ಬೆಂಗಳೂರು; ಕೃಷ್ಣಭಾಗ್ಯ ಜಲನಿಗಮದ ನಾರಾಯಣಪುರ ಬಲದಂಡೆ ಕಾಲುವೆ ಅಧುನೀಕರಣ, ನವೀಕರಣ ಮತ್ತು ವಿಸ್ತರಣೆ ಕಾಮಗಾರಿಗಳ ಗುಣಮಟ್ಟ ಮತ್ತು ಭೌತಿಕ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅಧ್ಯಕ್ಷತೆಯ ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯ ಶಾಸಕ ಸದಸ್ಯರ ಮೇಲೆ ಗುತ್ತಿಗೆದಾರರ ಬೆಂಬಲಿಗರ ಗುಂಪೊಂದು ಮುಗಿಬಿದ್ದು ಹಲ್ಲೆಗೂ ಮುಂದಾಗಿ ಉತ್ತರಪ್ರದೇಶ, ಬಿಹಾರದಂತಹ ವಾತಾವರಣ ಸೃಷ್ಟಿಯಾಗಿದ್ದರೂ ಸಮಿತಿಯ ಯಾವೊಬ್ಬ ಶಾಸಕ ಸದಸ್ಯರೂ ಇದುವರೆಗೂ ತುಟಿ ಬಿಚ್ಚಿಲ್ಲ.
ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಯು ನಡೆಯುತ್ತಿದ್ದ ವೇಳೆಯಲ್ಲಿ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ ಡಿ ಹಿರೇಮಠ್ ಎಂಬುವರು ಏಕಾಏಕಿ ನುಗ್ಗಿ ದಾಂಧಲೆ ನಡೆಸಿದರು ಎಂಬ ಕಾರಣಕ್ಕೆ ಅವರ ವಿರುದ್ಧ ಠಾಣೆಯಲ್ಲಿ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ದೂರು ನೀಡಿರುವ ಬೆನ್ನಲ್ಲೇ ಕಾಮಗಾರಿಗಳ ಭೌತಿಕ ಪರಿಶೀಲನೆ ವೇಳೆಯಲ್ಲಿ ಗುತ್ತಿಗೆದಾರರ ಗುಂಪು ಮುಗಿಬಿದ್ದು ಗೂಂಡಾ ವಾತಾವರಣ ಸೃಷ್ಟಿಯಾಗಿದ್ದರೂ ಅಂದಾಜು ಸಮಿತಿ ಸದಸ್ಯರ್ಯಾರು ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಮಗಾರಿಗಳ ಭೌತಿಕ ಪರಿಶೀಲನೆಗೆ ಗುತ್ತಿಗೆದಾರರ ಗುಂಪೊಂದು ಅಡ್ಡಿ ವ್ಯಕ್ತಪಡಿಸಿ, ಪರಿಶೀಲನೆ ನಡೆಸಲು ನೀವು ಯಾರು ಎಂದು ಗುಂಪು ಗುಂಪಾಗಿ ಮುಗಿಬಿದ್ದಿರುವುದು ಇದೇನು ಬಿಹಾರವೋ ಅಥವಾ ಉತ್ತರ ಪ್ರದೇಶವೋ ಎಂಬಂತಹ ವಾತಾವರಣ ಸೃಷ್ಟಿಯಾಗಿರುವ ಘಟನೆಗೆ ವಿಡಿಯೋ ತುಣುಕು ಸಾಕ್ಷ್ಯವಾಗಿದೆ.
ಸಮಿತಿ ಸದಸ್ಯರ ಪ್ರವಾಸದ ವೇಳೆಯಲ್ಲಿ ಶಿಷ್ಟಾಚಾರ ಮತ್ತು ಭದ್ರತೆ ಒದಗಿಸಬೇಕಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯವೂ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.
ಒಂದೊಮ್ಮೆ ಪರಿಸ್ಥಿತಿ ಕೈ ಮೀರಿದ್ದರೇ ಶಾಸಕ ಸದಸ್ಯರ ಪ್ರಾಣಕ್ಕೂ ಆಪತ್ತು ಒದಗಲಿತ್ತು ಎಂಬ ದೃಶ್ಯಗಳು ವಿಡಿಯೋ ತುಣುಕಿನಲ್ಲಿವೆ. ಕಾಮಗಾರಿಗಳ ಭೌತಿಕ ಪರಿಶೀಲನೆ ವೇಳೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಸಮಿತಿ ಸದಸ್ಯರು ಠಾಣೆಗೆ ದೂರು ನೀಡಿಲ್ಲ. ಅಲ್ಲದೆ ಈ ಪ್ರಕರಣದ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಸಹ ಗಂಭೀರವಾಗಿ ತೆಗೆದುಕೊಂಡಿಲ್ಲ.
ಪ್ರಕರಣದ ಹಿನ್ನೆಲೆ
ಈ ಸಮಿತಿಯಲ್ಲಿ ಅಧ್ಯಕ್ಷ ಅಭಯ್ ಪಾಟೀಲ್ ಸೇರಿ ಒಟ್ಟು 15 ಮಂದಿ ಶಾಸಕರಿದ್ದರು. ಕಾಲುವೆಗಳ ಕಾಮಗಾರಿ ಭೌತಿಕ ಪರಿಶೀಲನೆಗೆ ಮುಂದಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಗುತ್ತಿಗೆದಾರರ ಗುಂಪೊಂದು ಸಮಿತಿಯ ಸುತ್ತಲೂ ಘೇರಾಯಿಸಿ ಬೆದರಿಕೆಯನ್ನೂ ಒಡ್ಡಿತು. ಮತ್ತು ಪರಿಶೀಲನೆಗೆ ಅಡ್ಡಿಯುಂಟು ಮಾಡಿತು. ಆದರೆ ಈ ವೇಳೆಯಲ್ಲಿ ಬೆರಳಣಿಕೆಯಷ್ಟು ಪೊಲೀಸರು ಇದ್ದುದ್ದರಿಂದಾಗಿ ಸಮಿತಿಯ ಸದಸ್ಯರ ಜೀವಕ್ಕೂ ಆಪತ್ತು ಬಂದೊದಗಿತ್ತು ಎಂದು ತಿಳಿದು ಬಂದಿದೆ.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ, ಸೀಳು ಕಾಲುವೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಡಿ ವೈ ಉಪ್ಪಾರ್ ಮತ್ತು ಎನ್ ಡಿ ವಡ್ಡರ್ ಎಂಬ ಗುತ್ತಿಗೆದಾರರು ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಎನ್ ಡಿ ವಡ್ಡರ್ ಅವರು ಬಿಜೆಪಿಯ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ ಸಮಿತಿ ಸದಸ್ಯರಿಗೆ ಬಂದೋಬಸ್ತ್ ಮತ್ತು ಭದ್ರತೆ ನೀಡಲು ನಿಯೋಜಿತವಾಗಿದ್ದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಎಂಬುವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯ ಹಗರಣದಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪದಡಿ ಸಮಿತಿ ಭೇಟಿ ನೀಡಿದ ದಿನದಂದೇ ಬಂಧನಕ್ಕೊಳಗಾಗಿದ್ದರು.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ, ಉಪ ಕಾಲುವೆ ಮತ್ತು ಸೀಳು ಕಾಲುವೆ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಕಾಮಗಾರಿಗಳಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಅವ್ಯವಹಾರ ಎಸಗಲಾಗಿದೆ ಎಂದು ಸ್ಥಳೀಯ ಶಾಸಕರೂ ಸೇರಿದಂತೆ ಇನ್ನಿತರರು ಅಂದಾಜುಗಳ ಸಮಿತಿಗೆ ದೂರು ಸಲ್ಲಿಸಿತ್ತು. ಇದನ್ನಾಧರಿಸಿ ಸಮಿತಿಯು ಪ್ರವಾಸ ನಡೆಸಿ ಭೌತಿಕ ಪರಿಶೀಲನೆಗೆ ಮುಂದಾಗಿತ್ತು ಎಂದು ತಿಳಿದು ಬಂದಿದೆ.
ಶಾಸಕ ಐಹೊಳೆ ದುರ್ಯೋಧನ, ವೀರಣ್ಣ ಚರಂತಿಮಠ್, ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ, ಡಾ ಶಿವರಾಜ್ ಪಾಟೀಲ್, ದೊಡ್ಡಗೌಡರ ಮಹಾಂತೇಶ ಬಸವಂತರಾಯ್, ಸಂಜೀವ್ ಮಠಂದೂರು, ಎಚ್ ನಾಗೇಶ್, ಸುನೀಲ್ ಬಿಳಿಯಾನಾಯ್ಕ, ಅಮರೇಗೌಡ ಬಯ್ಯಾಪುರ, ಶರಣಬಸಪ್ಪಗೌಡ ದರ್ಶನಾಪುರ, ಕೌಜಲಿಗೆ ಮಹಾಂತೇಶ್ ಶಿವಾನಂದ, ಸತೀಶ್ ಎಲ್ ಜಾರಕಿಹೊಳಿ, ಯಶವಂತರಾಯಗೌಡ ವಿಠಲಗೌಡ ಪಾಟೀಲ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.