ಬೆಂಗಳೂರು; ರಾಜ್ಯದ ವಿವಿಧೆಡೆ ಉಗ್ರಾಣಗಳ ನಿರ್ಮಾಣ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದ ಕಾರಣ ಬೊಕ್ಕಸಕ್ಕೆ ಅಂದಾಜು 495 ಕೋಟಿ ರು. ನಷ್ಟು ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಮೂವರು ಐಎಎಸ್ ಅಧಿಕಾರಿಗಳ ವಿರುದ್ಧ 2 ವರ್ಷ ಕಳೆದರೂ ಕ್ರಮ ಕೈಗೊಳ್ಳದ ಸರ್ಕಾರವು 9.24 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ 163 ಉಗ್ರಾಣಗಳ ನಿರ್ಮಾಣಕ್ಕೆ 862.37 ಕೋಟಿ ರು. ಸೇರಿದಂತೆ ಒಟ್ಟಾರೆ 1,479.42 ಕೋಟಿ ರು. ಆರ್ಥಿಕ ನೆರವಿಗೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
2013-14, 2014-15, 2015-16ನೆ ಸಾಲಿನ ಡಬ್ಲ್ಯೂಐಎಫ್, ಎನ್‌ಡಬ್ಲ್ಯೂಎಸ್ ಯೋಜನೆಯಡಿಯಲ್ಲಿ ನಬಾರ್ಡ್ ಸಂಸ್ಥೆಯಿಂದ 500 ಕೋಟಿ ಸಾಲವನ್ನು ಸರ್ಕಾರದ ಖಾತರಿಯೊಂದಿಗೆ ನಿಗಮವು ಪಡೆದಿತ್ತಾದರೂ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿದ್ದ ಸೋಮಾ ಎಂಟರ್‌ಪ್ರೈಸೆಸ್ ಕರಾರು ಒಪ್ಪಂದದ ಪ್ರಕಾರ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಇದಕ್ಕೆ ಮೂವರು ಐಎಎಸ್ ಅಧಿಕಾರಿಗಳ ಆಡಳಿತಾತ್ಮಕ ಲೋಪವೇ ಪ್ರಮುಖ ಕಾರಣವಾಗಿತ್ತು.
ಇದರಿಂದಾಗಿ ಉಗ್ರಾಣಗಳು ನಿಗದಿತ ಕಾಲಮಿತಿಯಲ್ಲಿ ನಿರ್ಮಾಣವಾಗಿರಲಿಲ್ಲ. ಹೀಗಾಗಿ ಬಾಡಿಗೆ ಆದಾಯದಲ್ಲಿಯೂ ಅಪಾರ ಪ್ರಮಾಣದಲ್ಲಿ ಖೋತಾ ಆಗಿತ್ತಲ್ಲದೆ ನಿರೀಕ್ಷೆಯಂತೆ ಸಂಗ್ರಹಣಾ ಶುಲ್ಕ ರೂಪದಲ್ಲಿ ನಿಗಮಕ್ಕೆ ಆದಾಯ ಸಂಗ್ರಹವಾಗಿರಲಿಲ್ಲ. ಹೀಗಾಗಿ ಉಗ್ರಾಣ ನಿಗಮವು ನಷ್ಟದ ಹಾದಿಯಲ್ಲಿ ಸಾಗುತ್ತಿದೆ.
ಇದಕ್ಕೆ ಕಾರಣರಾದ ಮೂವರು ಐಎಎಸ್ ಅಧಿಕಾರಿಗಳೂ ಸೇರಿದಂತೆ ಒಟ್ಟು 9 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದೆಯೇ 1,479.42 ಕೋಟಿ ರು. ಆರ್ಥಿಕ ನೆರವಿಗಾಗಿ ಸಚಿವ ಸಂಪುಟದ ಕದ ತಟ್ಟಿದೆ. ಇದರಿಂದ ಸರ್ಕಾರಕ್ಕೆ ಒಟ್ಟಾರೆ 617. 05 ಕೋಟಿ ರು. ಹೊರೆ ಬೀಳಲಿದೆ. ಆರ್ಥಿಕ ನೆರವಾಗಿ ಸಹಕಾರ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
9.24 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ 163 ಉಗ್ರಾಣಗಳ ನಿರ್ಮಾಣ ಮತ್ತು 89 ಉಗ್ರಾಣಗಳ ಮೂಲಸೌಕರ್ಯಗಳಿಗಾಗಿ 862.37 ಕೋಟಿ ರು., ಆರ್ಥಿಕ ಸಂಕಷ್ಟದಿಂದ ನಿಗಮವನ್ನು ಪಾರುಮಾಡಲು 250.20 ಕೋಟಿ ರು., ನಬಾರ್ಡ್‌ಗೆ ಸಾಲ ಮರುಪಾವತಿಸಲು 240.51 ಕೋಟಿ ರು., ಉಗ್ರಾಣಗಳ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯು ಕ್ಲೈಮ್ ಮಾಡಿರುವ 126.34 ಕೋಟಿ ರು. ಪಾವತಿಸಲು ಆರ್ಥಿಕ ನೆರವು ಕೋರಿರುವುದು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಿಂದ ಗೊತ್ತಾಗಿದೆ.
ಉಗ್ರಾಣ ನಿಗಮವು ನಬಾರ್ಡ್‌ನಿಂದ ಪಡೆದಿರುವ ಸಾಲವನ್ನು 2025-26ರೊಳಗೆ ಮರು ಪಾವತಿಸಬೇಕು. 2015-16ರಿಂದ 2021-22ನೇ ಸಾಲಿನವರೆಗೆ 140.51 ಕೋಟಿ ಬಡ್ಡಿಯೂ ಸೇರಿ ಒಟ್ಟಾರೆ 378.42 ಕೋಟಿ ರು. ಮರು ಪಾವತಿಸಿದೆ. ಬಾಕಿಉಳಿದ 237.91ಕೋಟಿ ರು.ಗಳನ್ನು ನಿಗಮವು ತನ್ನ ಸ್ವಂತ ಸಂಪನ್ಮೂಲದಿಂದ ಪಾವತಿಸಬೇಕು ಎಂಬ ವಿಚಾರವು ಪ್ರಸ್ತಾವನೆಯಿಂದ ತಿಳಿದು ಬಂದಿದೆ.
ಇದಲ್ಲದೆ 2022-23ರಿಂದ 2025-26ರ ಅವಧಿಯಲ್ಲಿ 402.41 ಕೋಟಿ ರು. (ಬಡ್ಡಿಯೂ ಸೇರಿ)ಗಳನ್ನು ನಬಾರ್ಡ್‌ಗೆ ಮರುಪಾವತಿಸಲು ಹಣಕಾಸು ಇಲಾಖೆ ತನ್ನ ಒಪ್ಪಿಗೆ ನೀಡಿದೆ. ಇದರಲ್ಲಿ 2022-23ನೇ ಸಾಲಿಗೆ ಅಸಲು 123.80 ಕೋಟಿ ರು., ಬಡ್ಡಿ 15.42 ಕೋಟಿ ರು ಸೇರಿ 139.22 ಕೋಟಿ ರು. ಇದೆ. 2023-24ನೇ ಸಾಲಿಗೆ 123.80ಕೋಟಿ ರು. ಅಸಲು, 11.30 ಕೋಟಿ ರು. ಬಡ್ಡಿ ಸೇರಿ 135.10 ಕೋಟಿ ರು., 2024-25ನೇ ಸಾಲಿಗೆ 96.65 ಕೋಟಿ ರು. ಅಸಲು, 4.39 ಕೋಟಿ ರು. ಬಡ್ಡಿ ಸೇರಿ 101.04 ಕೋಟಿ ರು., 2025-26ನೇ ಸಾಲಿನಲ್ಲಿ 25.81 ಕೋಟಿ ರು ಅಸಲು, 1.24 ಕೋಟಿ ರು. ಬಡ್ಡಿ ಸೇರಿ 27.05 ಕೋಟಿ ರು. ಸೇರಿದಂತೆ ಒಟ್ಟಾರೆ 402.41 ಕೋಟಿ ರು. ಆಗಲಿದೆ.
ಇದರಲ್ಲಿ 302.42 ಕೋಟಿ ರು.ಗಳನ್ನು ನಿಗಮವು ತನ್ನ ಸ್ವಂತ ಸಂಪನ್ಮೂಲದಿಂದ ಭರಿಸಲಿದೆ. ಹೀಗಾಗಿ 2022-23 ನೇ ವರ್ಷಕ್ಕೆ 65.00 ಕೋಟಿ ರು., 2023-24ನೇ ವರ್ಷಕ್ಕೆ 35 ಕೋಟಿ ರು. ಸೇರಿ ಒಟ್ಟು 100 ಕೋಟಿ ರು.ಗಳ ಆರ್ಥಿಕ ನೆರವು ನೀಡಬೇಕು ಎಂದು ಕೋರಿಕೆ ಸಲ್ಲಿಸಿದೆ. ಇದಕ್ಕೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಉಗ್ರಾಣ ನಿಗಮದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ಎಂ ಬಿ ರಾಜೇಶ್‌ಗೌಡ (ಬಿಡಿಎ ಹಾಲಿ ಆಯುಕ್ತ), ಜಯವಿಭವಸ್ವಾಮಿ, ನವೀನ್‌ಕುಮಾರ್ ರಾಜು ಸೇರಿ ಹಲವು ಅಧಿಕಾರಿಗಳ ವಿರುದ್ಧ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹಾಗೂ ಸಾಲ ವಸೂಲಾತಿ ನ್ಯಾಯಾಧೀಕರಣದ ಅಧ್ಯಕ್ಷರಾಗಿದ್ದ ಸಿ ಆರ್ ಬೆನಕನಹಳ್ಳಿ ಅವರು 2020ರ ಫೆ.3ರಂದು ವರದಿ ಸಲ್ಲಿಸಿದ್ದರು. ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದ್ದನ್ನು ಸಚಿವ ಸಂಪುಟದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.
ಉಗ್ರಾಣಗಳ ನಿರ್ಮಾಣ ಯೋಜನೆಯನ್ನು ಜಾರಿಗೊಳಿಸುವಲ್ಲಿ ಆಡಳಿತಾತ್ಮಕ ನಿಯಮಗಳ ಉಲ್ಲಂಘನೆಯಿಂದಾಗಿಯೇ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟವುಂಟಾಗಿದೆ ಎಂದು ವರದಿಯಲ್ಲಿ ವಿವರಿಸಿದ್ದರು. ಈ ವರದಿ ಆಧರಿಸಿ ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರವು ಆರೋಪಿತ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿ ಮಾಡಿ ಕೈತೊಳೆದುಕೊಂಡಿದೆ.
ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾಪವಾಗಿರುವ ಬಿಡಿಎ ಆಯುಕ್ತರೂ ಆಗಿರುವ ಐಎಎಸ್ ಅಧಿಕಾರಿ ಎಂ ಬಿ ರಾಜೇಶ್‌ಗೌಡ ಅವರು 2021ರ ಜುಲೈ 8ರಂದು ವಿವರಣೆ ಸಲ್ಲಿಸಿದ್ದಾರೆ. ಇನ್ನುಳಿದಂತೆ ಜಯವಿಭವ ಸ್ವಾಮಿ 2021ರ ಜುಲೈ 15, ಕೆಎಎಸ್ ಅಧಿಕಾರಿ ನವೀನ್ ಕುಮಾರ್ ರಾಜು ಅವರು 2021ರ ಜುಲೈ 30ರಂದು ವಿವರಣೆ ಸಲ್ಲಿಸಿರುವುದು ತಿಳಿದು ಬಂದಿದೆ.
ಈ ಮೂವರು ಅಧಿಕಾರಿಗಳು ನೀಡಿರುವ ವಿವರಣೆ, ದೋಷಾರೋಪಣೆ ಪಟ್ಟಿಯನ್ನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳಿಸುವ ಮುನ್ನ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅರ ಅನುಮೋದನೆ ಪಡೆಯಲು ಸೂಚಿಸಲಾಗಿತ್ತು. ಈ ಸಂಬಂಧದ ಕಡತವು ಸಹ ಸಹಕಾರ ಸಚಿವರ ಕಚೇರಿಯಲ್ಲಿದೆ. ಹೀಗಾಗಿ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ವಿರುದ್ಧ 2 ವರ್ಷ ಕಳೆದರೂ ಒಂದೇ ಒಂದು ಕ್ರಮ ಕೈಗೊಂಡಿಲ್ಲ.
‘ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ವಿಳಂಬ ಮಾಡಿದ್ದರಿಂದ ಅಭಿವೃದ್ಧಿ ಕುಂಠಿತವಾಗಿತ್ತಲ್ಲದೆ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದರು. ಏರಿಕೆ ವೆಚ್ಚವನ್ನು ಶೇ.50ಕ್ಕಿಂತಲೂ ಹೆಚ್ಚಳಗೊಳಿಸಿದ್ದರು. ಈ ಪ್ರಕರಣದಲ್ಲಿ 8 ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದೊಂದು ಗಂಭೀರ ದುರ್ನಡತೆ,’ ಎಂದು ಬೆನಕನಹಳ್ಳಿ ಅವರು ವರದಿಯಲ್ಲಿ ಉಲ್ಲೇಖಿಸಿರುವುದು ಡಾ ಆನಂದ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.
‘ಇಬ್ಬರು ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1)ಗೆ ಪ್ರಸ್ತಾಪ ಸಲ್ಲಿಸಬೇಕು. ಕೆಎಎಸ್ ಅಧಿಕಾರಿ ಮತ್ತು ಉಳಿದ 4 ಮಂದಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆ ಕೈಗೊಳ್ಳಲು ಅನುವಾಗುವಂತೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಇಲಾಖೆ ಅನುಮೋದನೆಯೊಂದಿಗೆ ಕರಡು ದೋಷಾರೋಪಣೆ ಪಟ್ಟಿ ತಯಾರಿಸಬೇಕು ಎಂದು 2021ರ ಮಾರ್ಚ್ ಮತ್ತು ಮೇ 25ರಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಕೋರಿತ್ತು,’ ಎಂಬುದು ಪತ್ರದಿಂದ ಗೊತ್ತಾಗಿದೆ.
ಪ್ರಕರಣದ ಹಿನ್ನೆಲೆ
ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಸ್ಥಳದ ಕೊರತೆ ಇದ್ದುದ್ದರಿಂದ 2015-16ನೇ ಸಾಲಿನ ಸಚಿವ ಸಂಪುಟವು ಡಬ್ಲ್ಯೂಐಎಫ್ ಮತ್ತು ಎನ್‌ಡಬ್ಲ್ಯೂಎಸ್ ಯೋಜನೆಯಡಿಯಲ್ಲಿ ನಬಾರ್ಡ್‌ನಿಂದ 500 ಕೋಟಿ ರು. ಸಾಲ ಪಡೆದು 14.09 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣ ನಿರ್ಮಾಣ ಮಾಡಲು ಅನುಮೋದನೆ ನೀಡಿತ್ತು. ಅಲ್ಲದೆ ಆರ್‌ಐಡಿಎಫ್ ಅಡಿಲ್ಲಿ 55 ಕೋಟಿ ರು. ಅಂದಾಜು ವೆಚ್ಚದಲ್ಲಿ 89 ಉಗ್ರಾಣ ಸ್ಥಳಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅನುಮೋದನೆ ನೀಡಿತ್ತು.
ಕಾಮಗಾರಿ ಆರಂಭಿಸಲು ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಟೆಂಡರ್ ಮೂಲಕ ಎರಡೂ ಅನುಮೋದನೆಗಳಲ್ಲಿ ಒಳಗೊಂಡ ಕಾಮಗಾರಿಗಳನ್ನು ಸೇರಿ 795.97 ಕೋಟಿ ರು. ವೆಚ್ಚವೆಂದು ಅಂದಾಜಿಸಲಾಗಿತ್ತು. 9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು 2016ರ ಮೇ 17ರಂದು ಸೋಮ ಎಂಟರ್ ಪ್ರೈಸೆಸ್‌ಗೆ ಕಾರ್ಯಾದೇಶ ನೀಡಲಾಗಿತ್ತು.
ಯೋಜನೆ ಅನುಷ್ಠಾನ ಸಮಯದಲ್ಲಿ ವರ್ಕ್ ಸ್ಲಿಪ್ ಮತ್ತು ಇಐಆರ್‌ಎಲ್‌ಗಳನ್ನು 207.99 ಕೋಟಿ ರು.ಗಳಿಗೆ ಅನುಮೋದನೆ ನೀಡಲಾಗಿತ್ತು. ಕೆಲವು ಕಡೆ ಸೂಕ್ತ ಜಮೀನುಗಳ ಅಲಭ್ಯತೆಯಿಂದ ಡಬ್ಲ್ಯೂಐಎಫ್ ಮತ್ತು ಎನ್‌ಡಬ್ಲ್ಯೂಎಸ್ ಯೋಜನೆಯಡಿ ರಾಜ್ಯದಾದ್ಯಂತ 54 ಕೇಂದ್ರಗಳಲ್ಲಿ 9.24 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 4.70 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ಅದರೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗೆ ಸಂಬಂಧಿಸಿದಂತೆ 40 ಕೇಂದ್ರಗಳಲ್ಲಷ್ಟೇ ಕಾಮಗಾರಿ ಪೂರ್ಣಗೊಂಡಿತ್ತು. ಇನ್ನುಳಿದ 49 ಕೇಂದ್ರಗಳಲ್ಲಿ ವಿಇವಧ ಹಂತಗಳಲ್ಲಿ ಪ್ರಗತಿಯಲ್ಲಿದ್ದವು. ಆದರೆ ಗುತ್ತಿಗೆದಾರ ಸೋಮ ಎಂಟರ್ ಪ್ರೈಸೆಸ್‌ಗೆ ನಿಯಮಿತವಾಗಿ ಹಣ ಪಾವತಿಯಾಗುತ್ತಿಲ್ಲವೆಂಬ ಕಾರಣಕ್ಕಾಗಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.
ಕಪ್ಪು ಮಣ್ಣು ಪ್ರದೇಶ, ಭೂ ಜಾಗ ಬದಲಿಸಿದ ಕಾರಣ ಹೆಚ್ಚುವರಿಯಾಗಿ ತಳಪಾಯದ ಕಾಮಗಾರಿಗಳ ನಿರ್ವಹಣೆಯಿಂದ ಹಾಗೂ ಸ್ಥಳೀಯ ಕಾರಣಗಳಿಂದ ವಿವಿಧ ವಿನ್ಯಾಸಗಳ ಅಳವಡಿಕೆ ಸೇರಿದಂತೆ ಇನ್ನಿತರ ಅಂಶಗಳಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು. ಅಧಿಕಾರಿಗಳು ಮೊದಲೇ ಸರಿಯಾಗಿ ಅಂದಾಜಿಸಿದ್ದರೆ ಯೋಜನಾ ಮೊತ್ತದಲ್ಲಿ ಏರಿಕೆಯಾಗುತ್ತಿರಲಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು ಎಂದು ತಿಳಿದು ಬಂದಿದೆ. ಈ ವಿಚಾರದಲ್ಲಿ ಉಗ್ರಾಣ ನಿಗಮದಲ್ಲಿ ಕಾರ್ಯನಿರ್ವಹಿಸಿದ್ದ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳಿಂದ ಆಡಳಿತಾತ್ಮಕ ನಿಯಮಗಳ ಉಲ್ಲಂಘನೆಯಾಗಿತ್ತು ಎಂಬುದು ಗೊತ್ತಾಗಿದೆ.
ಈ ಮಧ್ಯೆ ಯೋಜನೆಯ ಅನುಷ್ಠಾನದ ಕುರಿತು ಗುತ್ತಿಗೆದಾರರಾದ ಸೋಮ ಎಂಟರ್‌ಪ್ರೈಸೆಸ್ ಲಿಮಿಟೆಡ್ ಅರ್ಬಿಟ್ರೇಷನ್‌ನಲ್ಲಿ ದಾವೆ ಹೂಡಿತ್ತು. ನಿಗಮದ ವತಿಯಿಂದ 435.00 ಕೋಟಿ ರು.ಗಳಿಗೆ ಸೋಮಾ ಎಂಟರ್‌ಪ್ರೈಸೆಸ್ ಕ್ಲೈಮ್ ಮಾಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಿಗಮಕ್ಕೆ ಆಗಿರುವ ಆರ್ಥಿಕ ನಷ್ಟದ ಕುರಿತು ಪ್ರಾರಂಭಿಕ ಹಂತದಲ್ಲಿ 395.00 ಕೋಟಿ ರು.ಗಳಿಗೆ ಗುತ್ತಿಗೆದಾರರಿಂದ ಪಡೆಯಲು ಕೌಂಟರ್ ಕ್ಲೈಮ್ ಮಾಡಲಾಗಿತ್ತು.
ಯೋಜನೆ ಕಾಮಗಾರಿಯಲ್ಲಿನ ಅನುಷ್ಠಾನದಲ್ಲಿನ ವಿಳಂಬದಿಂದಾಗಿಯೇ 265 ಕೋಟಿ ರು. ಹೆಚ್ಚುವರಿಯಾಗಿತ್ತು. ಬಾಡಿಗೆಯಿಂದ ಬರಬೇಕಿದ್ದ ಆದಾಯದಲ್ಲಿ 48.35 ಕೋಟಿ ರು. ಸೇರಿದಂತೆ ಒಟ್ಟು 495.27 ಕೋಟಿ ರು. ನಷ್ಟವಾಗಿತ್ತು ಎಂದು ಗೊತ್ತಾಗಿದೆ. ಯೋಜನಾ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಆಧರಿಸಿ ಗುತ್ತಿಗೆದಾರರು 01ರಿಂದ 33ನೇ ಐಪಿಎ ಬಿಲ್‌ಗಳವರೆಗೆ 678.68 ಕೋಟಿಗೆ ಬಿಲ್ ಸಲ್ಲಿಸಿತ್ತು. ನಿಗಮದ ವಲಯವಾರು ಅಭಿಯಂತರರು ಐಟಂವಾರು ಪರಿಮಾಣಗಳನ್ನು ಪರಿಶೀಲಿಸಿ 668.65 ಕೋಟಿಗಳಿಗೆ ದೃಢೀಕರಿಸಲಾಗಿತ್ತು ಎಂದು ತಿಳಿದು ಬಂದಿದೆ.
ನಿಗಮವು ಕಾಮಗಾರಿಗಳ ವಾಸ್ತವಿಕ ನಿರ್ವಹಣೆಗೆ ಸಂಬಂಧಿಸಿದಂತೆ 668.65 ಕೋಟಿ ರು.ಗಳನ್ನು ಪಾವತಿಸಬೇಕಾಗಿದ್ದು ಈ ಪೈಕಿ 612.18 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿತ್ತು. ಬಾಕಿ ಮೊತ್ತ 56.46 ಕೋಟಿಗಳನ್ನು ನಿಯಮಗಳ ರೀತಿ ಶಾಸನಬದ್ಧ ಕಡಿತಗಳು ಮತ್ತು ಎಲ್‌ಡಿಗಳಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಅದರಂತೆ ಗುತ್ತಿಗೆದಾರರಿಗೆ ಯಾವುದೆ ಪಾವತಿ ಬಾಕಿ ಇಲ್ಲವೆಂಬ ವರದಿಯನ್ನು ಆರ್ಬಿಟ್ರೇಷನ್ ಟ್ರಿಬ್ಯೂನಲ್‌ಗೆ ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ.
ನಿರ್ಮಾಣ ಸಂದರ್ಭದಲ್ಲಿ ಜಾಗಗಳ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ನಿರ್ಮಾಣ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಐಟಂವಾರು ಪರಿಮಾಣಗಳು ವ್ಯತ್ಯಾಸವಾಗಿತ್ತು. ಅನುಮೋದಿತ ಅಂದಾಜು ಪಟ್ಟಿಯಲ್ಲಿ ಅವಕಾಶ ಕಲ್ಪಿಸದೇ ಇರುವ ಕೆಲವು ಹೆಚ್ಚುವರಿ ಐಟಂಗಳನ್ನು ಉಪಯೋಗಿಸಿಕೊಂಡು ನಿರ್ಮಾಣ ಮಾಡಿದ್ದರಿಂದಾಗಿಯೇ ಯೋಜನಾ ಮೊತ್ತವು ಹೆಚ್ಚುವರಿಯಾಗಿತ್ತು ಎಂದು ಗೊತ್ತಾಗಿದೆ.