎಂಜಿಎಸ್‌ವೈ ಯೋಜನೆಯಡಿ 151.00 ಕೋಟಿ ರು. ಬಿಡುಗಡೆ ಮಾಡಿಲ್ಲ. ಈ ಅವಧಿಯಲ್ಲಿ ಸಚಿವರಾಗಿದ್ದ ಕೆ ಎಸ್‌ ಈಶ್ವರಪ್ಪ ಅವರು ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಒತ್ತಡವನ್ನೇ ಹಾಕಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

 

ವಸತಿ ಇಲಾಖೆಯ ಪಿಎಂವೈ (ನಗರ) ಯೋಜನೆಯಡಿ 51.00 ಕೋಟಿ, ಪಿಎಂಎವೈ (ಗ್ರಾಮೀಣ) ಯೋಜನೆಯಡಿ 253.50 ಕೋಟಿ ರು., ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿ 224.57 ಕೋಟಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಎಸ್‌ಸಿಪಿ ಮತ್ತುಟಿಎಸ್‌ಪಿ ಅಡಿಯಲ್ಲಿ 50 ಕೋಟಿ, ಆರ್ಟಿಕಲ್‌ 275ರ ಅಡಿ ಕಾಲೋನಿ ಅಭಿವೃದ್ಧಿಗೆ 26 ಕೋಟಿ ರು. ಬಿಡುಗಡೆ ಮಾಡಿಲ್ಲ.

 

921.22 ಕೋಟಿ ರು. ಬಿಡುಗಡೆಯಾಗದ ಕಾರಣ ಈ ಯೋಜನೆಗಳಡಿಯಲ್ಲಿ ಶೇ.100ರಷ್ಟು ವೆಚ್ಚ ಮಾಡಿಲ್ಲ ಎಂದು ಇಲಾಖೆಯು ಸಭೆಗೆ ಮಾಹಿತಿ ಒದಗಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ 2021-22ನೇ ಸಾಲಿನಲ್ಲಿ ಬಿಡುಗಡೆಯಾಗದೇ ಇರುವ ಅನುದಾನವನ್ನು ಬಳಕೆಯಾಗದೇ ಇರುವ ಅನುದಾನವೆಂದು ಪರಿಗಣಿಸಿ ಮುಂದಿನ ಆರ್ಥಿಕ ವರ್ಷದಲ್ಲಿ ಒದಗಿಸಲು ಅವಕಾಶವಿಲ್ಲ ಎಂದೂ ಸಭೆಗೆ ಮಾಹಿತಿ ಒದಗಿಸಿದ್ದಾರೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಡಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ 2021-22ನೇ ಸಾಲಿನಲ್ಲಿ 3,460.33 ಕೋಟಿ ರು. ಹಂಚಿಕೆಯಾಗಿತ್ತು. ಈ ಪೈಕಿ 3,163.67 ಕೋಟಿ ರು. ಬಿಡುಗಡೆ ಅಗಿತ್ತು. ಇದರಲ್ಲಿ 3,158.94 ಕೋಟಿ ರು. ಖರ್ಚಾಗಿತ್ತು.

 

2022-23ನೇ ಸಾಲಿಗೆ ಈ ಇಲಾಖೆಗೆ 3,108.15 ಕೋಟಿ ರು. ಹಂಚಿಕೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಹೆಚ್ಚು ಇರುವ ಗ್ರಾಮಗಳಿಗೆ ಸಂಪರ್ಕ ರಸ್ತೆಗಳಿಗೆ ಗ್ರಾಮ ಸಡಕ್‌ ಯೋಜನೆಗೆ 156.65 ಕೋಟಿ ರು., ಗ್ರಾಮೀಣ ಸುಮಾರ್ಗ, ನಮ್ಮ ಗ್ರಾಮ ನಮ್ಮ ರಸ್ತೆಗೆ 250 ಕೋಟಿ , ಜಲಜೀವನ್‌ ಮಿಷನ್‌ಗೆ 2,200.45 ಕೋಟಿ, ಸ್ವಚ್ಛ ಭಾರತ ಅಭಿಯಾನಕ್ಕೆ 145.60 ಕೋಟಿ ರು., ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 20,000 ರು.ನಂತೆ ಪ್ರೋತ್ಸಾಹಧನ ನೀಡಲು ಹೆಚ್ಚುವರಿಯಾಗಿ 20.41 ಕೋಟಿ ರು., ನರೇಗಾ ಅಡಿಯಲ್ಲಿ 308.48 ಕೋಟಿ ರು. ಹಂಚಿಕೆ ಮಾಡಲಾಗಿದೆ.

SUPPORT THE FILE

Latest News

Related Posts