ಆರ್ಥಿಕವಾಗಿ ಅಧಃಪತನವಾಗಿದ್ದರೂ 80 ಕೋಟಿ ವೆಚ್ಚದಲ್ಲಿ 238 ಹೊಸ ಬಸ್‌ ಖರೀದಿಗೆ ಅನುಮತಿ

ph;oto credit;bsriramulutwitter

ಬೆಂಗಳೂರು; ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ ಕಟ್ಟಡ, ನಿವೇಶನ ಮತ್ತು ಜಮೀನುಗಳನ್ನು ಬ್ಯಾಂಕ್‌ನಲ್ಲಿ 540.00 ಕೋಟಿ ರು.ಗೆ ಅಡಮಾನವಿರಿಸಿದೆಯಲ್ಲದೆ ಬಿಎಂಟಿಸಿ ನೌಕರರ ಭವಿಷ್ಯ ನಿಧಿ ಪಾವತಿಸಲು ಸಾರಿಗೆ ಇಲಾಖೆಯು ಪರದಾಡುತ್ತಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರೂ ಅಂದಾಜು 80 ಕೋಟಿ ರು. ವೆಚ್ಚದಲ್ಲಿ 238 ಬಸ್‌ಗಳನ್ನು ಹೊಸದಾಗಿ ಖರೀದಿಸುವ ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.

 

2017-18ನೇ ಸಾಲಿನಲ್ಲಿ ಅನುಮೋದನೆಗೊಂಡಿದ್ದ 1,500 ಬಸ್‌ಗಳ ಪೈಕಿ ಖರೀದಿಸಲು ಬಾಕಿ ಇದ್ದ 78 ಮತ್ತು 2020-21ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದ 1,500 ಬಸ್‌ಗಳಿಗೆ ಎದುರಾಗಿ 160 ಸೇರಿ ಒಟ್ಟಾರೆ 238 ಬಸ್‌ಗಳನ್ನು ಖರೀದಿಸಲು ಸಾರಿಗೆ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.

 

ಇದನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ‘ ಕೆಟಿಪಿಪಿ ನಿಯಮ 12(5)ರನ್ವಯ ಈಗಿನ ಟೆಂಡರ್‌ ದರ ಪ್ರತಿ ಬಸ್‌ಗೆ 33.82 ಲಕ್ಷ ರು.ದಂತೆ ಒಟ್ಟು 238 ಬಸ್‌ಗಳನ್ನು ಖರೀದಿಸಲು ಸಹಮತಿಸಿದೆ. ಪ್ರಸ್ತಾಪಿತ ಖರೀದಿಗೆ ಅಸಲು ಮತ್ತು ಬಡ್ಡಿ ಸಹಾಯಧನ 100.11 ಕೋಟಿ ರು ಮೊತ್ತವನ್ನು ಆಯವ್ಯಯದಲ್ಲಿ ಒದಗಿಸುವ ಅನುದಾನದಿಂದ ಭರಿಸಬೇಕು,’ ಎಂದು 2022ರ ಮಾರ್ಚ್‌ 21ರಂದು ಅಭಿಪ್ರಾಯ (ಆಇ 67 ವೆಚ್ಚ-11/2022-ಟಿಡಿ 9 ಟಿಸಿಬಿ 2022- 21-03-2022) ನೀಡಿರುವುದು ಗೊತ್ತಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಡಮಾನವಿರಿಸಿರುವ ಸ್ವತ್ತುಗಳ ವಿವರ

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಶಾಂತಿನಗರ ಸಂಚಾರಿ ಮತ್ತು ಸಾರಿಗೆ ನಿರ್ವಹಣಾ ಕೇಂದ್ರದ ಕಟ್ಟಡ (ಟಿಟಿಎಂಸಿ)ವನ್ನು ಕೆನರಾ ಬ್ಯಾಂಕ್‌ನಲ್ಲಿ 390.00 ಕೋಟಿ ರು. ಅಡಮಾನ ಇರಿಸಿದೆ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಹುಬ್ಬಳ್ಳಿ ನಗರದ ಹೊಸೂರುದಲ್ಲಿರುವ (ಸಿಟಿಎಸ್‌ ನಂ 20) 14 ಎಕರೆ ಹಾಗೂ 2.32 ಎಕರೆಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಅಡಮಾನವಿರಿಸಿ 100.00 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಕಲ್ಬುರ್ಗಿಯಲ್ಲಿರುವ ಕೇಂದ್ರ ಬಸ್‌ ನಿಲ್ದಾಣದ 6.28 ಎಕರೆ ನಿವೇಶನವನ್ನು ಕೆನರಾ ಬ್ಯಾಂಕ್‌ನಲ್ಲಿ 50.00 ಕೋಟಿ ರು. ಸೇರಿದಂತೆ ಒಟ್ಟಾರೆ 540.00 ಕೋಟಿ ರು. ಗೆ ಅಡಮಾನವಿರಿಸಿದೆ.

 

ಬಿಎಂಟಿಸಿ ನೌಕರರಿಗೆ ಪಿಎಫ್‌ ಹಣ ಪಾವತಿಗೂ ಪರದಾಟ

 

ಕೋವಿಡ್‌ 19ರ ಮೂರು ಅಲೆಗಳನ್ನು ತಡೆಗಟ್ಟಲು ಕೈಗೊಂಡಿದ್ದ ಲಾಕ್‌ಡೌನ್‌ ಮತ್ತಿತರ ಕ್ರಮಗಳಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಅನುದಾನ ಕೊರತೆಯುಂಟಾಗಿದೆ. ಡಿಸೆಂಬರ್‌ 2021ರಿಂದ ಮಾರ್ಚ್‌ 2022ರವರೆಗಿನ ತಿಂಗಳುಗಳಲ್ಲಿ ಗಳಿಸುವ ಆದಾಯದಿಂದ ಅತ್ಯವಶ್ಯಕ ವೆಚ್ಚಗಳನ್ನು ಭರಿಸಲು 357.77 ಕೋಟಿ ರು. ಮೊತ್ತದ ಅನುದಾನ ಕೊರತೆಯಾಗಲಿದೆ. ವಿಶೇಷ ಅನುದಾನ ಕೋರಿ ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಒಪ್ಪದಿದ್ದಲ್ಲಿ ನೌಕರರ ವೇತನಕ್ಕೆ ಪರದಾಡಬೇಕಾದ ಅನಿವಾರ್ಯ ಸ್ಥಿತಿಯನ್ನು ಬಿಎಂಟಿಸಿಯು ಎದುರಿಸುತ್ತಿದೆ.

 

ಅಲ್ಲದೆ ನೌಕರರ ಭವಿಷ್ಯ ನಿಧಿ ಮಂಡಳಿಗೆ ಬಾಕಿ ಪಾವತಿ, ಬಿಡಿಭಾಗಗಳ ಸರಬರಾಜುದಾರರ ಬಾಕಿ, ನಿವೃತ್ತ, ಮರಣ ಹೊಂದಿದ ನೌಕರರ ಉಪಧನ, ಗಳಿಕೆ ರಜೆ ನಗದೀಕರಣ ಸೇರಿದಂತೆ ವಿವಿಧ ಬಾಬ್ತುಗಳಿಗಾಗಿ 2021ರ ಡಿಸೆಂಬರ್‌ 31ರ ಅಂತ್ಯಕ್ಕೆ ಒಟ್ಟು 805.59 ಕೋಟಿ ರು. ಪಾವತಿಸಲು ಬಾಕಿ ಉಳಿದುಕೊಂಡಿದೆ. ಅದೇ ರೀತಿ 855.59 ಕೋಟಿ ರು.ಗಳ ಸಾಲವನ್ನೂ ಹೊಂದಿದೆ.

 

ವಿವಿಧ ಬಾಬ್ತು ಮತ್ತು ಸಾಲ ಸೇರಿದಂತೆ ಒಟ್ಟಾರೆ 1,661.18 ಕೋಟಿ ರು. ಗಳು ಬಾಕಿ ಇರುವುದರಿಂದ ನೌಕರರ ವೇತನ ಪಾವತಿಗೆ ಹಣವಿಲ್ಲದಂತಾಗಿದೆ. ಹೀಗಾಗಿ ನಗದು ಕೊರತೆಯ ಮೊತ್ತ 357.77 ಕೋಟಿ ರು.ಗಳನ್ನು ವಿಶೇಷ ಅನುದಾನವನ್ನು ವೇತನ ಪಾವತಿಗೆ ಬಿಡುಗಡೆ ಮಾಡಬೇಕು ಎಂದು ಸಾರಿಗೆ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸಂಸ್ಥೆಯು ಕ್ಲಿಷ್ಟಕರ ಹಣಕಾಸಿನ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭ ಹಾಗೂ ಇಷ್ಟೊಂದು ಪ್ರತಿಕೂಲ ಅಂಶಗಳನ್ನು ಹೊಂದಿದ್ದರೂ ಸಹ ಬೆಂಗಳೂರು ನಗರ ಹಾಗೂ ಹೊರವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಸಂಸ್ಥೆಯ ಕರ್ತವ್ಯ ನಿರತ ನೌಕರರಿಗೆ ನಿಗದಿತ ಸಮಯದಲ್ಲಿ ವೇತನ ಪಾವತಿ ಮಾಡಲು ಅನುಕೂಲವಾಗಲು ಡಿಸೆಂಬರ್‌ 2021ರಿಂದ ಮಾರ್ಚ್‌ 2022ರವರೆಗೆ ಉಂಟಾಗಬಹುದಾದ ನಗದು ಕೊರತೆಯ ಮೊತ್ತ 357.77 ಕೋಟಿ ರು. ವಿಶೇಷ ಅನುದಾನವನ್ನು ವೇತನ ಪಾವತಿಗಾಗಿ ಬಿಡುಗಡೆ ಮಾಡಬೇಕು,’ ಎಂದು ಕೋರಿರುವುದು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ಜುಲೈ 2021ರಿಂದ ಡಿಸೆಂಬರ್‌ 2021ರವರೆಗೆ ಭವಿಷ್ಯ ನಿಧಿ ಬಾಬ್ತಿನಲ್ಲಿ ಒಟ್ಟು 139.84 ಕೋಟಿ ರು. ಬಾಕಿ ಇರಿಸಿಕೊಳ್ಳಲಾಗಿದೆ. ಅದೇ ರೀತಿ ಭವಿಷ್ಯ ನಿಧಿ ಮೇಲಿನ ಬಡ್ಡಿ ಬಾಬ್ತಿನಲ್ಲಿ 75.21 ನಿವೃತ್ತಿ ನೌಕರರಿಗೆ ಗ್ರಾಚ್ಯುಟಿ ರೂಪದಲ್ಲಿ 96.63ಕೋಟಿ, ನಿವೃತ್ತ, ಮರಣ ಹೊಂದಿದ ನೌಕರರಿಗೆ ಗಳಿಕೆ ರಜೆ ನಗದೀಕರಣ ಬಾಬ್ತಿನಲ್ಲಿ 35.31 ಕೋಟಿ, ಚಾಸಿಸ್‌ ಪೇಮೆಂಟ್‌ ರೂಪದಲ್ಲಿ 30.45 ಕೋಟಿ, ಸರಬರಾಜುದಾರರಿಗೆ 35.00 ಕೋಟಿ ಸೇರಿದಂತೆ ಒಟ್ಟು 412.44 ಕೋಟಿ ರು. ಬಿಡುಗಡೆ ಮಾಡಲು ಪರಿಗಣಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೊತ್ತಾಗಿದೆ.

 

ಹೀಗಾಗಿ ಆರ್ಥಿಕ ಇಲಾಖೆಯು ಒಂದು ಬಾರಿಗೆ 200 ಕೋಟಿ ರು. ಆರ್ಥಿಕ ನೆರವು ಒದಗಿಸುವ ಸಂಬಂಧ ಕಡತವನ್ನು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರಿಗೆ 2022ರ ಫೆಬ್ರುವರಿ 3ರಂದು ಮಂಡಿಸಲಾಗಿದೆ ಎಂದು ತಿಳಿದು ಬಂದಿದೆ.

 

ಕೋವಿಡ್‌ 19ರ ಪೂರ್ವದಲ್ಲಿ ಸಂಸ್ಥೆಗೆ ಪ್ರತಿದಿನ ಅಂದಾಜು 33 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸದ್ಯ 23.50 ಲಕ್ಷ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದು, ಇದರಿಂದ ಪ್ರಯಾಣಿಕರ ಸಂಖ್ಯೆ ಶೇ. 29ರಷ್ಟು ಕಡಿಮೆಯಾಗಿದೆ. ಕೋವಿಡ್‌ 19ರ ಪೂರ್ವದಲ್ಲಿ ಸಂಸ್ಥೆಗೆ ಪ್ರತಿ ದಿನ 4.94 ಕೋಟಿ ರ. ಆದಾಯ ಬರುತ್ತಿತ್ತು. ಸದ್ಯ ಪ್ರತಿದಿನ ಸಾರಿಗೆ ಆದಾಯ 3.00 ಕೋಟಿ ರ. ಬರುತ್ತಿದೆ. ಇದರಿಂದ ಸಾರಿಗೆ ಆದಾಯದಲ್ಲಿ ಶೇಕಡ 39ರಷ್ಟು ಇಳಿಕೆಯಾಗಿದೆ.

 

ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿನ ನೌಕರರು ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿವುದರಿಂದ ಹವಾ ನಿಯಂತ್ರಿತ ಬಸ್‌ಗಳಿಗೆ (ವೋಲ್ವೋ) ಪ್ರಯಾಣಿಕರ ದಟ್ಟಣೆ ಇರುವುದಿಲ್ಲ. ಹೀಗಾಗಿ ಈ ಬಸ್‌ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸದ್ಯ ಹಂತ ಹಂತವಾಗಿ ಈ ಬಸ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿದೆ.

 

ಇನ್ನು, ಶಾಲಾ ಕಾಲೇಜುಗಳು ಆರಂಭವಾಗಿದ್ದರೂ ಸಹ ಆನ್‌ಲೈನ್‌ ತರಗತಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಜರಾಗುತ್ತಿರುವುದರಿಂದ ವಿದ್ಯಾರ್ಥಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದೆ. ಕೋವಿಡ್‌ 19ರ ಲಾಕ್‌ಡೌನ್‌ ಸಡಿಲಿಕೆಗೊಂಡ ನಂತರದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಹಾಗೂ ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ಸಂಸ್ಥೆ ಸಜ್ಜಾಗಿದೆಯಾದರೂ ಕೋವಿಡ್‌ 19 ಸಾಂಕ್ರಾಮಿಕ ರೋಗದ ಹರಡುವಿಕೆಯಿಂದ ಮತ್ತು 3ನೇ ಅಲೆ ಮುನ್ಸೂಚನೆಯಿಂದ ಜನರಲ್ಲಿ ಭಯದ ಭೀತಿ ಆವರಿಸಿದೆ.

 

ಹೀಗಾಗಿ ಪ್ರಯಾಣಿಕರು ಸಾರಿಗೆ ಸೇವೆಯನ್ನು ಹಿಂದಿನಂತೆ ಬಳಸುತ್ತಿಲ್ಲ. ಬದಲಿಗೆ ಸ್ವಂತ ವಾಹನಗಳು, ಟ್ಯಾಕ್ಸಿ, ಕ್ಯಾಭ್‌ಗಳನ್ನು ಬಳಕೆ ಮಾಡುತ್ತಿರುವುದರಿಂದ ಕೋವಿಡ್‌ 19ರ ಪೂರ್ವದಲ್ಲಿ ಗಳಿಸುತ್ತಿದ್ದ ಸಾರಿಗೆ ಆದಾಯವನ್ನು ತಲುಪಲು ಕಷ್ಟಕರವಾಗಿದೆ ಎಂದು ಸಾರಿಗೆ ಇಲಾಖೆಯು ಆರ್ಥಿಕ ಸ್ಥಿತಿಯನ್ನು ತೆರೆದಿಟ್ಟಿತ್ತು.

 

ಅಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಕಳೆದ ಎರಡೂ ವರ್ಷಗಳಿಂದ ಸಮವಸ್ತ್ರವನ್ನೇ ವಿತರಣೆ ಮಾಡಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರರಿಗೆ ಸಮವಸ್ತ್ರ ಖರೀದಿಸಲು ಕರೆದಿದ್ದ 2 ಟೆಂಡರ್‌ಗಳನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಂಡಿತ್ತು. 2017-18ನೇ ಸಾಲಿನಲ್ಲಿ ವಿತರಿಸಬೇಕಿದ್ದ ಸಮವಸ್ತ್ರಗಳನ್ನು ಟೆಂಡರ್‌ ಮುಖಾಂತರ ಅಂದರೆ 2020ರ ಆಗಸ್ಟ್‌ ನಿಂದ 2021ರ ಮಾರ್ಚ್‌ವರೆಗೆ ವಿತರಿಸಿತ್ತು. ಆ ನಂತರ ಕೋವಿಡ್‌ ನೆಪವೊಡ್ಡಿ ಸಮವಸ್ತ್ರ ಸರಬರಾಜಿನಲ್ಲಿ ವಿಳಂಬವಾಗಿದೆ ಎಂದು ಹೇಳಿತ್ತು.

 

ಅದೇ ರೀತಿ 2018-19ನೇ ಸಾಲಿನಲ್ಲಿ ಸಮವಸ್ತ್ರಗಳ ಬದಲು ಮಾರ್ಚ್‌ 2020ರಲ್ಲಿ ನಗದು ಪಾವತಿಸಲಾಗಿತ್ತು. 2019-20 ಮತ್ತು 2020-21ನೇ ಸಾಲಿಗೂ ಸಮವಸ್ತ್ರದ ಬದಲು ನಗದು ಪಾವತಿಸಲಾಗಿತ್ತು ಎಂಬುದು ಸಚಿವ ಶ್ರೀರಾಮುಲು ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

2021-22ನೇ ಸಾಲಿಗೆ ಸಮವಸ್ತ್ರಗಳ ಖರೀದಿಗೆ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮಕ್ಕೆ ಆದೇಶ ನೀಡಲಾಗಿತ್ತು. ‘ಕೋವಿಡ್‌ 19ರ ಹಿನ್ನೆಲೆಯಲ್ಲಿ ನಿಗಮದಲ್ಲಿ ಆರ್ಥಿಕ ಸಂಕಷ್ಟ ಉಂಟಾದ ಕಾರಣದಿಂದ ಸಮವಸ್ತ್ರ ಖರೀದಿಯಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬವಾದರೂ ಅರ್ಹ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಿಸಲು ಮತ್ತು ಸಮವಸ್ತ್ರದಬದಲು ನಗದು ಪಾವತಿ ಕುರಿತು ಕ್ರಮ ಕೈಗೊಳ್ಳಲಾಗಿದೆ,’ ಎಂದು ಉತ್ತರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts