ಪರಿಶಿಷ್ಟ, ಗಿರಿಜನ ಉಪಯೋಜನೆಗೆ 159.56 ಕೋಟಿ ಕಡಿತ; ಉಚಿತ ಲ್ಯಾಪ್‌ಟಾಪ್‌ ಯೋಜನೆಯೂ ನೆನೆಗುದಿಗೆ

ಬೆಂಗಳೂರು; ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆಗೆ ಕಳೆದೆರೆಡು ವರ್ಷಗಳಲ್ಲಿನ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗೆ ಆಯವ್ಯಯದಲ್ಲಿ ಹಂಚಿಕೆಯಾಗುತ್ತಿರುವ ಅನುದಾನದಲ್ಲಿ ಕ್ರಮೇಣ ಇಳಿಕೆಯಾಗುತ್ತಿದೆ. 2021-22ನೇ ಸಾಲಿಗೆ ಹೋಲಿಸಿದರೆ 2022-23ನೇ ಸಾಲಿನ ಆಯವ್ಯಯದಲ್ಲಿ ಈ ಎರಡೂ ಉಪಯೋಜನೆಗಳಿಗೆ ಒದಗಿಸಿರುವ ಅನುದಾನದಲ್ಲಿ 159.56 ಕೋಟಿ ರು. ಕಡಿಮೆಯಾಗಿದೆ.

 

2022-23ನೇ ಸಾಲಿನ ಆಯವ್ಯಯದಲ್ಲಿ ಎಸ್‌ ಸಿ ಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಹಂಚಿಕೆಯಾಗಿರುವ ಅನುದಾನಕ್ಕೆ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಬಗ್ಗೆ 2022ರ ಏಪ್ರಿಲ್‌ 29ರಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯು ಈ ಅಂಕಿ ಅಂಶಗಳನ್ನು ಒದಗಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2021-22 ಹಾಗೂ 2022-23ನೇ ಸಾಲಿನ ಆಯವ್ಯಯದಲ್ಲಿ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಒದಗಿಸಲಾದ ಅನುದಾನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯು ತುಲನಾತ್ಮಕ ಪಟ್ಟಿಯನ್ನು ಸಭೆಯ ಮುಂದಿಟ್ಟಿದೆ.

 

2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆ 1,144.20 ಕೋಟಿ ರು. ನೀಡಿದ್ದರೆ 2022-23ನೇ ಸಾಲಿನಲ್ಲಿ 984.64 ಕೋಟಿ ರು. ನೀಡಿದೆ. ಒಂದು ವರ್ಷದಲ್ಲಿ 159.56 ಕೋಟಿ ರು. ಕಡಿಮೆ ಹಂಚಿಕೆ ಮಾಡಿದೆ.

 

ಶಿಕ್ಷಣ ಇಲಾಖೆಯು ಸಭೆಗೆ ಮಂಡಿಸಿದ್ದ ಟಿಪ್ಪಣಿ ಪ್ರತಿ

 

2021-22ರಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಗೆ 800.21 ಕೋಟಿ ರು. ಒದಗಿಸಲಾಗಿತ್ತು. 2022-23ನೇ ಸಾಲಿನಲ್ಲಿ 645.68 ಕೋಟಿ ರು. ಒದಗಿಸಿದೆ. ಒಂದೇ ಒಂದು ವರ್ಷದಲ್ಲಿ 154.53 ಕೋಟಿ ಕಡಿಮೆ ಮಾಡಿರುವುದು ತುಲನಾತ್ಮಕ ಪಟ್ಟಿಯಿಂದ ತಿಳಿದು ಬಂದಿದೆ.

 

ಗಿರಿಜನ ಉಪ ಯೋಜನೆಗೆ 2021-22ನೇ ಸಾಲಿನಲ್ಲಿ 343.99 ಕೋಟಿ ರು. ಒದಗಿಸಲಾಗಿತ್ತು. 2022-23ನೇ ಸಾಲಿನಲ್ಲಿ 338.96 ಕೋಟಿ ರು. ನೀಡಿದೆ. 5.03 ಕೋಟಿ ರು. ನೀಡುವ ಮೂಲಕ ಒಟ್ಟಾರೆ 159.56 ಕೋಟಿ ರು. ಕಡಿಮೆ ಒದಗಿಸಿರುವುದು ಗೊತ್ತಾಗಿದೆ.

 

ಇದಲ್ಲದೆ 2021-22ನೇ ಸಾಲಿನಲ್ಲಿ ರಾಜ್ಯ ಅನುಸೂಚಿತ ಜಾತಿಗಳ/ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತು ಸಭೆಯಲ್ಲಿ ಅನುಮೋದನೆಯಾದ ಬಹಳಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದ ಹಲವು ಕಾರ್ಯಕ್ರಮಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆಯನ್ನೇ ನೀಡಿಲ್ಲ. ಹೀಗಾಗಿ ಬಹುತೇಕ ಕಾರ್ಯಕ್ರಮಗಳು ಅನುಷ್ಠಾನಗೊಂಡಿಲ್ಲ.

 

2021-22ನೇ ಸಾಲಿನಲ್ಲಿ ವಿದ್ಯಾವಿಕಾಸ ಯೋಜನೆಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ 8ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ವಿತರಣೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು (ಕಡತ ಸಂಖ್ಯೆ; EP/200/YSK2020) ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ತಿರಸ್ಕರಿಸಿದೆ.

 

ಅದೇ ರೀತಿ ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮವನ್ನುಅನುಷ್ಠಾನಗೊಳಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ (ಕಡತ ಸಂಖ್ಯೆ; EP123/YSK/2021) ಇನ್ನೂ ಅನುಮತಿ ದೊರೆತಿಲ್ಲ.

 

ಪದವಿಪೂರ್ವ ಶಿಕ್ಷಣ ಇಲಾಖೆಯ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಘಟಕಗಳನ್ನು ಕಾಲೇಜುಗಳಲ್ಲಿ ಸ್ಥಾಪಿಸಲು (ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ) ಸಲ್ಲಿಸಿದ್ದ ಪ್ರಸ್ತಾವನೆಗೂ (ಕಡತ ಸಂಖ್ಯೆ; EP 5 YSK 2020) ಅನುಮತಿ ನೀಡಿಲ್ಲ.

 

ವಿದ್ಯಾ ವಿಕಾಸ ಯೋಜನೆಯಡಿ ಆರ್ಥಿಕ ಇಲಾಖೆಯಿಂದ ಎಸ್‌ಸಿಎಸ್‌ಪಿ ಅಡಿ 22.22 ಕೋಟಿ ಮತ್ತು ಟಿಎಸ್‌ಪಿ ಅಡಿ 6.67ಕೋಟಿ ಸೇರಿದಂತೆ ಒಟ್ಟಾರೆ 28.89 ಕೋಟಿ ರು.ಗಳನ್ನು ಪರಿಷ್ಕೃತ ಆಯವ್ಯಯದಲ್ಲಿ ಉಳಿತಾಯ ಮಾಡಿಕೊಂಡಿರುವುದು ತಿಳಿದು ಬಂದಿದೆ.

 

ಪದವಿಪೂರ್ವ ಶಿಕ್ಷಣ ಇಲಾಖೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ 2021-22ನೇ ಸಾಲಿನಲ್ಲಿ ಒಟ್ಟು 8.86 ಕೋಟಿ ರು.ಗಳನ್ನು ಒದಗಿಸಲಾಗಿತ್ತು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ 2021ರ ಮಾರ್ಚ್‌ 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ 05 ಪ.ಜಾತಿ ಮತ್ತು ಪ.ಪಂಗಡದ 3 ವಿದ್ಯಾರ್ಥಿಗಳಂತೆ ಒಟ್ಟು 32 ಶೈಕ್ಷಣಿಕ ಜಿಲ್ಲೆಯ ಒಟ್ಟು 768 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸಲು ಪ್ರಸ್ತಾವನೆ ಇನ್ನೂ ನೆನೆಗುದಿಗೆ ಬಿದ್ದಿದೆ.

 

‘ಇದೇ ಯೋಜನೆಯಡಿಯಲ್ಲಿ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 6 ನೋಟ್‌ಬುಕ್‌ ವಿತರಿಸಲು, ವಿಶ್ವಾಸ ಕಿರಣ ಯೋಜನೆ ಹಮ್ಮಿಕೊಳ್ಳಬೇಕಾಗಿದೆ. 2022-23ನೇ ಸಾಲಿನಲ್ಲಿ ಕೇವಲ 4.58 ಕೋಟಿ ಒದಗಿಸಿದ್ದು ಈ ಅನುದಾಡಿಯಲ್ಲಿ ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ ವಿತರಿಸಲು ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಉಚಿತ ಲ್ಯಾಪ್‌ಟಾಪ್‌, ವಿಶ್ವಾಸ ಕಿರಣ ಯೋಜನೆ ಹಾಗೂ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹೆಚ್ಚುವರಿಯಾಗಿ 7.00 ಕೋಟಿ ರು.ಗಳ ಅನುದಾನ ಒದಗಿಸಬೇಕು, ‘ ಎಂದು ಇಲಾಖೆಯು ಕೋರಿದೆ.

 

2021-22ರ ರಾಜ್ಯ ಬಜೆಟ್‍ನಲ್ಲಿ ಎಸ್‍ಸಿಪಿ/ಟಿಎಸ್‍ಪಿ ಕಾಯ್ದೆಯನ್ವಯ ಯೋಜನಾ ವೆಚ್ಚದ ಶೇಕಡಾ 24.1ರಷ್ಟು ಅಂದರೆ 26,695.64 ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಕಾಯ್ದೆಯನ್ನು ಉಲ್ಲಂಘಿಸಿ ಒಟ್ಟು ಹಣದಲ್ಲಿ 7,885.32 ಕೋಟಿ ರೂ.ಗಳನ್ನು ಮೂಲಸೌಕರ್ಯದ ಯೋಜನೆಗಳಿಗೆ ವ್ಯಯ ಮಾಡಿದ್ದನ್ನು ಸ್ಮರಿಸಬಹುದು.

 

2018-21ರ ನಾಲ್ಕು ವರ್ಷಗಳ ಅವಧಿಯಲ್ಲಿ ಈ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಹಣದಲ್ಲಿ 7,885.32 ಕೋಟಿ ರೂ.ಗಳನ್ನು ನೀರಾವರಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಯೋಜನೆಗಳಿಗೆ ಖರ್ಚು ಮಾಡಲಾಗಿತ್ತು. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ನೇರ ಫಲಾನುಭವಿಗಳಾಗಿರುವ ಯೋಜನೆಗಳಿಗೆ ಹಣವನ್ನು ಕಡಿತಗೊಳಿಸಿತ್ತು.

 

ಎಸ್‍ಸಿಪಿ/ಟಿಎಸ್‍ಪಿ ಹಣದ ಸ್ವಲ್ಪ ಭಾಗವನ್ನು ಸಾಮಾನ್ಯ ಮೂಲಸೌಕರ್ಯಗಳಿಗೆ ಬಳಸಲು ಕಾಯ್ದೆಯಲ್ಲಿ ಅವಕಾಶವಿದ್ದರೂ, ಇಷ್ಟೊಂದು ಪ್ರಮಾಣದ ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ ನೇರ ಫಲಾನುಭವಿಗಳಲ್ಲದ ಯೋಜನೆಗಳಿಗೆ ಬಳಸುವ ಮೂಲಕ ಆ ಸಮುದಾಯಕ್ಕೆ ದ್ರೋಹವೆಸಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

 

ಇನ್ನು, 2020-21ರಲ್ಲಿ 23,457.66 ಕೋಟಿ (ಶೇ. 1.96), 2021-22ರಲ್ಲಿ 25,206.24 ಕೋಟಿ (ಶೇ.6.93) 2022-23ರಲ್ಲಿ 26,351.88 ಕೋಟಿ ರು. (ಶೇ.4.34) ಅನುದಾನ ಒದಗಿಸಲಾಗಿದೆ. 2022-23ನೇ ಆಯವ್ಯಯದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗೆ ರಾಜ್ಯ ವಲಯದಡಿಯಲ್ಲಿ 4,405.45 ಕೋಟಿ ರು., ಜಿಲ್ಲಾ ವಲಯದಡಿಯಲ್ಲಿ 21,946.43 ಕೋಟಿ ರು., ಸೇರಿದಂತೆ ಒಟ್ಟಾರೆ 26,351.88 ಕೋಟಿ ರು. ಅನುದಾನ ಒದಗಿಸಲಾಗಿದೆ. 2021-22ನೇ ಸಾಲಿಗೆ ಹೋಲಿಸಿದರೆ (25,218.02 ಕೋಟಿ ರು) ಪ್ರಸಕ್ತ ಸಾಲಿಗೆ 1,133.86 ಕೋಟಿಯಷ್ಟು ಮಾತ್ರ ಹೆಚ್ಚಳವಾಗಿದೆ.

the fil favicon

SUPPORT THE FILE

Latest News

Related Posts