ಅಪೆಕ್ಸ್‌ ಬ್ಯಾಂಕ್‌ನ 2,000 ಕೋಟಿ ಸಾಲ ಮಂಜೂರಾತಿ ಹಗರಣ; ಸಿಬಿಐ ತನಿಖೆಯಿಂದ ಹಿಂದೆ ಸರಿದ ಸರ್ಕಾರ

Photo Credit; Publictv

ಬೆಂಗಳೂರು; ಅಪೆಕ್ಸ್‌ ಬ್ಯಾಂಕ್‌ ಮೂಲಕ ಸಕ್ಕರೆ ಕಾರ್ಖಾನೆಗಳಿಗೆ ಅಂದಾಜು ಎರಡು ಸಾವಿರ ಕೋಟಿ ರುಪಾಯಿ ಸಾಲ ಮಂಜೂರಾತಿಯಲ್ಲಿ ಅವ್ಯವಹಾರಗಳು ನಡೆದಿದೆ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆಗೆ ಒಳಪಡಿಸದಿರಲು ರಾಜ್ಯ ಸರ್ಕಾರವು ನಿಲುವು ತಳೆದಿದೆ.

 

ಬ್ಯಾಂಕ್‌ನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇಂದ್ರದ ಗೃಹ ಮತ್ತು ಸಹಕಾರ ಸಚಿವಾಲಯದ ಕೇಂದ್ರ ಸಹಕಾರ ಸಂಘಗಳ ನಿಬಂಧಕರು 2022ರ ಫೆ.21ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಬೆನ್ನಲ್ಲೇ ಸಿಬಿಐ ತನಿಖೆಗೆ ಒಳಪಡಿಸದಿರಲು ತಳೆದಿರುವ ನಿಲುವು ಮುನ್ನೆಲೆಗೆ ಬಂದಿದೆ.

 

ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಸಾಲದ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಬೇಕು ಎಂದು  ಉದ್ಯೋಗಿಗಳು ಮತ್ತು ಅಧಿಕಾರಿಗಳ ಒಕ್ಕೂಟವು 2019ರ ಫೆ.4ರಂದು ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಿದ್ದ ದೂರು ಸಲ್ಲಿಸಿತ್ತು. ಆದರೆ ಅದೊಂದು ಅನಾಮಧೇಯ ದೂರು ಅರ್ಜಿ ಎಂದು ಅಪೆಕ್ಸ್‌ ಬ್ಯಾಂಕ್‌ ನೀಡಿರುವ ಉತ್ತರಕ್ಕೆ ಸಹಕಾರ ಇಲಾಖೆಯು ಮಣೆ ಹಾಕಿದೆ.

 

ಈ ಕುರಿತು ಜೆಡಿಎಸ್‌ ಶಾಸಕ ಸಾ ರಾ ಮಹೇಶ್‌ ಅವರು ನೀಡಿದ್ದ ನಿಯಮ 351ರ ಅಡಿ ಸೂಚನೆಗೆ ಸಂಬಂಧಿಸಿದಂತೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಸಿಬಿಐ ತನಿಖೆಗೆ ಒಳಪಡಿಸುವ ಅಗತ್ಯತೆ ಕಂಡು ಬರುವುದಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಾ ರಾ ಮಹೇಶ್‌ ಅವರಿಗೆ ನಿಯಮ 351ರಡಿ ನೀಡಿರುವ ಸೂಚನೆಗೆ ಮಾಹಿತಿ

 

 

ಮಾಜಿ ಶಾಸಕ ಕೆ ಎನ್‌ ರಾಜಣ್ಣ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಸಕರು ಮತ್ತು ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಅಪೆಕ್ಸ್‌ ಬ್ಯಾಂಕ್‌ ಮೂಲಕ ಸಾಲ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾಗಿರುವ 2 ಸಾವಿರ ಕೋಟಿ ರು. ಹಗರಣ ತನಿಖೆ ನಡೆಸಬೇಕು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಎನ್‌ ಎಸ್‌ ಪ್ರಸನ್ನಕುಮಾರ್‌ ಅವರು 3 ವರ್ಷದ ಹಿಂದೆ ಗೌಪ್ಯ ಪತ್ರ ಬರೆದಿದ್ದರು.

 

ಬ್ಯಾಂಕ್‌ನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ದೂರು ಅರ್ಜಿಗಳಲ್ಲಿನ ಅಂಶಗಳನ್ನು ಬ್ಯಾಂಕ್‌ನ ದಾಖಲಾತಿಗಳೊಂದಿಗೆ ಪರಿಶೀಲಿಸಲು ಅಧಿಕಾರಿಗಳ ತಂಡ ನಿಯೋಜಿಸಲಾಗಿತ್ತು. ದೂರು ಅರ್ಜಿಯಲ್ಲಿನ ಅಂಶಗಳನ್ನು ಪರಿಶೀಲಿಸಿದ್ದ ಈ ಪರಿಶೀಲನಾ ತಂಡವು ಕೆಲವೊಂದು ಅಂಶಗಳನ್ನು ಸಾಬೀತುಗೊಳಿಸಿತ್ತು.

 

ಹೀಗಾಗಿ ಹೆಚ್ಚಿನ ತನಿಖೆಯು ಅವಶ್ಯವಿರುವುದದರಿಂದ ಸಹಕಾರ ಸಂಘಗಳ ಕಾಯ್ದೆ 1959ರಕಲಂ 64ರ ವಿಚಾರಣೆ/65 ರಡಿಯಲ್ಲಿ ಪರಿವೀಕ್ಷಣೆ ಅಥವಾ ಉನ್ನತ ಸಂಸ್ಥೆಯ ತನಿಖೆ ಅಗತ್ಯವಿದೆ ಎಂದು ವರದಿಯು ಅಭಿಪ್ರಾಯಪಟ್ಟಿತ್ತು. ಆದರೂ ಸಿಬಿಐ ತನಿಖೆಗೆ ಒಳಪಡಿಸುವ ಅಗತ್ಯತೆ ಕಂಡು ಬರುವುದಿಲ್ಲ ಎಂದು ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಉತ್ತರಿಸಿರುವುದು 2 ಸಾವಿರ ಕೋಟಿ ಹಗರಣವನ್ನು ಮುಚ್ಚಿ ಹಾಕುವ ಉದ್ದೇಶವಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಪರಿಶೀಲನಾ ತಂಡದ ವರದಿಯನ್ನಾಧರಿಸಿ ಉನ್ನತ ಸಂಸ್ಥೆಯ ತನಿಖೆಗೆ ಆದೇಶಿಸಬೇಕಿತ್ತಾದರೂ ಪರಿಶೀಲನಾ ವರದಿ ಆಧರಿಸಿ ವಿಚಾರಣೆಗೆ ಒಳಪಡಿಸಬೇಕಾದ 10 ಅಂಶಗಳ ಬಗ್ಗೆ 64 ಅಡಿಯಲ್ಲಿ ವಿಚಾರಣೆ ನಡೆದಿತ್ತು ಎಂಬುದು ಸಚಿವ ಸೋಮಶೇಖರ್‌ ಅವರು ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

 

ಅಪೆಕ್ಸ್‌ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ ಅವಧಿಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಂದ ಪ್ರಮಾಣೀಕರಿಸಿದ ಲಿಖಿತ ಹೇಳಿಕೆ, ಪ್ರಕರಣವಾರು ಸಂಬಂಧಪಟ್ಟ ದಾಖಲೆಗಳನ್ನು ಪಡೆದಿರುವುದು ಕಂಡು ಬರುವುದಿಲ್ಲ. ನಬಾರ್ಡ್‌ ಸುತ್ತೋಲೆ, ಸಾಲ ನಿಯಮಗಳು, ಸಕ್ಕರೆ ಸಾಲದ ನಿಯಮಗಳು, ಪಡೆದಿರುವ ಭದ್ರತೆ, ಸಾಲ ವಸೂಲಾತಿ, ಬ್ಯಾಂಕ್‌ನ ಬೈಲಾ, ಆಡಳಿತ ಮಂಡಳಿ ಠರಾವುಗಳನ್ನು ಮತ್ತು ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ಪುನಃ ಪರಿಶೀಲಿಸಿ ಸಾಲ ಸಾಲ ಪಡೆದಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳ ಎಲ್ಲಾ ಪ್ರಕರಣಗಳನ್ನೂ ಪರಿಶೀಲಿಸಿತ್ತು.

 

ಹಾಗೆಯೇ ಈ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ದಾಖಲಾತಿಗಳೊಂದಿಗೆ ಸ್ಪಷ್ಟವಾಗಿ ಆರೋಪ ದೃಢಪಟ್ಟಿರುವ ಅಥವಾ ದೃಢಪಡದಿರುವ ಬಗ್ಗೆ ವಿಚಾರಣಾಧಿಕಾರಿ ನಮೂದಿಸಿ ಜವಾಬ್ದಾರಿ ನಿಗದಿಪಡಿಸಿ ಮುಂದುವರೆದ ವಿಚಾರಣೆಗೆ ಆದೇಶಿಸುವುದು ಸೂಕ್ತವೆಂದು 2020ರ ಅಕ್ಟೋಬರ್‌ 17ರಂದು ಆದೇಶಿಸಲಾಗಿತ್ತು. ಈ ಸಂಬಂಧ 2021ರ ಡಿಸೆಂಬರ್‌ 31ರಂದು ಬ್ಯಾಂಕ್‌ ಅನುಪಾಲನಾ ವರದಿ ಸಲ್ಲಿಸಿರುವುದು ಗೊತ್ತಾಗಿದೆ.

 

ದೂರರ್ಜಿಯೇ ಅನಾಮಧೇಯವೆಂದ ಬ್ಯಾಂಕ್‌

 

ಸಕ್ಕರೆ ಕಾರ್ಖಾನೆಗಳಿಗೆ ನಿಯಮಬಾಹಿರವಾಗಿ ಸಾಲ ನೀಡಿದೆ ಎಂದು ಅಪೆಕ್ಸ್‌ ಬ್ಯಾಂಕ್‌ ಉದ್ಯೋಗಿಗಳು ಮತ್ತು ಅಧಿಕಾರಿಗಳ ಒಕ್ಕೂಟವು ಕೇಂದ್ರ ಹಣಕಾಸು ಸಚಿವಾಲಯ, ನಬಾರ್ಡ್‌ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ 2019ರ ಫೆ. 4ರಂದು ದೂರು ಸಲ್ಲಿಸಿತ್ತು. ಈ ದೂರು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಿಸರ್ವ್‌ಬ್ಯಾಂಕ್‌, ನಬಾರ್ಡ್‌ನ ಮುಖ್ಯ ವ್ಯವಸ್ಥಾಪಕರಿಗೆ 2019ರ ಏಪ್ರಿಲ್‌8 ರಂದು ಪತ್ರ ಮುಖೇನ ಸೂಚಿಸಿದ್ದರು.

 

ಆದರೆ ಅಪೆಕ್ಸ್‌ ಬ್ಯಾಂಕ್‌ನ ಆಡಳಿತ ಮಂಡಳಿಯು ತನ್ನ ಅನುಪಾಲನಾ ವರದಿಯಲ್ಲಿ ಬ್ಯಾಂಕ್‌ನ ವಿರುದ್ಧ ಅನಾಮಧೇಯ ಅರ್ಜಿ ಆಧಾರದ ಮೇಲೆ ಒತ್ತಡಕ್ಕೆ ಒಳಗಾಗಿ ಕಲಂ 64ರ ವಿಚಾರಣೆಗೆ ಆದೇಶಿಸಿತ್ತು ಎಂದು ಸಮಜಾಯಿಷಿ ನೀಡಿರುವುದು ಸೋಮಶೇಖರ್‌ ಅವರು ನೀಡಿರುವ ಮಾಹಿತಿಯಿಂದ ಗೊತ್ತಾಗಿದೆ. ‘ಯಾವುದೇ ಅನಾಮಧೇಯ ದೂರು ಅರ್ಜಿ ಅಥವಾ ಪತ್ರಗಳ ಮೇಲೆ ಯಾವುದೇ ಕ್ರಮ ಅಗತ್ಯವಿರುವುದಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿರುತ್ತಾರೆ. ಹೀಗಾಗಿ ಕಲಂ 64ರ ಅಡಿ ವಿಚಾರಣೆಯು ಕಾನೂನು ದೃಷ್ಟಿಯಲ್ಲಿ ಊರ್ಜಿತವಾಗುವುದಿಲ್ಲ,’ ಎಂದು ಬ್ಯಾಂಕ್‌ ತಿಳಿಸಿದೆ.

 

ಕೆ ಎನ್ ರಾಜಣ್ಣ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಅಪೆಕ್ಸ್‌ ಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಮತ್ತು ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವು ಪ್ರಭಾವಿಗಳ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಮೂಲಕ ನೂರಾರು ಕೋಟಿ ರು.ಮೊತ್ತದಲ್ಲಿ ಸಾಲ ವಿತರಣೆಯಾಗಿದೆ.

 

 

ಅದರಲ್ಲೂ ತುಂಬಾ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ವೊಂದೇ 1 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದಲ್ಲಿ ಸಾಲ ಮಂಜೂರು ಮಾಡಿದೆ. ಮಂಜೂರಾಗಿದ್ದ ಒಟ್ಟು ಸಾಲ ಮೊತ್ತದ ಪೈಕಿ ಶೇ.50ರಷ್ಟು ಮೊತ್ತ ಅಪೆಕ್ಸ್‌ ಬ್ಯಾಂಕ್‌ಮಧ್ಯಸ್ಥಿಕೆ ಮತ್ತು ಖಾತರಿ ಮೇರೆಗೆ ನೀಡಲಾಗಿದೆ.

 

ದೂರಿನಲ್ಲಿ ಹೇಳಿರುವ ಅಂಶಗಳು ಗಂಭೀರ ಸ್ವರೂಪದಲ್ಲಿವೆ. ಶಾಸಕರ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸೂಕ್ತ ದಾಖಲೆಗಳಿಲ್ಲದೆಯೇ 2,000 ಕೋಟಿ ರು.ಮೊತ್ತದ ಸಾಲ ನೀಡಲಾಗಿದೆ. ನೀಡಿರುವ ಸಾಲ ವಸೂಲಿಯಾಗಿಲ್ಲ. ಬ್ಯಾಂಕ್‌ನ ಹಾಲಿ ಅಧ್ಯಕ್ಷ ರಾಜಣ್ಣ, ಬ್ಯಾಂಕ್‌ನ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ್‌, ಮುಖ್ಯ ವ್ಯವಸ್ಥಾಪಕ ಜಂಗಮಪ್ಪ ಮತ್ತು ಇತರ ನಿರ್ದೇಶಕರು ಇದರಲ್ಲಿ ಭಾಗಿ ಆಗಿದ್ದಾರೆ ಸಹಕಾರ ಸಂಘಗಳ ನಿಬಂಧಕರಾಗಿದ್ದ ಐಎಎಸ್‌ ಅಧಿಕಾರಿ ಎನ್‌ ಎಸ್‌ ಪ್ರಸನ್ನಕುಮಾರ್‌ ಗೌಪ್ಯ ಪತ್ರ ಬರೆದಿದ್ದರು.

 

ಸಹಕಾರ ಸಂಘಗಳ ನಿಬಂಧಕರು ಬರೆದಿದ್ದ ಗೌಪ್ಯ ಪತ್ರದ ಪ್ರತಿ

 

ಹೀಗಾಗಿ ಈ ಪ್ರಕರಣದ ತನಿಖೆಯನ್ನು ವಿಸ್ತೃತವಾಗಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಲೆಕ್ಕಪರಿಶೋಧಕರು, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರು ನಬಾರ್ಡ್‌ ಪ್ರತಿನಿಧಿಯನ್ನೊಳಗೊಂಡ ಸಮಿತಿ ರಚಿಸಿ ನವೆಂಬರ್‌30ರೊಳಗೆ ವರದಿ ಸಲ್ಲಿಸಲು ಸೂಚಿಸಬೇಕು,’ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಎನ್‌ನಾಗಾಂಬಿಕಾದೇವಿ ಅವರಿಗೆ ಪತ್ರದಲ್ಲಿ ಕೋರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts