ಜಂಗಲ್‌ ಲಾಡ್ಜ್‌ಸ್‌ ರೆಸಾರ್ಟ್‌ನಲ್ಲೂ ಕಮಿಷನ್‌ ಆರೋಪ; ಬಿಡ್‌ನಲ್ಲಿ ಯಶಸ್ವಿಯಾದ ಕಂಪನಿಗೆ ಸಿಗದ ಕಾರ್ಯಾದೇಶ

photo credit-finacialexpress

ಬೆಂಗಳೂರು; ದಾಂಡೇಲಿ ವ್ಯಾಪ್ತಿಯಲ್ಲಿನ ಕಾಳಿ ನದಿಯಲ್ಲಿ ವೈಟ್‌ ವಾಟರ್‌ ರ್ಯಾಪ್ಟಿಂಗ್‌ ನಡೆಸಲು ಕರೆದಿದ್ದ ಟೆಂಡರ್‌ನಲ್ಲಿ ಬಿಡ್‌ ಮಾಡಿ ಯಶಸ್ವಿಯಾಗಿರುವ ಉತ್ತರಾಖಂಡ ಮೂಲದ ಕಂಪನಿ ಜತೆ ಒಪ್ಪಂದ ಪತ್ರಕ್ಕೆ ಸಹಿ ಮಾಡದೇ ಕಮಿಷನ್‌ಗಾಗಿ ಬೇಡಿಕೆ ಇರಿಸಿದೆ ಎಂಬ ಗುರುತರವಾದ ಆರೋಪಕ್ಕೆ ಜಂಗಲ್‌ ಲಾಡ್ಜಸ್‌ ರೆಸಾರ್ಟ್ಸ್‌ ಸಂಸ್ಥೆಯು ಗುರಿಯಾಗಿದೆ.

 

ಒಪ್ಪಂದ ಪತ್ರಕ್ಕೆ ಸಹಿ ಮಾಡದೇ ಈ ಪ್ರಕ್ರಿಯೆಯನ್ನು ತಡೆಹಿಡಿಯಲು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಜಂಗಲ್‌ ಲಾಡ್ಜ್‌ಸ್‌ ರೆಸಾರ್ಟ್ಸ್‌ ಸಂಸ್ಥೆಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಕಮಿಷನ್‌ ನೀಡದೇ ಇರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

 

ಅರಣ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಮಿಷನ್‌ ಮತ್ತು ಅಧಿಕಾರಿಗಳು ಉದ್ಯಮಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿರುವ ಮಧ್ಯೆಯೇ ಜಂಗಲ್‌ ಲಾಡ್ಜಸ್‌ ರೆಸಾರ್ಟ್ಸ್‌ ಸಂಸ್ಥೆಯ ಈ ಪ್ರಕರಣವು ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ಟೆಂಡರ್‌ ದಾಖಲಾತಿಗಳು ಮತ್ತಿತರೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಪ್ರಕರಣದ ಹಿನ್ನೆಲೆ

 

ಜಂಗಲ್‌ ಲಾಡ್ಜ್‌ಸ್‌ ಮತ್ತು ರೆಸಾರ್ಟ್ಸ್‌ ಟೆಂಡರ್‌ ಪ್ರಕಟಣೆ ಸಂಖ್ಯೆ ಮೂಲಕ ಹಳಿಯಾಳ ವಿಭಾಗದ ದಾಂಡೇಲಿ ವಲಯದ ವ್ಯಾಪ್ತಿಯಲ್ಲಿನ ಕಾಳಿ ನದಿಯಲ್ಲಿ ವೈಟ್‌ ವಾಟರ್‌ ರ್ಯಾಪ್ಟಿಂಗ್‌ ನಡೆಸಲು ಟೆಂಡರ್‌ ಆಹ್ವಾನಿಸಲಾಗಿತ್ತು. 2022ರ ಫೆ.15ರಂದು ಈ ಟೆಂಡರ್‌ಗೆ ಬಿಡ್‌ ಸಲ್ಲಿಸಲು ಅಂತಿಮ ದಿನವಾಗಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದವು. ಈ ಪೈಕಿ ಉತ್ತರಾಖಂಡದ ಹೃಷಿಕೇಷ ಮೂಲದ ಆಲ್ಗೋಟ್ರಿಪ್‌ ಹಾಸ್ಪಿಟಾಲಿಟಿ ಪ್ರೈ ಲಿ ಸಂಸ್ಥೆಯು ಬಿಡ್‌ನಲ್ಲಿ ಯಶಸ್ವಿಯಾಗಿ ಹೊರಹೊಮ್ಮಿತ್ತು.

 

ಈ ಕುರಿತು ಜಂಗಲ್‌ ಲಾಡ್ಜಸ್‌ ರೆಸಾರ್ಟ್ಸ್‌ ಸಂಸ್ಥೆಯು ಹೃಷಿಕೇಷದ ಆಲ್ಗೋಟ್ರಿಪ್‌ ಹಾಸ್ಪಿಟಲಾಟಿ ಪ್ರೈ ಲಿಮಿಟೆಡ್‌ಗೆ 2022ರ ಮಾರ್ಚ್‌ 25ರಂದು ಪತ್ರದ ಮೂಲಕ ತಿಳಿಸಿತ್ತು. ಅಲ್ಲದೆ ಇದರೊಂದಿಗೆ ಷರತ್ತುಗಳು ಮತ್ತು ನಿಯಮಾವಳಿಗಳನ್ನು ಒಳಗೊಂಡ ಒಪ್ಪಂದದ ಕರಡನ್ನೂ ಲಗತ್ತಿಸಿದ್ದರು ಎಂದು ಗೊತ್ತಾಗಿದೆ.

 

ಬಿಡ್‌ನಲ್ಲಿ ಯಶಸ್ವಿಯಾದ ಕಂಪನಿಗೆ ಜಂಗಲ್‌ ಲಾಡ್ಜ್‌ಸ್‌ ನಿರ್ದೇಶಕರು ಬರೆದಿರುವ ಪತ್ರದ ಪ್ರತಿ

 

ಟೆಂಡರ್‌ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಆಲ್ಗೋಟ್ರಿಪ್‌ ಹಾಸ್ಪಿಟಾಲಿಟಿ ಸಂಸ್ಥೆಯು ಈ ಒಪ್ಪಂದ ಪತ್ರಕ್ಕೆ ಸಹಿ ಮಾಡಿದೆ. ಆದರೆ ಈ ಒಪ್ಪಂದ ಪತ್ರಕ್ಕೆ ಜೆಎಲ್‌ಆರ್‌ ಸಂಸ್ಥೆಯುಸಹಿ ಮಾಡಿ ಕಾರ್ಯಚಟುವಟಿಕೆ ನಡೆಸಲು ಅನುಮತಿ ನೀಡುವುದಷ್ಟೇ ಬಾಕಿ ಇದೆ. ಈ ಹಂತದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಇಡೀ ಪ್ರಕ್ರಿಯೆಯನ್ನು ತಡೆಹಿಡಿಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿಯೇ ಜಂಗಲ್‌ ಲಾಡ್ಜಸ್‌ ರೆಸಾರ್ಟ್ಸ್‌ ಸಂಸ್ಥೆಯು ಇದುವರೆಗೂ ಸಹಿ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂದು ತಿಳಿದು ಬಂದಿದೆ.

 

ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡು ಒಂದು ತಿಂಗಳು ಕಳೆದರೂ ಕೂಡ ಯಾವುದೇ ಕಾರಣ ನೀಡದೇ ತಡೆಹಿಡಿದಿರುವುದರ ಹಿಂದೆ ಕಮಿಷನ್‌ ವ್ಯವಹಾರವೇ ಮೂಲ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಚಿವರ ಈ ಸೂಚನೆಯಿಂದಾಗಿ ಸರ್ಕಾರಕ್ಕೆ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದ.ೆ
ಒಂದೊಮ್ಮೆ ಇದಾವುದೂ ಇಲ್ಲದಿದ್ದಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಮಾಡುವುದು ಮತ್ತು ಕಾರ್ಯಾದೇಶ ನೀಡದೇ ಬಾಕಿ ಉಳಿಸಿಕೊಂಡಿರುವುದಕ್ಕೆ ಸ್ಪಷ್ಟ ಕಾರಣ ನೀಡಬೇಕಿತ್ತು. ಆದರೆ ಈ ಯಾವ ಕಾರಣಗಳನ್ನೂ ನೀಡದೆಯೇ ಬಾಕಿ ಉಳಿಸಿಕೊಂಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಅಲ್ಲದೆ ಆಲ್ಗೋಟ್ರಿಪ್‌ ಹಾಸ್ಪಿಟಲಾಟಿ ಸಂಸ್ಥೆಯು ತನ್ನ ಟೆಂಡರ್‌ ನಲ್ಲಿ ಶೇ.60ಕ್ಕಿಂತ ಹೆಚ್ಚಿನ ಟಿಕೆಟ್‌ ದರದ ಮೊತ್ತವನ್ನು ಜೆಎಲ್‌ಆರ್‌ ಗೆ ನೀಡಲು ಒಪ್ಪಿದೆ. ಉಳಿದ ಸಂಸ್ಥೆಗಳು ಶೇ.50ಕ್ಕಿಂತ ಕಡಿಮೆ ಮೊತ್ತ ನಮೂದಿಸಿದ್ದವು.

 

ಆದರೆ ಇದುವರೆಗೂ ಟೆಂಡರ್‌ನಲ್ಲಿ ಆಯ್ಕೆಯಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳದೇ ಈ ಹಿಂದೆ ಕಡಿಮೆ ಮೊತ್ತವನ್ನು ಹಂಚಿಕೊಳ್ಳುತ್ತಿದ್ದ ಸಂಸ್ಥೆಗೆ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಬೇಸಿಗೆ ರಜೆಯಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಈ ಸಮಯದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts